‘ಒಳ್ಳೇ ನಿದ್ದೆಯೂ ದೈವಕೃಪೆ’

‘ಒಳ್ಳೇ ನಿದ್ದೆಯೂ ದೈವಕೃಪೆ’

ನಾವು ಜೀವನವನ್ನು ಸಹಜವಾಗಿ ಸ್ವೀಕರಿಸಬೇಕು. ಕೆಲವೊಮ್ಮೆ ನಮ್ಮ ಸ್ಥಿತಿಯನ್ನು ಮೀರಿದ ಪ್ರಯತ್ನಗಳು ಸಂಘರ್ಷವನ್ನು ಉಂಟುಮಾಡುತ್ತವೆ. ಅದು ಮನುಷ್ಯನ ನಡುವಿನ ಸಂಬಂಧಗಳಿರಬಹುದು ಅಥವಾ ಜೀವನದಲ್ಲಿ ನಡೆಯುವ ಘಟನೆಗಳಿರಬಹುದು – ಈ ರೀತಿ ಮಾನಸಿಕ ಘರ್ಷಣೆ ಇದ್ದಾಗ ಒತ್ತಡ ಕಾಡುತ್ತದೆ.

‘ನಾನು ಏನೋ ಒಂದು ಸಾಧನೆ ಮಾಡಬೇಕು’ ಎಂದುಕೊಳ್ಳುವುದು ಒತ್ತಡವಲ್ಲ. ಬದಲಾಗಿ ಸಾಧನೆಯ ಮಾರ್ಗದಲ್ಲಿ ಬರುವ ಅಡೆತಡೆಗಳು, ತಾಪತ್ರಯಗಳೆಲ್ಲವೂ ನಮ್ಮಲ್ಲಿ ಒತ್ತಡವನ್ನು ಹೇರುತ್ತವೆ. ಮನುಷ್ಯನ ಶಕ್ತಿ ಮೀರಿದ ಪ್ರಯತ್ನ, ನಿರೀಕ್ಷೆಗಳು, ಆಂತರಿಕ ತೊಳಲಾಟ–ತುಮುಲಗಳೇ ಒತ್ತಡಕ್ಕೆ ಕಾರಣವಾಗುತ್ತವೆ.

ಒತ್ತಡ ಒಂದೇ ಪ್ರಮಾಣದಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೋ ಒಂದು ದೊಡ್ಡ ಕಾರ್ಯವನ್ನು ಕೆಲವೊಮ್ಮೆ ಯಾವುದೇ ಅಡೆತಡೆಗಳಿಲ್ಲದೇ ಸರಾಗವಾಗಿ ಚಿಕ್ಕ ಹುಲ್ಲುಕಡ್ಡಿ ಎತ್ತಿದಂತೆ ಸಲೀಸಾಗಿ ನಿಭಾಯಿಸುತ್ತೇವೆ. ಕೆಲವೊಂದು ಸಂದರ್ಭದಲ್ಲಿ ಸಣ್ಣ ವಿಷಯವೂ ಬೃಹತ್ ಬೆಟ್ಟವನ್ನು ಹತ್ತುವ ಅನುಭವವನ್ನು ನೀಡುತ್ತದೆ. ನಾವು ಇರಿಸುವ ಪ್ರತಿಯೊಂದು ಹೆಜ್ಜೆಯೂ ಆ ಸಂದರ್ಭದ ಮೇಲೆ ಅವಲಂಬಿತವಾಗಿದೆಯೇ ಹೊರತು, ನಾವು ಕೆಲಸ ಮಾಡುವ ಮಾಧ್ಯಮಗಳ ಮೇಲಲ್ಲ. ಇವೆಲ್ಲವೂ ನಿಂತಿರುವುದು ವ್ಯಕ್ತಿ, ಜೀವನ ಮತ್ತು ಪರಿಸ್ಥಿತಿಯ ಮೇಲೆ.

ನಮ್ಮ ಮನಃಸ್ಥಿತಿ ಚೆನ್ನಾಗಿದ್ದಾಗ ನಾವು ಪರಿಸ್ಥಿತಿಯನ್ನು ಎದುರಿಸುವ ರೀತಿ ಸುಸೂತ್ರವಾಗಿ ನಡೆಯುತ್ತಿರುತ್ತದೆ. ನಮ್ಮ ಮಾನಸಿಕ ಸ್ಥಿತಿಯಲ್ಲಿನ ತಲ್ಲಣಗಳು ತೀವ್ರವಾದಾಗ ಸುಲಭದ ಸ್ಥಿತಿ ಕೂಡ ಕಠಿಣ ಎನ್ನಿಸುತ್ತದೆ. ಆಗ ಉದ್ರೇಕಗಳಿಗೆ ಒಳಗಾಗುತ್ತೇವೆ. ಈ ಉದ್ರಿಕ್ತ ಸ್ಥಿತಿಯನ್ನು ತಪ್ಪಿಸಲು ಕೆಲವು ಮಾರ್ಗಗಳನ್ನು ನಾವೇ ಕಂಡುಕೊಳ್ಳಬೇಕು.

