ಸಾಪೇಕ್ಷ

ಸಾಪೇಕ್ಷ

ಬಹಳ ದಿನಗಳ ನಂತರ ಆ ಆಫೀಸಿನಲ್ಲೊಂದು ನಿವೃತ್ತಿಯ ಸಮಾರಂಭ ಏರ್ಪಟ್ಟಿತ್ತು. ಸುಮಾರು ಹನ್ನೊಂದು ವರ್ಷಗಳಿಂದಲೂ ಅದೇ ಆಫೀಸಿನಲ್ಲಿ ಕೆಲಸ ಮಾಡುತ್ತ ತಮ್ಮ ಉತ್ತಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದ ಶ್ರೀನಿವಾಸಮೂರ್ತಿಯವರದು. ‘ಅಜಾತ ಶತ್ರು’ ಎಂದೇ ಆಫೀಸಿನಲ್ಲಿ ಹೆಸರುವಾಸಿಯಾಗಿದ್ದ ಅವರ ಬಗೆಗೆ ಎಲ್ಲರೂ ಹೇಳುವವರೇ, ರೀತಿ ಬೇರೆ, ಅನುಭವ ಬೇರೆ, ಆದರೆ ಎಲ್ಲರದೂ ಭಾವ ಮಾತ್ರ ಒಂದೇ- “ಅವರಂತಹ ಒಳ್ಳೆಯ ವ್ಯಕ್ತಿಯನ್ನು ತಾವು ಕಂಡಿಲ್ಲ..” ಎನ್ನುವುದು. ಅದನ್ನು ಕೇಳಿ ಮೂರ್ತಿಯವರ ಮುಖದಲ್ಲಿ ಧನ್ಯತೆ ಸಂತಸಗಳಿಲ್ಲ. ಏನೋ ಉದ್ವಿಗ್ನತೆ, ಅಸಹಾಯಕತೆ ಮುಖದಲ್ಲಿ ಸುಳಿಯುತ್ತಿವೆ.
ಕೊನೆಗೂ ತಮ್ಮ ಸರದಿ ಬಂದಾಗ ಅವರು ಭಾವಾವೇಶದ ಉಚ್ಛಸ್ಥಾಯಿಗೇ ತಲುಪಿದ್ದರು. ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಏನೋ ದ್ವಂದ್ವ ಅವರನ್ನು ಕಾಡುತ್ತಿತ್ತು. ಹೇಗೋ ಪ್ರಾರಂಭಿಸಿದರು- “ಆತ್ಮೀಯ ಸಹೋದ್ಯೋಗಿಗಳೇ ಹೃದಯ ತುಂಬಿ ಬಂದಾಗ, ಶಬ್ದಗಳು ಕಡಿಮೆ ಎಂದು ಹೇಳುತ್ತಾರೆ. ನನ್ನ ಪಾಲಿಗಂತೂ ಅದು ನಿಜವೇ ಆಗಿದೆ. ನಿಮ್ಮೆಲ್ಲರೊಂದಿಗೆ ನಾನು ಕಳೆದ ಸುಮಾರು 11 ವರ್ಷಗಳು ನನ್ನ ಜೀವನದ ಅತಿ ಮುಖ್ಯ ಭಾಗ. ದಿನದ ಕ್ರೀಯಾಶೀಲ ಭಾಗ ನಮ್ಮೆಲ್ಲರದೂ ಆಫೀಸಿನಲ್ಲಿಯೇ ಕಳೆದುಹೋಗುತ್ತದೆ. ಆಗ ಪರಸ್ಪರರ ನಡುವೆ ಪ್ರೀತಿ, ಆತ್ಮೀಯತೆ ಬೆಳೆಯುವುದು ಸಹಜ. ಅದರಲ್ಲಿಯೂ ಭಾವಜೀವಿಗಳಿಗೆ ಹೇಳುವುದೇ ಬೇಡ. ಇಂದು ನಿಮ್ಮೆಲ್ಲರಿಗೂ ವಿದಾಯ ಹೇಳುವಾಗ ನೂರಾರು ಮಾತುಗಳನ್ನು ಹೇಳಬೇಕೆನಿಸುತ್ತದೆ. ಆದರೆ ಅಭಿವ್ಯಕ್ತಗೊಳಿಸಲು ಆಗುತ್ತಿಲ್ಲ. ಆದರೆ ಅವಶ್ಯವಾಗಿ ಎರಡು ಮಾತುಗಳನ್ನು ಹೇಳಲೇಬೇಕು. ಆಫೀಸಿನ ಕೆಲಸದಿಂದ ನಾನು ನಿವೃತ್ತನಾಗಿರಬಹುದು, ಆದರೆ ನನ್ನ ಮುಂದಿನ ಜೀವನಕ್ಕೂ ನಿಮ್ಮ ಸ್ನೇಹ ಪ್ರೀತಿಗಳು ಬೇಕು. ಜೀವನದ ಸಂಧ್ಯಾಕಾಲದಲ್ಲಿ ಅವು ನಮಗೆ ಅಮೃತ ಸಿಂಚನ. ಅವು ನಿಮ್ಮಿಂದ ಖಂಡಿತವಾಗಿಯೂ ದೊರೆಯುತ್ತವೆ ಎನ್ನುವ ನನ್ನ ಭರವಸೆಯನ್ನು ನೀವೆಲ್ಲರೂ ಸತ್ಯ ಮಾಡುವಿರಿ ಎಂದು ಆಶಿಸಿ ನಿಮಗೆ ಧನ್ಯವಾದ ಮತ್ತು ಶುಭೇಚ್ಛೆಗಳನ್ನು ಅರ್ಪಿಸಿ ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ..”
ಸಮಾರಂಭ ಯಶಸ್ವಿಯಾಗಿ ಮುಗಿಯಿತು. ಹಾರ ಉಡುಗೊರೆಗಳೊಂದಿಗೆ ಮೂರ್ತಿಯವರು ಕಾರನ್ನೇರಿದರು. ಕಂಬನಿಯೊಂದಿಗೇ ಅವರು ನಿರ್ಗಮಿಸಿ ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ತಲೆ ಹಿಂದೆ ಒರಗಿಸಿ ಸ್ವಲ್ಪ ಹೊತ್ತು ಸುಮ್ಮನೇ ಕುಳಿತ ಪತಿಯನ್ನೇ ನೋಡಿದಳು ಶೀಲಾ. ಅವರ ಭಾವಾವೇಗದ ಅರಿವಿದ್ದ ಅವಳೂ ಮಾತನಾಡಲಿಲ್ಲ. ಕೇವಲ ಅವರ ಕೈಯನ್ನು ಮೃದುವಾಗಿ ಒತ್ತಿದಳಷ್ಟೇ, ಮೂರ್ತಿಯವರು ಕಣ್ಣು ತೆರೆದರು.
“ಶೀಲಾ ನನ್ನ ವರ್ತನಾ ಅಸಹಜ ಅನ್ನಿಸ್ತಾ ನಿಂಗ?”
“ಅಸಹಜ ಅಂತ ಅಲ್ಲ, ಆದರ ಇಷ್ಟು ಭಾವಾವೇಗಕ್ಕೆ ಒಳಗಾಗಿದ್ದು ಅರ್ಥ ಆಗ್ಲಿಲ್ಲ. ನಿವೃತ್ತಿ ಅನಿರೀಕ್ಷಿತ ಅಲ್ಲಾ ಮೊದಲನೇದು, ಮತ್ತ ಮುಂದಿನ ಜೀವನದ ಬಗ್ಗೆ ಚಿಂತೀ ಮಾಡೂ ಅಂಥಾ ಪ್ರಸಂಗನೂ ನಮಗ ಇಲ್ಲ. ಎಲ್ಲಾ ಜವಾಬ್ದಾರೀ ಮುಗಿಸೇವಿ. ಯಾವ ವಿಷಯ ನಿಮ್ಮ ಮನಸ್ಸನ್ನು ಕೊರೀತು ಅಂತ ತಿಳೀಲಿಲ್ಲ ಅಷ್ಟ…”
ಮೂರ್ತಿಯವರು ಒಂದು ನಿಮಿಷ ಸುಮ್ಮನಿದ್ದರು. ನಂತರ ಕಿಸೆಯಿಂದ ಒಂದು ಪೇಪರನ್ನು ತೆಗೆದರು.
