ಬಾ…..ಯುಗಾದಿ

ugadiಈ ದಿನದಿ ಹರುಷವಿದೆ ನೀನು ಬಂದಿಹೆಯೆಂದು
ಸುಖದ ಐಸಿರಿಯ ಬಾಗಿನವ ತಂದು
ನಮಗೆ ಬೇಕದುವೆಂಬ ಸ್ವಾರ್ಥ ಎಮ್ಮೊಳು ಇಲ್ಲ
ಹಂಚಿ ಬಿಡು ಜಗಕೆಲ್ಲ ಒಳಿತಾಗಲೆಂದು ||೧||

ಇರಲಿ ಹೂಬನದಲ್ಲಿ ನಿರತ ಕೋಗಿಲೆ ಹಾಡು
ಮಾವು ಚಿಗುರುವ ಸಮಯ ಒಲುಮೆ ಹಾಡು
ಬಿಸಿಲ ಧಗೆಯೊಳಗೆಲ್ಲ ಬೆಂದಿರುವ ಜನ ಮನಕೆ
ತಂಪನೀಯಲಿ ಮಂದಾನಿಲದ ಹಾಡು ||೨||

ನೆಲದಾಳದೊಳಗಿಳಿದ ಜೀವಜಲ ಚಿಲುಮೆಯದು
ನೆಲ ಬಿರಿದು ಚಿಮ್ಮಿ ಬರೆ ಕಾರಂಜಿಯಾಗಿ
ಮೂಡು ಕಾಮನಬಿಲ್ಲೆ ಪಡುವಣದ ಅಂಚಿನಲಿ
ಆಗಸದಿ ಮಳೆ ಬೆಳಕ ಮಿಲನ ಸಂಭ್ರಮಕೆ ||೩||

ನೆಲ ಬಿರಿದು ದಾಹವೆನೆ ಸುರಿದುಬಿಡು ಮಳೆಯೆ ನೀ
ಕೆರೆಕೊಳ್ಳ ನದಿಯೆಲ್ಲ ತುಂಬಿ ಹರಿವಂತೆ
ನಿನ್ನ ಮಿಲನದ ಸವಿಗೆ ಭೂಮಿ ಅರಳುತಲಿರಲಿ
ತಾನಲ್ಲ ಬಂಜೆಯೆಂಬುದ ಜಗಕೆ ತಿಳಿಸಿ ||೪||

ಸಾವ ಕನಸನು ಕಾಣ್ವ ರೈತ ನಡೆಯಲಿ ಹೊಲಕೆ
ಜೋಡಿ ಬಸವರ ಹೂಡಿ ಹಾಡ ಹಾಡಿ
ಹೊಲದ ಕೆಸರೊಳು ತಾನು ಹೋಲಿಯಾಟವನಾಡಿ
ಬಣ್ಣ ತುಂಬಲಿ ತನ್ನ ಕನಸುಗಳಿಗೆಲ್ಲ ||೫||

ಧುಮ್ಮಿಕ್ಕಿ ಹರಿಯಲಿ ಜೀವ ನದಿಗಳು ಎಲ್ಲ
ಹರನ ಮುಡಿಯಿಂ ಧುಮುಕಿ ಗಂಗೆ ಇಳಿವಂತೆ
ತಿರು ತಿರುಗಿ ಅನವರತ ಚಕ್ರ ಯಂತ್ರದೊಳೆಲ್ಲ
ತಮವ ಕಳೆವ ವಿದ್ಯುತ್ ಶಕ್ತಿಯಾಗಿ ||೬||

ದುಡಿವ ಕೈಗಳಿಗೆಲ್ಲ ನಿರತ ಕಾಯಕ ಸಿಗಲಿ
ನೆಮ್ಮದಿಯ ಉಸಿರಿನಲಿ ಎದೆಯು ತಂಪಿರಲಿ
ಲವಲವಿಕೆಯಿರಲಿ ಜಾಡ್ಯವೆಂಬುದು ತೊಲಗಿ
ದುಡಿಮೆಯೆನ್ನುವ ಮಂತ್ರ ಎಲ್ಲೆಡೆಯು ಇರಲಿ ||೭||

ಹೆಣ್ಣು ನಿರ್ಭಯಳಾಗಿ ಬದುಕಿ ಬಾಳಲಿ ಇಲ್ಲಿ
ತನ್ನ ಮನೆಯನು ನಾಕವಾಗಿಸುತಲಿ
ಪರ ಸತಿಯರನೆಲ್ಲ ಮಾತೆ ಸೋದರಿಯೆಂದು
ಪುರುಷ ಪುಂಗವರಿಲ್ಲಿ ಆದರಿಸುತಲಿರಲಿ ||೮||

ಜಾತಿ ಕುಲ ಬಣ್ಣ ಬಡವ ಬಲ್ಲಿದರೆಂಬ
ಬೇಧವಳಿಯುತ ನಾವು ಒಂದೆ ಎನುವ
ಸ್ನೇಹ ಗೀತೆಯ ಹಾಡು ಎಲ್ಲೆಡೆಯು ಮೊಳಗಲಿ
ತಾಯಿ ಭಾರತಿ ನೋಡಿ ಸಂತಸವ ಪಡಲಿ ||೯||

ಮಾವ ತಳಿರನು ತಂದು ಕಟ್ಟಿಹೆನು ಬಾಗಿಲಿಗೆ
ಸಂಭ್ರಮದ ಹೂರಣವು ಮನೆಯ ಒಳಗೆ
ದೂರ ದಿಟ್ಟಿಯ ನೆಟ್ಟು ಕಾಯುತಿಹೆ ನಾ ನಿನ್ನ
ಬಲಗಾಲನಿರಿಸಿ ಬಂದುಬಿಡು ಯುಗಾದಿ ಮನೆಗೆನ್ನ||೧೦||

ವರುಷಕೊಂದೆ ದಿನವು ಎಂದರದು ವಿಹಿತವೇ?
ನಿತ್ಯ ಸಂತಸ ಮುದವು ಇರಲಿ ಮನೆಯೊಳಗೆ
ಇರು ನನ್ನ ಜತೆಗೆ ಅನುದಿನವು ಸಂಭ್ರಮಿಸಿ
‘ಹೇಮಲಂಬಿಯು’ ನೀನು ನಿತ್ಯ ನೂತನೆಯೆ ||೧೧||

– ದಿವಾಕರ ಡೋಂಗ್ರೆ ಎಂ.

1 Comment

  1. ಸೊಗಸಾದ ಹಾರೈಕೆ
    ಯುಗಾದಿಗೆ

Leave a Reply