ಕುಣಿ ಶಿಕಾರಿಯ ನೆನಪು

ಕುಣಿ ಶಿಕಾರಿಯ ನೆನಪು

ಮಲೆನಾಡಿನಲ್ಲಿ ಒಂದು ಕಾಲದಲ್ಲಿ ಕಾಡುಪ್ರಾಣಿಗಳ ಕಾಟ ಹೆಚ್ಚು. ಇದನ್ನು ತಡೆಯಲು ರೈತರು ಕಂಡುಕೊಂಡ ಸುಲಭ ವಿಧಾನವೇ ಕುಣಿ ಶಿಕಾರಿ.

ಶಿಕಾರಿ ಎಂಬುದೊಂದು ವಿಶಿಷ್ಟ ಜೀವನಾನುಭವ. ಇತ್ತೀಚಿನ ಕೆಲವು ವರ್ಷಗಳವರೆಗೂ ಮಲೆನಾಡಿನಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಕಬ್ಬು, ಅಡಿಕೆ, ಬಾಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಶಿಕಾರಿ ಮಾಡುತ್ತಿದ್ದರು. ಶಿಕಾರಿ ಕೆಲವರಿಗೆ ತಮ್ಮಲ್ಲಿರುವ ಸಾಹಸ ಪ್ರಜ್ಞೆಯನ್ನು ಒರೆಗೆ ಹಚ್ಚುವ ಅವಕಾಶವಾದರೆ, ಇನ್ನು ಕೆಲವರಿಗೆ ಹವ್ಯಾಸ ಹಾಗೂ ಮನೋರಂಜನೆಯ ಒಂದು ಭಾಗ. ಶಿಕಾರಿಯಲ್ಲಿ ಮೈನವಿರೇಳಿಸುವ ಪ್ರಸಂಗಗಳೆಂತೋ, ಅಂತೇ ಪೇಚಿನ ಪ್ರಸಂಗಗಳಿಗೂ, ರಸಮಯ ಸನ್ನಿವೇಶಗಳಿಗೂ ಬರವಿಲ್ಲ. ದಟ್ಟ ಕಾಡು ಹಾಗೂ ಶಿಕಾರಿ ಪದ್ಧತಿ ಮಾಯವಾಗುತ್ತಿರುವ ಈ ದಿನಗಳಲ್ಲಿ ಮತ್ತೆ ಗತಕಾಲದ ಶಿಕಾರಿಯ ಅನುಭವವನ್ನು ಮೆಲುಕು ಹಾಕುವುದರಲ್ಲೆನೋ ಮಜವಿದೆ.
ಶಿಕಾರಿಯಲ್ಲಿ ಹಲವು ವಿಧ. ಅದರಲ್ಲಿ ಮುಖ್ಯವಾಗಿ ನಾನು ಕಂಡಿರುವ ವಿಧ ‘ಕುಣಿ ಶಿಕಾರಿ’. ಅಂದರೆ ಜಮೀನಿಗೆ ದಾಳಿ ಇಡುವ ಕಾಡು ಪ್ರಾಣಿಗಳನ್ನು ಆಳದ ಗುಂಡಿಗೆ (ಕುಣಿ/ಬಾವಿ) ಬೀಳಿಸುವುದು. ಸಾಮಾನ್ಯವಾಗಿ ಮಲೆನಾಡಿನಲ್ಲಿ ಗದ್ದೆ, ಜಮೀನುಗಳು ಇರುವುದು ಊರಿನಿಂದ ದೂರವಾಗಿ ಕಾಡಿನ ಸೆರಗಿನಲ್ಲಿ. ಹೀಗಾಗಿ ಅಲ್ಲಿ ಭತ್ತದ ಗದ್ದೆಗೆ ಹಂದಿ ಇತರೆ ಕಾಡು ಪ್ರಾಣಿಗಳ ಕಾಟ ಜಾಸ್ತಿ. ಇವು ರಾತ್ರಿಯಲ್ಲಿ ಹಿಂಡು ಹಿಂಡಾಗಿ, ಕೆಲವೊಮ್ಮೆ ಒಂಟಿಯಾಗಿ ಗದ್ದೆಗಳಿಗೆ ನುಗ್ಗಿ ಅಪಾರ ಹಾನಿ ಮಾಡುತ್ತವೆ. ಬೆಳೆದ ಬೆಳೆಯನ್ನು ಮನೆಗೆ ತರುವಷ್ಟರಲ್ಲಿ ರೈತನ ಜೀವ ಹೈರಾಣು. ಗದ್ದೆ ಬಯಲುಗಳ ಮಣ್ಣು ಫಲವತ್ತಾಗಿರುವುದರಿಂದ ಇಲ್ಲಿ ಎರೆಹುಳು ಜಾಸ್ತಿ. ಮಳೆಗಾಲದಲ್ಲಿ ಎರೆಹುಳುವಿಗಾಗಿ ಕಾಡು ಹಂದಿಗಳು ಗದ್ದೆಗೆ ನುಗ್ಗಿ ಮಣ್ಣು ಉತ್ತುವುದರಿಂದ ಫಸಲು ಹಾಳು. ಈ ಲೂಟಿ ತಡೆಯಲು ಶಿಕಾರಿ ಅನಿವಾರ್ಯ.
