ವೃತ್ತಿ–ಪ್ರವೃತ್ತಿಯ ಪರಿಪಕ್ವ ಕಲಾವಿದ

ವೃತ್ತಿ–ಪ್ರವೃತ್ತಿಯ ಪರಿಪಕ್ವ ಕಲಾವಿದ

ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಶ್ರೀನಿವಾಸ ಕೈವಾರ ಅವರು ರಂಗಭೂಮಿಯ ಮೇಲಿನ ಪ್ರೀತಿಯಲ್ಲಿ ಎಂದಿಗೂ ರಾಜಿಯಾದವರಲ್ಲ. ವೃತ್ತಿಯ ಜತೆಜತೆಗೇ ಪ್ರವೃತ್ತಿಯನ್ನೂ ಸಮಭಾವದಿಂದ ನಿಭಾಯಿಸುತ್ತಿರುವ ಅವರ ರಂಗಸೇವೆಗೆ ಈಗ ಎರಡು ದಶಕದ ಸಂಭ್ರಮ.

ಮನೋವೃತ್ತಿ ಮತ್ತು ಪ್ರವೃತ್ತಿ ಎರಡನ್ನೂ ಏಕಕಾಲಕ್ಕೆ ನಿಭಾಯಿಸುವುದು ತೀರಾ ಕಷ್ಟ. ಅದು ಪಥ್ಯವೂ ಆಗಿರಬೇಕು ನಾಲಿಗೆಗೆ ರುಚಿಯೂ ಬೇಕು ಎನ್ನುವಂತೆ. ಆದರೆ ಇಲ್ಲೊಬ್ಬರು ತಮ್ಮ ವೃತ್ತಿಯ ಜತೆಗೆ ಪ್ರವೃತ್ತಿಯನ್ನೂ ಖುಷಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದೂ ಬರೋಬ್ಬರಿ 22 ವರ್ಷಗಳಿಂದ.

ಅವರೇ ಕೈವಾರ ಶ್ರೀನಿವಾಸ್. ಡಾ.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ, ವಿಶ್ವೇಶ್ವರಯ್ಯ ವಿ.ವಿ.ಯಿಂದ ಮಾಸ್ಟರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀನಿವಾಸ್ ವೃತ್ತಿಯಿಂದ ಎಂಜಿನಿಯರ್. ಆದರೆ, ಪ್ರವೃತ್ತಿಯಿಂದ ಹವ್ಯಾಸಿ ರಂಗಕಲಾವಿದ. 22 ವರ್ಷಗಳಿಂದ ‘ಕಲಾಗಂಗೋತ್ರಿ’ ತಂಡದಲ್ಲಿ ಅವರು ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ಅಚಲಾಯತನ ನಾಟಕಕ್ಕೆ 3 ದಿನ ಮಾತ್ರ ಬಾಕಿ ಇತ್ತು. ಆ ನಾಟಕಕ್ಕೆ ಪಾತ್ರಧಾರಿಗಳ ಕೊರತೆಯಿಂದ ನಾನು ರಂಗಭೂಮಿಗೆ ಬಂದೆ. ನಾನಾಗಿ ಈ ಕ್ಷೇತ್ರಕ್ಕೆ ಬರಲಿಲ್ಲ. ಮೊದಲ ಪಾತ್ರ ಮಾಡುವ ಪಾತ್ರಧಾರಿ ಇಲ್ಲದ ಕಾರಣ ನನ್ನನ್ನು ಕೇಳಿಕೊಂಡರು ರಂಗಭೂಮಿಯ ಗಂಧ ಗಾಳಿಯೂ ಇಲ್ಲದ ನಾನು ರಂಗಭೂಮಿಗೆ ಬಂದದ್ದು ಹೀಗೆ’ ಎಂದು ನೆನಪಿಸಿಕೊಳ್ಳುತ್ತಾರೆ ಶ್ರೀನಿವಾಸ್.

