ಇದು ಎಂಥಾ ಲೋಕವಯ್ಯಾ
1980ರಲ್ಲಿ ಅನಂತನಾಗ್ ಅಭಿನಯಿಸಿದ “ನಾರದ ವಿಜಯ” ಸಿನಿಮಾದ ಚಿ. ಉದಯಶಂಕರ್ ರಚಿತ ಏಸುದಾಸ ಹಾಡಿದ ಹಾಡು “ಇದು ಎಂಥಾ ಲೋಕವಯ್ಯಾ.. ಹೊಸತನವ ಕೊಡುವ, ಹೊಸ ವಿಷಯ ಅರಿವ… ಬಯಕೆ ತರುವ… ಸುಖವ ಅರಸಿ ಅಲೆದಾಡುವ. ಹೊಸದನ್ನ ದಿನವೂ ಹುಡುಕುತ, ಛಲ ಬಿಡದೆ ಸೆಣೆಸಾಡುವ.. ಜನರಿಂದ ತುಂಬಿ ಮೆರೆವಾ.. ಇದು ಎಂಥಾ ಲೋಕವಯ್ಯಾ… ಹೀಗೆ ಅನ್ನುತ್ತಾ ಸಾಗುತ್ತಿರುವ ನಾರದನ ಹಾಡು ಈಗ ನರರ ಪಾಡಾಗಿದೆ. ಮೇವು ಹಗರಣದ ಕೃತ್ಯ ಲಾಲೂ ಆಲಾಪ ಕೇಳಿದಾಗ ಮತ್ತು ಓದಿದಾಗ ಮತ್ತೆ ನೆನಪಾಗುತ್ತಿದೆ. “ನಾನು ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಸಾಲಿಗೆ ಸೇರಿದ ವ್ಯಕ್ತಿ” “ಅಷ್ಟೇ ಶುದ್ಧವಾಗಿದ್ದೇನೆ” ಅನ್ನುವ ಸ್ಟೈಲ್ನಲ್ಲಿ ಹೇಳಿದ್ದು ಒಂದು ಥರಾ ನಮ್ಮಲ್ಲಿ ಈ ಸೋ ಕಾಲ್ಡ್ ಧುರೀಣರು ಯಾವ ಹಂತಕ್ಕೆ ಬಂದಾರೆ ಅನಿಸುತ್ತದೆ. ಭಾಳ ಲೇಟೆಸ್ಟ್ ಉದಾಹರಣೆ ಅಂದ್ರೆ ಸಿದ್ಧರಾಮಯ್ಯನವರು ಉವಾಚಿಸಿದ “ಅಮಿತ್ ಶಾ ಅವರು ನಮಗೆ ನಮ್ಮ ರಾಜ್ಯಕ್ಕೆ ಕೊಡಬೇಕಾದ ಟ್ಯಾಕ್ಸ್ ಎಷ್ಟೇ ಸಾವಿರಕೋಟಿ ಇರಲಿ, ನಮಗ ಬರು ದುಡ್ಡು ಅದರ ಅಕೌಂಟ್ ಕೇಳೋರು ಇವ್ರು ಯಾರು ಅಂದ ವಾಕ್ಯ ಇದು ಎಂತಾ ಲೋಕವಯ್ಯಾ ಅನ್ನೋ ಮಾತಿಗೆ ಸಾಕ್ಷಿ.
