ನದಿ: ನಾಗರಿಕತೆ–ಸಂಸ್ಕೃತಿಗಳ ತೊಟ್ಟಿಲು

ನದಿ: ನಾಗರಿಕತೆ–ಸಂಸ್ಕೃತಿಗಳ ತೊಟ್ಟಿಲು

ಎಲ್ಲ ನಾಗರಿಕತೆಗಳಿಗೂ ಸಂಸ್ಕೃತಿಗಳಿಗೂ ನದಿಯೇ ಮೂಲ. ತಮಸಾನದಿಯು ವಾಲ್ಮೀಕಿಯನ್ನು ಕವಿಯನ್ನಾಗಿಸಿತು; ಸರಯೂನದಿಯು ಕೋಸಲೆಯನ್ನು ಜನಪದವನ್ನಾಗಿಸಿತು. ರಾಮಾಯಣವನ್ನೇ ಪರಂಪರೆಯು ಮಹಾನದಿಗೆ ಹೋಲಿಸಿದೆ.

ಧಾರ್ಮಿಕ ಕಲಾಪಗಳನ್ನು ನಡೆಸುವಾಗ ಪ್ರತಿ ಸಲವೂ ‘ಸಂಕಲ್ಪ’ವನ್ನು ‘ಮಾಡುವ’ ಕ್ರಮವಿದೆ. ನಮ್ಮನ್ನೂ ಇಡಿಯ ಸೃಷ್ಟಿಯನ್ನೂ ಬೆಸೆದಿರುವ ಸಂಬಂಧಸೂತ್ರದ ಎಲ್ಲ ವಿವರಗಳನ್ನೂ ಅಲ್ಲಿ ಹೇಳಲಾಗುತ್ತದೆ. ಆಗ ಮನ್ವಂತರವನ್ನೂ ಸ್ಮರಿಸಿಕೊಳ್ಳಲಾಗುವುದು.

‘ಮನು’ವಿನ ಕಲ್ಪನೆಯ ಮೇಲೆ ಕನ್ನಡದ ವಿದ್ವತ್‌ವಲಯದಲ್ಲಿ ವಿಶಿಷ್ಟವಾದ ಚರ್ಚೆಯೊಂದು ಈ ಮೊದಲು ನಡೆದಿದೆ. ಶಂ.ಬಾ. ಜೋಶಿಯವರು ತಮ್ಮದೇ ಆದ ಆಲೋಚನೆಗಳನ್ನು ಮಂಡಿಸಿದ್ದರು. ಆದರೆ ವಿದ್ವಾಂಸರು ಅನೇಕರು ಅವರ ಸಿದ್ಧಾಂತಗಳನ್ನು ತಪ್ಪೆಂದು ಕೂಡ ಪ್ರತಿಪಾದಿಸಿದ್ದರು. ಇರಲಿ, ಇವುಗಳ ಚರ್ಚೆಯನ್ನು ಮುಂದೆ ನೋಡೋಣ (ಆಸಕ್ತರು ಶಂ.ಬಾ. ಜೋಶಿಯವರ ‘ಬುಧನ ಜಾತಕ’; ಚಿದಂಬರಾನಂದ ಅವರ ‘ಋಗ್ವೇದರಹಸ್ಯ’ ಮತ್ತು ಸಾ.ಕೃ. ರಾಮಚಂದ್ರರಾವ್‌ ಅವರ ‘ವೈವಸ್ವತಮನು’ – ಈ ಕೃತಿಗಳನ್ನು ನೋಡಬಹುದು).

* * *

ದಶರಥನ ವಂಶದ ಮೂಲವನ್ನು ತಿಳಿಸಿದ ಮೇಲೆ ಕೋಸಲಾ– ಅಯೋಧ್ಯೆಯನ್ನೂ ದಶರಥನನ್ನೂ ವರ್ಣಿಸಿದೆ, ರಾಮಾಯಣ.