“ಶೀಲಾ ನೀ ಊಹಿಸೋ ಅಂಥಾ ವಿಷಯನss ಅಲ್ಲಾ ಅದು. ಇದನ್ನು ಓದು. ನಿನಗ ಸ್ವಲ್ಪ ವಿಚಿತ್ರ, ಅಲೌಕಿಕ ಅನ್ನಿಸಬಹುದು. ಆದ್ರ ನಾ ನನ್ನ ಜೀವನದ ಯಾವ ಘಟನಾನೂ ನಿನ್ನಿಂದ ಮುಚ್ಚಿಟ್ಟಿಲ್ಲ. ಇದರಲ್ಲಿರೋ ವಿಷಯ ನಿನಗ ಗೊತ್ತು. ಅಷ್ಟs ಅಲ್ಲ ನೀನೂ ಸಾಕ್ಷಿ ಆಗಿದ್ದೀ. ಅದೆಲ್ಲಾ ವಿಷಯಾನೂ ಇವತ್ತ ಸಮಾರಂಭದೊಳಗ ಹೇಳ್ಬೇಕೂ ಅಂತ ಈ ಭಾಷಣಾ ತಯಾರು ಮಾಡಿದ್ದೆ. ಆದ್ರ ಈ ಒಳ್ಳೇತನದ ಮುಖವಾಡ ಕಳಚಿಕೊಳ್ಳೋದು ಅಷ್ಟು ಸುಲಭದ ಕೆಲಸ ಅಲ್ಲಾ ಅನ್ನೋದು ಅನುಭವಕ್ಕ ಬಂತು. ನಮ್ಮನ್ನ, ನಮ್ಮ ಅಸಹಾಯಕತಾನ ಅನಾವರಣಗೊಳಿಸ್ಲಿಕ್ಕೂ ಭಾಳ ದೊಡ್ಡ ಹೃದಯಾನೂ ಬೇಕೂ, ಧೈರ್ಯಾನೂ ಬೇಕು. ಅದು ನನ್ನ ಕೈಲಿ ಆಗ್ಲಿಲ್ಲ. ಒಬ್ಬ ಸಾಧಾರಣ ಮನುಷ್ಯನ್ಹಂಗ ನಾನೂ ಒಂದ ಮುಖವಾಡದೊಳಗ ಮುಚ್ಚಿ ಹೋದೆ” ಎಂದು ಎರಡೂ ಕೈಯಲ್ಲಿ ಮುಖ ಮುಚ್ಚಿ ಕುಳಿತರು.
ಮನೆ ತಲುಪಿದ ತಕ್ಷಣ ಬಟ್ಟೆಯನ್ನೂ ಬದಲಿಸದೇ ಶೀಲಾ ಓದತೊಡಗಿದಳು.
