ಜೋಡಿ ಮೈನ

ಜೋಡಿ ಮೈನ
ಜೋಡಿ ಜೋಡಿ ಮೈನ
ಹಾರಿ ಹಾರಿ ವನ ಬನ
ಬಿಟ್ಟು ಬಿಡದ ಜೀವನ
ವಸಂತದ ಆಗಮನ
ಕೋಗಿಲೆಯ ಮಧುರ ಗಾಯನ
ಕೂಡಿತೆರಡು ನಯನ
ಪ್ರೇಮದಲಿ ಆಲಿಂಗನ
ಜೀವ ಸೃಷ್ಟಿಗೆಂದು ಮಿಲನ.
ಪ್ರೀತಿಗಿಂದು ಫಲಿಸಿ ಬಂತು
ಗರ್ಭದೊಳೊಂದು ಮರಿ ಮೈನ ಬಂತು
ಹಾರಿ ಹಾರಿ ಬಾನ ಮೇಲೇರಿ
ಸಂತಸದಿ ಕುಣಿದಾಡಿ ಜೋಡಿ ಮೈನ
ಎಳೆ ಎಳೆಯ ನೂಲುದಾರ
ಹುಡುಕಿ ತಂದು ಹಸಿರು ಕಡ್ಡಿ
ಹುಲ್ಲು ಬಳ್ಳಿ ನಾರ
ಕಟ್ಟಿ ಭದ್ರ ಗೂಡನೊಂದು
ಅತಿಥಿ ಸ್ವಾಗತಕೆಂದು
ದಿನವೂ ಕಾದು ಕಾದು ಗಂಡು ಮೈನ
ಬಂದೇ ಬಂತು ಆ ದಿನ
ದಿನವೂ ಕಾವು ಕೊಟ್ಟು ಕೊಟ್ಟು
ಒಡೆದು ಇಣುಕಿತೊಂದು ಜೀವ
ಚಿಂವ್ ಚಿಂವ್ ಮರಿ ಮೈನಾ.
ಕ್ಷಣ ಕ್ಷಣಕು ಗುಟುಕನಿಟ್ಟು
ಹುಳ ಹುಪ್ಪಟೆ ಹುಡುಕಿ ತಂದು
ಹೂವು ಹಣ್ಣ ರಸವನೊಮ್ಮೆ
ಉದರಕಿಡುತೆರೆ ಸರಳ ಜೀವನ
ವಿಧಿಯ ಆಟ ನಿಮಿಷದಲ್ಲೆ
ಬಿರುಗಾಳಿಗೆ ನಲುಗಿ ಗಿಡಗಡಗಡ
ಸಂಭವಿಸಿ ಅವಗಡ
ನೆಲಕುರುಳಿತು ಮೈನಗೂಡ ಸಂಗಡ
ಎತ್ತಲಾರದೆ ನಲುಗಿತು ಜೋಡಿ ಮೈನ
ಭಯದಿ ಮೇಲೆ ಕೆಳಗೆ ನೋಡಿ
ಆಹಾ ! ಎಂಥ ದುರ್ವಿಧಿ
ಇದೆಂದು ಹಾಡಿ
ಪರಿತಪಿಸುತಿರೆ ಮರಿಯ
ನೋಡಿ ನೋಡಿ
ಗಂಟಲು ಬಿರಿಯೆ ಕೂಗಿ ಕೂಗಿ
ಬಾಯಿ ಒಣಗಿ ಕರ್ಕಶವಾಗಿ
ಕೂಗಿ ಕೂಗಿ ತನ್ನ ಬಳಗ ಕರೆದು
ಕಳೆದು ಹೋಯ್ತು ಮರಿ ಮೈನ
ಉಸಿರ ಕಟ್ಟಿತಂದು ಮೈನ
ಸಮಯ ಸರಿದು
ವಿಧಿಯ ಮರೆಸಿತೆಲ್ಲ
ಮತ್ತೆ ಮರುಕಳಿಸಿತು ವಸಂತ
ಬೆರೆತವೆರಡು ಜೋಡಿ ಮೈನ
ಮತ್ತೆ ಜೀವ ಸೃಷ್ಠಿಯಾಗೆ ಮರಿ ಮೈನ
ಆಹಾ ! ಮರಿ ಮೈನ
ಓಹೋ ! ಮರಿ ಮೈನ.

 

 

Leave a Reply