‘ಸರಯೂ ನದೀತೀರದಲ್ಲಿ ಧನಧಾನ್ಯಗಳಿಂದ ಸಮೃದ್ಧವಾದ ಕೋಸಲ ಎಂಬ ವಿಶಾಲ ರಾಜ್ಯವಿದೆ; ಅಲ್ಲಿಯ ಪ್ರಜೆಗಳು ಸಂತೋಷವಾಗಿದ್ದರು’. ಇದು ಕೋಸಲೆಯನ್ನು ವರ್ಣಿಸಿರುವ ಮೊದಲ ಶ್ಲೋಕ.

ಎಲ್ಲ ನಾಗರಿಕತೆಗಳಿಗೂ ಸಂಸ್ಕೃತಿಗಳಿಗೂ ನದಿಯೇ ಮೂಲ. ಈ ವಿಷಯವನ್ನು ರಾಮಾಯಣವೂ ಪ್ರತಿಪಾದಿಸಿದಂತಿದೆ. ಆದಿಕಾವ್ಯ ಹುಟ್ಟಿದ್ದು ಕೂಡ ನದೀತೀರದಲ್ಲಿಯೇ– ತಮಸಾ ತೀರದಲ್ಲಿ. ಅಂತೆಯೇ ರಾಮಾಯಣದ ಕಥೆ ಆರಂಭವಾಗಿರುವುದು ಕೂಡ ನದೀತೀರದಲ್ಲಿಯೇ – ಸರಯೂ ತೀರದಲ್ಲಿ. ಸೃಷ್ಟಿಗೂ ನೀರಿಗೂ ಜೀವನಕ್ಕೂ ಸರಸ್ವತೀನದಿಗೂ ನಂಟಿರುವ ಸಂಗತಿಯನ್ನು ಈ ಹಿಂದೆ ನೋಡಿದ್ದೇವೆ. ಇಲ್ಲಿ ಇನ್ನೂ ಒಂದು ಸ್ವಾರಸ್ಯವಿದೆ. ಮಾತು ಪ್ರಕೃತಿಯಾದರೆ ಕಾವ್ಯ ಸಂಸ್ಕೃತಿ; ಅಂತೆಯೇ ಜನರು ಪ್ರಕೃತಿಯಾದರೆ ಜನಪದ (= ರಾಷ್ಟ್ರ, ರಾಜ್ಯ) ಎನ್ನುವುದು ಸಂಸ್ಕೃತಿ. ಕಾವ್ಯ ಎಂಬ ಸಂಸ್ಕೃತಿಗೂ ಜನಪದ ಎಂಬ ನಾಗರಿಕತೆಗೂ ನದಿಯೇ ಮೂಲ ಎನ್ನುವುದನ್ನು ರಾಮಾಯಣ ಧ್ವನಿಸುತ್ತಿದೆ. ತಮಸಾ ಮತ್ತು ಸರಯೂಗಳು ಭೌಗೋಳಿಕವಾಗಿ ಮಾತ್ರವೇ ಅಲ್ಲ, ತಾತ್ವಿಕವಾಗಿಯೂ ಸಮೀಪದ ಸಂಗತಿಗಳೇ. ಎಂದರೆ ಸಂಸ್ಕೃತಿ– ನಾಗರಿಕತೆಗಳ ಮೂಲ ಸರಸ್ವತೀತತ್ತ್ವವೇ ಹೌದು.

ಕಾವ್ಯವು ಹುಟ್ಟಿದ ಮೇಲೆ ಅದರ ಮೀಮಾಂಸೆಯೂ ವಾಲ್ಮೀಕಿಯಿಂದ ಈಗಾಗಲೇ ನಡೆದಿದೆ. ಈಗ ನಾಗರಿಕತೆಯ ಮೀಮಾಂಸೆಯೂ ಕೋಸಲಾ–ಅಯೋಧ್ಯೆಯ ಮೂಲಕ ನಡೆಯುತ್ತಿದೆ.

ಕೋಸಲೆಯು ಧನಧಾನ್ಯಗಳಿಂದ ಸಮೃದ್ಧವಾಗಿದೆ ಎಂದಿದೆಯಷ್ಟೆ. ‘ಧಾನ್ಯ’ ಎಂಬುದು ಪ್ರಕೃತಿದತ್ತ ಸಮೃದ್ಧಿಗೆ ಸೂಚಕ; ‘ಧನ’ ಎಂಬುದು ಸಂಸ್ಕೃತಿಸಿದ್ಧ ಸಮೃದ್ಧಿಗೆ ಸೂಚಕ. ಒಂದು ಪ್ರಕೃತಿಯಿಂದಲೇ ಸಹಜವಾಗಿ ಸಿಗುವ ಫಸಲು, ಇನ್ನೊಂದು ನಮ್ಮ ಮೌಲ್ಯನಿರ್ಣಯದಿಂದ ಒದಗುವ ಫಲ. ಹೀಗೆ ಪ್ರಕೃತಿಯಿಂದ ಸಂಸ್ಕೃತಿಗೆ ನಮ್ಮನ್ನು ನಡೆಸುವ ಜೀವನಯಾನವೇ ನಾಗರಿಕತೆ. ಅದು ಬೆಳೆಯುವುದು ನದೀತೀರದಲ್ಲಿಯೇ ಎನ್ನುವುದನ್ನು ರಾಮಾಯಣ ಹೇಳುತ್ತಿದೆಯೆ? ‘ನದೀ ಎನ್ನುವುದು ಸಂಚಾರದಲ್ಲಿರುವ ದಾರಿ; ನಾವು ಬಯಸುವ ಗುರಿಗೆ ನಮ್ಮನ್ನು ಒಯ್ಯುವಂಥದ್ದು’ (Rivers are roads which move, and which carry us whither we desire to go) – ಹದಿನೇಳನೆಯ ಶತಮಾನದಲ್ಲಿದ್ದ ಚಿಂತಕ, ಗಣಿತಜ್ಞ ಬ್ಲೇಸ್‌ ಪ್ಯಾಸ್ಕಲ್‌ನ ಈ ಮಾತು ಮನನೀಯ. ತಮಸಾನದಿಯು ವಾಲ್ಮೀಕಿಯನ್ನು ಕವಿಯನ್ನಾಗಿಸಿತು; ಸರಯೂನದಿಯು ಕೋಸಲೆಯನ್ನು ಜನಪದವನ್ನಾಗಿಸಿತು. ರಾಮಾಯಣವನ್ನೇ ಪರಂಪರೆಯು ಮಹಾನದಿಗೆ ಹೋಲಿಸಿದೆ (ಪುನಾತು ಭುವನಂ ಪುಣ್ಯಾ ರಾಮಾಯಣಮಹಾನದೀ). ರಾಮಾಯಣ ನದಿಯಲ್ಲಿಯ ಅಧ್ಯಯನ ಮತ್ತು ಪಾರಾಯಣ ಎಂಬ ರಸಸ್ನಾನಗಳು ನಾಗರಿಕತೆಯ ಸ್ವಾಸ್ಥ್ಯಕ್ಕೆ ನೆರವಾಗುತ್ತವೆ ಎನ್ನುವುದು ಪರಂಪರೆಯ ವಿಶ್ವಾಸ. ಆದರ್ಶಕಾವ್ಯದ ಲಕ್ಷಣಗಳನ್ನೆಲ್ಲ ರಾಮಾಯಣದಲ್ಲಿ ನೋಡುವಂತೆ, ಆದರ್ಶರಾಷ್ಟ್ರದ ಲಕ್ಷಣಗಳನ್ನೆಲ್ಲ ಕೋಸಲೆಯಲ್ಲಿ ನೋಡಬಹುದಾಗಿದೆ.

ರಾಷ್ಟ್ರದ ಕಲ್ಪನೆಯು ರಾಮಾಯಣಕ್ಕಿಂತಲೂ ಹಿಂದಿನದು; ವೇದದಲ್ಲಿಯೇ ಅದರ ಗುಣಲಕ್ಷಣಗಳು ಸಿಗುತ್ತವೆ. ‘ತೈತ್ತಿರೀಯ ಬ್ರಾಹ್ಮಣ’ದಲ್ಲಿಯ ಅಶ್ವಮೇಧಯಾಗ ಪ್ರಕರಣದ ಮಂತ್ರವು ರಾಷ್ಟ್ರವನ್ನು ಅಶ್ವಮೇಧಯಾಗಕ್ಕೆ ಹೋಲಿಸಿದೆ (ರಾಷ್ಟ್ರಂ ವಾ ಅಶ್ವಮೇಧಃ). ಈ ಭಾಗದ ಮಂತ್ರಗಳನ್ನು ‘ಋಷಿಗಳ ರಾಷ್ಟ್ರಗೀತೆ’ ಎಂಬುದಾಗಿಯೇ ಕರೆಯಲಾಗಿದೆ. ನಮ್ಮ ಕಾಲದಲ್ಲಿ ರಾಜನೀತಿ, ರಾಜ್ಯಶಾಸ್ತ್ರ ಮತ್ತು ರಾಜ್ಯಾಂಗತತ್ತ್ವಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದವರು ಡಿವಿಜಿ. ಅವರು ಈ ಮಂತ್ರಗಳನ್ನು ಕನ್ನಡಕ್ಕೆ ಅನುವಾದಿಸಿ ಅವರ ‘ರಾಜ್ಯಾಂಗತತ್ತ್ವಗಳು’ ಕೃತಿಯ ಆರಂಭದಲ್ಲಿಯೇ ಪ್ರಕಟಿಸಿದ್ದಾರೆ. ಅದರ ಕೆಲವು ಭಾಗಗಳನ್ನು ಇಲ್ಲಿ ಮೆಲುಕು ಹಾಕಬಹುದು:

‘ಬ್ರಾಹ್ಮಣವಂಶದಲ್ಲಿ ವೇದಶಾಸ್ತ್ರ ತತ್ತ್ವಜ್ಞನಾಗಿ ಬ್ರಹ್ಮವರ್ಚಸ್ಸುಳ್ಳ ಬ್ರಾಹ್ಮಣನು ಜನಿಸಲಿ.
‘ಈ ರಾಜ್ಯದಲ್ಲಿ ಶಸ್ತ್ರಾಸ್ತ್ರ ಸಂಪನ್ನನೂ ಶೂರನೂ ಮಹಾರಥಿಯೂ ಆದ ಕ್ಷತ್ರಿಯರಾಜನು ಉದಿಸಲಿ.
‘ಹಾಲು ಕರೆಯುವ ಹಸುಗಳಾಗಲಿ.
‘ಭಾರವೆಳೆಯಲು ಬಲಿಷ್ಠವಾದ ಎತ್ತುಗಳಾಗಲಿ.
‘ವೇಗವುಳ್ಳ ಕುದುರೆಗಳಾಗಲಿ.
‘ಸೌಂದರ್ಯವತಿಯರಾದ ಯುವತಿಯರು ಹುಟ್ಟಲಿ.
‘ರಥವೇರಿ ಹೊರಟು ಜಯಶೀಲರಾಗಿ ಬರುವ ಯೋಧರು ಹುಟ್ಟಲಿ.
‘ಸಭಾಯೋಗ್ಯರಾದ ಯುವಕರು ಹುಟ್ಟಲಿ.
‘ಈ ಯಜ್ಞಕರ್ತನು ವೀರನಾಗಲಿ; ಅವನಿಗೆ ವೀರನಾದ ಮಗನಾಗಲಿ.
‘ನಮಗೆ ಬೇಕು ಬೇಕಾದಾಗ ಬೇಕು ಬೇಕಾದಂತೆ ಇಂದ್ರನು ಮಳೆಗರೆಯಲಿ.
‘ನಮಗೆ ಶುಭ ಸಮೃದ್ಧಿಯೂ ನೆಮ್ಮದಿಯೂ ಉಂಟಾಗಿರಲಿ. ಈ ಯಜ್ಞದಿಂದ ಪ್ರಜೆಗಳಿಗೆ ಯೋಗಕ್ಷೇಮ ಪ್ರಾಪ್ತಿಯಲ್ಲವೆ?’