“ಆತ್ಮೀಯ ಸಹೋದ್ಯೋಗಿಗಳೇ, ನನ್ನ ಬಗ್ಗೆ ನೀವೆಲ್ಲಾ ತೋರಿಸಿದ ಪ್ರೀತಿ, ಆದರ ಗೌರವಾ ನೋಡಿ ನನ್ನ ಮನಸ್ಸು ತುಂಬಿ ಬಂದದ, ನೀವೆಲ್ಲಾ ಹೇಳಿದ್ರಿ-ನಾನೊಬ್ಬ ಭಾಳಾ ಒಳ್ಳೇ ವ್ಯಕ್ತಿ ಅಂತ. ಒಂದು ಮಾತು – ಈ ಒಳ್ಳೇ ಮತ್ತು ಕೆಟ್ಟ ಅನ್ನೋ ಶಬ್ದಗಳು ಸಾಪೇಕ್ಷ ಅವ. ಅಂದ್ರ ಒಬ್ರಿಗೆ ಒಳ್ಳೆಯದು ಅನಿಸಿದ್ದು ಮತ್ತೊಬ್ರಿಗೆ ಕೆಟ್ಟದಾಗಬಹುದು. ಹಂಗಾದ್ರ ನಾನು ಯಾರ ದೃಷ್ಟೀ ಒಳಗ ಕೆಟ್ಟ ಅಂತ ನೀವು ಕೇಳ್ಬಹುದು. ಸುಮಾರು 30-32 ವರ್ಷದ ಹಿಂದಿನ ಒಂದು ಘಟನಾನ – ಅದೂ ನನ್ನ ಮನಸ್ಸಿನ ಮೂಲೆ ಒಳಗ ಕೂತು ನನ್ನನ್ನು ಕೊರೀತಿರೋ ಘಟನಾನ ಹೇಳ್ತೇನಿ. ಆಗ ನಿಮ್ಮ ಪ್ರಶ್ನೆಗೆ ಉತ್ತರಾ ಸಿಗಬಹುದು.
ಸುಮಾರು 30-32 ವರ್ಷದ ಹಿಂದಿನ ಮಾತು. ಆಗ ನಾನು ವಿಜಯವಾಡದ ಹತ್ತಿರ ಒಂದು ಹಳ್ಳೀ ಒಳಗ ರೇಲ್ವೆ ನೌಕರಿ ಮಾಡ್ತಿದ್ದೆ. ಮಕ್ಕಳೂ ಸಹಾ ಸಣ್ಣವರು. ತಾಯಿ, ಹೆಂಡತಿ ಇಬ್ಬರು ಮಕ್ಕಳು ಮತ್ತು ನಾನು. ತಾಯಿ ಸ್ವಲ್ಪ ವಯಸ್ಸಾದವರು. ದುರ್ದೈವದಿಂದ ಅವರಿಗೆ ಲಕ್ವಾ ಹೊಡದು ಹಾಸಿಗೆಯಿಂದ ಅಲುಗಾಡೋ ಪರಿಸ್ಥಿತಿ ಇರಲಿಲ್ಲ. ನೌಕರೀನೂ ಹೊಸದು. ಆಂಧ್ರ ಕೂಡ ಹೊಸಪ್ರದೇಶ. ಧಾರವಾಡದಂಥಾ ಸುರಕ್ಷಿತ ಪ್ರದೇಶದಿಂದ ಹೋದ ನಮಗ ನೆರೆ ಪ್ರವಾಹಗಳ ಬಗ್ಗೆ ಏನೂ ತಿಳಿಯದಂಥಾ ಪರಿಸ್ಥಿತಿ. ಅಕ್ಟೋಬರ್ ತಿಂಗಳಿರಬಹುದು. ನೆರೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ರು. ನಾವೂ ರೇಲ್ವೆ ಕ್ವಾರ್ಟರ್ಸಿನೊಳಗ ಇದ್ವಿ. ಭಾಳಷ್ಟು ಜನಾ ರಜಾ ಅಂತ ಊರು ಬಿಟ್ಟು ಹೋಗಿದ್ರು. ಒಂದು