ಅಂತರಂಗದ ಶುದ್ಧಿ!
ಸುತ್ತ ಬೇಲಿ ಕಟ್ಟಿರುವರಯ್ಯಾ!
ಸುತ್ತ ಬೇಲಿ ಕಟ್ಟಿರುವರಯ್ಯಾ
ಮನದ ಸುತ್ತ ಕಟ್ಟಿಟ್ಟ ಅಶುದ್ಧ ಬೇಲಿಯ ತೆಗೆಯಿರಯ್ಯಾ
ಗುಡಿಸಿ ಕಸದ ಜಾಡನೆಲ್ಲ ತೆಗೆದು ನಿತ್ಯ ಹೊಸದು ಹುಡುಕಿರಯ್ಯಾ!
ಮನದೊಳಗಣ ಮನಸೆಂಬ ಹೊಲದೊಳು
ಹದನಾಗಿ ಭುವಿಯ ಮಣ್ಣನು ಜರಡಿ ಹಿಡಿದು
ಪಕ್ವ ಬೀಜವ ತಂದು ಬಿತ್ತಲನುವಾಗಿಸಿ ನೆಲವ
ಉತ್ತಿ ಬಿತ್ತಿ ಹುಲುಸಾಗಿ ಸಾಗುವಳಿಯ ಮಾಡಿದರಯ್ಯಾ
ಸುತ್ತ ಬೇಲಿ ಕಟ್ಟಿರುವರಯ್ಯಾ!
ಸಹವಾಸವೆಂಬೋ ಕಳೆ ಆಗಾಗೆ ತಾನೇ ಬೆಳೆಯುತಿರೆ
ಒಡನೆ ತೆಗೆದು ಸ್ವಚ್ಛಮಾಡಿ ಗೊಬ್ಬರವಾಗಿ ನೆರವಾಗುವ
ಭುವನೆಗೆ ಯೋಗ್ಯ ಭೋಜನವ ನೀಡುವಂಥ ಉಪಕಾರಿ
ಗಿಡವ ಹಚ್ಚಿರಯ್ಯಾ ನೀವು ಗೊಬ್ಬರದ ಗಿಡವ ಹಚ್ಚಿರಯ್ಯಾ
ಸುತ್ತ ಬೇಲಿ ಕಟ್ಟಿರುವರಯ್ಯಾ!
ಕೆಸರ ಸಿಡಿಸುವ ಗಯ್ಯಾಳಿ ಜನರ ಬಾಯಿಗೆ ಸಿಗದಂತೆ
ಅನ್ಯರ ಹಂಗಿಸುವಂಥ ಸಿರಿವಂತರಲಿ ಕೈ ಚಾಚದಂತೆ
ಸಿರಿತನ ಬಡತನ ಮೇಲು ಕೀಳುಗಳ ಹುಳ ಹತ್ತದಂತೆ
ಶುದ್ಧ ಅಪರಂಜಿಯ ಬೇಲಿ ಪ್ರೀತಿ ಪ್ರೇಮ ಹಂಚುವಂತೆ
ಯಾರೂ ಅಲುಗಾಡಿಸದಂತ ಬೇಲಿ ಕಟ್ಟಿರಯ್ಯಾ ನೀವೂ
ಬೇಲಿ ಕಟ್ಟಿರಯ್ಯಾ! ಬೇಲಿ ಕಟ್ಟಿರಯ್ಯಾ!