ರೊಕ್ಕ ಮಾಡು ನನಗೆ
ಅಜ್ಜಿ ತಾತಾ ಹಳ್ಳೀಲಿ
ಅಪ್ಪ ಅಮ್ಮ ಆಫೀಸ್ಲಿ
ಟಿ.ವಿ. ನನ್ನ ಆಪ್ತ ಗೆಳೆಯ
ದಿನವಿಡಿ ನಾನೇ ಅದರ ಒಡೆಯ
ಮನೆಯಲಿ ನಾನು ಒಂಟಿ
ಅದಕೆ ಆಗಿಹೆ ಬಲು ತುಂಟಿ
ಅಪ್ಪನ ಕಾಯುತ ಮಲಗೇ ಬಿಡುವೆ
ಎಂದು ನಾ ಅವರ ಮುಖವನು ನೋಡುವೆ?
ಎಣಿಸುವೆ ಬರುವುದು ಎಂದೋ ರವಿವಾರ?
ಕೂಡಲು ನಮ್ಮಯ ಪರಿವಾರ
ಅಪ್ಪನ ಹೆಗಲಲಿ ಏರುವ ಕಾತರ
ಅಮ್ಮನ ತೋಳಲಿ ಬಳಸುವ ಆತರ.
ಅಮ್ಮಗೆ ವಾರದ ಕೆಲಸದ ಬಳಲಿಕೆ
ಅಪ್ಪಗೆ ಗೆಳೆಯರ ಕೂಡುವ ಬಯಕೆ
ಇಂದಿನ ಕಾಲಕೆ ರೊಕ್ಕಕೆ ಬೆಲೆಯಂತೆ
ಭವಿಷ್ಯವಡಗಿಹುದು ಅದರಲ್ಲೇ ಅಂತೆ
ರೊಕ್ಕದ ಆಸೆ ಇಬ್ಬರಿಗೂ
ದೇವರೆ ರೊಕ್ಕವ ಮಾಡು ನೀ ನನಗೂ
ಅಪ್ಪನ ಸ್ಪರ್ಷ ಶರ್ಟಿನ ಕಿಸೆಯಲ್ಲಿ
ಅಮ್ಮ ಅವಿತಿಡುವಳು ಎದೆಯಲ್ಲಿ
ಇಬ್ಬರ ಆಸೆಯು ರೊಕ್ಕದಲಿ
ಇಬ್ಬರ ಪ್ರೀತಿಯ ಸಿಗಲಿ ನನಗೆ ರೊಕ್ಕದ ರೂಪದಲಿ
ರೊಕ್ಕವ ಮಾಡು ದೇವರೆ ಕರುಣೆಯಲಿ.