ಇನ್ನೂ ನಮ್ಮ ಭಾರತದಲ್ಲಿ ಸಿಕ್ಕಾಪಟ್ಟೆ ಸಾಲಾ ಮಾಡಿ ಕೊಡಲು ಮನಸ್ಸಿಲ್ಲದೆ ಲಂಡನ್ಗೆ ಹೋಗಿ ತಾಯ್ನಾಡಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಬಿಯರ್ ದೊರೆ ಮಲ್ಯ ಸಹ ನನಗೆ ಸುಮ್ಮನೆ ತೊಂದರೆ ನೀಡುತ್ತಿದ್ದಾರೆ ಅನ್ನುವದು. ನ್ಯಾಯಮೂರ್ತಿಗಳೇ ಪತ್ರಿಕಾಗೋಷ್ಠಿ ನಡೆಸುವುದು, ಮುಖ್ಯ ಪಕ್ಕದ ರಾಜ್ಯದ ಮಂತ್ರಿಗಳನ್ನು ನದಿನೀರಿನ ಹಂಚಿಕೆಗಾಗಿ ಕನಿಷ್ಠ ಆಮಂತ್ರಿಸದೆ, ತಾವು ದೆಹಲಿಗೆ ಅಧ್ಯಕ್ಷರನ್ನು ಭೇಟಿಯಾಗಲು ಹೋಗುವಂತೆ ಹೋಗುವ ಸ್ವಯಂಪ್ರೇರಣೆಯ ಕನಿಷ್ಠ ಕ್ರಿಯೆಗಳನ್ನು ತೋರದೆ ಅವರು ಮಧ್ಯ ಬರಲಿ ಅಂತ ಕಾಯುತ್ತ ರಾಜಕೀಯ ಲಾಭಪಡೆಯುವ ಸನ್ನಿವೇಶ, ಪ್ರೇರಣೆಯ ಬಂದ್ಗಳ ಮಜಾ ಸವಿಯುತ್ತಾ ವಿಷಯ ನ್ಯಾಯಂಗದ ಕಕ್ಷೆಯಲ್ಲಿದ್ದಾಗ, ವಾದಿ, ಪ್ರತಿವಾದಿಗಳ ಕಾಂಪ್ರಮಾಯಿಜ್ ಇಲ್ಲದೆ ಮತ್ತೊಬ್ಬರಿಂದ ಪವಾಡ ಅಪೇಕ್ಷಿಸುವುದು ಎಷ್ಟರ ಮಟ್ಟಿಗೆ ಸಾಧು? ಭೂಮಿಯಲ್ಲಿ ಸಿಗುವ ಬಂಗಾರ ಮತ್ತಿತರ ಲೋಹಗಳು ಕೇಂದ್ರದ ಆಸ್ತಿ ಹಕ್ಕಿನಲ್ಲಿ ಬರಬಹುದಾದ ಅಂತರ್ಜಲ ಮತ್ತು ಹರಿಯುವ ನೀರು ಕೇಂದ್ರದ್ದೇ ಅಂತಾ ಆದರೆ ರಾಜ್ಯಗಳ ನಡುವಿನ ಕಚ್ಚಾಟವಾದರೂ ಕಡಿಮೆಯಾದೀತು. ಪಿತ್ರಾರ್ಜಿತ ಆಸ್ತಿಗೆ ಎಲ್ಲ ಹೆಂಡತಿ ಮಕ್ಕಳು ಬಡಿದಾಡಿದ ಹಾಗೆ. ನದಿ ನೀರು ಸ್ವಾರ್ಜಿತವಂತೂ ಅಲ್ಲ. ಯಾವುದೇ ಪಕ್ಷದ ರಾಜಕಾರಣಿಗಳನ್ನು ನೋಡಿದರೂ ಅವರಾಡುವ ಮಾತು ಕೇಳಿದರೆ, ಬೂಟುನೆಕ್ಕುವ ಓಟಿಗಾಗಿ ಏನೆಲ್ಲ ಮಾಡುತ್ತಿರುವ ಪರಿಯ ನೋಡಿದರೆ ಮತ್ತೆ ನೆನಪಾಗುವುದು “ಇದು ಎಂಥಾ ಲೋಕವಯ್ಯಾ”. ದೇಶದ ಮಾನ ಹರಾಜು ಹಾಕುವಂತ ಸನ್ನಿವೇಶ ಇತ್ತೀಚೆಗೆ ಇಂಗ್ಲೆಂಡ್ದಲ್ಲಿ ಬೆಳ್ಳಿ ಚಮಚಗಳನ್ನು ಚೀಲಕ್ಕೆ ಮತ್ತೊಬ್ಬರ ಚೀಲಕ್ಕೂ ಹಾಕಿ ಏನೂ ಆಗಿಲ್ಲವೆಂಬಂತೆ ಇದ್ದ ಆಮಂತ್ರಣ ಪಡೆದ ಪತ್ರಕರ್ತರ ಸುದ್ದಿ ಬಂತು. ದೇಶಕ್ಕೂ, ಕರೆದುಕೊಂಡು ಹೋದ ಧುರೀಣರಿಗೂ, ಅವರ ವೃತ್ತಿಧರ್ಮಕ್ಕೂ ಚ್ಯತಿ ಬಂದು ಜಗಜ್ಜಾಹೀರು ಆದದ್ದು ಹೇಗೆ ಮರೆಯುವುದು? ಪ್ರತಿ ರಾಜ್ಯದ, ಪ್ರತಿ ಜಿಲ್ಲೆಯ, ಪ್ರತಿ ವ್ಯಕ್ತಿಯ ಸಮಸ್ಯೆಗೂ ದೇಶದ ಪ್ರಧಾನಿಯೇ ಕಾರಣ, ಅವರೇ ಬಂದು ಸಮಸ್ಯೆಗೇ ಪರಿಹಾರ ಕೊಡಬೇಕು ಅಂತ ಅಪೇಕ್ಷಿಸುವುದು? ನಮ್ಮ ಹಿಂದೂ ಧರ್ಮದ ನಂಬಿಕೆ ಪ್ರಕಾರ ದೊಡ್ಡ ದೇವರು, ಸಣ್ಣ ಸಣ್ಣ ದೇವರು ಅವರವರ ಕೆಲಸ ಮಾಡುವುದಿಲ್ಲವೇ? ಜಗತ್ತೇ ಸಮಸ್ಯೆಯಲ್ಲಿ ಇದ್ದಾಗ ಮಾತ್ರ ವಿಷ್ಣು ಅವತಾರ ಎತ್ತಿಲ್ಲವೇ? ಮಹಾಭಾರತದ ಜಯದ್ರಥನು ನೂರು ತಪ್ಪು ಮಾಡುವತನಕ ಅವನಿಗೆ ಶಿಕ್ಷೆ ಆಗಲಿಲ್ಲ. ಸಣ್ಣ ಸಣ್ಣವರು ತಮ್ಮ ತಮ್ಮ ಪ್ರಯತ್ನ ಮಾಡದೆ ಯಾವಾಗಲೂ ಉತ್ತರಕ್ಕೆ ಮುಖ ಮಾಡಿದ್ರೆ ಹ್ಯಾಂಗ? ತಮ್ಮ ಜವಾಬ್ದಾರಿಗಳನ್ನು ಮರೆತು ಕಾಗೆ ಪಿಂಡ ನೋಡಿ ಕಾಕಾ ಅಂತ ಕರೆದರೆ ಗರುಡ ಬರುವುದೆ? ಬಂದರೂ ಕಾಗೆಗಳೇ ಬರಬೇಕು ಅಂದರೆ ಮತದಾರ ಪ್ರಜೆಗೆ ಶಾಂತಿಯಾದರೂ ಸಿಕ್ಕಿತು. ಸಂವಿಧಾನ ಪವಿತ್ರ. 1950 ರಿಂದ ಸುಮಾರು ಬಾರಿ ತಿದ್ದುಪಡಿ ತಂದಾಗ ಯಾವ ಪಕ್ಷದ ಅಧಿಕಾರವಿತ್ತು? ಹೊಸ ರಾಜ್ಯಗಳು ಬಂದಾಗ ಕೆಲವು ವರ್ಗಗಳನ್ನು ಪುಷ್ಟೀಕರಣ ಮಾಡಬೇಕಾದಾಗಲೆಲ್ಲ ತಿದ್ದುಪಡಿ ಆಗಿದೆ ಸಂವಿಧಾನ ಬದಲಾಗಿದೆ. ಅಂದ್ರೆ ಆಗಿದೆ ಇಲ್ಲಾಂದರೆ ಇಲ್ಲಾ ಅನ್ನೋ ಲೆಕ್ಕ. ಬದಲು ಮತ್ತು ತಿದ್ದುಪಡಿ ಅರ್ಥ ಒಂದೇನಾ ಅಥವಾ ಬೇರೇನಾ? ಮೂಲ ಉದ್ದೇಶಗಳಿಗೆ ಧಕ್ಕೆ ಬರದಂತೆ ಮಾರ್ಪಾಡು, ತಿದ್ದುವಿಕೆ ಬದಲಾವಣೆ ಅನಿಸಿದರೂ ಅದು ಏನು ಅನ್ನುವುದು ಇನ್ನೂ ಯಕ್ಷಪ್ರಶ್ನೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಂಬಿಕೆ ಒಂದು ಕಾಲದಲ್ಲಿ ಪೃಥ್ವಿ ಸುತ್ತ ಸೂರ್ಯನ ಸುತ್ತುವಿಕೆ ಅಂತ ಇತ್ತು. ನಂತರ ಯಾವುದು ನಿಜ ಅಂತ ಗೊತ್ತಾದಾಗ ಸ್ವೀಕರಿಸಿದರು. ಹಾಗೆ ಸಮಾನತೆ ಅನ್ನುವುದು ಕೂಡಾ. ಆದರೂ ಸಂವಿಧಾನ ಬದಲು ಮಾಡಬೇಕು ಅಂದಾಗ ಗದ್ದಲವೋ ಗದ್ದಲ. ನೂರಾ ಎಂಟು ತಿದ್ದುಪಡಿ ಮಾಡುತ್ತ ಕುಳಿತರೆ ಬದಲು ಆಗೇ ಆಗುತ್ತದೆ. ಷಾ ಭಾನೋ ಕೇಸಿನಲ್ಲಿ ತಿದ್ದುಪಡಿ ಅಥವಾ ಬದಲು ಆಗ್ಲಿಲ್ಲವೇ?, ಪ್ರತಿ ಆಡಳಿತ ಕಾರ್ಯಗಳಿಗಾಗಿ ವಿಸ್ತರಣೆಗಳು ತಿದ್ದುಪಡಿ ಮೂಲಕ ಆಗದಿದ್ದರೆ ಈಗಿರುವ ಸೌಲಭ್ಯಗಳು ಇರುತ್ತಿರಲಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವುದು ಅನಿವಾರ್ಯ. ನಮಗೆ ಬೇಕು ಅಂದಾಗ ಬೇಕು, ಬೇಡವೆಂದಾಗ ಬೇಡಾ ಅಂದರೆ ಹೇಗೆ? ಮಾನವನ ನಾಗರಿಕತೆಯೇ ಒಂದು ಅಲಿಖಿತ ಸಂವಿಧಾನ. ಇದು ದೇಶ ಖಂಡಗಳಲ್ಲಿ ಹೇಗೆ ಬದಲಾದರೂ ಕಾಲನ ಕಾಲದಲ್ಲಿ ತಿದ್ದುಪಡಿಗಳೊಂದಿಗೆ ಬದಲಾಗುತ್ತಿದೆ. ಬದಲಾವಣೆ ಅಥವಾ ಪರಿವರ್ತನೆ ಈ ಜಗದ ನಿಯಮವೇ ಆಗಿದೆ. ಪ್ರತಿ ಬದಲಾವಣೆಗೆ ಮೊದಲು ವಿರೋಧ ಕಟ್ಟಿಟ್ಟದ್ದೇ. ಟೀಕೆ ಟಿಪ್ಪಣೆ ಇರುವವೇ. ಆಮೇಲೆ ಸ್ವೀಕಾರ ನಂತರ ಪ್ರಶಂಸೆ ಸಹ ಬರುವದು. ಅದಕ್ಕಾಗಿ ಸುಖವ ಅರಸಿ ಅಲೆದಾಡುವ. ಹೊಸದನ್ನು ದಿನವೂ ಹುಡುಕುತ, ಛಲ ಬಿಡದೆ ಸೆಣೆಸಾಡುವ.. ಜನರಿಂದ ತುಂಬಿ ಮೆರೆವಾ.. ಇದು ಎಂಥಾ ಲೋಕವಯ್ಯಾ.
ಜೀವನದ ಎಲ್ಲ ದುಗುಡ ದುಮ್ಮಾನ ಸಂಕಟಗಳನ್ನು, ನೋವು ನಲಿವುಗಳನ್ನು ನಮ್ಮ ನಮ್ಮ ಸ್ವರ್ಗಗಳನ್ನು ಹುಡುಕುವುದು ಸಹ ಅಷ್ಟೇ ಅವಶ್ಯಕ ಅನಿವಾರ್ಯತೆ.
ಪುರಂದರದಾಸರ ಹಾಡು “ದಾರಿ ಯಾವುದಯ್ಯ ವೈಕುಂಠಕ್ಕೆ, ತೋರಿಸಯ್ಯ ದಾರಿ ವೈಕುಂಠಕ್ಕೆ” ನೆನಪಾದರೆ ಆಶ್ಚರ್ಯವಿಲ್ಲ.
Courtesy : Samyukta Karnataka