‘ಇದು ನನ್ನ ಅನಾದಿಯ ಉಪದೇಶ’

‘ಇದು ನನ್ನ ಅನಾದಿಯ ಉಪದೇಶ’

‘ಕಾಮವೆಂಬ ಹಿತಶತ್ರುವನ್ನು ಗೆದ್ದು, ಆತ್ಮದಲ್ಲಿ ನೆಲೆ ನಿಲ್ಲಲು ಯತ್ನಿಸು’ ಎನ್ನುತ್ತ ಗೆಲುವಿನ ಪರಿಯನ್ನು ಅರ್ಜುನನಿಗೆ ಕೃಷ್ಣನು ಮನಗಾಣಿಸುತ್ತಿದ್ದುದನ್ನು ನೋಡಿದ್ದೇವೆ. 4ನೇ ಅಧ್ಯಾಯದ ಪ್ರಾರಂಭದಲ್ಲಿ ಹೀಗೆನ್ನುತ್ತಾನೆ; ‘ಹೇ ಅರ್ಜುನ! ಈ ಅವ್ಯಯವಾದ ಯೋಗವನ್ನು ನಾನು ಬಹಳ ಹಿಂದೆ ವಿವಸ್ವತನಿಗೆ (ಸೂರ್ಯನಿಗೆ) ತಿಳಿಸಿದ್ದೆ. ಆತನು ಅದನ್ನು ಮಗನಾದ ಮನುವಿಗೆ, ಆ ಮನುವು ಮಗನಾದ ಇಕ್ಷಾವಕುವಿಗೂ ಅರುಹಿದ್ದರು. ಹೀಗೆ ರಾಜರ್ಷಿಗಳ ಪರಂಪರೆಯಲ್ಲಿ ಈ ಯೋಗದ ಜ್ಞಾನ ಹರಿದುಬಂದಿದೆ, ಕಾಲಾಂತರದಲ್ಲಿ ಮರೆಯಾಗಿದೆ. ಪುರಾತನವೂ ರಹಸ್ಯವೂ ಉತ್ತಮವೂ ಆದ ಅದೇ ಯೋಗವನ್ನು ಪ್ರಿಯಸಖನೂ ಭಕ್ತನೂ ಆದ ನಿನಗೆ ತಿಳಿಸಿದ್ದೇನೆ.’(4: 1-3)
ನಮ್ಮಲ್ಲಿ ಏಳಬಹುದಾದ ಪ್ರಶ್ನೆಯೇ ಅರ್ಜುನನಲ್ಲೂ ಎದ್ದಿತು. ‘ಕೃಷ್ಣ! ನಿನ್ನ ಜನ್ಮವೇ (ಜನ್ಮಕಾಲ) ಬೇರೆ, ಸೂರ್ಯನ ಜನ್ಮವೇ ಬೇರೆ. ನೀನು ಸೂರ್ಯನಿಗೆ ಆದಿಯಲ್ಲಿ ಈ ಯೋಗವನ್ನು ಹೇಗೆ ಹೇಳಲು ಸಾಧ್ಯ?’ (4-4) ಕೃಷ್ಣ ಉತ್ತರಿಸುತ್ತಾನೆ; ‘ನನಗೂ ನಿನಗೂ ಹಲವು ಜನ್ಮಗಳೇ ಆಗಿಹೋಗಿವೆ. ನೀನು ಅದನ್ನೆಲ್ಲ ಮರೆತಿದ್ದೀಯೆ, ಆದರೆ ನನಗೆ ಎಲ್ಲ ತಿಳಿದಿದೆ. ನಾನು ಜನ್ಮವಿಲ್ಲದ ಆತ್ಮಸ್ವರೂಪಿಯೂ, ಈಶ್ವರನೂ ಆಗಿದ್ದೇನೆ. ಮಾಯೆಯೆಂಬ ಶಕ್ತಿಯನ್ನು ಬಳಸಿ ನನ್ನದೇ ಪ್ರಕೃತಿಶಕ್ತಿಯ ಮೂಲಕ ಸಂಭವಿಸುತ್ತೇನೆ.’ (4-5)
