ಕಾಯ ಹರಿಯಿತು, ಸೂತಕ ಹರಿಯಲಿಲ್ಲ

ಕಾಯ ಹರಿಯಿತು, ಸೂತಕ ಹರಿಯಲಿಲ್ಲ

ಈ ಜಗತ್ತು ಹುಟ್ಟಿದಾಗಿನಿಂದ ಇಂದಿನವರೆಗೆ ಅನೇಕ ಅವತಾರ ಪುರುಷರು, ಋಷಿಗಳು, ಸಂತರು ಹಾಗೂ ಸಾರ್ವಜನಿಕರ ಹಿತಕ್ಕಾಗಿ ಹೋರಾಡಿದವರನ್ನು ನಾವು ಮೇಲಿಂದ ಮೇಲೆ ಸ್ಮರಣೆ ಮಾಡುತ್ತೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ಅವರ ಜೀವನ ಮತ್ತು ಸಂದೇಶಗಳು ಸಮಾಜದ ಮೇಲೆ ನಿರಂತರ ಪ್ರಭಾವ ಬೀರುತಿರುತ್ತವೆ. ಅಂತಹ ಪ್ರಭಾವಿ ಪುರುಷರಲ್ಲಿ ಕೆಲವು ತಿಂಗಳುಗಳ (ಜುಲೈ 27-2017) ಹಿಂದೆ ನಮ್ಮನ್ನಗಲಿದ ಮಹಾತ್ಮ ಎಪಿಜೆ ಅಬ್ದುಲ್ ಕಲಾಂ ಒಬ್ಬರು. ಅವರು ಭಾರತದ ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಕೆಲಸಗಾರರಿಗೆ ಸ್ಫೂರ್ತಿ ಮತ್ತು ಭರವಸೆಯನ್ನು ತುಂಬಿದರು.
2012 ಮಾರ್ಚ್ 12 ರಂದು ಅವರು ಧಾರವಾಡಕ್ಕೆ ಬಂದಿದ್ದಾಗ ಅವರೊಂದಿಗೆ ಎರಡು ಮೂರು ನಿಮಿಷ ಮಾತನಾಡುವ ಅವಕಾಶ ಒದಗಿತ್ತು. ಆಗ ಅವರು ನನ್ನೊಂದಿಗೆ ತುಂಬಾ ಗೌರವದಿಂದ ಮಾತನಾಡಿದರು, ರಾಮಕೃಷ್ಣ ವಿವೇಕಾನಂದ ಆಶ್ರಮ ಈ ನಗರದಲ್ಲಿ ಇದೆ ಎಂದಾಗ ಅವರಿಗೆ ಮತ್ತಷ್ಟು ಖುಶಿಯಾಯಿತು. ಅವರ ಸಾತ್ವಿಕತೆ, ಸರಳತೆ ಮಾತಿನಿಂದ ವ್ಯಕ್ತವಾದವು. ಅಂದು ನನಗೂ ಬಹಳ ಆನಂದವಾಯಿತು. ಇಂದಿಗೆ ಅದು ನಮಗೊಂದು ಸವಿ ನೆನಪು ಮಾತ್ರ.
ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಮಾತು ನೆನಪಾಗುತ್ತದೆ.

