ಸಂಗೀತಗಾರನಿಗೆ ಒಲಿದ ಶಿಲ್ಪಕಲೆ

ಸಂಗೀತಗಾರನಿಗೆ ಒಲಿದ ಶಿಲ್ಪಕಲೆ

ಹುಟ್ಟಿದಾಗಿನಿಂದ ಸಂಗೀತದ ನೀನಾದ ಕೇಳಿಸಿಕೊಂಡು ಬೆಳೆದ ಹುಡುಗನನ್ನು ಸೆಳೆದದ್ದು ಶಿಲ್ಪಕಲೆ. ಸಂಗೀತವನ್ನು ಬಿಡದೆ, ಶಿಲ್ಪಕಲೆಯನ್ನೂ ಕರಗತ ಮಾಡಿಕೊಂಡ ಅವರು ಈ ಎರಡೂ ಕಲೆಯಲ್ಲೂ ಮಿಂಚುತ್ತಿದ್ದಾರೆ. ಶ್ರದ್ಧೆ ಮತ್ತು ಬದ್ಧತೆಯಿಂದ ಕಲಿತ ಕಾರಣಕ್ಕೆ ಎರಡೂ ವಿದ್ಯೆ ಒಲಿದಿದೆ ಎನ್ನುತ್ತಾರೆ ಅನಂತ ಸತ್ಯಂ.

ಸಾಮಾನ್ಯವಾಗಿ ಸಂಗೀತ ಕಲಾವಿದರು ಶಿಲ್ಪಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳುವುದು ಕಡಿಮೆ. ಶಿಲ್ಪ ಕಲಾವಿದರಿಗೆ ಸಂಗೀತದ ಆಸಕ್ತಿ ಇರುತ್ತದೆಯಾದರೂ, ಶಾಸ್ತ್ರ ಬದ್ಧವಾಗಿ ಅದನ್ನು ಕಲಿಯುವುದು ಕಡಿಮೆಯೇ. ಇಂಥವರಲ್ಲಿ ಅಪರೂಪದ ವ್ಯಕ್ತಿ ವಿದ್ವಾನ್‌ ಎನ್‌. ಅನಂತ ಸತ್ಯಂ. ಸಂಗೀತ ಮತ್ತು ಶಿಲ್ಪಕಲೆ ಎರಡನ್ನೂ ಕರಗತ ಮಾಡಿಕೊಂಡಿರುವ ಅವರು, ಇವನ್ನು ವೃತ್ತಿಯಾಗಿ ತೆಗೆದುಕೊಂಡು ಸಮತೋಲನ ಕಾಯ್ದುಕೊಂಡು ಬಂದಿದ್ದಾರೆ.

ಇಟಲಿಯ ತತ್ವಜ್ಞಾನಿ ಲಿಯೊನಾರ್ಡೊ ಡಾ ವಿಂಚಿ ಬಹು ಕ್ಷೇತ್ರಗಳ ತಜ್ಞರಾಗಿದ್ದವರು. ಸಂಗೀತ, ಶಿಲ್ಪಕಲೆ ಮತ್ತು ಚಿತ್ರಕಲೆಯಲ್ಲಿ ಪರಿಣತಿ ಸಾಧಿಸಿದ್ದವರು. ಅವರಂತೆ ಅಲ್ಲದಿದ್ದರೂ ಸಂಗೀತ ಮತ್ತು ಶಿಲ್ಪಕಲೆಯೆರಡರಲ್ಲೂ ಪ್ರಾವಿಣ್ಯತೆಯನ್ನು ಸತ್ಯಂ ಸಾಧಿಸಿದ್ದಾರೆ.