ರಾಷ್ಟ್ರವನ್ನು ಅಶ್ವಮೇಧಯಾಗಕ್ಕೆ ಹೋಲಿಸಿರುವುದು ವಿಶೇಷ. ರಾಷ್ಟ್ರ ಎನ್ನುವುದು ಪ್ರತಿಕ್ಷಣವೂ ಬದಲಾಗುತ್ತಲೇ ಇರುವ ಶಾಶ್ವತಸತ್ಯ! (ಅಶ್ವಮೇಧಯಾಗದ ವಿವರಗಳನ್ನು ಮುಂದೆ ನೋಡೋಣ.) ರಾಜನು ಮಾಡುವ ಪ್ರತಿ ಕಾರ್ಯವೂ ಪ್ರಜೆಗಳ ಯೋಗಕ್ಷೇಮಗಳನ್ನು ಕಾಪಾಡುವಂತಿರಬೇಕು ಎಂದು ವೇದ ಘೋಷಿಸುತ್ತಿದೆ. ರಾಜಕಾರಣದಲ್ಲಿ ಯುವಕರು ಹೆಚ್ಚೆಚ್ಚು ಭಾಗವಹಿಸಬೇಕು ಎನ್ನುವುದು ವೇದಕಾಲದಿಂದಲೂ ಇರುವ ಆಶಯ ಎನ್ನುವುದನ್ನು ಗಮನಿಸತಕ್ಕದ್ದು.

* * *
ರಾಮಾಯಣ ಕೇವಲ ಆದಿಕಾವ್ಯವಷ್ಟೆ ಅಲ್ಲ; ಅದು ಕಾವ್ಯಮೀಮಾಂಸೆಯ ಪ್ರಥಮ ಕೃತಿಯೂ ಹೌದು ಎನ್ನುವುದನ್ನು ನೋಡಿದ್ದೆವು. ಮಾತ್ರವಲ್ಲ, ಅದು ರಾಜನೀತಿ–ಅರ್ಥಶಾಸ್ತ್ರದ ಪ್ರಥಮ ಕೃತಿಯೂ ಎನ್ನಬಹುದು. ಅಷ್ಟೇಕೆ, ರಾಜನ ಧರ್ಮಾಧರ್ಮಗಳ ಮೀಮಾಂಸೆಯೇ ರಾಮಾಯಣದ ವಸ್ತು ಎನ್ನಲಾದೀತು; ಪುರುಷಾರ್ಥಮೀಮಾಂಸೆ ಎಂದರೂ ಇದೇ ಅಲ್ಲವೆ?

ಸುಖಸ್ಯ ಮೂಲಂ ಧರ್ಮಃ |
ಧರ್ಮಸ್ಯ ಮೂಲಮರ್ಥಃ |
ಅರ್ಥಸ್ಯ ಮೂಲಂ ರಾಜ್ಯಂ |

ಇವು ಅರ್ಥಶಾಸ್ತ್ರದ ಮೂಲಸೂತ್ರಗಳು. ‘ಜನರ ಸೌಖ್ಯಕ್ಕೆ ಧರ್ಮವೇ ಮೂಲ; ಧರ್ಮಕ್ಕೆ ಅರ್ಥವೇ – ವಿವಿಧ ಲೌಕಿಕ ಸಂಪತ್ತೇ – ಮೂಲ; ಅರ್ಥಕ್ಕೆ ರಾಜ್ಯವ್ಯವಸ್ಥೆಯೇ ಮೂಲ’ (ಅನುವಾದ: ಡಿವಿಜಿ). ಈ ಸೂತ್ರಗಳ ಕಥನರೂಪದಲ್ಲಿ ರಾಮಾಯಣದ ಬಾಲಕಾಂಡದ ‘ಅಯೋಧ್ಯಾನಗರದ ವರ್ಣನೆ’, ‘ದಶರಥ ಮತ್ತು ಪ್ರಜೆಗಳ ವರ್ಣನೆ’, ‘ದಶರಥನ ಅಮಾತ್ಯರ ವರ್ಣನೆ; ರಾಜ್ಯಭಾರಕ್ರಮ’ – ಈ ಸರ್ಗಗಳು ಮೈದಾಳಿವೆಯೆನಿಸುತ್ತದೆ.

‘Unquestionably the economic interpretation illuminates much history’ (ಆರ್ಥಿಕತೆಯ ವ್ಯಾಖ್ಯಾನವೇ ಇತಿಹಾಸದ ದರ್ಪಣ) ಎಂದ ವಿಲ್‌ ಡ್ಯುರೆಂಟ್‌ ಅವರ ಕಾಣ್ಕೆಯ ಹಿನ್ನೆಲೆಯಲ್ಲಿ ಕೋಸಲೆ ಮತ್ತು ಅದರ ರಾಜ–ಪ್ರಜೆಗಳ ಸಂಪತ್ತನ್ನು ವ್ಯಾಖ್ಯಾನಿಸಿದರೆ ಆಗ ನಮ್ಮ ಇತಿಹಾಸಕ್ಕೂ ವಿಶಿಷ್ಟ ಹೊಳಪು ಒದಗೀತು. ಇತಿಹಾಸದುದ್ದಕ್ಕೂ ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುವುದು – ಮನುಷ್ಯನ ಸ್ವಭಾವದಲ್ಲಿ ಮೂಲಭೂತವಾದ ವ್ಯತ್ಯಾಸ ನಡೆದಿಲ್ಲ. ಮಾರ್ಗದಲ್ಲಿ ಮತ್ತು ಸಾಧನಗಳಲ್ಲಿ ವ್ಯತ್ಯಾಸವಾಗಿರಬಹುದೆ ವಿನಾ ಗುರಿಯಲ್ಲಿ ಮತ್ತು ಉದ್ದೇಶಗಳಲ್ಲಿ ಅಲ್ಲ. ಆದುದರಿಂದಲೇ ರಾಮಾಯಣದ ರಾಜನೀತಿಯಾಗಲೀ ಆರ್ಥಿಕನೀತಿಯಾಗಲೀ ನಮಗೆ ಇಂದೂ ಪ್ರಸ್ತುತ ಎನಿಸುವುದು.

ರಾಜ್ಯವು ಏಳು ಲಕ್ಷಣಗಳಿಂದ ಕೂಡಿದೆ ಎನ್ನುವುದು ಪ್ರಾಚೀನ ಶಾಸ್ತ್ರಕಾರರ ಸಿದ್ಧಾಂತ. ಇದನ್ನೇ ‘ಸಪ್ತಾಂಗ’ ಎಂದು ಕರೆದಿದ್ದಾರೆ. ಕಾಮಂದಕ ಎಂಬುವನ ಪ್ರಕಾರ ಅವು ಯಾವುವೆಂದರೆ: 1. ಸ್ವಾಮಿ (ರಾಜ); 2. ಅಮಾತ್ಯ (ಮಂತ್ರಿ); 3. ಸುಹೃತ್‌ (ಮಿತ್ರ); 4. ಕೋಶ (ಖಜಾನೆ); 5. ರಾಷ್ಟ್ರ; 6. ದುರ್ಗ (ರಕ್ಷಣವ್ಯವಸ್ಥೆ); 7. ಬಲ (ಸೈನ್ಯ). ಕೌಟಿಲ್ಯ ಹೇಳಿರುವ ಸಪ್���ಾಂಗಗಳು: 1. ಸ್ವಾಮಿ; 2. ಅಮಾತ್ಯ; 3. ಮಿತ್ರ; 4. ಕೋಶ; 5. ಜನಪದ; 6. ದುರ್ಗ; 7. ದಂಡ (ಕಾನೂನು). ಈ ವಿವರಗಳು ನಮ್ಮ ಕಾಲದ ಆಡಳಿತ ವ್ಯವಸ್ಥೆಗೂ ತುಂಬ ಹತ್ತಿರದ ಬಂಧುಗಳೇ ಹೌದು. ಇವೇ ಕೋಸಲೆಯ ವರ್ಣನೆಯಲ್ಲಿ ವಾಲ್ಮೀಕಿ ನೀಡಿರುವ ವಿವರಗಳು.

Courtesy : Prajavani.net

http://www.prajavani.net/news/article/2018/04/07/564329.html

Leave a Reply