‘ಕಲಾಗಂಗೋತ್ರಿ’ಯಲ್ಲಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಪಾಶ್ಚಾತ್ಯ, ಮೂಕಾಭಿನಯ, ಬೀದಿ ನಾಟಕ ಎಲ್ಲಾ ಪ್ರಕಾರಗಳಲ್ಲೂ  ಭಾಗವಹಿಸಿದ್ದಾರೆ. ‘ಹೋಂರೂಲ್‘ ನಾಟಕದಲ್ಲಿ ಪಕ್ಕದ್ಮನೆ ವಿತಂತು, ‘ಮದುವೆಯೋ ಮನೆಹಾಳೋ’ ನಾಟಕದಲ್ಲಿ ಮೂಕನನ್ನು ವರಿಸುವ ಯುವತಿ, ‘ಮೂಕಜ್ಜಿಯ ಕನಸುಗಳು’ ನಾಟಕದಲ್ಲಿ ಭೀಷ್ಮನ ಎದುರು ನಿಲ್ಲುವ ಶಿಖಂಡಿ…ಹೀಗೆ ಹಲವು ಪಾತ್ರಗಳಲ್ಲಿ ಅಭಿನಯಿಸಿದ ಖುಷಿ ಅವರದು.

‘ಹಳೆಗನ್ನಡದ ‘ಸ್ಮಶಾನ ಕುರುಕ್ಷೇತ್ರಂ’, ‘ಬೆರಳ್ಗೆ ಕೊರಳ್’ ನಾಟಕಗಳನ್ನು ಮಾಡುವಾಗ ಸಂಭಾಷಣೆ ಕಲಿಯಲು ಪಟ್ಟ ಶ್ರಮ ಅಷ್ಟಿಷ್ಟಲ್ಲ’ ಎನ್ನುತ್ತಾರೆ ಅವರು.

ಸ್ತ್ರೀಪಾತ್ರಗಳೇ ಹೆಚ್ಚು

ಸಾಧಾರಣ ನಿಲುವು, ಮೋಹಕ ಮೈಬಣ್ಣ, ಸ್ಪಷ್ಟ ಉಚ್ಛಾರಣೆ ಅವರದು. ತಾನು ವಹಿಸಿದ ಪಾತ್ರಕ್ಕೆ ನ್ಯಾಯ ಒದಗಿಸುವ ಶ್ರೀನಿವಾಸ್‍ ಅವರ ರೂಪಕ್ಕೆ ತಕ್ಕಂತೆ ಆರಂಭದಲ್ಲಿ ಸ್ತ್ರೀಪಾತ್ರಗಳೇ ಹೆಚ್ಚಾಗಿ ದೊರೆಯುತ್ತಿದ್ದವಂತೆ. ‘ಮದುವೆಯೋ ಮನೆ ಹಾಳೋ’ ನಾಟಕದ ಮದುವಣಗಿತ್ತಿ, ‘ಮೂಕಜ್ಜಿಯ ಕನಸುಗಳು’ ನಾಟಕದ ಶಿಖಂಡಿ, ‘ಜಾಗೃತ ಭಾರತ’ದ ಅಜ್ಜಿ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿವೆ.

ಎರಡು ದಶಕಗಳಲ್ಲಿ ಕಲಾಗಂಗೋತ್ರಿಯ ಬಹುತೇಕ ಎಲ್ಲಾ ಪ್ರಯೋಗ ಪ್ರದರ್ಶನ, ಮರು ಪ್ರದರ್ಶನಗಳಲ್ಲಿ ಶ್ರೀನಿವಾಸ್ ಅವಿಭಾಜ್ಯ ಅಂಗವಾಗಿ ಪಾಲ್ಗೊಂಡಿದ್ದಾರೆ. ‘ಕೇಳು ಜನಮೇಜಯ’, ‘ಸನ್ಮಾನ ಸುಖ’, ‘ಸ್ಮಶಾನ ಕುರುಕ್ಷೇತ್ರಂ’ ‘ಬಹದ್ದೂರ್‌ ಗಂಡು’, ‘ಸತ್ತವನ ಸಂತಾಪ’, ‘ಮೈಸೂರು ಮಲ್ಲಿಗೆ’, ‘ಮುಖ್ಯಮಂತ್ರಿ’, ‘ಗಾಂಪುರ ಗುಂಪು’, ನಾಟಕಗಳೂ 200ಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡಿವೆ.

ಬಿ.ವಿ. ರಾಜಾರಾಂ, ಮಾಧವ್‍ರಾತ್, ಬಾಲಾಜಿ ಮನೋಹರ್, ಪ್ರದೀಪ್ ಕುಮಾರ್, ಸುಧೀಂದ್ರ ಶರ್ಮಾ ಇವರ ಗರಡಿಯಲ್ಲಿ ಪಳಗಿದ ಶ್ರೀನಿವಾಸ ಕೈವಾರ ಅವರು ‘ಕಂಬ್ಳಿ ಸೇವೆ’, ‘ಕೃಷ್ಣ ಸಂಧಾನ’, ‘ಸನ್ಮಾನ ಸುಖ’ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆಕಾಶವಾಣಿಯ ‘ಬಿ’ ಗ್ರೇಡ್ ಕಲಾವಿದನಾಗಿ ಶ್ರೀನಿವಾಸ ಬಾನುಲಿ ನಾಟಕಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಮೂಕಾಭಿನಯ, ರಂಗ ಸಜ್ಜಿಕೆ, ಪ್ರಸಾಧನದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಮೂರ್ಛೆರೋಗದ ಕುರಿತು, ಭಾರತೀಯ ಅಪಸ್ಮಾರ ಸಂಘದ ಸಹಯೋಗದಲ್ಲಿ ಎಂಟು ವರ್ಷಗಳಿಂದ ಪ್ರತಿ ತಿಂಗಳ ಒಂದು ಭಾನುವಾರ ಗ್ರಾಮೀಣ ಪ್ರದೇಶಕ್ಕೆ ತೆರಳಿ, ಬೀದಿನಾಟಕದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇದು ತಮ್ಮ ‘ಕಲಾಗಂಗೋತ್ರಿ’ ತಂಡದ ಸಾಮಾಜಿಕ ಕಳಕಳಿಗೆ ನಿದರ್ಶನ ಎನ್ನುವುದು ಅವರ ಹೆಮ್ಮೆ.

ನಾಟಕ ಮಾಡುವಾಗ ಟೀಕೆಗೂ, ನಗೆಪಾಟಲಿಗೂ ಗುರಿಯಾಗಿದ್ದೇನೆ. ಆದರೆ, ಎಂದೂ ನನ್ನ ಕೆಲಸದಲ್ಲಿ ರಾಜಿ ಮಾಡಿಕೊಂಡಿಲ್ಲ. ಹವ್ಯಾಸದ ಜತೆಗೆ ವೃತ್ತಿಗೆ ಪೂರಕವಾಗಿ ಓವರ್ ಟೈಮ್ ಮಾಡಿಯೂ ಹೆಸರು ಉಳಿಸಿಕೊಂಡಿದ್ದೇನೆ. ಹವ್ಯಾಸ ಮತ್ತು ವೃತ್ತಿಯನ್ನು ನಿಭಾಯಿಸಲು ನನಗೆ ಕಷ್ಟ ಎನಿಸಲಿಲ್ಲ ಎಂದು ವೃತ್ತಿ ಮತ್ತು ಪ್ರವೃತ್ತಿಯ ಒಳಹೊರಗನ್ನು ತೆರೆದಿಡುತ್ತಾರೆ ಅವರು.

ಒಂದು ಕಾಲದಲ್ಲಿ ನಾಟಕ ನೋಡಲು ಮಹಿಳೆಯರು ಹಿಂದೇಟು ಹಾಕುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಮಹಿಳೆಯರೇ ರಂಗಭೂಮಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಆದರೆ, ಅಲ್ಪ ಸಮಯದಲ್ಲೇ ದೊಡ್ಡಹೆಸರು, ಅವಕಾಶ ಸಿಗಬೇಕು ಎಂಬ ಧೋರಣೆ ಸರಿಯಲ್ಲ. ಇಲ್ಲಿ ಹಣದ ಲಾಭ ನಿರೀಕ್ಷಿಸಲಾಗದು. ಆದರೆ, ಮನಸಿನ ತೃಪ್ತಿಯನ್ನು ನಿರೀಕ್ಷಿಸಬಹುದು. ನಗರ ಮತ್ತು ಗ್ರಾಮೀಣ ಪ್ರೇಕ್ಷಕರ ಅಭಿರುಚಿ, ನಿರೀಕ್ಷೆಗಳಲ್ಲಿ ತುಂಬಾ ವ್ಯತ್ಯಾಸವಿದೆ. ನಿಜವಾದ ಕಲಾವಿದ ಇಬ್ಬರನ್ನು ತಲುಪುವಂತಿರಬೇಕು. ಇಂದಿಗೂ ಉತ್ತಮ ಕಥಾವಸ್ತು ಇದ್ದರೆ ನಾಟಕ ನೋಡಲು ಜನರು ಬರುತ್ತಾರೆ ಎಂಬುದು ನನ್ನ ನಂಬಿಕೆ ಎಂದು ಅಭಿಪ್ರಾಯಪಡುತ್ತಾರೆ ಶ್ರೀನಿವಾಸ್.

Courtesy : Prajavani.net

Leave a Reply