(ಎನ್‌. ಅನಂತ ಸತ್ಯಂ ಅವರ ಕಲಾಕೃತಿ)

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಎಫ್‌ಎ (ಬ್ಯಾಚುಲರ್‌ ಆಫ್‌ ಫೈನ್‌ ಆರ್ಟ್ಸ್‌) ಮತ್ತು ಎಂಎಫ್‌ಎ (ಮಾಸ್ಟರ್‌ ಆಫ್‌ ಫೈನ್‌ ಆರ್ಟ್ಸ್‌) ಪದವೀಧರರಾಗಿರುವ ಅವರು, ಶಿಲ್ಪಕಲೆಯಲ್ಲಿ ಪರಿಣತಿ ಹೊಂದಿದ್ದಾರೆ. ಎಂಟು ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ಉಪನ್ಯಾಸಕರಾಗಿಯೂ ಕಾರ್ಯ ನಿರ್ವಹಿಸಿರುವ ಅವರಿಗೆ ದೊಡ್ಡ ಶಿಷ್ಯ ಬಳಗವೂ ಇದೆ. ಪ್ರಸಿದ್ಧ ಮತ್ತು ಮಹಾನ್‌ ವ್ಯಕ್ತಿಗಳ ಕಂಚಿನ ಪುತ್ಥಳಿ ನಿರ್ಮಿಸುವುದರಲ್ಲಿ ಅವರು ಸಿದ್ಧಹಸ್ತರು. ಅವರು ನಿರ್ಮಿಸಿರುವ ಹಲವರ ಪುತ್ಥಳಿಗಳು ರಾಜ್ಯದ ವಿವಿಧೆಡೆ ಪ್ರತಿಷ್ಠಾಪನೆಗೊಂಡು ಜನರ ಗಮನ ಸೆಳೆಯುತ್ತಿವೆ.

ರಾಜಭವನದಲ್ಲಿ ಗಾಂಧಿ ಪುತ್ಥಳಿ

ಖುರ್ಷಿದ್‌ ಅಲಂ ಖಾನ್‌ ಅವರು ರಾಜ್ಯದ ರಾಜ್ಯಪಾಲರಾಗಿದ್ದಾಗ (1991–1999) ರಾಜಭವನದಲ್ಲಿ ಪ್ರತಿಷ್ಠಾಪಿಸಿದ ಮಹಾತ್ಮ ಗಾಂಧಿಯ ಕಂಚಿನ ಪುತ್ಥಳಿ ರೂಪುಗೊಂಡಿದ್ದು ಅನಂತ ಸತ್ಯಂ ಅವರ ಕೈಯಲ್ಲಿ. ಐಎನ್‌ಜಿ ವೈಶ್ಯ ಬ್ಯಾಂಕಿನ ಮುಂಭಾಗ ಇರುವ ‘ಹೌಂಡ್‌’, ಮುದ್ದೇನಹಳ್ಳಿಯಲ್ಲಿರುವ ಪ್ರಸಿದ್ಧ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಯನ್ನು ನಿರ್ಮಿಸಿದ್ದು ಇವರೇ. ವಿಶ್ವೇಶ್ವರಯ್ಯ ನಿಂತ ಭಂಗಿಯಲ್ಲಿರುವ ಕಂಚಿನ ಪುತ್ಥಳಿಯನ್ನೂ ಅವರು ಸಿದ್ಧಪಡಿಸಿದ್ದು, ಅದು ಮೈಸೂರಿನಲ್ಲಿ ಅನಾವರಣಗೊಳ್ಳಬೇಕಿದೆ.

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಸಂಸ್ಥಾಪಕ ಡಾ. ಡಿ.ಜಿ.ಬೆನಕಪ್ಪ ಅವರ ಪುತ್ಥಳಿಯನ್ನೂ ಅವರು ನಿರ್ಮಿಸಿದ್ದು, ಸದ್ಯದಲ್ಲಿಯೇ ಅದರ ಪ್ರತಿಷ್ಠಾಪನೆಯೂ ಆಗಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುತ್ಥಳಿಗಳು ಇವರಿಂದ ರೂಪುಗೊಂಡಿವೆ. ಇವೇ ಅಲ್ಲದೆ ಕೆಲ ಖಾಸಗಿ ಸಂಸ್ಥೆ, ಕಂಪನಿಗಳ ಆವರಣದಲ್ಲಿ ವಿವಿಧ ಶಿಲ್ಪಕಲೆಗಳನ್ನು ಕೆತ್ತಿರುವ ಅವರು, ಕೆಲ ರೆಸಾರ್ಟ್‌, ಮನೆ ಗೋಡೆಗಳ ಮೇಲೆ ಉಬ್ಬು ಶಿಲ್ಪಗಳನ್ನು ನಿರ್ಮಿಸಿ ಗೋಡೆಗಳ ಆಕರ್ಷಣೆ ಹೆಚ್ಚುವಂತೆ ಮಾಡಿದ್ದಾರೆ.