ಸೂಕ್ಷ್ಮಗ್ರಾಹಿ ಕಾಡು ಪ್ರಾಣಿಗಳ ಬೇಟೆ ನಿಜಕ್ಕೂ ಸವಾಲಿನ ಕೆಲಸವೇ. ಗುಂಡಿಗೆ ಬೀಳಿಸುವ ಶಿಕಾರಿಗೆ ವಿಶೇಷ ನೈಪುಣ್ಯವೇ ಬೇಕು. ಜಮೀನಿನ ಸುತ್ತಲೂ ಭದ್ರವಾಗಿ ಬೇಲಿ ಹಾಕಿ, ಒಂದು ಕಡೆ ಮಾತ್ರ ಒಳನುಗ್ಗಲು ಸುಲಭವಾಗುವ ದುರ್ಬಲ ಬೇಲಿ(ಕಂಡಿ)ಯ ರಚನೆ. ಬೇಲಿಯ ಒಳಭಾಗಕ್ಕೆ ಹೊಂದಿಕೊಂಡು ಆಯತಾಕಾರದ ಆಳವಾದ ಗುಂಡಿ. ಗುಂಡಿಯ ಮೇಲ್ಭಾಗಕ್ಕೆ ತೆಳುವಾದ, ಚಿಕ್ಕ ಭಾರಕ್ಕೂ ತಟ್ಟನೆ ಮುರಿದುಹೋಗುವ ಸಣ್ಣ ಸಣ್ಣ ಕೋಲುಗಳ ಒತ್ತೊತ್ತಾದ ಜೋಡಣೆ. ಹೀಗೆ ಉದ್ದ ಅಡ್ಡವಾಗಿ ಜೋಡಿಸಿದ ಹಂದರದ ಮೇಲೆ ದಪ್ಪವಾಗಿ ಹರಡಿದ ದರಕೆಲೆ(ತರಗೆಲೆ)ಗಳ ಪದರ. ಮೇಲೆ ತೆಳುವಾದ ಮಣ್ಣಿನ ಮುಚ್ಚಿಗೆ. ಕಾಣಲಿಕ್ಕೆ ನೆಲದಂತೆಯೇ ಭಾಸವಾಗುವ ರಚನೆ. ರಾತ್ರಿಯ ಹೊತ್ತು ಹಂದಿಗಳು ಗದ್ದೆಯ ಒಳನುಗ್ಗುವ ದಾರಿ ಹುಡುಕುತ್ತಾ ಒಳನುಗ್ಗಲು ಸಲೀಸಾಗಿರುವ ಈ ಕಂಡಿಯ ಮೂಲಕ ನುಸುಳಿ ಬರುತ್ತವೆ. ಹಾಗೆ ಬರುವಾಗ ಅವುಗಳ ಭಾರಕ್ಕೆ ಮುಚ್ಚಿಗೆ ಕುಸಿದು ಆಳದ ಕುಣಿಗೆ ಬೀಳುತ್ತವೆ. ಕೆಲವೊಮ್ಮೆ ಗುಂಪಿನಲ್ಲಿ ಒಳನುಗ್ಗುವಾಗ ಎರಡು-ಮೂರು ಹಂದಿಗಳು ಒಟ್ಟಿಗೆ ಬೀಳುವ ಪ್ರಸಂಗಗಳೂ ಇವೆ. ಗುಂಡಿಯ ಕಡಿದಾದ ಗೋಡೆಗಳು ಮೇಲೆ ಹತ್ತಿ ಬರಲಾಗದಂತೆ ಅವನ್ನು ತಡೆಯುತ್ತವೆ. ಹೀಗೆ ಗುಂಡಿಗೆ ಬಿದ್ದ ಪ್ರಾಣಿಗಳು ತಮ್ಮ ಗಾಬರಿಯನ್ನು ನೂರ್ಮಡಿಸಿಕೊಂಡು ಮಾಡುವ ಗೌಜು, ಗದ್ದಲವಂತೂ ಭೀಕರ.