ಸಾಯಂಕಾಲ ಗಾಳಿ ಶಬ್ದಾ ವಿಪರೀತ ಕೇಳ್ತಿತ್ತು. ಮಕ್ಕಳು “ನಾವೂ ಊರಿಗೆ ಹೋಗ್ಲಿಕ್ಕೆ ನಮಗ್ಯಾರೂ ಇಲ್ಲೇನು?” ಎಂದು ತಾಯೀನ ಕೇಳ್ತಿದ್ರು. ವಿದ್ಯುಚ್ಛಕ್ತಿ ಸಂಪರ್ಕ ಇಲ್ದೇ ಕತ್ತಲು ಆವರಿಸ್ತಿತ್ತು. ನಮ್ಮ ಜೋಡಿ ಮನಿ ಅವ್ರು ಓಡ್ತಾ ಬಂದ್ರು, ‘ನೀರು ನುಗ್ಲಿಕ್ಕೆ ಹತ್ತೇದ ಟೆರೇಸ್ ಮ್ಯಾಲ ನಡೀರಿ’ ಅಂತ ಚೀರಿ ಅವ್ರು ಮ್ಯಾಲ ಹೋದ್ರು. ಏನೂ ತಿಳೀದ ಪರಿಸ್ಥಿತಿ. ನಾನು ನನ್ನ ಪತ್ನಿ ಮತ್ತು ಮಕ್ಕಳಿಗೆ ಮೆಟ್ಟಿಲ ಮ್ಯಾಲಿನಿಂದ ಹೋಗ್ಲಿಕ್ಕೆ ಸಹಾಯ ಮಾಡ್ದೆ. ನಮ್ಮ ತಾಯಿ ಚೀರ್ತಿದ್ರು, ‘ನನ್ನೂ ಉಳಿಸ್ರಿ’ – ಅಂತ. ಲಕ್ವಾ ಹೊಡದು ಅಸಹಾಯ ಪರಿಸ್ಥಿತಿ ಒಂದು. 70-75ಕೆ.ಜಿ ತೂಕ ಬೇರೆ. ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರ್ತಿತ್ತು. ಪತ್ನಿ ಮಕ್ಕಳು ಮ್ಯಾಲ ಚೀರೋದು ಕೇಳ್ತಿತ್ತು. ಒಂದು ನಿಮಿಷ ಅವ್ರ ಹತ್ರ ಹೋಗ್ಲಿಕ್ಕೆ ಪ್ರಯತ್ನ ಮಾಡಿದೆ. ಅವ್ವಾ ಮಂಚದ ಮ್ಯಾಲಿನಿಂದ ಕೈ ಮುಂದ ಮಾಡಿ ತೊದಲು ಧ್ವನಿ ಒಳಗ ‘ಚೀನಾ’ ಅಂತ ಕೂಗ್ತಿದ್ದುದು ಕೇಳಸ್ತಿತ್ತು. ಗಾಳಿ ಆರ್ಭಟದಾಗ ಆ ಧ್ವನಿ ಕ್ಷೀಣ ಇತ್ತು. ಆದ್ರ ಮ್ಯಾಲ ತೂಗಿ ಹಾಕಿದ ಕಂದೀಲಿನ ಮಂದ ದೀಪದಾಗೂ ಕಬ್ಬಿಣದ ಮಂಚದ ಮ್ಯಾಲ ಅರ್ಧಾ ಒರಗಿ ಕೈಚಾಚಿದ ಅವರ ಚಿತ್ರಾ ಈಗಲೂ ನನ್ನ ಕಣ್ಣ ಮುಂದ ಬರ್ತದ. ಅಸಹಾಯಕತಾ, ಕ್ರೋಧ ತುಂಬಿದ ಎರಡು ಕಣ್ಣು ನನ್ನ ಇರಿದ್ಹಂಗ ಭಾಸ ಆಗ್ತದ. ಆದ್ರ ಆ ಕ್ಷಣದಾಗ ನಾನೂ ಅಸಹಾಯಕ ಆಗಿ ಜೀವದ ಆಶಾ ತೊರೀಲಾರದ ದೌರ್ಬಲ್ಯದೊಳಗ ಅವ್ವನ್ನ ಬಿಟ್ಟs ಟೆರೇಸ್ ಮ್ಯಾಲ ಹೋದೆ. ಎರಡು ದಿನಾ ಮಳೆ, ಚಳಿ ಒಳಗ ಮಿಲಿಟ್ರಿ ಅವರು ವಿಮಾನದಿಂದ ಹಾಕೋ ಆಹಾರದ ಪ್ಯಾಕೆಟ್ ಮ್ಯಾಲ ಹೆಂಗೋ ದಿನಾ ಕಳಿದ್ವಿ. ಕ್ರಮೇಣ ಪ್ರವಾಹ ಇಳೀತು. ಅಲ್ಲಿ ತುಂಬಿದ ಹೊಲಸಿನ್ಹಂಗ ಮನಸ್ಸಿನ ಸ್ಥಿತಿ ಆಗಿತ್ತು. ಕೆಳಗ ಬಂದಾಗ ಉಬ್ಬಿ ಹೊಲಸು ನಾರ್ತಿದ್ದ ತಾಯಿಯ ಶವಾನ ನೋಡಿದ್ವಿ. ಅವರ ಅರೆತೆರೆದ ಕಣ್ಣು ನನ್ನ ನೋಡಿ ‘ಚೀನಾ ಕಡೆಗೂ ನನ್ನ ಉಳಿಸ್ಲಿಲ್ಲ..’ ಅಂದ್ಹಂಗ ಅನ್ನಿಸ್ತು. ಶವಸಂಸ್ಕಾರ ಹೆಂಗೋ ಆತು. ಅಜ್ಜೀನ ಕೇಳಿದ ಮಕ್ಕಳಿಗೆ ‘ದೇವರು ಕರ್ಕೊಂಡು ಹೋದ’ ಅಂತ ಹೇಳಿದ್ವಿ. ನಾನೂ ಅಸಹಾಯಕ ಅಂದುಕೊಂಡು ಮನಸ್ಸಿಗೆ ವರ್ತನಾ ಸಮರ್ಥನಾ ಮಾಡ್ಕೊಂಡೆ. ಕ್ರಮೇಣ ಮನಸ್ಸಿನಿಂದ ಆ ಘಟನಾ ಮಸುಕಾತು. ಆದ್ರ ಇವತ್ತ ನನ್ನ ಗುಣಗಾನ ನೀವೆಲ್ಲ ಮಾಡುವಾಗ ಆ ಘಟನಾ ಮತ್ತ ನೆನಪಾಗೇದ. ದೌರ್ಬಲ್ಯ ಹೇಡಿತನದಿಂದ ಹೆತ್ತ ತಾಯಿನ್ನ ಕಳ್ಕೊಂಡ ನಾನು ಭಾಳ ಸಾಮಾನ್ಯ ಮನುಷ್ಯ ಅಂತ ಹೇಳ್ಬೇಕು ಅನ್ನಿಸ್ತು…
ಮುಂದೆ ಅಂತಹ ವಿಶೇಷವಿಲ್ಲದೆ ಓದುವುದನ್ನು ನಿಲ್ಲಿಸಿದ ಶೀಲಾ ಭುಜಗಳ ಮೇಲೆ ಕೈಯಾಡಿಸಿದಂತೆನಿಸಿ ತಿರುಗಿದಳು.
ಕಣ್ಣಲ್ಲಿ ನೀರು ತುಂಬಿದ ಪತಿಯ ಕಣ್ಣುಗಳು ಅವಳ ಅಭಿಪ್ರಾಯ ಕೇಳಿದಂತೆನಿಸಿತು. “ನಿಮ್ಮನ್ನು ಕಾಡೋ ಪಾಪಪ್ರಜ್ಞೆಗೆ ನಾನೂ ಭಾಗೀದಾರಳು ಅಂತ ಮಾತ್ರ ಹೇಳ್ಬಹುದು. ಅದಕ್ಕೂ ಹೆಚ್ಚಿಗೆ ಹೇಳಲಾರೆ..” ಎಂದ ಪತ್ನಿಯನ್ನು ಆಲಂಗಿಸಿದ ಮೂರ್ತಿಯವರ ಕಣ್ಣುಗಳಿಂದ ಹೇಳದೇ ಉಳಿದ ಮಾತುಗಳು ಕಂಬನಿಯ ರೂಪದಲ್ಲಿ ಮತ್ತೆ ಹೊರಬಂದವು.

Leave a Reply