ಸಿದ್ಧವಾಗುತ್ತಿದೆ ಯು.ಆರ್‌.ರಾವ್‌ ಪುತ್ಥಳಿ

ದೇಶ ಕಂಡ ಪ್ರಸಿದ್ಧ ವಿಜ್ಞಾನಿ ಯು.ಆರ್‌. ರಾವ್‌ ನಮ್ಮನ್ನು ಅಗಲಿ ಜುಲೈ 24ಕ್ಕೆ ವರ್ಷವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮುಖ್ಯಸ್ಥರಾಗಿ ಹಲವು ಮಹತ್ವದ ಸಾಧನೆಗೆ ಕಾರಣೀಭೂತರಾದ ರಾವ್‌ ಅವರನ್ನು ಶಾಶ್ವತವಾಗಿ ಸ್ಮರಿಸಲೆಂದು ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲು ಇಸ್ರೊ ಮುಂದಾಗಿದೆ. ಅನಂತ ಸತ್ಯಂ ಅವರು ಈ ಪುತ್ಥಳಿ ನಿರ್ಮಾಣದಲ್ಲಿ ತೊಡಗಿದ್ದು, ಹತ್ತು ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಅಪ್ಪನ ಬಳುವಳಿ

‘ಶಿಲ್ಪ ಕಲೆ ಮತ್ತು ಸಂಗೀತ ಎರಡೂ ನನಗೆ ಅಪ್ಪನಿಂದ (ಎ. ನಾಗಭೂಷಣ ಶಾಸ್ತ್ರಿ) ಬಂದ ಬಳುವಳಿ. ರಾಮನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಅರ್ಚಕರಾಗಿದ್ದ ಅಪ್ಪ, ಗಣೇಶ ಹಬ್ಬದ ಸಂದರ್ಭದಲ್ಲಿ ಸ್ವತಃ ತಾವೇ ಗಣಪತಿ ಮೂರ್ತಿ ಸಿದ್ಧಪಡಿಸುತ್ತಿದ್ದರು. ಗಣೇಶನ ಕಾಲು, ಸೊಂಡಿಲು, ಕಿವಿಗಳನ್ನು ರೂಪಿಸಲು ನಾನು ಅವರಿಗೆ ನೆರವಾಗುತ್ತಿದೆ. ಕ್ರಮೇಣ ಇದು ಶಿಲ್ಪ ಕಲೆಯತ್ತ ನನ್ನ ಆಸಕ್ತಿ ಬೆಳೆಸಿತು. ಅಲ್ಲದೆ ಮನೆಯಲ್ಲಿ ಅಪ್ಪ, ಅಮ್ಮ (ಪಾರ್ವತಮ್ಮ) ಮತ್ತು ಸಹೋದರಿಯರು ಸಂಗೀತ ಕಲಿತಿದ್ದರು. ಅವರ ಸಂಗೀತವನ್ನು ಕೇಳುತ್ತಲೇ ಬೆಳೆದ ನನಗೆ ಸಂಗೀತದ ಮೇಲೆಯೂ ಆಸಕ್ತಿ ಬೆಳೆಯಿತು’ ಎನ್ನುತ್ತಾರೆ ಅನಂತ ಸತ್ಯಂ.

