ಕರ್ಮದಲ್ಲಿ ನಿರ್ಲಿಪ್ತಿಯಿರಲಿ

ಕರ್ಮದಲ್ಲಿ ನಿರ್ಲಿಪ್ತಿಯಿರಲಿ

‘ಕರ್ಮದಲ್ಲಿ ಸ್ವಾರ್ಥ-ದುರಾಸೆ-ನಿರಾಸೆ-ಉದಾಸೀನ ಮುಂತಾದ ಮೋಹಜನ್ಯ ದೋಷಗಳು ಸಂಕರಿಸದಂತೆ ನಿರ್ಲಿಪ್ತಿಯಿಂದ ಕರ್ಮವೆಸಗಬೇಕು’ ಎನ್ನುವ ವಿಷಯವನ್ನು ಕೃಷ್ಣನು ಹೇಳುತ್ತಿದ್ದನಷ್ಟೆ? ಮುಂದುವರಿಸುತ್ತಾನೆ:
ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ |
ಕುರ್ಯಾತ್ ವಿದ್ವಾಂಸ್ತಥsಸಕ್ತಶ್ಚಿಕೀರ್ಷಲೋಕಸಂಗ್ರಹಂ || 3.25
‘ಅಜ್ಞಾನಿಗಳು ಕರ್ಮದಲ್ಲಿ (ಕರ್ಮಫಲದಲ್ಲಿ) ಆಸಕ್ತಿಯನ್ನು ಹೊಂದಿ ಕಾರ್ಯವೆಸಗುವಂತೆಯೇ, ಜ್ಞಾನಿಗಳು (ಕರ್ಮಫಲದಲ್ಲಿ) ಆಸಕ್ತಿಯಿಲ್ಲದೆ, ಕೇವಲ ಲೋಕಸಂಗ್ರಹಕ್ಕಾಗಿ ಕಾರ್ಯವೆಸಗುತ್ತಾರೆ.’
ಲೋಕದ ಫಲಗಳ ಬೆನ್ನಟ್ಟಿ ಹೋಗುವವರು ‘ಲೌಕಿಕರು’. ಲೋಕದ ಫಲಗಳನ್ನು ಬೆನ್ನಟ್ಟದೆ ಲೋಕದಲ್ಲಿರುತ್ತ ತಮ್ಮ ಕರ್ತವ್ಯವನ್ನು ನಿರ್ವಹಿಸುವವರು ಜ್ಞಾನಿಗಳು. ‘ಭೋಗ ಬೇಕೇಬೇಕು!’ ಎನ್ನುವ ಹಂಬಲವಿರುವ ಲೌಕಿಕರಿಗೆ ‘ನಿರ್ಲಿಪ್ತಿ’ಯ ಉಪದೇಶ ಅರ್ಥವಾಗದು, ರುಚಿಸದು ಕೂಡ! ಅಂತಹವರು ಆಲೋಚಿಸುವುದು, ಕರ್ಮ ಮಾಡುವುದು ಎಲ್ಲವೂ ‘ಭೋಗಲಾಭ’ಕ್ಕಾಗಿ ಮಾತ್ರವೇ. ಕ್ಷಣಿಕವಾದ ಭೋಗವನ್ನರಸುತ್ತ ಅವಿಶ್ರಾಂತವಾಗಿ ಅಲೆದಾಡುವ ಲೌಕಿಕರೇ ಈ ಲೋಕದಲ್ಲಿ ಹೆಚ್ಚಿನವರು! ಆದರೆ ಅಪರೂಪದ ಕೆಲವರು ವಿವೇಕಿಗಳು, ಭೋಗದ ಕಡೆಗಿನ ಹುಚ್ಚು ಓಟವನ್ನು ನಿಲ್ಲಿಸಿ, ‘ತಮಗೆ ನಿಜಕ್ಕೂ ಯಾವುದು ಅಗತ್ಯ? ಯಾವುದು ಅನಗತ್ಯ? ಯಾವುದು ಶ್ರೇಯಸ್ಕರ? ಯಾವುದು ಅಲ್ಲ?’ ಎಂದು ಆತ್ಮನಿರೀಕ್ಷಣೆ ಮಾಡಿಕೊಳ್ಳುತ್ತಾರೆ. ಅನಗತ್ಯವೂ ವಿಕಾರಪ್ರಾಯವೂ ಶಕ್ತಿವ್ಯಯಗೊಳಿಸುವಂತಹವೂ ಆದ ವಿಷಯಗಳನ್ನು ತಮ್ಮ ಮತಿ-ಮನಗಳಿಂದ ಶೋಧಿಸಿ ಹೊರಹಾಕುತ್ತ ಬರುತ್ತಾರೆ. ತಮ್ಮೊಳಗೇ ಪ್ರಸನ್ನತೆಯ ಮೂಲವನ್ನು ಗುರುತಿಸಿಕೊಂಡು ಶಾಂತರೂ ಶಕ್ತರೂ ಆಗುತ್ತಾರೆ. ಇಂತಹ ಜ್ಞಾನಿಗಳು ಕರ್ಮಗಳನ್ನು ಮಾಡುತ್ತಿದ್ದರೂ, ಅವರಲ್ಲಿ ಲೌಕಿಕರಲ್ಲಿರುವಂತೆ ಭೋಗಾತುರವೂ, ರಾಗ-ದ್ವೇಷ ಸುಖ-ದುಃಖಗಳ ದ್ವಂದ್ವಗಳೂ ಇರವು. ಜ್ಞಾನಿಗಳಿಗೆ ಜೀವನದ ವಿವರಗಳಲ್ಲಿ ವ್ಯಾಮೋಹವೂ ಇರದು, ತಾತ್ಸಾರವೂ ಬೆಳೆಯದು! ಮಗುವಿನಂತಹ ಶುದ್ಧ ಮನದಿಂದ ಜೀವನವನ್ನೂ ಜನರನ್ನೂ ಅವರು ಪ್ರೀತಿಸಬಲ್ಲವರಾಗುತ್ತಾರೆ. ಲಾಭ-ಅಲಾಭಗಳಿಂದ ವಿಚಲಿತರಾಗದೆ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲವರಾಗುತ್ತಾರೆ. ಭಾವುಕತೆಯ ಗೊಂದಲಕ್ಕೊಳಗಾಗದೆ ಧಮೈಕದೃಷ್ಟಿಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲವರಾಗುತ್ತಾರೆ. ಇಂತಹವರೆ ನಿಜಾರ್ಥದಲ್ಲಿ ‘ಲೋಕ-ಸಂಗ್ರಹ’ವನ್ನು ನಡೆಸಲು ಸಾಧ್ಯ.
ಆದರೆ ಲೌಕಿಕರು ಶಾಶ್ವತ ತೃಪ್ತಿ ಕೊಡಲಾಗದ ಭೋಗಗಳನ್ನೇ ನೆಚ್ಚುವುದರಿಂದ ಜೀವನದಲ್ಲಿ ಅಶಾಂತಿಯನ್ನೇ ಹೊಂದುತ್ತಾರೆ. ‘ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ | ಅಷ್ಟು ದೊರಕಿದರೆ ಮತ್ತಿಷ್ಟರಾಸೆ ||’ (‘ಬಿನ್ನಹಕೆ ಬಾಯಿಲ್ಲವಯ್ಯಾ’, ಪುರಂದರದಾಸರು) ಎನ್ನುತ್ತ ಮೃಗಜಾಲವನ್ನು ಅರಸಿ ಓಡುವ ಮರಳುಗಾಡಿನ ಪಯಣಿಗನಂತಾಗುತ್ತಾರೆ! ಲೌಕಿಕರು ಲೋಕವ್ಯವಹಾರಗಳಲ್ಲೇ ತೊಡಗಲಿ, ಪಾರಮಾರ್ಥಿಕ ಕಲಾಪಗಳಲ್ಲೇ ತೊಡಗಲಿ – ಅವರ ಗುರಿ ಮಾತ್ರ ಲೌಕಿಕಲಾಭವೇ ಆಗಿರುತ್ತದೆ! ಅವರ ಜೀವನವೆಲ್ಲ ಸಂಚಯದಲ್ಲೇ ಕಳೆಯುತ್ತದೆ! ಹಣಕ್ಕಾಗಿ, ಕೀರ್ತಿಗಾಗಿ, ಸ್ಥಾನಮಾನಕ್ಕಾಗಿ ಅವರು ಬೇಕಾದರೆ ಮನಗಳನ್ನೂ ಮನೆಗಳನ್ನೂ ವ್ಯವಸ್ಥೆಗಳನ್ನೂ ಮುರಿಯುತ್ತಾರೆ! ಪಾಪಕ್ಕಾಗಿ ಸಿಕ್ಕಿಬಿದ್ದರೂ, ರೇಡ್ ಆದರೂ, ಶಿಕ್ಷೆಗೊಳಪಟ್ಟರೂ, ಜನರ ನಿಂದೆಗೆ ಪಾತ್ರರಾದರೂ ಅವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ, ಸಹಾನುಭೂತಿಯನ್ನು ಗಿಟ್ಟಿಸಿ ಮತ್ತದೇ ಕೃತ್ಯಕ್ಕಿಳಿಯುತ್ತಾರೆ! ಲೌಕಿಕರು ಪೂಜೆ-ದಾನ-ಧರ್ಮಾದಿ ಕಲಾಪಗಳಿಗಿಳಿದರೆ ಅಲ್ಲೂ ಲಾಭವನ್ನು ಹುಡುಕುತ್ತಾರೆ! ‘ಈ ಪೂಜೆಯಿಂದ ಹಣಲಾಭ / ಆ ದಾನದಿಂದ ಉದ್ಯೋಗ ಲಾಭ / ಈ ವ್ರತದಿಂದ ಪುತ್ರಪ್ರಾಪ್ತಿ / ಆ ಪಾರಾಯಣದಿಂದ ಶತ್ರುನಾಶ’ ಎಂಬ ಲೆಕ್ಕಾಚಾರ ಇದ್ದೇ ಇರುತ್ತದೆ. ಎಲ್ಲಿ ಬೇಗನೆ ಹೆಚ್ಚು ಲಾಭ ಗಿಟ್ಟುತ್ತದೆ ಎಂದು ವಿಶ್ವಾಸ ಮೂಡುತ್ತದೋ ಆ ಗುರುವನ್ನು ಮತಪಂಥಗಳನ್ನೂ ಅರಸಿ ನಡೆದೇಬಿಡುತ್ತಾರೆ. ಈ ಲೌಕಿಕರು ಅಧ್ಯಾತ್ಮಸಾಧನೆ-ಬೋಧನೆಗಿಳಿದರು ಎಂದಿಟ್ಟುಕೊಳ್ಳೋಣ! ಅಲ್ಲೂ ಹಠಾತ್ತನೆ ಕೀರ್ತಿ ಧನ ಯಶಸ್ಸು ಗಳಿಸಲು, ‘ಗುರು’ವಿನ ವರ್ಚಸ್ಸನ್ನು ಬಿಂಬಿಸಲು ಕೃತಕ ಯತ್ನಗಳಲ್ಲಿ ತೊಡಗುತ್ತಾರೆ! ‘ಲೋಕಜನರನ್ನು ಉದ್ಧರಿಸುವ ಸಲುವಾಗಿಯೇ ಧರೆಗಿಳಿದ ಮಹಾತ್ಮ ತಾನು’ ಎಂಬಂತೆ ನಾಟಕವಾಡಿ ಮುಗ್ಧರನ್ನು ತಮ್ಮ ವಶಪಡಿಸಿಕೊಳ್ಳುತ್ತಾರೆ!
ಹೀಗೆ ಮಾಡುವ ಕರ್ಮ ಲೋಕದ್ದೇ ಆಗಿರಲಿ, ಪಾರಮಾರ್ಥಿಕವೇ ಆಗಿರಲಿ, ಅದರಿಂದ ಲೋಕದಲ್ಲಿನ ವಸ್ತು-ಧನ-ಕೀರ್ತಿ-ವ್ಯಕ್ತಿಗಳಿಗಾಗಿ ಹಂಬಲಿಸುವವರೆಲ್ಲರೂ ‘ಲೌಕಿಕರೇ’! ಇಂತಹವರು, ತಾವು ನೆಚ್ಚಿಕೊಂಡ ಐಹಿಕ ವಿಷಯಗಳಿಂದಾಗಿಯೇ ಒಂದಲ್ಲ ಒಂದು ದಿನ ಕಹಿ ಫಲವನ್ನು ಅನುಭವಿಸುವುದು ತಪ್ಪದು. ಫಲಾಸಕ್ತಿಯೆನ್ನುವುದು ಮೊದಮೊದಲು ಮಧುರವಾಗಿ ತೋರಿದರೂ, ಕೊನೆಗೆ ಎಂತಹವರನ್ನೂ ಅದು ಸದೆಬಡಿದುಹಾಕುತ್ತದೆ!
