ವರ್ಣವ್ಯವಸ್ಥೆಯ ವಿಶಾಲಾರ್ಥ

ವರ್ಣವ್ಯವಸ್ಥೆಯ ವಿಶಾಲಾರ್ಥ

‘ಸಂಕರದಿಂದಾಗಿ ವ್ಯವಸ್ಥೆಗಳು ಕೆಟ್ಟು, ಪ್ರಜೆಗಳು ಅವನತಿ ಹೊಂದುತ್ತಾರೆ’ ಎನ್ನುತ್ತಿದ್ದ ಕೃಷ್ಣ. ‘ಸಂಕರ’ ಎಂದರೆ ಮಾಡುವ ಕರ್ಮದ ಉದ್ದೇಶ ಹಾಗೂ ಕ್ರಮಗಳಲ್ಲಿ ನುಸುಳುವ ಸ್ವಾರ್ಥ-ಮೋಹಗಳ ‘ಮಾಲಿನ್ಯ’ ಎನ್ನುವುದನ್ನು ಚರ್ಚಿಸಿದ್ದೆವು. ‘ಸಂಕರ’ ಎಂದರೆ ‘ವರ್ಣಸಂಕರ’ವೇ ಎಂದು ಅರ್ಥಮಾಡಿಕೊಂಡರೂ, ಅಲ್ಲಿ ಕೃಷ್ಣನು ಹೇಳುತ್ತಿರುವುದು ಕರ್ಮನಿಷ್ಠೆಯ (Domain Descipline) ಬಗ್ಗೆಯೇ. ಕರ್ತವ್ಯನಿಷ್ಠೆಯೇ ‘ವೃತ್ತಿನಿಷ್ಠೆ’ಯ ರೂಪ ತಾಳುತ್ತ ಬಂದಿದೆ. ‘ವರ್ಣ/ಕುಲ’ದ ಕಲ್ಪನೆಗಳು ‘ವೃತ್ತಿನಿಷ್ಠೆ’ಯನ್ನಾಧರಿಸಿಯೇ ಬೆಳೆದಿರುವುದು. ಕೃಷ್ಣನೇ ಹೇಳಿದ್ದಾನೆ; ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ…| 4.13 ‘‘(ಪ್ರವೃತ್ತಿ ಮುಂತಾದ) ಗುಣಗಳ ಹಾಗೂ (ಹುಟ್ಟಿದ ನಾಡು – ಕುಲಗಳ ಹಿನ್ನೆಲೆಯಲ್ಲಿ ಒದಗಿಬರುವ ಕರ್ತವ್ಯರೂಪದ) ಕರ್ಮಗಳ ವಿಂಗಡನೆಯಾಗಿ ಈ ‘ವರ್ಣವ್ಯವಸ್ಥೆ’ಯೆಂಬುದು ನನ್ನಿಂದಲೇ ಉಂಟಾಗಿದೆ’’.