ಮಾಡುವ ಕೆಲಸದಲ್ಲಿ ಶ್ರದ್ಧೆ, ಕಠಿಣ ಶ್ರಮ, ಪೂರ್ವಸಿದ್ಧತೆ, ಪರಿಸ್ಥಿತಿಗೆ ಶರಣಾಗುವ ಗುಣಗಳಿದ್ದಾಗ ಒತ್ತಡ ನಮ್ಮನ್ನು ಕಾಡುವುದಿಲ್ಲ. ವರ್ತಮಾನದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನಮ್ಮನ್ನು ನಾವು ಸಮರ್ಥಿಸಿಕೊಂಡು, ಶರಣಾಗಬೇಕು. ಪರಿಸ್ಥಿತಿಗೆ ಸಮರ್ಪಣಾಭಾವದಿಂದ ನಮ್ಮನ್ನು ಅರ್ಪಿಸಿಕೊಂಡಾಗ ಶೇ 80ರಷ್ಟು ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಖುಷಿಯೂ ಸಿಗುತ್ತದೆ. ವಿದ್ಯಾರ್ಥಿಯೊಬ್ಬ ಪರೀಕ್ಷೆ ಹಿಂದಿನ ದಿನ ಓದಲು ಕೂತರೆ ಒತ್ತಡ ಕಾಡುತ್ತದೆ. ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎನ್ನುವಂತಾದರೆ ಆಗ ಒತ್ತಡ ಕಾಡುವುದು ಸಾಮಾನ್ಯ. ಪ್ರತಿಫಲವನ್ನು ಲೆಕ್ಕಾಚಾರ ಮಾಡಿಕೊಂಡು ಕೆಲಸ ಮಾಡುತ್ತಾ ಹೋದರೆ ಅದು ಒತ್ತಡವನ್ನು ಹುಟ್ಟುಹಾಕುತ್ತದೆ. ಎಲ್ಲ ಕೆಲಸಗಳಿಗೂ ಪೂರ್ವತಯಾರಿ ತುಂಬ ಮುಖ್ಯ. ನಾವು ಮಾಡುವ ಕೆಲಸದ ಉದ್ದೇಶ, ಆಶಯಗಳನ್ನು ತಿಳಿದುಕೊಂಡು ಅದರಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು.

ಸಿನಿಮಾ, ನೃತ್ಯ – ಯಾವುದೇ ಆಗಿರಲಿ ಪೂರ್ವಸಿದ್ಧತೆ ಇರಬೇಕು. ಈ ಗುಣ ವಿದ್ಯಾರ್ಥಿದೆಸೆಯಿಂದಲೇ ನಮ್ಮಲ್ಲಿ ರೂಢಿಯಾಗಬೇಕು. ಕೆಲವೊಮ್ಮೆ ಆಕಸ್ಮಿಕ ಘಟನೆಗಳು ನಮ್ಮನ್ನು ಎದುರುಗೊಳ್ಳುತ್ತವೆ. ಅದು ನಮ್ಮ ಪೂರ್ವಸಿದ್ಧತೆಗೆ ಸಂಬಂಧಿಸಿದಲ್ಲ. ಅಂತಹ ಘಟನೆಗಳನ್ನೂ ಊಹಿಸುವ ಮನೋಭಾವದಲ್ಲಿ ನಾವಿರಬೇಕು. ಊಹೆಗೆ ಮೀರಿದ, ಕೈ ಮೀರಿ ಹೋಗುವಂತಹ ಪರಿಸ್ಥಿತಿಯನ್ನು ಎದುರಿಸುವುದನ್ನು ಕಲಿಯಬೇಕು. ಬರೀ ಡ್ರೈವಿಂಗ್ ಕಲಿತರೆ ಸಾಲುವುದಿಲ್ಲ, ರಸ್ತೆಗೆ ಗಾಡಿಯನ್ನು ಇಳಿಸಿದಾಗ ಎದುರಾಗುವ ಪರಿಸ್ಥಿತಿಯ ಬಗ್ಗೆಯೂ ಮನಸ್ಸನ್ನೂ ಸಿದ್ಧಗೊಳಿಸಿಕೊಳ್ಳಬೇಕು. ನಿರಂತರವಾಗಿ ನಮ್ಮ ಮನಸ್ಸನ್ನು ತಿಳಿನೀರಿನಂತೆ ನಿರ್ಮಲವಾಗಿರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರಬೇಕು. ಆಗ ನಮ್ಮನ್ನು ಕಾಡುವ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ.

ನಾನು ಒತ್ತಡವನ್ನು ನಿವಾರಿಸಿಕೊಳ್ಳಲು ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದೇನೆ. ಅದರಲ್ಲಿ ಮುಖ್ಯವಾದುದ್ದು ಧ್ಯಾನ. ಅದನ್ನು ಸರಿಯಾದ ಮಾರ್ಗದಲ್ಲಿ ಮಾಡಬೇಕು. ಅಂದರೆ ಅದಕ್ಕಾಗಿ ಸ್ವಲ್ಪ ತರಬೇತಿ ಪಡೆದಿರಬೇಕು. ಕಣ್ಣು ಮುಚ್ಚಿ ಕುಳಿತುಕೊಂಡರೆ ಧ್ಯಾನವಲ್ಲ. ಅದಕ್ಕೆ ಶಿಸ್ತು, ಪದ್ಧತಿ, ರೀತಿಗಳು ಇವೆ. ಅದನ್ನು ನಾವು ಗುರುಗಳ ಮೂಲಕ ಸರಿಯಾಗಿ ತಿಳಿದುಕೊಂಡಿರಬೇಕು.ನಾನು ಎಂತಹ ಕಠಿಣ ಸ್ಥಿತಿಯಲ್ಲಿ ಇದ್ದಾಗಲೂ ಧ್ಯಾನವೇ ನನಗೆ ಸಹಾಯ ಮಾಡಿದ್ದು. ಇನ್ನು ನನಗೆ ಭರತನಾಟ್ಯವೇ ನನಗೆ ದೊಡ್ಡ ಒತ್ತಡ ನಿವಾರಕ, ನೃತ್ಯಾಭ್ಯಾಸ ನಮಗೆ ದೇವರು ನೀಡಿದ ದೊಡ್ಡ ವರ, ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಅರ್ಧಗಂಟೆ ತಾಧ್ಯಾತ್ಮದಿಂದ ಅರ್ಧಗಂಟೆ ನೃತ್ಯ ಮಾಡಿದರೆ ಕೂಡಲೇ ಆ ಪರಿಸ್ಥಿತಿಯಿಂದ ಹೊರಬರುತ್ತೇವೆ.

ಕರ್ನಾಟಕ ಸಂಗೀತ ಕೂಡ ನನ್ನ ಮನಸ್ಸನ್ನು ನಿರಾಳಗೊಳಿಸುವ ಅಂಶಗಳಲ್ಲೊಂದು. ಓದುವುದು ಎಂದರೆ ನನಗೆ ತುಂಬಾ ಇಷ್ಟ. ನನ್ನ ಪ್ರತಿ ಪ್ರಯಾಣದಲ್ಲೂ ಪುಸ್ತಕ ನನ್ನ ಜೊತೆಗಿರುತ್ತದೆ. ರಾತ್ರಿ ಮಲಗುವ ಮುನ್ನವೂ ಯಾವುದೋ ಒಂದು ಪುಸ್ತಕವನ್ನು ಓದಿ, ನಂತರ ಧ್ಯಾನ ಮಾಡಿ ಮಲಗುತ್ತೇನೆ. ಓದುವ ಅಭ್ಯಾಸ ಇರಿಸಿಕೊಂಡರೆ ಮನಸ್ಸು ಸ್ಥಿಮಿತದಲ್ಲಿರುತ್ತದೆ. ಮನಸ್ಸು ಗೊಂದಲದಲ್ಲಿದ್ದಾಗ ಧ್ಯಾನ ಮಾಡಲು ಸಾಧ್ಯವಿಲ್ಲ. ನಾನು ಧ್ಯಾನಕ್ಕೆ ಹೋಗುವ ಮೊದಲು ಪ್ರಾಣಾಯಾಮ ಮಾಡುತ್ತೇನೆ. ಇವೆಲ್ಲದರ ಜೊತೆ ಉತ್ತಮ ನಿದ್ದೆಯೂ ಒಂದು ಧ್ಯಾನದ ಸ್ಥಿತಿ. ಒಳ್ಳೆಯ ನಿದ್ದೆಯೂ ದೈವಕೃಪೆ. ಮನುಷ್ಯ ಅತ್ಯಂತ ಘೋರಸ್ಥಿತಿ ಎದುರಿಸಿದಾಗಲೂ ಒಳ್ಳೆಯ ನಿದ್ದೆ ಮಾಡಿ ಎದ್ದರೆ ಮನಸ್ಸು ಆ ಘಟನೆಯಿಂದ ಹೊರಗೆ ಬಂದಿರುತ್ತದೆ. ಆದರೆ ಆಂತಕ, ಚಂಚಲ ಘರ್ಷಣೆ ಮನಸ್ಸಿನಲ್ಲಿ ಇದ್ದಾಗ ಸರಿಯಾದ ನಿದ್ದೆ ಬರುವುದಿಲ್ಲ. ನಿದ್ದೆ ಮಾಡಲು ಕೆಲವು ತಂತ್ರಗಳನ್ನು ಪಾಲಿಸಬೇಕು. ಅಂತಃಸ್ಫೂರ್ತಿ ಅಥವಾ ಬಹಳ ದೊಡ್ಡ ವಿಷಯಗಳು ಗೋಚರವಾಗುವುದು ಈ ನಿರಾಳ ಸ್ಥಿತಿಯಲ್ಲಿಯೇ. ಜಗತ್ತಿನಲ್ಲಿ ಎಷ್ಟೊ ಅನ್ವೇಷಣೆಗಳು ನಡೆಯವುದು ಮನಸ್ಸಿನ ನಿರಾಳತೆಯಿಂದಲೇ. ಮನಸ್ಸು ಶೂನ್ಯ ಅಥವಾ ಸಮಾಧಿ ಸ್ಥಿತಿಯಲ್ಲಿದ್ದಾಗ ಜೀವನದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ರೀತಿಯಾಗಿ ಒತ್ತಡಗಳನ್ನು ನಾನು ನಿರ್ವಹಣೆ ಮಾಡುತ್ತೇನೆ.

ಚಿಕ್ಕ ಮಕ್ಕಳ ಜೊತೆ ತರಗತಿ ನಡೆಸುವಾಗ ಒತ್ತಡ ಕಡಿಮೆಯಾಗುತ್ತದೆ. ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್‌ ಹೋದಾಗ ಮನಸ್ಸು ನಿರಾಳವಾಗುತ್ತದೆ. ನಿರೀಕ್ಷೆ ಇಲ್ಲದ ದಾನ – ಸೇವೆಯಿಂದಲೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಇವೆಲ್ಲ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮನುಷ್ಯನ ದೈನಂದಿನ ಜೀವನದಲ್ಲೇ ಇರುವ ಬಹಳ ಸುಂದರವಾದ ಮಾರ್ಗಗಳು. ಇದನೆಲ್ಲಾ ನಾವು ಹೊರಗೆಲ್ಲೋ ಹುಡುಕುವ ಹಾಗಿಲ್ಲ, ಇವೆಲ್ಲಾ ನಾವೇ ಕಂಡುಕೊಳ್ಳಬೇಕಾದ ಸ್ವಂತ ಮಾರ್ಗಗಳು.

ಸಾಮಾನ್ಯವಾಗಿ ನಾನು ಬಹಳ ಬೇಗ ಒತ್ತಡದಿಂದ ಹೊರ ಬರುತ್ತೇನೆ. ಅದಕ್ಕೆ ನನಗೆ ಮೇಲೆ ಹೇಳಿದ ಮಾರ್ಗಗಳು  ಸಹಾಯ ಮಾಡಿವೆ. ತುಂಬಾ ಒತ್ತಡ ಬಂದಾಗ ಅದನ್ನು ಬದಿಗಿಟ್ಟು ಬೇರೆ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡಿರುತ್ತೇನೆ. ಅದರಿಂದ ಒತ್ತಡದ ತೀವ್ರತೆ ಕಡಿಮೆಯಾಗಿರುತ್ತದೆ. ಆದರೆ ಅದು ನಮ್ಮ ಕೈಮೀರಿ ಹೋದರೆ ಜೀವನ ದುರಂತ ಆಗುತ್ತದೆ. ಯಾವ ಕೆಲಸವನ್ನೇ ಆದರೂ ಋಣಾತ್ಮಕ ಮನೋಭಾವ ಹಾಗೂ ಇಷ್ಟವಿಲ್ಲದೇ ಮಾಡಿದರೆ ಅದು ಒತ್ತಡವಾಗುತ್ತದೆ. ದೇಹ ಹಾಗೂ ಮನಸ್ಸನ್ನು ಸಮತೋಲನದಲ್ಲಿರಿಸಿಕೊಳ್ಳಬೇಕು, ಗಮ್ಯವನ್ನು ಸೇರುವುದಕ್ಕಿಂತ ಸೇರುವ ಮಾರ್ಗವೇ ಆನಂದ ಎನ್ನುವುದು ದಾರ್ಶನಿಕರ ಮಾತು, ಜೀವನದಲ್ಲಿ ನೀವು ಸಾಗುತ್ತಿರುವ ಮಾರ್ಗವೇ ಜೀವನ. ಈ ಕ್ಷಣದಲ್ಲಿ ಸಂತೋಷವಾಗಿರಬೇಕು ಎಂದುಕೊಳ್ಳುವುದೇ ಜೀವನ.

Courtesy : Prajavani.net

http://www.prajavani.net/news/article/2017/12/29/543331.html

Leave a Reply