ಈ ಮಾತಿನಲ್ಲಿ ಕೃಷ್ಣನು ತನ್ನ ದಿವ್ಯಸ್ವರೂಪದ ರಹಸ್ಯದ ಇಣುಕುನೋಟ ತೋರಿಸುತ್ತಿದ್ದಾನಲ್ಲದೆ, ‘ಮಿತಿಗಳಲ್ಲಿ ಆಲೋಚಿಸುವ ಮತಿಗೆ ಸೃಷ್ಟಿಗತಿಯ ಅಮಿತ ಸ್ವರೂಪವು ಅರ್ಥವಾಗದು’ ಎಂಬುದನ್ನೂ ಸೂಚಿಸುತ್ತಿದ್ದಾನೆ. ದೇಹ ಹಾಗೂ ತತ್ಸಂಬಂಧಿಯಾದ ಜೀವನಾನುಭವಗಳ ಚೌಕಟ್ಟಿನಲ್ಲಷ್ಟೇ ಆಲೋಚಿಸುವ ಮತಿಯು ಈ ಜನ್ಮದ ಸ್ವರೂಪ, ಸಂಬಂಧ, ಅನುಭವಗಳನ್ನಷ್ಟೇ ಗ್ರಹಿಸಬಲ್ಲುದಾಗಿರುತ್ತದೆ. ಅದರ ಆಧಾರದ ಮೇಲೆಯೇ ಎಲ್ಲವನ್ನೂ ವಿಚಾರ ಮಾಡುತ್ತದೆ. ಅಷ್ಟೇ ಅಲ್ಲದೆ, ಈ ಜನ್ಮದ ವಿವರಗಳನ್ನೂ ಸಂಪೂರ್ಣವಾಗಿ ಸ್ಮರಿಸಲಾರದು, ಗ್ರಹಿಸಲಾರದು! ಹೀಗಿರುವಾಗ ಹಿಂದಿನ ಅಸಂಖ್ಯ ಜನ್ಮ-ಅನುಭವಗಳ ನೆನಪು ಅದಕ್ಕಿರಲು ಸಾಧ್ಯವಿಲ್ಲ. ಅರ್ಜುನನೂ ಗೊಂದಲಪಡುತ್ತಿದ್ದಾನೆ! ‘ಹೆಚ್ಚುಕಡಿಮೆ ತನ್ನ ಸಮವಯಸ್ಕನಾದ ಈ ಕೃಷ್ಣನು ಸಹಸ್ರಮಾನಗಳ ಹಿಂದೆ ಸೂರ್ಯನಿಗೆ ಬೋಧಿಸಲು ಹೇಗೆ ಸಾಧ್ಯ?’ ಎಂದು. ಸರ್ವಜ್ಞನಾದ ಕೃಷ್ಣ ಸ್ಪಷ್ಟಪಡಿಸುತ್ತಾನೆ; ‘ನಿನಗೂ ನನಗೂ ಹಲವು ಜನ್ಮಗಳೇ ಆಗಿಹೋಗಿವೆ. ನಿನಗೆ ನೆನಪಿಲ್ಲ, ಅದಕ್ಕೇ ಈ ಗೊಂದಲ. ಆದರೆ ನನಗೆ ಎಲ್ಲ ನೆನಪಿದೆ’ (4, 5)
ದೇಹವನ್ನಷ್ಟೇ ‘ತಾನು’ ಎಂದು ಭ್ರಮಿಸುವ ಮತಿಮನಗಳು ಆಯಾ ಜನ್ಮದ ಮಿತಿಯಲ್ಲಿ ಸಿಲುಕಿ, ಏಕದೇಶೀಯವಾಗಿ ಆಲೋಚಿಸುತ್ತವೆ. ಒಂದೇ ಜನ್ಮದ ದೇಹ – ಆಗುಹೋಗುಗಳನ್ನಷ್ಟೇ ಸರ್ವಸ್ವ ಎಂದು ಭ್ರಮಿಸಿ, ಮಮಕಾರದ ಗೋಡೆಗಳನ್ನು ಕಟ್ಟಿಕೊಳ್ಳುತ್ತವೆ. ಆತ್ಮದ ಅಸೀಮವೂ ಅವಿನಾಶಿಯೂ ಆದ ಸ್ವರೂಪವನ್ನು ಊಹಿಸಲೂ ಆರವು. ವ್ಯಕ್ತಿಯು ಬಟ್ಟೆ ಬದಲಾಯಿಸುವಂತೆ, ಅವಿನಾಶಿಯಾದ ಆತ್ಮವು ದೇಹವನ್ನು ಬದಲಾಯಿಸುತ್ತದೆ. ಗೋಡೆಗಳಿಲ್ಲದೆ ದೇಶ-ಕಾಲಾತೀತವಾಗಿ ಆಲೋಚಿಸುವ ಮತಿಗೆ ಮಾತ್ರ ಸಮಷ್ಟಿದರ್ಶನ ಸಾಧ್ಯ. ಯೋಗೀಶ್ವರನಾದ ಕೃಷ್ಣನ ವಿಚಾರದ ಪರಿಧಿಯು ಒಂದು ಜನ್ಮಕ್ಕೆ ಸೀಮಿತವಾಗಿರದೇ, ಜನ್ಮಜನ್ಮಗಳ ವೃತ್ತಾಂತಗಳನ್ನೂ ಸಾರ್ವತ್ರಿಕ ಸಾರ್ವಕಾಲಿಕ ಧರ್ವಧರ್ಮಗಳನ್ನು ಗ್ರಹಿಸಬಲ್ಲುದಾಗಿದೆ. ಅರ್ಜುನನಿಗಾದರೋ ‘ತಾನು ಪಾಂಡುಪುತ್ರ’ ಎಂಬ ಅಸ್ಮಿತೆಯನ್ನು ಮೀರಿ ನಿಲ್ಲಲು ಸಾಧ್ಯವಾಗದೆ, ಹೀಗೆ ಕೇಳುತ್ತಿದ್ದಾನೆ. ಆತ್ಮತತ್ವವಾಗಲಿ, ಜೀವನದ ಪರಮರಹಸ್ಯಗಳಾಗಲಿ ತೆರೆದ ಪುಸ್ತಕದಂತೆ ನಮ್ಮ ಮುಂದಿದ್ದರೂ, ನಾವು ಅದನ್ನು ಯಥಾವತ್ತಾಗಿ ಗ್ರಹಿಸಲಾಗದಿರುವುದಕ್ಕೆ ಈ ‘ಗೋಡೆ’ಗಳೇ ಕಾರಣ. ‘ನಮ್ಮ ಮತಿಯು ಆನಂತ್ಯದಲ್ಲಿ ವಿಸ್ತರಿಸಲಿ’ ಎಂಬ ಸುಂದರ ಪ್ರಾರ್ಥನೆಯನ್ನು ಕುವೆಂಪು ಹೀಗೆ ಒಕ್ಕಣಿಸಿದ್ದಾರೆ;
ಓ ನನ್ನ ಚೇತನ, ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ | ನಾಮಕೋಟಿಗಳನು ಮೀಟಿ | ಎದೆಯ ಬಿರಿಯೆ ಭಾವದೀಟಿ || ಓ ನನ್ನ ||
ನೂರು ಮತದ ಹೊಟ್ಟ ತೂರಿ | ಎಲ್ಲ ತತ್ತ್ವದೆಲ್ಲೆ ಮೀರಿ | ನಿರ್ದಿಗಂತವಾಗಿ ಏರಿ || ಓ ನನ್ನ ||
ಅನಂತ ತಾನ್ ಅನಂತವಾಗಿ | ಆಗುತಿಹನೆ ನಿತ್ಯಯೋಗಿ | ಅನಂತ ನೀ ಅನಂತವಾಗು | ಆಗು ಆಗು ಆಗು ಆಗು || ಓ ನನ್ನ ||

ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply