ಒಳ್ಳೆ ಮನಸ್ಸುಗಳು ಬೇಕು

ಒಳ್ಳೆ ಮನಸ್ಸುಗಳು ಬೇಕು

ಡಾ. ವಿ. ಕೆ.ಆರ್.ವಿ. ರಾವ್ ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಭಾರತ ಯೋಜನಾ ಆಯೋಗದ ಸದಸ್ಯರಾಗಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ, ಸ್ಥಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಪ್ರಥಮ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ಉಪಕುಲಪತಿಯಾಗಿ ಹೆಸರಾದವರು ಹಾಗೂ ಸ್ವಾಮಿ ವಿವೇಕಾನಂದರ ಅನುಯಾಯಿಗಳು.
ರಾವ್ ಅವರು ದೆಹಲಿ ಅರ್ಥಶಾಸ್ತ್ರ ವಿಭಾಗದಿಂದ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಒಂದು ಸಭಾಭವನವನ್ನು ನಿರ್ಮಿಸಲು ಸಂಕಲ್ಪಿಸಿದರು. ಭವನದ ನಿರ್ಮಾಣಕ್ಕೆ ಶ್ರೀಮಂತರಿಂದ ದೊಡ್ಡ ಪ್ರಮಾಣದ ಹಣ ಸಂಗ್ರಹ ಮಾಡದೆ, ಸಣ್ಣವರು ದೊಡ್ಡವರು ಎನ್ನದೆ ಪ್ರತಿಯೊಬ್ಬರಿಂದ ಕೇವಲ ಐದು ರೂಪಾಯಿಗಳನ್ನು ಮಾತ್ರ ಪಡೆಯಬೇಕು. ಸ್ವಾಮೀಜಿ ದರಿದ್ರನಾರಾಯಣನೇ ತಮ್ಮ ದೇವರೆಂದು ನಂಬಿದ್ದವರು; ಆದ್ದರಿಂದ ಜನಸಾಮಾನ್ಯರಿಂದ, ದೀನ ದಲಿತರಿಂದ ಸಂಗ್ರಹಿಸಬೇಕು ಎಂದು ರಾವ್ ಅವರು ನಿಶ್ಚಯಿಸಿದ್ದರು. ಹಾಗೆ ಮಾಡಿದರೆ, ಹೆಚ್ಚು ಜನರು ಈ ಕೈಂಕರ್ಯದಲ್ಲಿ ಭಾಗವಹಿಸುತ್ತಾರೆ ಎನ್ನುವುದು ಕೂಡ ಅವರ ನಂಬಿಕೆಯಾಗಿತ್ತು. ಅದರಂತೆ ವಂತಿಕೆ ಸಂಗ್ರಹ ಪ್ರಾರಂಭವಾಯಿತು. ಆಗ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರು ಹೆಚ್ಚು ಹಣ ಕೊಡಲು ಮುಂದಾದರು. ಆದರೆ ಅವರು ಅವರಿಂದ ಪಡೆದದ್ದು ಐದು ರೂಪಾಯಿಗಳು ಮಾತ್ರ.
ಹೀಗೆ ಮಾಡಿ, ದೇಶದಾದ್ಯಂತ ಸುಮಾರು 6 ಸಾವಿರ ರೂ. ಹಣ ಸಂಗ್ರಹಿಸಿದರು. ರಾವ್ ಅವರ ಬಳಿ ಕೆಲಸಕ್ಕಿದ್ದ ಒಬ್ಬ ಭಂಗಿ (ಟಾಯಿಲೆಟ್ ಕ್ಲೀನ್ ಮಾಡುವವನು) ಹಣ ಸಂಗ್ರಹಣೆಯ ವೇಳೆಯಲ್ಲಿ ಅವರ ಬಳಿ ಬಂದು ಕೈಮುಗಿದು ನಿಂತನು. ಅವನ ಕಣ್ಣುಗಳಲ್ಲಿ ನೀರು ತುಂಬಿತ್ತು. ಇದನ್ನು ನೋಡಿ ರಾವ್ ಅವರು ನನ್ನಿಂದ ಇವನಿಗೆ ಏನಾದರೂ ಅಪಚಾರವಾಗಿರಬಹುದೆ ಎಂದು ಗಾಬರಿಯಾದರು.
ಆಗ ಭಂಗಿ, ರಾವ್ ಅವರಲ್ಲಿ ವಿಜ್ಞಾಪಿಸಿದ ‘ಸರ್ ನೀವು ಸ್ವಾಮೀಜಿಯವರ ಭವನಕ್ಕಾಗಿ ಎಲ್ಲರಿಂದಲೂ ನಿಧಿ ಸಂಗ್ರಹಿಸುತ್ತಿದ್ದೀರಿ, ನನ್ನಿಂದ ಕಾಣಿಕೆ ಬೇಕಾಗಿಲ್ಲವೇ?’ ಎಂದನು. ರಾವ್ ಅವರಿಗೆ ಸ್ವಲ್ಪ ಹೊತ್ತು ಏನು ಮಾತಾಡಬೇಕು ಎಂಬುದು ತಿಳಿಯಲಿಲ್ಲ. ಬಳಿಕ ಹೇಳಿದರು. ‘ನಿನ್ನಲ್ಲಿ ಹಣ ಕೇಳದಿದ್ದರೆ ಪ್ರೀತಿ ಇಲ್ಲ ಎಂದು ಅರ್ಥವೇ? ನಿನ್ನ ಒಳ್ಳೆಯ ಮನಸ್ಸೇ ಸಾಕು, ಲಕ್ಷ ರೂಪಾಯಿಗಳಿಗಿಂತ ಹೆಚ್ಚು’ ಎಂದರು. ಆ ಭಂಗಿ ಬಿಡಲಿಲ್ಲ; ಇಂಥ ದೊಡ್ಡ ಕೆಲಸದಲ್ಲಿ ರೂಪಾಯಿ ಕಾಣಿಕೆ ನೀಡಿದನು. (ಆ ಭಂಗಿಗೆ ತಿಂಗಳ ಸಂಬಳವೇ 8-10 ರೂಪಾಯಿ ಇತ್ತು.) ದೊಡ್ಡ ದೊಡ್ಡ ಪದವಿಗಳು, ಉದ್ಯೋಗ, ಆಸ್ತಿ ಹೊಂದಿರುವ ವ್ಯಕ್ತಿಗಳಿಗೆ ಕಿಂಚಿತ್ ಇಂಥಾ ಭಾವನೆ ಇದ್ದರೆ ದೇಶ ಉದ್ಧಾರವಾಗಲು ಬಹಳ ದಿವಸಗಳು ಬೇಕಿಲ್ಲ.
ಆ ಭಂಗಿ ಕೀಳುಜಾತಿಯವನಿರಬಹುದು. ಅವನ ಕೆಲಸ ಕೀಳಾಗಿರಬಹುದು. ಆದರೆ ಅವನ ಹೃದಯ ಮನಸ್ಸು ಸತ್ಕಾರ್ಯಕ್ಕೆ ಸ್ಪಂದಿಸಿದ್ದು ಒಂದು ಮಹಾಗುಣವೇ!
