ಅನುರಾಧಾ ಪಾಲ್ ಎಂಬ ತಬಲಾ ಮಾಯಾವಿ…
ಅನುರಾಧಾ ಪಾಲ್ ಅವರು ಮಹಿಳೆ ಮತ್ತು ಸಂಗೀತದ ಕುರಿತು ಇರುವ ಪೂರ್ವಗ್ರಹಗಳನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಅವರ ಬೆರಳುಗಳು ತಬಲಾ ಮೇಲೆ ಆಟವಾಡಿ, ಮಾಯಾಲೋಕ ಸೃಷ್ಟಿಸಿದಂತೆಲ್ಲ ‘ವಾಹ್ ಉಸ್ತಾದ್’ ಎಂಬ ಪ್ರತಿಕ್ರಿಯೆ ಕೇಳುಗರಿಂದ ಬರುತ್ತದೆ. ಅನುರಾಧಾ ಅವರು ಉಸ್ತಾದ್ ಅಲ್ಲದಿರಬಹುದು. ಆದರೆ, ತಬಲಾ ನುಡಿಸುವುದರಲ್ಲಿ ಅವರು ಸಾಧಿಸಿರುವ ಹಿಡಿತ ಆ ಕ್ಷೇತ್ರವು ಪುರುಷರ ಅಧಿಪತ್ಯದ್ದು ಎಂಬ ಗ್ರಹಿಕೆಯನ್ನು ಖಂಡಿತ ಬದಲಿಸಿದೆ. ಅನುರಾಧಾ ಅವರು ಈಗ ವಿಶ್ವಖ್ಯಾತಿಯ ತಬಲಾ ವಾದಕಿ. ಅಲ್ಲದೆ, ಅನೇಕ ಪ್ರಥಮಗಳನ್ನು ತಮ್ಮ ಮುಡಿಗೆ ಏರಿಸಿಕೊಂಡಿರುವ ಸಂಗೀತಗಾರ್ತಿಯೂ ಹೌದು. ವಿಶ್ವದ ಮೊದಲ ವೃತ್ತಿಪರ ತಬಲಾ ವಾದಕಿ ಅವರು. ಹಾಗೆಯೇ, ಬಹುಶಃ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತದ ಏಕೈಕ ತಬಲಾ ವಾದಕಿ ಕೂಡ ಹೌದು. 2008ರಲ್ಲಿ ಪೋಲೆಂಡ್‌ನಲ್ಲಿ ನಡೆದ ಪ್ರತಿಷ್ಠಿತ ವುಡ್‌ಸ್ಟಾಕ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರದರ್ಶನದ ನೀಡಿದ ಅತ್ಯಂತ ಕಿರಿಯ ಹಾಗೂ ಏಕೈಕ ಮಹಿಳೆ ಅವರು. ಆ ಕಾರ್ಯಕ್ರಮದಲ್ಲಿ ಅವರ ‘ರಿಚಾರ್ಜ್’ ಹೆಸರಿನ ಸಂಗೀತ ತಂಡವು ನಾಲ್ಕು ಲಕ್ಷ ಜನರ ಎದುರು ಪ್ರದರ್ಶನ ನೀಡಿತು. ಅವರ ತಂಡ ಭಾರತೀಯ, ಆಫ್ರಿಕನ್, ಜಾಝ್ ಮತ್ತು ಲ್ಯಾಟಿನ್ ಸಂಗೀತಗಳ ಸಂಗಮ. ಅವರು 7–8 ವರ್ಷ ವಯಸ್ಸಿನಲ್ಲಿ ಇದ್ದಾಗಲೇ ಸಂಗೀತದೆಡೆ ಆಕರ್ಷಿತರಾಗಿದ್ದರು. ತಬಲಾ ಮಾಂತ್ರಿಕ ಉಸ್ತಾದ್ ಅಲ್ಲಾರಖಾ ಅವರಲ್ಲಿ ಹೋಗಿ ತನ್ನನ್ನು ಶಿಷ್ಯೆಯಾಗಿ ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಅನುರಾಧಾ ಅವರ ಸಂಗೀತ ಯಾನ ಸುಲಭದ್ದೇನೂ ಆಗಿರಲಿಲ್ಲ. ಅವರು ಮೊದಲ ಬಾರಿಗೆ ಸಂಗೀತ ಪ್ರದರ್ಶನ ನೀಡಿದ್ದು 17 ವರ್ಷ ವಯಸ್ಸಿನಲ್ಲಿ.
Courtesy: Prajavani.net
https://www.prajavani.net/artculture/anuradha-pal-623194.html