ಈ ಭೋಗಾಸಕ್ತಿಯೆಂಬ ಸಿಹಿಯಾದ ವಿಷದ ಪ್ರಭಾವದಿಂದ ದೂರವಿರಲು ನಿರ್ಲಿಪ್ತಿಯೊಂದೇ ಮಾರ್ಗ. ನಿರ್ಲಿಪ್ತನಿಗೆ ಮಾತ್ರ ಶಾಂತಿಯೂ ಸ್ವಾತಂತ್ರ್ಯವೂ ಒಲಿಯುತ್ತವೆ! ಹಾಗಾಗಿ ಶ್ರೇಯಸ್ಸನ್ನು ಬಯಸುವವರು ದೃಢನಿಶ್ಚಯದಿಂದ ನಿರ್ಲಿಪ್ತಿಯನ್ನು ಅಭ್ಯಸಿಸಬೇಕಾಗುತ್ತದೆ. ಹೊರಗಡೆ ಅರಸುವ ಮುನ್ನ ತನ್ನೊಳಗಿನ ಶಾಂತಿ-ಶಕ್ತಿ-ಪ್ರಸನ್ನತೆಗಳನ್ನು ಕಂಡುಕೊಂಡು ಬದುಕುವ ಕಲೆಯನ್ನು ಕಲಿಯಬೇಕಾಗುತ್ತದೆ. ಸಂಸಾರದಲ್ಲಿರಲಿ ಸಂನ್ಯಾಸದಲ್ಲೇ ಇರಲಿ, ನಿರ್ಲಿಪ್ತಿಯೆಂಬುದು ಮುಖ್ಯ. ಅದಿದ್ದರೇ ನಾವು ಯಾರಿಗೂ ಹೆದರಬೇಕಿಲ್ಲ, ಯಾವುದಕ್ಕೂ ಬದ್ಧರೂ ಅಗುವುದಿಲ್ಲ! ನಿರ್ಲಿಪ್ತನ ಮತಿಮನಗಳು ಸ್ಪಟಿಕಶುದ್ಧವಾಗಿದ್ದು ಸದಾ ಧರ್ಮದ ಹಾದಿಯನ್ನೇ ತೋರುತ್ತವೆ. ಹಾಗಾಗಿ ನಿರ್ಲಿಪ್ತನು ನುಡಿದರೂ ನಡೆದರೂ ಸುಮ್ಮನಿದ್ದರೂ ಅವನಿಂದ ಜಗತ್ತಿಗೆ ಒಳಿತೇ ಅಗುತ್ತದೆ.
ಲೌಕಿಕರು ಮತ್ತು ವಿವೇಕಿಗಳು – ಈ ಎರಡು ವರ್ಗದ ಜನರು ಎಲ್ಲ ಕಾಲದಲ್ಲೂ ಇದ್ದೇ ಇರುತ್ತಾರೆ. ಆದರೆ, ‘ಲೌಕಿಕರಂತೆ ಫಲಾಸಕ್ತಿಯಿಂದ ಕರ್ಮ ಮಾಡಿ ಬಂಧಕ್ಕೊಳಗಾಗುವ ಬದಲು, ನಿರ್ಲಿಪ್ತಿಯಿಂದ ಕರ್ಮ ಮಾಡಿ, ಗೆದ್ದುಕೋ, ತನ್ಮೂಲಕ ಲೋಕಸಂಗ್ರಹವನ್ನೂ ಸಾಧಿಸು’ ಎನ್ನುವ ಕಿವಿಮಾತನ್ನು ಅರ್ಜುನನಿಗೆ ಹೇಳುತ್ತಿದ್ದಾನೆ ಕೃಷ್ಣ.

ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply