ಯಜ್ಞವೇ ಜೀವನನೀತಿ
‘‘ದೇವತಾಯಜ್ಞಗಳ ಫಲವನ್ನು ಪಡೆದವನು ಅದನ್ನು ಸಹಮಾನವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ಭೋಗಿಸಿದರೆ ‘ಕಳ್ಳ’ನೆನಿಸುತ್ತಾನೆ’’ ಎಂದು ಕೃಷ್ಣನು ಎಚ್ಚರಿಸಿದ್ದನ್ನು ನೋಡಿದ್ದೇವೆ. ‘ಮಾತಾಪಿತೃಗಳ, ಗುರುಹಿರಿಯರ, ಬಂಧುಮಿತ್ರರ, ನೆರೆಕೆರೆಯವರ, ಸರ್ಕಾರದ, ಸಮಾಜದ, ಪಶುಪಕ್ಷಿಗಳ ಹಾಗೂ ನಿಸರ್ಗದ ಋಣವನ್ನು ಹೊತ್ತಿರುವ ನಾವು ನಮ್ಮ ಪುಣ್ಯವನ್ನೂ ಹಾಗೂ ನಾವು ಪಡೆದ ದೇವತಾಪ್ರಸಾದವನ್ನೂ ಸಹಮಾನವರೊಂದಿಗೆ ಹಂಚಿಕೊಳ್ಳುವುದೇ ನೀತಿ’ ಎನ್ನುವುದನ್ನೂ ಚರ್ಚಿಸಿದ್ದೇವೆ.
ಸ್ವಲ್ಪ ಆಲೋಚಿಸಿ ನೋಡೋಣ. ನಾವು ನಮ್ಮ ಪರಿಚಿತರಿಗಷ್ಟೇ ಋಣಿಗಳಲ್ಲ! ತಿಳಿದೋ ತಿಳಿಯದೆಯೋ ಅದೆಷ್ಟೊ ಅಪರಿಚಿತರಿಂದಲೂ ಸೇವೆ-ಸವಲತ್ತುಗಳನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪಡೆಯುತ್ತಲೇ ಇರುತ್ತೇವೆ! ಪ್ರಯಾಣ ಮಾಡುವಾಗ ಅದಾವುದೋ ಮರದಡಿ ಕೂರುತ್ತೇವೆ! ಅದಾವುದೋ ಕೆರೆಬಾವಿಗಳಿಂದ ನೀರನ್ನು ಪಡೆಯುತ್ತೇವೆ! ಅದಾರಿಂದಲೋ ವಿಳಾಸವನ್ನು ತಿಳಿಯುತ್ತೇವೆ! ಅದಾರದೋ ದಾನ-ಧರ್ಮ-ಪರಿಶ್ರಮಗಳ ಫಲವಾಗಿ ಬೆಳೆದ ವಿದ್ಯಾಸಂಸ್ಥೆಯಲ್ಲಿ ಓದಿ ದೊಡ್ಡವರಾಗಿರುತ್ತೇವೆ! ಬಡತನದಲ್ಲಿದ್ದ ನಮ್ಮ ಎಷ್ಟೋ ಪೂರ್ವಜರು, ಯಾರದೋ ಉದಾರ ಆಶ್ರಯದಲ್ಲಿ ಊಟ-ವಸತಿ-ವಿದ್ಯೆ-ಪದವಿಗಳನ್ನು ಗಳಿಸಿ ದೊಡ್ಡವರಾದ ಕಾರಣದಿಂದಾಗಿ, ನಾವಿಂದು ನಾಗರಿಕ ಸುಖಸವಲತ್ತುಗಳನ್ನು ಅನುಭವಿಸುತ್ತಿರುರುತ್ತೇವೆ! ಆ ಮರವನ್ನು ನೆಟ್ಟವರಿಗೂ, ಕೆರೆಬಾವಿಗಳನ್ನು ಕಟ್ಟಿಸಿದವರಿಗೂ, ದಾರಿ ತೋರಿಸಿದವರಿಗೂ, ವಿದ್ಯಾಸಂಸ್ಥೆಯನ್ನು ಕಟ್ಟಿಬೆಳೆಸಿದವರಿಗೂ, ನಮ್ಮ ಪೂರ್ವಜರಿಗೆ ಹಾಗೆ ಆಶ್ರಯವಿತ್ತ ಉದಾರಿಗಳಿಗೂ ನಾವು ಋಣಿಗಳೇ ಅಲ್ಲವೆ?!
ಅದೆಷ್ಟೋ ಜನರ ಸರ್ಜನಶೀಲತೆಯಿಂದಲೂ ಶ್ರಮದಿಂದಲೂ ಬೆಳೆದುಬಂದ ಭಾಷೆಯನ್ನೂ ವ್ಯವಹಾರ-ಪದ್ಧತಿಗಳನ್ನೂ ವ್ಯವಸ್ಥೆಗಳನ್ನೂ ನಾವಿಂದು ಬಳಸಿ ಸುಖಿಸುತ್ತೇವೆ! ಅದಾವ ಕವಿ-ಕೋವಿದರದೋ ಸೃಷ್ಟಿಯಾದ ಕಾವ್ಯ-ಸಾಹಿತ್ಯಗಳನ್ನೂ ಗೀತ-ನೃತ್ಯ-ವಿನೋದಗಳನ್ನೂ ನಾವಿಂದು ಆಸ್ವಾದಿಸಿ ನಲಿಯುತ್ತೇವೆ! ಹೀಗೆ ಹೇಳುತ್ತ ಹೋದರೆ… ನಮ್ಮ ಜೀವನದಲ್ಲಿನ ಎಲ್ಲ ಅಂಶಗಳಲ್ಲೂ ಹಲವರ ಯೋಗದಾನವಿದೆ! ಹೀಗಿರುವಾಗ ನಾವು ‘ಎಲ್ಲರಿಗೂ ಎಲ್ಲಕ್ಕೂ ಕೃತಜ್ಞರಾಗಿರಬೇಕಲ್ಲವೆ?!’ ಯಾವುದೋ ಬಗೆಯಲ್ಲಿ ನಾವು ಪ್ರತ್ಯುಪಕಾರವನ್ನು ಸಲ್ಲಿಸುವ ಪ್ರಯತ್ನವನ್ನಾದರೂ ಮಾಡದಿದ್ದರೆ ಹೇಗೆ? ಹಾಗೇನೂ ಮಾಡದಿದ್ದರೆ, ನಾವು ಎಲ್ಲರಿಂದಲೂ ಬಾಚಿಕೊಂಡು ಏನನ್ನೂ ಹಿಂದಿರುಗಿಸದೆ ತಿರುಗಾಡುವ ‘ಕಳ್ಳ’ರೇ ತಾನೆ?! ಎಂತಹ ಸುಂದರ ಜೀವನನೀತಿಯೇ ಅಡಗಿದೆ ಈ ಮಾತಿನಲ್ಲಿ! ‘ಹಂಚಿಕೊಂಡು ಬದುಕು. ಇಲ್ಲದಿದ್ದರೇ ನೀನು ‘‘ಕಳ್ಳ’’ನೆನಿಸುವೆ!’ ಎನ್ನುವ ಕೃಷ್ಣನ ಈ ಒಂದು ಕಿವಿಮಾತೇ ಸಾಕು, ನಮ್ಮ ಜೀವನ-ಸಾರ್ಥಕ್ಯಕ್ಕೆ ಬೇಕಾದಷ್ಟಾಯಿತಲ್ಲವೆ?!
ಒಟ್ಟಿನಲ್ಲಿ, ಮನುಷ್ಯನು ಕೇವಲ ‘ವ್ಯಷ್ಟಿ’ಭಾವದಲ್ಲಿ (ವೈಯಕ್ತಿಕ ನೆಲೆಯಲ್ಲಿ) ಬದುಕದೆ, ‘ಸಮಷ್ಟಿ’ಭಾವದಲ್ಲಿ (ಸರ್ವರನ್ನೂ ಒಳಗೊಂಡಂತೆ) ಬದುಕನ್ನು ವಿಸ್ತರಿಸಿಕೊಳ್ಳಬೇಕು. ಇದಕ್ಕೆ ಸಾಧಕವಾದದ್ದು ‘ಯಜ್ಞ’ ಅಥವಾ ‘ಯಜ್ಞ-ಭಾವದ ಕರ್ಮ’. ಈ ಹಿನ್ನೆಲೆಯಲ್ಲಿ ಶಾಸ್ತ್ರಗಳು ಸರ್ವರಿಗೂ ವಿಧಿಸುವ ದೇವ-ಪಿತೃ-ಋಷಿ-ಭೂತ- ನೃಯಜ್ಞಗಳೆಂಬ ‘ಪಂಚ ಮಹಾಯಜ್ಞ’ಗಳನ್ನು ನೆನೆಯಬಹುದು. ಪ್ರತಿದಿನವೂ ಮನುಷ್ಯರೆಲ್ಲರೂ ಈ ‘ಐದು ಯಜ್ಞ’ಗಳನ್ನು ತಪ್ಪದೆ ಮಾಡಬೇಕಂತೆ.
ದೇವಯಜ್ಞ = ಬೆಳಕು-ನೀರು-ಗಾಳಿ ಮುಂತಾದವನ್ನಿತ್ತು ನಮ್ಮ ಈ ಭೂಮಿಯನ್ನು ನಿತ್ಯವೂ ಧರಿಸಿ ಪೋಷಿಸುತ್ತಿರುವ ದೇವತಾಶಕ್ತಿಗೆ ನಿತ್ಯವೂ ಕೃತಜ್ಞರಾಗಿದ್ದು, ಪರಿಸರಸ್ನೇಹಿ ದ್ರವ್ಯಗಳಾದ ಹವಿಸ್ಸು ಹಾಗೂ ಮಂತ್ರಾದಿಗಳ ಮೂಲಕ ತರ್ಪಣವನ್ನೀಯಬೇಕು. ಅದೇ ‘ದೇವಯಜ್ಞ’ (‘ತರ್ಪಣ’ ಎಂದರೆ ‘ತೃಪ್ತಿಪಡಿಸುವಿಕೆ’ ಎಂದರ್ಥ).
ಪಿತೃಯಜ್ಞ = ನಮಗೆ ಜನ್ಮವಿತ್ತು ಪಾಲಿಸಿ ಪೋಷಿಸಿದ ತಾಯ್ತಂದೆಯರಿಗೂ ಅವರ ಪೂರ್ವಜರಿಗೂ ಬದುಕಿರುವಾಗ ಸೂಕ್ತ ಸೇವೆ ಸಲ್ಲಿಸಬೇಕಲ್ಲದೆ, ಗತಿಸಿದ ಮೇಲೂ ಅವರನ್ನು ಸ್ಮರಿಸಿ, ನಮ್ಮ ನಮ್ಮ ಕುಲಾಚಾರಕ್ಕನುಗುಣವಾಗಿ ವಿಧಿಯುಕ್ತವಾಗಿ ತರ್ಪಣಗೈಯಬೇಕು. ಅದೇ ‘ಪಿತೃಯಜ್ಞ’.
ಋಷಿಯಜ್ಞ = ಭಾಷೆ-ಕಲೆ-ವ್ಯವಹಾರ-ನೀತಿ-ವ್ಯವಸ್ಥೆ-ಜ್ಞಾನ- ವಿಜ್ಞಾನಾದಿಗಳೇ ಮೊದಲಾದ ಅಸಂಖ್ಯ ಜೀವನಪೋಷಕಾಂಶಗಳನ್ನು ಮನುಕುಲಕ್ಕಿತ್ತು ಹೋದ ಮಹಾಪ್ರಾಜ್ಞರಿಗೆ, ಋಷಿಗಳಿಗೆ, ವಿಜ್ಞಾನಿಗಳಿಗೆ, ಯೋಗಿಗಳಿಗೆ, ಮಾರ್ಗದರ್ಶಕರಿಗೆ ಹಾಗೂ ಅದನ್ನು ನಮಗೆ ತಲುಪಿಸುವ ಗುರುಪರಂಪರೆಗೆ ಕೃತಜ್ಞಭಾವವನ್ನು ಸಲ್ಲಿಸಬೇಕು. ಅಧ್ಯಯನ ಹಾಗೂ ಅಧ್ಯಾಪನದ ಮೂಲಕ ಈ ಪರಂಪರೆಯನ್ನು ಅವಿಚ್ಛಿನವಾಗಿ ಉಳಿಸುವುದೇ ‘ಋಷಿಯಜ್ಞ’ವನ್ನು ಮಾಡುವ ವಿಧಾನ.