ಮುಂಜಾನೆ ಗದ್ದೆಯತ್ತ ಹೊರಟಾಗ ದೂರಕ್ಕೆ ಕೇಳುವ ಚೀರಾಟ ಪ್ರಾಣಿ ಯಾವುದೋ ಗುಂಡಿಗೆ ಬಿದ್ದ ಸೂಚನೆ ಕೊಡುತ್ತದೆ. ಗುಂಡಿ ಮುಚ್ಚಿ, ಅದರ ದೇಖ-ರೇಖೆ ನೋಡಿಕೊಳ್ಳುವ ಮಂದಿಗೆ ಸುದ್ದಿ ಹೋಗುತ್ತದೆ. ತಮ್ಮ ಸಂಗಡಿಗರೊಂದಿಗೆ ಬಂದವರೇ ಗುಂಡಿಯ ಮೇಲ್ಭಾಗದ ಮುಚ್ಚಿಗೆ ತೆಗೆದು ಪ್ರಾಣಿ ಬೇಟೆಗೆ ಸಿದ್ಧರಾಗುತ್ತಾರೆ. ಮೇಲಿನಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ಶಕ್ತಿಮೀರಿ ಎತ್ತಿ ಹಾಕಿಯೋ, ಇಲ್ಲವೇ ಈಡು ಹೊಡೆದೋ ಗುಂಡಿಗೆ ಬಿದ್ದ ಕಾಡು ಪ್ರಾಣಿಗಳನ್ನು ಕೊಲ್ಲುವರು. ಪ್ರಾಣಿಗಳು ತಮ್ಮ ಮೇಲೆ ಬೀಳುವ ಕಲ್ಲಿನೇಟಿಗೆ ಗುಂಡಿಯಲ್ಲೇ ಗಾಬರಿಗೊಂಡು ಆರ್ಭಟಿಸುತ್ತಾ ಆವೇಶದಿಂದ ಬಾಲ ಎತ್ತರಿಸಿ ಆ ಕಡೆ, ಈ ಕಡೆ ನುಗ್ಗುವ ಆ ದೃಶ್ಯವಂತೂ ಬಹಳ ಭೀಕರವಾದುದು. ಎದೆ ಝಲ್ ಎನ್ನು ಸನ್ನಿವೇಶ. ನೆನೆಸಿಕೊಂಡರೆ ಈಗಲೂ ಹೃದಯ ದ್ರವಿಸುತ್ತದೆ. ಹೀಗೆ ಕೊಂದ ಪ್ರಾಣಿಯನ್ನು ಹಗ್ಗ ಕಟ್ಟಿ ಗುಂಡಿಯಿಂದ ಮೇಲಕ್ಕೆತ್ತಿ ಹೊತ್ತೊಯ್ಯುವುದು ನಂತರದ ಹಂತ. ಈ ಕೆಲಸಕ್ಕೆ ಸಹಾಯಕರಾದವರೆಲ್ಲರಿಗೂ ಮಾಂಸದಲ್ಲಿ ಸಮಪಾಲು. ಅಂದು ಅವರಿಗೆಲ್ಲಾ ಹಬ್ಬದೂಟವಾದರೆ, ಬೆಳೆದ ಬೆಳೆ ದಕ್ಕಿಸಿಕೊಂಡ ಸಮಾಧಾನ ರೈತನದ್ದು.
ಅಂದೆಂದೋ ‘ಗವ್’ ಎನ್ನುತ್ತಿದ್ದ ಕಾಡು ಜನಸಂಖ್ಯಾ ಸ್ಫೋಟದ ಪರಿಣಾಮ ಇಂದು ಬಟ್ಟಂಬಯಲು. ಬರದಿಂದ ಬೀಸಿದ ನಗರೀಕರಣಕ್ಕೆ ಜಮೀನಿನ ಸುತ್ತಲ ಕಾಡು ನಿಧಾನವಾಗಿ ಮಾಯವಾದಂತೆ, ಕಾಡು ಪ್ರಾಣಿಗಳು ಅವಸಾನದ ಹಾದಿ ಹಿಡಿದವು. ಈಗ ಕಾಡು ಇಲ್ಲ, ಕಾಡು ಪ್ರಾಣಿಗಳೂ ಇಲ್ಲ. ಇನ್ನೆಲ್ಲಿ ಶಿಕಾರಿ? ಅನರ್ಘ್ಯ ವನ್ಯ ಸಂಪತ್ತು, ಪ್ರಾಣಿ ಸಂಪತ್ತು ಇಂದು ಮಲೆನಾಡಿನಿಂದ ಕಾಣೆಯಾಗಿ ಬಹಳ ಕಾಲವೇ ಆಗಿ ಹೋಯಿತು. ಬಂಡವಾಳಶಾಹಿ, ವಿದೇಶಿ ನೆರವು, ಅವೈಜ್ಞಾನಿಕ ಒಪ್ಪಂದಗಳಿಗೆ ಮಲೆನಾಡಿನ ಗುಡ್ಡ, ಕೃಷಿ ಭೂಮಿಗಳೆಲ್ಲಾ ನೆಡುತೋಪುಗಳಾಗಿವೆ. ಅಲ್ಲಿ ಈಗೇನಿದ್ದರೂ ಏಕಜಾತಿಯ ಸಸ್ಯಗಳದ್ದೇ ಕಾರುಬಾರು. ವನ್ಯ ಜೀವಿಗಳ ವಾಸದಡೆಯಲ್ಲಿ ಅಕೇಸಿಯಾ ನೆಟ್ಟು ಹುಲ್ಲು ಮಾಯ ಮಾಡಿ ಅಡವಿ ಸಂಕುಲಕ್ಕೆ ಘಾಸಿ.
ಕೃಷಿ, ಹೈನುಗಾರಿಕೆಗೆ ಒತ್ತಾಸೆಯಾಗಿದ್ದ ಸೊಪ್ಪಿನ ಬೆಟ್ಟಗಳಲ್ಲಿ ರಬ್ಬರ್ ಗಿಡಗಳು. ಕೂಲಿ ಬರದ ಕಾರಣವೊಡ್ಡಿ ಭತ್ತ, ಕಬ್ಬು ಬೆಳೆಯುವ ಬಹುತೇಕ ಜನ ನಿರ್ವಹಣೆ ಕಷ್ಟವೆನ್ನುತ್ತಾ ನೆಡುತೋಪುಗಳಿಗೆ ಶರಣಾಗಿದ್ದಾರೆ. ನೈಸರ್ಗಿಕ ಸಸ್ಯಗಳ ಬಳಕೆ ಮಾಯವಾಗುತ್ತಿದೆ. ತಲೆಮಾರಿನಿಂದ, ತಲೆಮಾರಿಗೆ ವರ್ಗಾವಣೆಗೊಂಡು ಬಂದ, ಜನಸಮುದಾಯದ ಆರೋಗ್ಯಕರ ಬದುಕಿಗೆ ಅಗತ್ಯವಿದ್ದ ಸಾವಯವ ಕೃಷಿಯ ಅಂಶಗಳು ಕೂಡಾ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಬಣ್ಣ ಕಳೆದುಕೊಂಡಿವೆ. ಹಕ್ಕಿಗಳ ಚಿಲಿಪಿಲಿ, ಮನಸ್ಸು ಮುದಗೊಳಿಸುವ ಹಸಿರು ಬಣ್ಣದ ಬೆರಗಿಲ್ಲ. ಬಾಲ್ಯದ ದಿನಗಳ ಹಳ್ಳಿ, ಕಾಡು, ಭತ್ತದ ಗದ್ದೆಗಳು, ಆ ಕಾಲದ ಮುಂಜಾವು, ಸಂಜೆಗಳು, ಮಳೆಯ ದಿನಗಳು ಈಗ ನೆನಪಷ್ಟೆ. ಕೆಲವು ಜಮೀನುಗಳಲ್ಲಿ ಈಗಲೂ ಹಾಳೂ ಬಿದ್ದು ಬಾಯಿ ತೆರೆದು ನಿಂತಿರುವ ‘ಹಂದಿ ಕುಣಿ’ ಗತಿಸಿಹೋದ ದಿನಗಳ ಪಳೆಯುಳಿಕೆಯಂತೆ ನಿಂತಿವೆ! ಇಲ್ಲಿಂದ ಮುಂದೆ ವಾಸ್ತವತೆಯೇ ನಮ್ಮನ್ನು ಮುನ್ನಡೆಸುತ್ತಾ ಹೋಗುತ್ತದೆ.

                                                                                                    ಹೊಸ್ಮನೆ ಮುತ್ತು

Leave a Reply