ಸಂಗೀತದಲ್ಲಿ ವಯಲಿನ್‌ ಕಲಿಕೆಗೆ ಆಸಕ್ತಿ ತೋರಿದೆ. ವಿದ್ವಾಂಸರಾದ ಬಿ.ವಿ.ಶ್ರೀಕಂಠೇಶ್ವರ, ಆರ್‌.ಆರ್‌. ಕೇಶವಮೂರ್ತಿ, ಮೈಸೂರು ನಾಗರಾಜ್‌ ಅವರ ಶಿಷ್ಯನಾಗಿ ಪಿಟೀಲು ನುಡಿಸುವುದನ್ನು ಕಲಿತೆ. ಚೆನ್ನೈ, ಮುಂಬೈ, ಹೈದರಾಬಾದ್‌, ಸ್ವಿಡ್ಜರ್‌ಲೆಂಡ್‌ನಲ್ಲೂ ಸಂಗೀತ ಕಛೇರಿ ನೀಡಿದ್ದೇನೆ. ಆಕಾಶವಾಣಿಯಲ್ಲೂ ನುಡಿಸಿದ್ದೇನೆ ಎನ್ನುತ್ತಾರೆ ಅವರು.

ಕೆಲ ವರ್ಷಗಳಿಂದ ಆಸಕ್ತರಿಗೆ ಪಿಟೀಲು ನುಡಿಸುವುದನ್ನೂ ಹೇಳಿಕೊಡುತ್ತಿದ್ದೇನೆ. ಸದ್ಯ 50 ವಿದ್ಯಾರ್ಥಿಗಳು ನನ್ನ ಮನೆಗೆ ಬಂದು ಕಲಿಯುತ್ತಿದ್ದಾರೆ. ಇವರಲ್ಲದೆ ಅಮೆರಿಕದ ಆರು ವಿದ್ಯಾರ್ಥಿಗಳಿಗೆ ವಾರದಲ್ಲಿ 2 ಗಂಟೆ  ‘ಸ್ಕೈಪ್‌’ ಮೂಲಕ ಪಿಟೀಲು  ಹೇಳಿಕೊಡುತ್ತಿದ್ದೇನೆ. ನನ್ನ ಶಿಷ್ಯರೂ ಇಂದು ಕಛೇರಿ ನೀಡುವ ಮಟ್ಟಿಗೆ ಬೆಳೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

‘ನನ್ನ ಗುರುಗಳಾದ ಆರ್‌.ಆರ್‌. ಕೇಶವಮೂರ್ತಿ ಅವರು, ಬ್ರಾಹ್ಮಣನಾದ ನಿನಗೆ ಸಂಗೀತ ಒಲಿದಿದೆ. ಸಾಮಾನ್ಯವಾಗಿ ಆಚಾರರಿಗೆ ಒಲಿಯುವ ಶಿಲ್ಪ ಕಲಾ ವಿದ್ಯೆಯೂ ಒಲಿದಿರುವುದು ಸಂತಸದ ವಿಷಯ. ಹಾಗಾಗಿ ಎರಡನ್ನೂ ಸರಿದೂಗಿಸಿಕೊಂಡು ಹೋಗು ಎಂದು ಹೇಳಿ ಆಶೀರ್ವದಿಸಿದ್ದರು’ ಎಂದು ಸತ್ಯಂ ಸ್ಮರಿಸುತ್ತಾರೆ.

ಪೂರ್ವ ತಯಾರಿ ಮುಖ್ಯ

ಪುತ್ಥಳಿಗಳ ನಿರ್ಮಾಣದ ವೇಳೆ ಶಿಲ್ಪ ಕಲಾವಿದ ಹಲವು ಆಯಾಮಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನೋಡುಗ ಯಾವುದೇ ಕೋನದಿಂದ ವೀಕ್ಷಿಸಿದರು ಪುತ್ಥಳಿಗೆ ಸಂಬಂಧಿಸಿದ ವ್ಯಕ್ತಿಗೆ ಸಾಮ್ಯತೆ ಇರುವಂತೆ ಎಚ್ಚರವಹಿಸಬೇಕಾದದ್ದು ಶಿಲ್ಪ ಕಲಾವಿದನ ಗುರುತರ ಜವಾಬ್ದಾರಿ.

ಮೊಬೈಲ್‌: 9880260906

Courtesy : Prajavani.net

http://www.prajavani.net/news/article/2018/06/09/578182.html

Leave a Reply