ನ ಮೇ ಪಾರ್ಥಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ|

ನಾನವಾಪ್ತಮವಾಪ್ತವ್ಯಂ ವರ್ತ ಎವ ಚ ಕರ್ಮಣೆ ||(3-22)
‘ಅರ್ಜುನ ಮೂರು ಲೋಕಗಳಲ್ಲಿಯೂ ನನಗೆ ಯಾವ ಕರ್ತವ್ಯವೂ ಇರುವುದಿಲ್ಲ; ಮತ್ತು ನಾನು ಹೊಂದದೇ ಇದ್ದು, ಈಗ ಹೊಂದಬೇಕಾದುದು ಯಾವುದೂ ಇಲ್ಲ. ಹೀಗಿದ್ದರೂ ನಾನು ಕರ್ಮದಲ್ಲೇ ಇದ್ದೇನೆ,” ಹೀಗೆ ತಮ್ಮ ಬದುಕನ್ನು ಮಾನವರ ಉದ್ಧಾರಕ್ಕಾಗಿ ಸವೆಸಿದ್ದರಿಂದ ಈ ಜಗತ್ತು ಅವನನ್ನು ಎಂದೆಂದೂ ಮರೆಯುವುದೇ ಇಲ್ಲ.
ಕಲಾಂ ರವರು ಅವಿವಾಹಿತರಾಗಿದ್ದುಕೊಂಡು, ಸರಳ ಜೀವನ ನಡೆಸಿ ವೈಯಕ್ತಿಕವಾದ ಯಾವ ಆಸೆ, ಆಮಿಷಗಳು ಇಲ್ಲದೆ ದೇಶಕ್ಕಾಗಿ ಕೊನೆಯ ಉಸಿರಿರುವವರೆಗೂ ದುಡಿದರು. ಅವರ ಜೀವನದಲ್ಲಿ ಸಮಾಜಕ್ಕಾಗಿ ಕೊಡಬೇಕಾದುದು ಮತ್ತೇನೂ ಉಳಿಯಲಿಲ್ಲ. ಅವರ ಅಂತಿಮ ಘಟ್ಟ ಅವಿಸ್ಮರಣಿಯವಾದುದು.
ಭಾರತೀಯರಾದ ನಾವು ಕಲಾಂ ಅವರು ರೂಪಿಸಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಬೇಕು. ಭಾರತದ ಜನಸಂಖ್ಯೆಯಿಂದ ಹಿಡಿದು, ಇಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ 2020 (ಟ್ವೆಂಟಿ- ಟ್ವೆಂಟಿಗೆ) ಜಗತ್ತಿನಲ್ಲಿ ಶಕ್ತಿಯುತ ರಾಷ್ಟ್ರವಾಗಿ ಬೆಳೆಯುತ್ತದೆ ಎಂದು ಹೇಳಿದ್ದಾರೆ. ಒಬ್ಬ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ, ಅನುಭವದಿಂದ ಹೇಳಿದ ಮಾತು ಸುಳ್ಳಾಗಲು ಸಾಧ್ಯವಿಲ್ಲ.
ಸ್ವಾಮಿ ವಿವೇಕಾನಂದರು 120 ವಷಗಳ ಹಿಂದೆಯೇ “ಭಾರತ ಮುಂದೊಂದು ದಿನ ವಿಶ್ವದ ಗುರುವಾಗುತ್ತದೆ, ಎಂದು ಅವಳೀ ಆದರ್ಶಗಳಾದ ತ್ಯಾಗದ ಮತ್ತು ಸೇವೆ ಎಂಬ ಆದರ್ಶಗಳನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು, ಸ್ವಾರ್ಥ ಮತ್ತು ಸಂಕುಚಿತ ಭಾವನೆಗಳನ್ನು ತೊರೆಯಬೇಕು. ‘They alone live who live for others the rest are more dead then alive’. (ಯಾರು ಇತರರಿಗಾಗಿ ಬದುಕುತ್ತಾರೋ ಅವರದೆ ಬದುಕು, ಉಳಿದವರು ಬದುಕ್ಕಿದ್ದರೂ ಸತ್ತಂತೆ’. ) ಎಂಬ ಸ್ವಾಮೀಜಿಯವರ ಮಾತಿನಂತೆ, ಇಡೀ ಜೀವನವನ್ನು ಸಮಾಜದ ಏಳ್ಗೆಗಾಗಿ ಶ್ರಮಿಸಿ ನಮ್ಮ ಮಧ್ಯೆ ಅಮರರಾಗಿದ್ದಾರೆ.
ಕಲಾಂರವರು ಭಾರತಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ಅವರು ತಮಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಈ ದೇಶವನ್ನು ಸ್ವರ್ಗದಷ್ಟು ಪ್ರೀತಿಸಿದ್ದಾರೆ. ಅವರು ಎಲ್ಲ ಧರ್ಮಗಳಲ್ಲಿ, ಸಾಧುಸಂತರಲ್ಲಿ ಅಪಾರ ಗೌರವ ಹೊಂದಿದ್ದರು. ತ್ಯಾಗ ಮತ್ತು ಸೇವೆ ಎಂಬ ಎರಡು ಅವಳಿ ಆದರ್ಶಗಳು ಅವರಲ್ಲಿ ಮನೆಮಾಡಿದ್ದವು. ಎಲ್ಲರಿಗೂ ಸಮಾನವಾದ ಉದ್ಯೋಗವಕಾಶಗಳು ಸಿಗಬೇಕು, ಪ್ರತಿಯೊಂದು ಗ್ರಾಮವು ಸುಂದರವಾಗಿರಬೇಕು, ಶಿಕ್ಷಣದ ವ್ಯವಸ್ಥೆ ಸರಿಹೋಗಬೇಕು, ಸ್ವದೇಶಿ ವಸ್ತುಗಳ ಉತ್ಪಾದನೆ ಹೆಚ್ಚಿಸಬೇಕು ಹೀಗೆ ಇನ್ನೂ ನೂರಾರು ಕನಸುಗಳನ್ನು ಹೊಂದಿದ್ದರು. ಒಟ್ಟಿನಲ್ಲಿ ಭಾರತ ಜಗತ್ತಿನಲ್ಲಿ ಒಂದು ಶಕ್ತಿಯುತ ರಾಷ್ಟ್ರವಾಗಬೇಕು, ಎಂಬುದೇ ಅವರ ಬದುಕಿನ ಆಶಯವಾಗಿತ್ತು.
ಅವರ ಮಾತನ್ನು ಸಾಕಾರಗೊಳಿಸಬೇಕೆಂಬುದು ಭಾರತೀಯರ ಮುಂದಿರುವ ದೊಡ್ಡ ಸವಾಲು. ಅವರ ಮಾರ್ಗದರ್ಶನದಂತೆ ಮಡಿ-ಮೈಲಿಗೆಗಳನ್ನು ಪಕ್ಕಕ್ಕೆ ಸರಿಸಿ ನಾವೆಲ್ಲ ಒಂದೇ ಎಂಬ ಭಾವದಿಂದ ದುಡಿದು ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬಲಿಷ್ಠವಾದರೆ ಅವರ ಆತ್ಮಕ್ಕೆ ಶಾಂತಿ ಸಂತೋಷ ದೊರೆಯುತ್ತದೆ.
ನಮ್ಮ ಇಂದಿನ ಶಿಕ್ಷಣ ಹಾಗೂ ರಾಜಕೀಯ ವ್ಯವಸ್ಥೆಗಳು ಮಹಾತ್ಮರ ಜೀವನ ಗಾಥೆಗಳನ್ನು ಮೂಲೆಗುಂಪು ಮಾಡಿದಂಥ ಕತೆಗಳನ್ನಾಗಿಸಿವೆ. ಕಲಾಂ ಅವರ ಜೀವನ ಸಾಧನೆಗಳನ್ನು ಮೂಲೆಗುಂಪು ಮಾಡದೆ ಭಾರತೀಯರಾದ ನಾವು ಅವರ ಕನಸ್ಸನ್ನು ಸಾಕಾರ ಗೊಳಿಸಿದಾಗ ಅವರ ಆತ್ಮಕ್ಕೆ ಶಾಂತಿ ಸಮಾಧಾನ ಸಿಗುತ್ತದೆ. ಅದುವರೆವಿಗೂ ಅವರ ಸೂತಕ(ಋಣ) ಹರಿಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಭಾರತೀಯನು ದೇಶದ ಏಳಿಗೆಗಾಗಿ ಶ್ರಮಿಸುವಂಥ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ನಮಗೂ ಮತ್ತು ಮುಂದಿನ ಜನಾಂಗಕ್ಕೂ ದೇಶ ಭಕ್ತ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಅವರು ಆದರ್ಶವಾಗಬೇಕು ಇದೇ ನಮ್ಮ ಆಶಯ.

Leave a Reply