ಒಮದು ಸಮಾಜ ಹಾಗೂ ರಾಷ್ಟ್ರ ಸದೃಢವಾಗಬೇಕಾದರೆ, ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಜನರು ಬೇಕು. ಹಾಗೆ ಇಲ್ಲದಿದ್ದರೆ ಶ್ರೀಮಂತರು, ಅಧಿಕಾರಿಗಳು, ಇದ್ದರೂ ಇಲ್ಲದಂತೆ. ಒಮ್ಮೆ ಶ್ರೀಮಾತೆ ಶಾರದಾದೇವಿಯವರು ಕಾಶಿಯಾತ್ರೆ ಹೋಗಿದ್ದರು. ಕಾಶಿಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಶ್ರೀ ರಾಮಕೃಷ್ಣ ಸೇವಾಶ್ರಮ, ಆಸ್ಪತ್ರೆ ಚಿಕ್ಕ ಪ್ರಮಾಣದಲ್ಲಿ ನಡೆಯುತ್ತಿತ್ತು. ತಾಯಿಯವರು ಸುಮ್ಮನೆ ಆಶೀರ್ವಾದ ಮಾಡಿದ್ದರೆ ಸಾಕಾಗಿತ್ತು. ಆದರೆ ಅವರು ಆಶೀರ್ವದಿಸಿ ಹತ್ತು ರೂಪಾಯಿ ದೇಣಿಗೆಯನ್ನು ನೀಡಿದರು. ಅವರ ಕೃಪೆಯಿಂದ ಇಂದು 500 ಹಾಸಿಗೆಗಳ ಆಸ್ಪತ್ರೆಯಾಗಿ ಬೆಳೆದು ಇಡೀ ಕಾಶಿಗೆ ಹೆಸರುವಾಸಿಯಾಗಿದೆ. ಅವರ ಅಂತರಾಳದ ಕಳಕಳಿ, ವಿಶಾಲವಾದ ಮನಸ್ಸಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಪ್ರಾಚೀನ ಕಾಲದಲ್ಲಿ ನಡೆದ ಘಟನೆಯನ್ನು ನಾವು ಇಂದಿಗೂ ನೆನಪು ಮಾಡಿಕೊಳ್ಳುತ್ತೇವೆ. ವೃತ್ರಾಸುರನೆಂಬ ಒಬ್ಬ ರಾಕ್ಷಸನಿದ್ದನು. ಸ್ವರ್ಗದಲ್ಲಿದ್ದ ದೇವತೆಗಳನ್ನು ಯಾವಾಗಲೂ ಕಾಡುತ್ತಿದ್ದನು. ಅವರು ನೆಮ್ಮದಿಯಿಂದ ಇರಲು ಬಿಡುತ್ತಿರಲಿಲ್ಲ. ಅಂದಿನದನ್ನು ಹೋಲಿಕೆ ಮಾಡಿದರೆ ಇಂದು ಅಂತಹ ರಾಕ್ಷಸರ ಸಂಖ್ಯೆ ಕಡಿಮೆಯಾಗಿದೆ. ರಾಕ್ಷಸನನ್ನು ನಿಗ್ರಹಮಾಡುವುದಕ್ಕೆ ದೇವತೆಗಳಿಗೆ ಒಂದೇ ದಾರಿ ಉಳಿದಿತ್ತು. ವಜ್ರಾಯುಧದಿಂದ ಮಾತ್ರ ಅವನ ಪ್ರಾಣ ತೆಗೆಯಬಹುದಾಗಿತ್ತು. ವಜ್ರಾಯುಧ ಮಾಡುವುದಕ್ಕೆ ಮಹಾತಪಸ್ವಿಯಾದ ದಧೀಚಿಯೆಂಬ ಮಹರ್ಷಿಯ ಬೆನ್ನು ಮೂಳೆ ಅವಶ್ಯವಾಗಿತ್ತು. ದೇವೇಂದ್ರ ಅವರ ಹತ್ತಿರ ಹೋಗಿ ಕೇಳಿದಾಗ ಮಹರ್ಷಿ ದಧೀಚಿ ಹಿಂದೂ ಮುಂದೂ ನೋಡದೆ ಒಪ್ಪಿ ತನ್ನ ಬೆನ್ನು ಮೂಳೆ ದಾನ ಮಾಡಿದನು. ಆದ್ದರಿಂದ ಅವನ ಹೆಸರು ಅಮರವಾಗಿ ಇಂದಿಗೂ ಉಳಿದಿದೆ. ವ್ಯಕ್ತಿಗಳಲ್ಲಿ ದಾನ ಮಾಡುವ ಉದಾರ ಮನಸ್ಸುಬೇಕು. (ಎಲ್ಲರೂ ಬೆನ್ನು ಮೂಳೆ ಕೊಡಬೇಕಾಗಿಲ್ಲ.) ದಾನ ಕೊಡಲು ಶಕ್ತಿ ಇದ್ದವರು ಶಕ್ತ್ಯನುಸಾರ ದಾನ ಕೊಟ್ಟರೂ ಸಮಾಜ, ದೇಶ ತನಗೆ ತಾನೇ ಉದ್ಧಾರವಾಗುತ್ತದೆ. ಅಂಥ ಮನಸ್ಸು ನಮಗೆ ಬೇಕು. ನಮ್ಮ ದೇಶದಲ್ಲಿ ದಾನ ಮಾಡುವ ವಸ್ತುಗಳಿಗೆ ಅಭಾವವಿಲ್ಲ. ಆದರೆ ದಾನ ಕೊಡುವ ಮನಸ್ಸುಗಳಿಗೆ ಅಭಾವವಿದೆ.
ಈ ಜಗತ್ತಿನಲ್ಲಿ ಎಲ್ಲರಿಗಿಂತ ಒಳ್ಳೆಯ ಮನಸ್ಸು ಭಗವಂತನದು. ಅವನು ನಮಗೆಲ್ಲ ಆಶ್ರಯವಾಗಿ ಭೂಮಿ, ಆಕಾಶ, ಉಸಿರಾಟಕ್ಕೆ ಗಾಳಿ, ಕುಡಿಯಲು ನೀರು, ಬೆಳಕು ಮತ್ತು ಆನಂದಿಸಲು ನಿಸರ್ಗವನ್ನು ನೀಡಿದ್ದಾನೆ. ಇದುವರೆಗೂ ಯಾರನ್ನೂ ಅದಕ್ಕಾಗಿ ಬಾಡಿಗೆ ಕೇಳುವುದು ಇನ್ನು ಮುಂದೆ ಕೇಳುವುದು ಇಲ್ಲ.
ಬುದ್ಧಿ ಜೀವಿಯಾದ ಮಾನವನು ಇಷ್ಟೆಲ್ಲವನ್ನು ಭಗವಂತನ ಅನುಗ್ರಹದಿಂದ ಪಂಚಭೂತಗಳನ್ನು ಪಡೆದುಕೊಂಡು ತಾನು ಸಂಪಾದನೆ ಮಾಡಿದ್ದು ಎಂಬ ಸ್ವಾರ್ಥ ಭಾವನೆ ಹೊಂದಿದರೆ ಅವನ ಈ ಪ್ರಪಂಚದ ಋಣ ಹೇಗೆ ತೀರಿತು.
ಪರಿಸರ, ಸಮಾಜ, ದೇಶ ಚೆನ್ನಾಗಿರಬೇಕಾದರೆ ಮನುಷ್ಯ ಎಲ್ಲವೂ ತನಗೊಬ್ಬನಿಗೇ ಎಂಬ ಭಾವ ಇರಬಾರದು. ಯಾವುದೇ ಭೇದ-ಭಾವಗಳಿಲ್ಲದೆ ಉದಾರಭಾವ ಹಾಗೂ ಒಳ್ಳೆ ಮನಸ್ಸಿನವನಾಗಿರಬೇಕು. ಇಂಥ ಉದಾರಿಗಳ ಸಂಖ್ಯೆ ಹೆಚ್ಚಿದಾಗ ಇಡೀ ಜಗತ್ತೇ ಸ್ವರ್ಗಮಯವಾಗಿ ಪರಿಣಮಿಸುತ್ತದೆ.

Leave a Reply