‘ಕುಲ-ವರ್ಣ’ ಮುಂತಾದ ಶಬ್ದಗಳು ಕೃಷ್ಣನ ಕಾಲದಲ್ಲಂತೂ ಪ್ರಧಾನವಾಗಿ ‘ವೃತ್ತಿವಾಚಕಗಳೇ’ ಆಗಿದ್ದವು. ‘ಕುಲ-ವರ್ಣ’ ಪದಗಳಿಗೆ ಈಗ ಹತ್ತಿರುವಂತೆ ತೀವ್ರ ದುರಭಿಮಾನದ ಕಳಂಕವೂ ಆಗ ಹತ್ತಿರಲಿಲ್ಲವಾದ್ದರಿಂದ ಅವನ್ನು ಮುಕ್ತವಾಗಿ ಬಳಸಿ ಚರ್ಚಿಸಲಾಗಿದೆ ಎನ್ನುವುದೂ ಸ್ಪಷ್ಟ. ವರ್ಣವ್ಯವಸ್ಥೆಯ ಹಿಂದಿದ್ದ ಆಲೋಚನೆ ‘ಎಲ್ಲರೂ ಅವರವರ ನಾಡು ನುಡಿ ಕುಲ ಕಸುಬು ಸಂಪ್ರದಾಯಗಳ ಬಗ್ಗೆ ಅಭಿಮಾನವಿಟ್ಟುಕೊಂಡು ಅದದನ್ನು ನಿಷ್ಠೆಯಿಂದ ಉಳಿಸುತ್ತ ಬೆಳೆಸುತ್ತ ಇದ್ದಲ್ಲಿ, ನಿರುದ್ಯೋಗದ ಸಮಸ್ಯೆಯೂ ತಲೆದೋರದು, ವೃತ್ತಿಪರತೆಯೂ (professionalism) ಬೆಳೆಯುತ್ತದೆ, ವೃತ್ತಿನೈಪುಣ್ಯವೂ (specialization) ಹೆಚ್ಚುತ್ತದೆ, ಹಳೆಯ ಪದ್ಧತಿಗಳೂ ಉಳಿಯುತ್ತವೆ, ಹೊಸಪದ್ಧತಿಗಳೂ ಅರಳುತ್ತವೆ…’ ಎಂಬುದು. ಕುಲವೃತ್ತಿಯ ಶುದ್ಧಿಯನ್ನೂ ಗುಣಮಟ್ಟವನ್ನೂ ಉಳಿಸಿ ಬೆಳೆಸಬೇಕೆನ್ನುವ ಹುರುಪಿನಲ್ಲಿ ಆಯಾ ಕುಲದವರು ಅವರವರ ಕುಲವೃತ್ತಿಗೆ ಬಾಹ್ಯವಾದ ಆಚಾರಗಳನ್ನೂ ವಿವಾಹಸಂಬಂಧಗಳನ್ನೂ ಎಚ್ಚರದಿಂದ ದೂರವಿಟ್ಟರು. ಈ ಹಿನ್ನೆಲೆಯಲ್ಲೇ ಅಂತರ್ವರ್ಣೀಯ ವಿವಾಹವೂ ‘ವರ್ಣ-ಸಂಕರ’ವೆಂಬ ಪಟ್ಟಿ ಪಡೆಯಿತೆನ್ನಬಹುದು. ‘ವಂಶವಾಹಿನಿಗಳಲ್ಲಿ ಕುಲದ ಪ್ರವೃತ್ತಿ ಹಾಗೂ ಪ್ರತಿಭಾಂಶಗಳು ಹರಿದು ಬರುತ್ತವೆ’ ಎನ್ನುವ ನಂಬಿಕೆಯೂ ಸವರ್ಣೀಯ ವಿವಾಹವನ್ನೇ ಪ್ರೋತ್ಸಾಹಿಸಿದ್ದಿರಬೇಕು.
ವೃತ್ತಿ-ಕರ್ಮದಲ್ಲಿ ಸಾಂಕರ್ಯವಾಗದಿರಲೆಂದೇ ಪ್ರಾರಂಭವಾದ ವರ್ಣವ್ಯವಸ್ಥೆಯನ್ನು ಕಾಲಾಂತರದಲ್ಲಿ ಅಂದಗೆಡಿಸಿದ್ದು ಮನುಷ್ಯರ ‘ದುರಭಿಮಾನ’. ಕುಲವೃತ್ತಿಗಳಲ್ಲಿ ಮೇಲು-ಕೀಳೆಂಬ ತಾರತಮ್ಯವನ್ನು ತಂದಿಟ್ಟು, ಅದನ್ನೆಲ್ಲ ‘ಶಾಸ್ತ್ರ’ದ ತಲೆಗೂ ಕಟ್ಟಲಾಯಿತು! ಅದರಿಂದ ಸಮಾಜದಲ್ಲಿ ಒಡಕುಗಳು ಮೂಡಿದವು. ಆಕ್ರಮಣಕಾರರು ಈ ಒಡಕನ್ನು ಜಾತಿಯ ಹೆಸರಿನಲ್ಲಿ ಮತ್ತಷ್ಟು ಅಗಲಿಸಿ ನಮ್ಮ ಒಗ್ಗಟ್ಟನ್ನು ಮುರಿದು ಆಳಿದರು. ಇದೇ ‘ಒಡೆದು ಆಳುವ’ ಕುತಂತ್ರವನ್ನೇ ಇಂದಿನ ರಾಜಕಾರಣಿಗಳೂ ವಾಮಪಂಥೀಯರೂ ಬಳಸಿ, ಮತ-ಕಲಹಾಗ್ನಿಗೆ ನಿರಂತರ ಗಾಳಿ ಹಾಕುತ್ತಿದ್ದಾರೆ. ಈಗ ಹೇಗಾಗಿದೆಯೆಂದರೆ, ‘ವರ್ಣ’ ಎಂದು ಉಚ್ಚರಿಸಿದರೆ ಸಾಕು, ಅಸಮಾಧಾನ, ಅಸಹನೆಗಳೇ ಏಳುವಂತಾಗಿಬಿಟ್ಟಿದೆ! ವರ್ಣಪದ್ಧತಿಯು ಕ್ರಮೇಣ ‘ಕುಲವ್ಯವಸ್ಥೆ’ಯಾಗಿ ಬಿಗಿಯಾಗುತ್ತ ಹೋದದ್ದು ನಿಜವಾದರೂ, ಅದು ‘ವ್ಯಕ್ತಿಗಳ ಪ್ರವೃತ್ತಿ ಪ್ರತಿಭೆ ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ಳಲಿಲ್ಲ. ಇದಕ್ಕೆ ಸಾಕ್ಷಿಯಾಗಿ ವೃತ್ತಿಯನ್ನು ಪಾಲಿಸುತ್ತಲೇ, ಅಥವಾ ವೃತ್ತಿಯನ್ನು ಬಿಟ್ಟು, ಪ್ರವೃತ್ತಿಯತ್ತ ಸಾಗಿ ಸಾಧನೆಗೈದ ಪ್ರತಿಭಾಸಂಪನ್ನ ಸ್ತ್ರೀಪುರುಷರ ಉದಾಹರಣೆಗಳು ಭಾರತೀಯ ಪ್ರಾಚೀನ, ಮಧ್ಯ, ಅರ್ವಾಚೀನ ಇತಿಹಾಸಗಳಲ್ಲಿ ಹೇರಳವಾಗಿ ಸಿಗುತ್ತವೆ!
ಕೃಷಿಕರಾಗಿದ್ದೇ ವೇದಾಧ್ಯಯನ ಮಾಡಿದವರೂ, ರಾಜರಾಗಿದ್ದೂ ಗೀತ ನೃತ್ಯ ಕಾವ್ಯಕೋವಿದರಾದವರೂ, ಬುದ್ಧಿಬಲ ಭುಜಬಲಗಳಿಂದ ಅರಸರಾದ ವ್ಯಾಪಾರಿಗಳೂ ಬೇಡರು ಬೆಸ್ತರು ಸೇವಕರು ಮುಂತಾದವರು, ಅಂತಸ್ಸತ್ವದಿಂದ ಯೋಗಿಗಳಾದ ಎಲ್ಲ ವರ್ಣದ ಸ್ತ್ರೀಪುರುಷರು … ಅಸಂಖ್ಯರು ಇತಿಹಾಸದಲ್ಲಿ ಕಾಣಬರುತ್ತಾರೆ. ವರ್ಣಪದ್ಧತಿಯು ವೃತ್ತಿಪರತೆಯನ್ನು ಉಳಿಸುವ ಸಲುವಾಗಿ ಒಂದಷ್ಟು ಶಿಸ್ತುಗಳನ್ನು ಹೇರಿದರೂ, ಅದರ ಪರಿಣಾಮವಾಗಿ ಕೆಲವು ಕಾಲಘಟ್ಟಗಳಲ್ಲಿ ಕೆಲವರು ಅವಕಾಶವಂಚಿತರಾದರೆಂಬುದು ನಿಜವಾದರೂ, ಮನುಷ್ಯನ ಸಹಜ ವಿಕಾಸಕ್ಕೆ ಇದು ಅಡ್ಡವಾಗೇನೂ ನಿಲ್ಲಲಿಲ್ಲ.
