ವ್ಯಕ್ತಿಯ ಬೆಲೆ

ವ್ಯಕ್ತಿಯ ಬೆಲೆ

ಮನುಷ್ಯನು ತುಂಬಾ ಸ್ವಾರ್ಥಿಯಾದಾಗ, ಅವನಿಗೆ ಬಹುಬೇಗ ಸಿಟ್ಟು ಬರುತ್ತದೆ. ತನ್ನ ಇಚ್ಛೆಯಂತೆ ಈ ಜಗತ್ತು ಇರಬೇಕು ಎಂದು ನಿರೀಕ್ಷಿಸುತ್ತಾನೆ. ಹಾಗೆ ಇಲ್ಲವೆಂದಾದಾಗ ಸಿಟ್ಟಿನಿಂದ ವ್ಯವಹರಿಸುತ್ತಾನೆ. ಹಿಂಸೆ ಮಾಡುತ್ತಾನೆ, ಕ್ರೂರತನದಿಂದ ವರ್ತಿಸುತ್ತಾನೆ, ಆದರೆ ಕ್ರೂರತನದಿಂದಾಗಿ ಅವನಲ್ಲಿರಬೇಕಾದ ಮನುಷ್ಯತ್ವವೇ ಕಣ್ಮರೆಯಾಗುತ್ತದೆ. ಹಿಂದೆ ತೈಮೂರ ಲಂಗನೆಂಬ ಕ್ರೂರನೂ ಹಾಗೂ ದುಷ್ಟನೂ ಆದ ಸುಲ್ತಾನನಿದ್ದ. ಒಮ್ಮೆ ರಾಜಭಟರು ಅವನ ಆಸ್ಥಾನಕ್ಕೆ ಇಬ್ಬರು ಕಳ್ಳರನ್ನು ಕರೆದು ತಂದರು. ಸುಲ್ತಾನನು ಅವರ ಬಗ್ಗೆ ಯಾವುದೇ ರೀತಿಯಲ್ಲಿ ನ್ಯಾಯವಿಚಾರಣೆಯನ್ನು ಮಾಡದೆ, ಇವರಿಗೆ ನೂರು-ನೂರು ಛಡಿಯೇಟು ಹಾಕಿ ಸೆರೆಮನೆಗೆ ತಳ್ಳಿ ಎಂದು ಆಜ್ಞಾಪಿಸಿದ. ಅಷ್ಟರಲ್ಲಿ ಅಲ್ಲಿಗೆ ಆಸ್ಥಾನ ಕವಿ ಬಂದ. ಸುಲ್ತಾನನು ತಮಾಷೆಗೆಂದು ಕವಿಯೊಡನೆ ಒಂದು ಪ್ರಶ್ನೆ ಕೇಳಿದ, ‘ಹಾಗಾದರೆ ನನ್ನ ಬೆಲೆಯೆಷ್ಟಾಗಬಹುದು?’ ಕವಿ ಗಂಭೀರವಾಗಿ ನುಡಿದ, ‘ಇಪ್ಪತ್ತು ಚಿನ್ನದ ನಾಣ್ಯಗಳು.’ ಸುಲ್ತಾನನಿಗೆ ಸಿಟ್ಟು ಬಂತು. ‘ಇಷ್ಟೇನಾ? ಲೋ ಕವಿ, ನಾನು ತೊಟ್ಟ ಸುವರ್ಣ ಖಚಿತವಾದ ನಿಲುವಂಗಿಯ ಬೆಲೆಯೇ ಐವತ್ತು ಚಿನ್ನದ ನಾಣ್ಯವಾಗುತ್ತದೆ. ಗೊತ್ತೇನು?’ ಎಂದು ಹೂಂಕರಿಸಿದಾಗ, ಕವಿ ಮುಗುಳ್ನಕ್ಕು ಉತ್ತರಿಸಿದ, ‘ನನಗೆ ಗೊತ್ತು ಸುಲ್ತಾನರೇ, ನಾನೂ ನೀವು ತೊಟ್ಟ ನಿಲುವಂಗಿಯ ಬೆಲೆಯನ್ನೇ ಹೇಳಿದ್ದು, ಏಕೆಂದರೆ ಒಬ್ಬ ಕ್ರೂರಿಯಾದ ಮನುಷ್ಯನಿಗೆ ಚಿಕ್ಕಾಸು ಬೆಲೆಯೂ ಬರುವುದಿಲ್ಲ’ ಎಂದು ನುಡಿದಾಗ ಸುಲ್ತಾನನು ತಲೆಬಗ್ಗಿಸಬೇಕಾಯ್ತು.
ನಿಜ, ಈ ಪ್ರಪಂಚದಲ್ಲಿ ಮನುಷ್ಯತ್ವವೇ ಬಹುಮುಖ್ಯವಾದುದು. ಮನುಷ್ಯತ್ವವನ್ನೇ ಮರೆತು ಕ್ರೂರತನದಿಂದ ವರ್ತಿಸುವವರು ಅವರೆಷ್ಟೇ ದೊಡ್ಡ ಹುದ್ದೆಯಲ್ಲಿ ಇದ್ದರೂ ಇತಿಹಾಸವು ಅವರನ್ನು ಕ್ಷಮಿಸಲಾರದು. ಇದರ ಬದಲಾಗಿ ಯಾರಲ್ಲಿ ದಯೆ, ಕರುಣೆ, ಅನುಕಂಪ, ಪರೋಪಕಾರ ಪ್ರವೃತ್ತಿಗಳು ಇರುತ್ತವೋ ಅಂಥ ವ್ಯಕ್ತಿಯಲ್ಲಿ ಮಾನವೀಯತೆ ತುಂಬಿ ತುಳುಕುತ್ತದೆ.
ಅಂಥ ಮಾನವೀಯತೆ ತುಂಬಿರುವ ವ್ಯಕ್ತಿಗಳ ಸಂಖ್ಯೆ ಈ ಪ್ರಪಂಚದಲ್ಲಿ ಹೆಚ್ಚಾಗಬೇಕಾಗಿದೆ.
ಡಾ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ

Leave a Reply