ಭೂತಯಜ್ಞ = ಈ ಭೂಮಿಯ ಮೇಲೆ ನಮ್ಮೊಂದಿಗೆ ಬದುಕುತ್ತಿರುವ ಎಲ್ಲ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ನಾವು ಸ್ನೇಹ ತೋರಬೇಕು. ಅವುಗಳ ಸಹಾಯದಿಂದ ಪಡೆಯುವ ವಸ್ತುಗಳು, ಅನುಕೂಲಗಳಿಗಾಗಿ ಕೃತಜ್ಞರಾಗಿರಬೇಕು. ಮನೆಯ, ಓರೆಕೆರೆಯ ಪ್ರಾಣಿಪಶುಗಳಿಗೆ ಅನ್ನ ಜಲಗಳನ್ನೀಯುವುದಲ್ಲದೆ, ಅಗತ್ಯವಿದ್ದ ರಕ್ಷಣೆಯನ್ನೂ ಕೊಡುವುದೇ ‘ಭೂತಯಜ್ಞ’. ತಮ್ಮ ಸಾಕುಪ್ರಾಣಿಗಳಿಗಷ್ಟೇ ಅಲ್ಲದೆ, ಹಾರಾಡುವ ಪಕ್ಷಿಗಳಿಗಾಗಿಯೂ, ಬೀದಿಯಲ್ಲಿ ಅಲೆಯುವ ಪ್ರಾಣಿಗಳಿಗಾಗಿಯೂ ಮನೆಯ ಮುಂದೆ ನೀರನ್ನೂ ಆಹಾರವನ್ನಿಡುವ ಈ ಸುಂದರ ‘ಭೂತಯಜ್ಞ’ವನ್ನು ಪಾಲಿಸುವವರೂ ಇಂದಿಗೂ ಇದ್ದಾರೆ!
ನೃಯಜ್ಞ = ಮನುಷ್ಯನು ಸಹಮಾನವರಿಂದ ಎಷ್ಟು ಉಪಕೃತನಾಗಿರುತ್ತಾನೆ ಎನ್ನುವುದನ್ನು ರ್ಚಚಿಸಿದ್ದೇವೆ. ಅವರಿಗೆಲ್ಲ ಪ್ರತ್ಯುಪಕಾರ ಸಲ್ಲಿಸಬೇಕು. ಅದಕ್ಕಾಗಿ ಮನೆಮಂದಿಯೊಂದಿಗೂ, ಸರ್ವರೊಂದಿಗೂ ಸಭ್ಯ-ಸುಂದರ ವರ್ತನೆಯಿಂದಿರಬೇಕು. ಅತಿಥಿ-ಅಭ್ಯಾಗತರಿಗೂ, ಬಾಲವೃದ್ಧರಿಗೂ, ದೀನದುರ್ಬಲರಿಗೂ ಯಥಾಶಕ್ತಿ ಅನ್ನ-ವಸ್ತ್ರಾದಿಗಳನ್ನಿತ್ತು ಸತ್ಕರಿಸಬೇಕು. ಇದೇ ‘ನೃಯಜ್ಞ’.
ಇಂಥ ‘ಯಜ್ಞ’ದ ಮಹತ್ವವನ್ನೇ ಶ್ರೀಕೃಷ್ಣನು ಇಲ್ಲಿ ಧ್ವನಿಸುತ್ತಿರುವುದು. ‘ಹಿಂದುಧರ್ಮದಲ್ಲಿ ಸೇವೆಯ ಕಲ್ಪನೆಯೇ ಇರಲಿಲ್ಲ, ಪಾಶ್ಚಾತ್ಯರು ಅದನ್ನು ಕಲಿಸಿದರು’ ಎನ್ನುವ ಮೂರ್ಖತನದ ವಾದ ಮಾಡುವ ಮತಿಹೀನರು, ಕೃಷ್ಣನ ಈ ಮಾತುಗಳನ್ನೊಮ್ಮೆ ಅವಲೋಕಿಸಬೇಕು! ಕೃಷ್ಣನ ಮಾತಿಗೂ ಮೂಲವಾದ ಸುದೀರ್ಘ ‘ಯಜ್ಞ’ಪರಂಪರೆಯನ್ನೂ, ಸಮರ್ಪಣಾಭಾವದ ಸನಾತನ ಜೀವನಶೈಲಿಯನ್ನೂ ಗಮನಿಸಬೇಕು!
ಡಾ ಆರತಿ ವಿಬಿ
ಕೃಪೆ : ವಿಜಯವಾಣಿ