ಇಂದಿನ ‘ಚಿಂತಕರು(?)’ ಇಂದಿನ ದೇಶ-ಕಾಲಘಟ್ಟಗಳಲ್ಲಿ ನಿಂತು, ಇಂದು ಪ್ರಚಲಿತವಿರುವ ಸಾಮಾಜಿಕನ್ಯಾಯದ ಕನ್ನಡಕವನ್ನು ತೊಟ್ಟು, ಸುದೀರ್ಘಕಾಲದಿಂದ ಬೆಳೆದುಬಂದ ಪ್ರಾಚೀನ ‘ವರ್ಣ’ವ್ಯವಸ್ಥೆಯನ್ನು ವಿಶ್ಲೇಷಿಸುವುದರಿಂದ ಅಪಾರ್ಥಪರಂಪರೆಯೇ ಬೆಳೆದುನಿಂತಿದೆ. ಇದರಿಂದಾಗಿ ಜನಮನಗಳಲ್ಲಿ ನಾಡು-ನುಡಿ-ಕುಲ-ವೃತ್ತಿಗಳ ಬಗ್ಗೆ ಅತೃಪ್ತಿ-ನಿರಭಿಮಾನಗಳು ಮೂಡುತ್ತಿವೆ! ರೈತನ ಮಗನಿಗೆ ವ್ಯವಸಾಯ ಮುಂದುವರೆಸಲು ಕೀಳರಿಮೆ! ಕನ್ನಡಿಗರಿಗೆ ಕನ್ನಡ ಮಾತನಾಡಲು ಕೀಳರಿಮೆ! ನಮ್ಮ ಹಿರಿಯರ ಸಾಧನೆಗಳ ಬಗ್ಗೆ ಮಾಹಿತಿಯೂ ಕಡಿಮೆಯಾಗುತ್ತಿದೆ, ಅಭಿಮಾನವೂ ಕುಗ್ಗುತ್ತಿದೆ! ‘ಈ ದೇಶದಲ್ಲಿ ನನಗೆ ಭವಿಷ್ಯವಿಲ್ಲ. ವಿದೇಶದಲ್ಲಿ ಮಾತ್ರವೇ ಭವಿಷ್ಯ!’ ಎಂಬ ಭ್ರಾಂತಿ ವ್ಯಾಪಿಸುತ್ತಿದೆ. ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಈ ಧೋರಣೆಯಿಂದಾಗಿ ಈಗಾಗಲೇ ನಮ್ಮ ನಾಡಿನ ಅದೆಷ್ಟೋ ಭಾಷೆ-ಉಪಭಾಷೆಗಳನ್ನೂ, ಕಲೆ-ಸಾಹಿತ್ಯಪ್ರಕಾರಗಳನ್ನೂ, ಚಿಕಿತ್ಸಾವಿಧಾನಗಳನ್ನೂ, ಪ್ರಾದೇಶಿಕ ಇತಿಹಾಸ ಪರಂಪರೆಗಳ ವಾಸ್ತವಿಕಜ್ಞಾನವನ್ನೂ ಕಳೆದುಕೊಳ್ಳುತ್ತ ಬಂದಿದ್ದೇವೆ.
ವೃತ್ತಿಧರ್ಮದ ಹಿನ್ನೆಲೆಯಲ್ಲಿ ಪೂರ್ವಗ್ರಹರಹಿತವಾಗಿ ವರ್ಣವ್ಯವಸ್ಥೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ‘ಸಂಕರ’ದ ಕುರಿತಾದ ಕೃಷ್ಣ ಮಾತು ಯಥಾವತ್ತಾಗಿ ಅರ್ಥವಾದೀತು. ‘ಮಾಡುವ ಕರ್ಮದಲ್ಲಿ ಸಾಂಕರ್ಯವುಂಟಾಗದಂತೆ ನಿರ್ಲಿಪ್ತಿಯಿಂದಿರಬೇಕು’ ಎನ್ನುವ ಮುಖ್ಯಸಂದೇಶವನ್ನು ನಾವಿಲ್ಲಿ ಅರಿಯಬೇಕಾದದ್ದು ಮುಖ್ಯ.

ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply