ಸಾಧಕರು ಸಾಧಿಸುತ್ತಿರುತ್ತಾರೆ, ಉಳಿದವರು ದೂರುತ್ತಿರುತ್ತಾರೆ!

ಸಾಧಕರು ಸಾಧಿಸುತ್ತಿರುತ್ತಾರೆ, ಉಳಿದವರು ದೂರುತ್ತಿರುತ್ತಾರೆ!

ನಮ್ಮಲ್ಲಿ ಒಂದು ಮನಸ್ಥಿತಿ ಇದೆ. ಅದೇನೆಂದರೆ, ನಾವು ಬಡವರಾದರೆ ಸಾಧನೆ ಮಾಡುವುದಕ್ಕಾಗುವುದಿಲ್ಲ ಎಂದು. ಅದು ಯಾವ ಕೋನದಿಂದ ಸರಿ ಎಂದು ನನಗೆ ಈಗಲೂ ತಿಳಿಯುತ್ತಿಲ್ಲ. ಸಾಧನೆ ಮಾಡಿ ಎಂದರೆ, ಪ್ರಭೂಜೀ ನಾವು ತುಂಬಾ ಬಡವರು, ನಾವ್ ಏನ್ ಮಾಡಕ್ಕಾಗತ್ತೆ ಹೇಳಿ? ಚೆನ್ನಾಗಿ ಓದಿ ಎಲ್ಲಾದ್ರೂ, ಯಾರದ್ದಾದ್ರೂ ಕೈ ಕೆಳಗೆ ಕೆಲಸ ಮಾಡಬೇಕು ಅಷ್ಟೇ ಎನ್ನುತ್ತಾರೆ. ನಾನು ಇನ್ನೇನು ವಾದ ಮಾಡುವುದು ಎಂದು ನಕ್ಕು ಸುಮ್ಮನಾಗುತ್ತೇನೆ. ನನ್ನ ಬಳಿ ಅಂತ ಅಸಹಾಯಕತೆ ತೋಡಿಕೊಂಡ ಹಾಗೂ ಅದೇ ಮನಸ್ಥಿತಿ ಇರುವ ಕೆಲವು ಮಂದಿಗೆ ನಾನು ಒಬ್ಬರ ಬಗ್ಗೆ ಹೇಳಬೇಕೆಂದಿದ್ದೇನೆ. ಅವರ ಹೆಸರು ಜಿಮ್ ಕ್ಯಾರಿ. ಕೇಳಿದ್ದೀರಾ ಇವರ ಹೆಸರನ್ನು? ಇಲ್ಲವಾ? ಇವರು ಹಾಲಿವುಡ್ ನ ಪ್ರಸಿದ್ಧ ನಟ. ಅತ್ಯಂತ ಶ್ರೀಮಂತ ನಟರಲ್ಲಿ ಇವರೂ ಒಬ್ಬರು. ಇವರ ಬಗ್ಗೆ ನಾನು ನಿಮಗೆ ಇವತ್ತು ಹೇಳಬೇಕೆಂದಿದ್ದೇನೆ. ಅಪ್ಪ-ಅಮ್ಮ, ಅಣ್ಣ-ತಮ್ಮ ಇರುವ ಜಿಮ್ ಕ್ಯಾರಿಯದ್ದು ಒಂದು ಸಣ್ಣ ಕುಟುಂಬ. ಆದರೆ ಏಳು ಜನ್ಮಕ್ಕೂ ಆಗುವಷ್ಟು ಬಡಸ್ತಿಕೆ ಇತ್ತು. ಸಾಕೆಂದರೆ ಸರಿ ಎಂದು ಮುಂದೆ ಹೋಗುವುದಕ್ಕೆ ಕಷ್ಟ ಎನ್ನುವುದು ಬಾಣಸಿಗ ಅಲ್ಲ ನೋಡಿ. ಅನುಭವಿಸಲೇ ಬೇಕು. ನಮ್ಮ ಭಾರತದ ಮೆಂಟಾಲಿಟಿಯಲ್ಲಿ ಹೇಳೋದಾದ್ರೆ, ಜಿಮ್ ಕ್ಯಾರಿ ಕುಟುಂಬದಲ್ಲಿ ಒಬ್ಬರಾದ ಮೇಲೆ ಒಬ್ಬರ ಮೇಲೆ ಸಾಡೇ ಸಾತ್ ಶನಿ ಇದ್ದಿರಬಹುದು.
ಅಪ್ಪ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅಪ್ಪ ತರುವ ಒಂದೆರಡು ಡಾಲರ್ ನಲ್ಲಿ ಮನೆ ಮಂದಿಯೆಲ್ಲ ತಿನ್ನುವುದಾದರೂ ಹೇಗೆ? ಹಾಗಾಗಿ ಜಿಮ್ ಕ್ಯಾರಿ ಸಹ ಶಾಲೆ ಮುಗಿಸಿಕೊಂಡು ಮತ್ತೆ ಎಂಟು ತಾಸು ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದ. ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗುತ್ತಿದ್ದುದರಿಂದ ಮಲಗಿ ಬಿಡುತ್ತಿದ್ದ. ಮಾರನೇ ದಿನ ಬೇಗ ಏಳುವುದರಿಂದ ನಿದ್ದೆ ಸಾಕಾಗದೇ ಶಾಲೆಯಲ್ಲಿ ಶಿಕ್ಷಕರು ಏನು ಹೇಳುತ್ತಾರೆಂಬುದೇ ಜಿಮ್ ಕ್ಯಾರಿಗೆ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಎಲ್ಲ ಪರೀಕ್ಷೆಯಲ್ಲೂ ಫೇಲ್ ಆಗುತ್ತಿದ್ದ. ಯಾಕೆ ಹೀಗೆ ಆಗುತ್ತಿದೆ ಎಂದು ವೈದ್ಯರ ಬಳಿ ಹುಡುಗನನ್ನು ಕರೆದುಕೊಂಡು ಹೋದಾಗ ತಿಳಿಯಿತು, ಜಿಮ್ ಕ್ಯಾರಿಗೆ ಡಿಸ್ಲೆಕ್ಸಿಯಾ ಎಂಬ ಕಾಯಿಲೆ ಇದೆ. ಈ ಕಾಯಿಲೆ ಇದ್ದವರಿಗೆ ಓದು ತಲೆಗೆ ಹತ್ತುವುದೇ ಇಲ್ಲ. ಆದರೆ ಬಾಕಿ ಎಲ್ಲದರಲ್ಲೂ ಅವರು ಚುರುಕಾಗಿರುತ್ತಾರೆ. ಹಾಗೆಯೇ ಜಿಮ್ ಇತರೆ ವಿಷಯಗಳಲ್ಲಿ ಬಹಳ ಚುರುಕಾಗಿದ್ದ. ಶಾಲೆಯಿಂದ ಬಂಡ ಕೂಡಲೇ ಕನ್ನಡಿ ಮುಂದೆ ನಿಂತು, ಟೀಚರ್ ಹೇಗೆ ಮಾತಾಡುತ್ತಾರೆ, ತನ್ನ ಸ್ನೇಹಿತರು ಹೇಗೆ ನಡೆಯುತ್ತಾರೆ, ಮಾತಾಡುತ್ತಾರೆ ಎಂದೆಲ್ಲ ನಟನೆ ಮಾಡುತ್ತಿದ್ದ.
ಅದರಲ್ಲಿ ಆತನಿಗೆ ಏನೋ ಒಂಥರಾ ಖುಷಿ. ಈ ಡಿಸ್ಲೆಕ್ಸಿಯಾ ಕಾಯಿಲೆಯಿಂದ ದಡ್ಡನಾಗಿದ್ದರಿಂದ ಯಾವ ಸ್ನೇಹಿತರ ಜತೆಯೂ ಆತ ಮಾತನಾಡುತ್ತಿರಲಿಲ್ಲ. ಮನೆಗೆ ಬರುವುದು, ಕೆಲಸಕ್ಕೆ ಹೋಗುವುದು, ಮಾರನೇ ದಿನ ಮತ್ತೆ ಶಾಲೆಗೆ ಹೋಗುವುದು. ಇಷ್ಟೇ ಜಿಮ್ ಕ್ಯಾರಿಯ ಬಾಲ್ಯ. ಅರ್ಥಾತ್ ಕ್ಯಾರಿಯ ಬಾಲ್ಯವನ್ನು ಬಡತನ ಮತ್ತು ಕಾಯಿಲೆ ಕಸಿದುಕೊಂಡಿತ್ತು. ಸಮಸ್ಯೆಗಳಿಂದ ಬೇಸತ್ತ ಆತನಿಗೆ ೧೬ನೇ ವರ್ಷಕ್ಕೆ ಶಾಲೆ ಸಾಕು ಸಾಕಾಯಿತು. ಓದಿಗೆ ಆಗಲೇ ಆತ ಗುಡ್ ಬೈ ಹೇಳಿಬಿಟ್ಟ. ಈ ಕುಟುಂಬದ ಬಗ್ಗೆ ಸುತ್ತಮುತ್ತಲಿನ ಜನ ಒಬ್ಬೊಬ್ಬರು ಒಂದೊಂದು ಥರ ಮಾತಾಡುವುದಕ್ಕೆ ಶುರು ಮಾಡಿದರು. ಎಷ್ಟು ದಿನ ಎಂದು ಇಂಥ ಟೀಕೆ, ಕುಹಕಗಳನ್ನು ಸಹಿಸಿಕೊಳ್ಳುತ್ತಾರೆ ಹೇಳಿ? ಒಂದು ದಿನ ಲಾಟು ಪೂತು ಕಾರನ್ನೇರಿ ಕೆನಡಾಗೆ ಬಂದರು. ಆದರೆ ಈ ಬಡವರಿಗೆ ಮನೆ ಕೊಡುವವರು ಯಾರು ಹೇಳಿ?
ಎಲ್ಲೂ ಮನೆ ಸಿಗದೇ ಇದ್ದಿದ್ದಕೆ ಮತ್ತು ಒಂದು ವೇಳೆ ಮನೆ ಸಿಕ್ಕರೂ ಬಾಡಿಗೆಗೆ ಕೊಡಲು ಹಣವಿಲ್ಲದೇ ಇದ್ದಿದ್ದಕ್ಕೆ, ಜಿಮ್ ಕ್ಯಾರಿ ಕುಟುಂಬ ತಮ್ಮ ಹಳೆಯ ವೋಕ್ಸ್ ವ್ಯಾಗನ್ ಕಾರ್ ಅನ್ನು ಮೈದಾನವೊಂದರಲ್ಲಿ ಪಾರ್ಕ್ ಮಾಡಿ, ೮ ತಿಂಗಳು ಕಾರಲ್ಲೇ ವಾಸ ಮಾಡಿದರು! ಇಷ್ಟಾದರೂ ಕ್ಯಾರಿ ತನ್ನ ಪ್ರಯತ್ನ ಮಾತ್ರ ಬಿಟ್ಟಿಲ್ಲ. ಯುಕ್ ಯುಕ್ ಕಾಮಿಡಿ ಕ್ಲಬ್ ಗೆ ಸೇರಿಕೊಂಡು ತನ್ನ ಮೊದಲ ಪ್ರದರ್ಶನ ನೀಡಿದ. ಬೇರೆ ಬೇರೆ ಕ್ಲಬ್ ಗಳು ಈತನ ಪ್ರತಿಭೆಯನ್ನು ಗುರುತಿಸಿ ಕರೆಯುವುದಕ್ಕೆ ಶುರು ಮಾಡಿತ್ತು. ಕೆಲವರು ಹಣ ಕೊಡದೇ ಸತಾಯಿಸುತ್ತಿದ್ದದ್ದೂ ಉಂಟು. ಜಿಮ್ ಕ್ಯಾರಿ ಯಾವತ್ತೂ ತಾನು ಬಡವ, ತನ್ನಿಂದ ಏನೂ ಆಗುವುದಿಲ್ಲ ಎಂದು ಹೇಳಲೇ ಇಲ್ಲ ತಾನು ಏನಾದ್ರೂ ಸಾಧನೆ ಮಾಡೇ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಆತನದ್ದು. ಇನ್ನೂ ಹಾಲಿವುಡ್ ಗೆ ಪ್ರವೇಶ ಪಡೆಯದ ಸಮಯದಲ್ಲಿ, ಕಾರ್ ನಲ್ಲಿ ಒಂದು ಲಾಂಗ್ ಡ್ರೈವ್ ಹೋಗಿ, ಎತ್ತರದ ಪ್ರದೇಶದಲ್ಲಿ ನಿಂತು ‘ಎಲ್ಲರೂ ನನ್ನ ಜತೆ ಕೆಲಸ ಮಾಡಬೇಕೆಂದಿದ್ದಾರೆ. ನಾನು ನಿಜವಾಗಿಯೂ ಒಬ್ಬ ಒಳ್ಳೆ ನಟ. ನನ್ನ ಬಳಿ ಎಲ್ಲ ಮಾದರಿಯ ಸಿನಿಮಾ ಆಫರ್ ಗಳಿವೆ’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದರು. ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ನಿಧಾನವಾಗಿ ಆಫರ್ ಗಳು ಹುಡುಕಿಕೊಂಡು ಬರಲು ಶುರುವಾಯಿತು. ಆಗ ಮತ್ತದೇ ಜಾಗಕ್ಕೆ ಹೋಗಿ ನಿಂತು ‘ಅಬ್ಬಾ… ನನಗೆ ಒಳ್ಳೊಳ್ಳೆ ಆಫರ್ ಗಳು ಬರುತ್ತಿವೆ. ಇನ್ನೂ ಸುಮಾರು ಜನ ನನಗಾಗಿ ಕಾದು ನಿಂತಿದ್ದಾರೆ’ ಎಂದು ಜೋರಾಗಿ ಹೇಳಿ ಸಮಾಧಾನ ಮಾಡಿಕೊಳ್ಳುತ್ತಿದ್ದರು. ಆದರೆ ಸುಮಾರು ೧೯೯೦ರ ವೇಳೆ ಜಿಮ್ ಕ್ಯಾರಿ ಜೀವನ ಮತ್ತೆ ಇಳಿಮುಖವಾಗುತ್ತಾ ಬಂತು. ತಾನು ಯಾವಾಗಲೂ ಹೋಗುವ ಜಾಗಕ್ಕೆ ಹೋಗಿ ಕುಳಿತು ಒಂದು ಚೆಕ್ ಬರೆಯುತ್ತಾರೆ. ಅರೇ, ದುಡ್ಡೇ ಇಲ್ಲ ಅಂತೀರ ಪ್ರಭುಜೀ.. ಆದ್ರೆ ಚೆಕ್ ಯಾರಿಗೆ ಬರೆಯುತ್ತಿದ್ದಾರೆ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿರಬೇಕಲ್ಲವೇ? ಹೌದು ಕ್ಯಾರಿ ಬಳಿ ಹಣವಿರಲಿಲ್ಲ ನಿಜ. ಆದರೆ ಆತ್ಮವಿಶ್ವಾಸವಿತ್ತಲ್ಲ? ತಾನು ಚೆಕ್ ಬರೆಯುತ್ತಿರುವ ದಿನದಿಂದ ೫ ವರ್ಷ ಮುಂದಿನ ದಿನಾಂಕಕ್ಕೆ ತನಗೇ ತಾನೇ ಹತ್ತು ಮಿಲಿಯನ್ ಡಾಲರ್ (೬೪ ಕೋಟಿ ರೂಪಾಯಿ) ಚೆಕ್ ಬರೆದುಕೊಂಡು, ‘ಸಿನಿಮಾದಲ್ಲಿ ನಟಿಸಿದ್ದಕ್ಕೆ ಸಂಭಾವನೆ’ ಎಂದು ಬರೆದು ೧೯೯೫ ಎಂಬ ದಿನಾಂಕ ಬರೆದು ಜೇಬಲ್ಲಿ ಇಟ್ಟುಕೊಂಡರು. ಅಂದರೆ, ಐದು ವರ್ಷ ಮುಂದಕ್ಕೆ ಯಾರೋ ತನಗೇ ಸಂಭಾವನೆ ಕೊಟ್ಟಂತೆ ಬರೆದುಕೊಂಡಿದ್ದಾಗಿತ್ತು.
ಪರ್ಸ್ ನಲ್ಲಿರುವ ಹತ್ತು ಮಿಲಿಯನ್ ಚೆಕ್ಕನ್ನು ದಿನ ನೋಡುವುದು, ಏನೋ ಯೋಚನೆ ಮಾಡುವುದು, ಮಡಚಿಡುವುದು. ಇಷ್ಟೇ ಮಾಡುತ್ತಿದ್ದರು. ಬಹುಶಃ ಜಿಮ್ ಕ್ಯಾರಿಗೆ ಸಾಡೇ ಸಾತಿ ಶನಿ ಕೊನೆಯ ಹಂತದಲ್ಲಿ ಇದ್ದ ಅನ್ನಿಸುತ್ತೆ. ಒಳ್ಳೆಯ ಆಫರ್ ಗಳು ಬಂದವು. ಜಿಮ್ ಕ್ಯಾರಿ ನಟನೆಯ ಕಾಮಿಡಿ ಚಿತ್ರಗಳಾದ Ace Ventura : Pet Detective, The Mask, and Dumb & Dumber ಎಲ್ಲವೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡವು. ಇದಾದ ಮೇಲೆ ಜಿಮ್ ಕ್ಯಾರಿಯ ಸಂಭಾವನೆ ಹತ್ತು ಮಿಲಿಯನ್ ಅಲ್ಲ, ಇಪ್ಪತ್ತು ಮಿಲಿಯನ್ ಗೆ ಅವರನ್ನು ಸಿನಿಮಾಕ್ಕೆ ನಿರ್ಮಾಪಕರು ಬುಕ್ ಮಾಡಲು ಕ್ಯೂ ನಿಂತರು.
ಕೇವಲ ಐದೇ ವರ್ಷಗಳ ಹಿಂದೆ ಒಂದು ಡಾಲರ್ ಸಹ ಇಲ್ಲದಿರುವಾಗ ತನಗೆ ತಾನೇ ಚೆಕ್ ಬರೆದುಕೊಂಡಿದ್ದೆಲ್ಲಿ? ಚಿತ್ರ ಹಿಟ್ ಆದ ಮೇಲೆ ಕೇವಲ ಒಂದು ಸಿನಿಮಾಕ್ಕೆ ಅಷ್ಟೊಂದು ಹಣ ಕೊಡಲು ಬರುತ್ತಿರುವ ನಿರ್ಮಾಪಕರೆಲ್ಲಿ? ಶಾಲೆಗೆ ಹೋಗಿ ಕಲಿಯಲಾಗದೇ ಅರ್ಧಕ್ಕೆ ಬಿಟ್ಟು ಬಂದ ಜಿಮ್ ಕ್ಯಾರಿ ಜೀವನದಲ್ಲಿ ಗೆದ್ದಿದ್ದರು. ಈ ಸೌಭಾಗ್ಯವನ್ನು ನೋಡಲು ಅವರ ತಂದೆಗೆ ಆಗಲಿಲ್ಲ. ೧೯೯೪ರಲ್ಲಿ ಅವರು ತೀರಿಕೊಂಡರು. ಜಿಮ್ ಕ್ಯಾರಿ ತಾನು ಬರೆದುಕೊಂಡಿದ್ದ ಹತ್ತು ಮಿಲಿಯನ್ ಡಾಲರ್ ಚೆಕ್ಕನ್ನು ತಂದೆಯ ಶವದ ಮೇಲೆ ಇಟ್ಟು ಹೂತುಬಿಟ್ಟರು. ಹೀಗಿದೆ ನೋಡಿ ಜಿಮ್ ಕ್ಯಾರಿ ಜೀವನದ ಕತೆ. ಹೇಳಿ ಇವರಿಗಿಂತ ಯಾರು ಕಷ್ಟ ಅನುಭವಿಸಿದ್ದೀರಿ? ವಿದ್ಯೆ ಹತ್ತುತ್ತಿಲ್ಲ, ಕೈಯಲ್ಲಿ ಕಾಸಿಲ್ಲ, ಎಂಟೆಂಟು ತಾಸು ದುಡಿಯುವುದರ ಜತೆ ಜತೆಗೆ ಬಡತನ ಬೇರೆ. ಇಷ್ಟಾದರೂ ಜಿಮ್ ಕ್ಯಾರಿ ಇಂದು ಹಾಲಿವುಡ್ ನಲ್ಲಿ ಬಹುಬೇಡಿಕೆಯ ಹಾಸ್ಯನಟ. ಎಲ್ಲರೂ ಹೇಳ್ತಾರಲ್ಲ, ಹಾಸ್ಯ ಮಾಡುವವನ ಹಿಂದೆ ಅಪಾರವಾದ ನೋವಿರುತ್ತದೆ ಎಂದು. ಅದು ಜಿಮ್ ಕ್ಯಾರಿ ಜೀವನಕ್ಕೆ ಬಹಳ ಸೂಕ್ತ ಎನಿಸುತ್ತದೆ.
ಜಿಮ್ ತಾನು ದಡ್ಡ ಎಂದುಕೊಂಡು ಸುಮ್ಮನಿದ್ದಿದ್ದರೆ, ಇಷ್ಟೆಲ್ಲಾ ಸಾಧನೆ ಮಾಡಲಾಗುತ್ತಿತ್ತಾ? ತನ್ನ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡು, ಹೆಜ್ಜೆ ಹೆಜ್ಜೆಗೂ ಕನಸು ಕಾಣುತ್ತಾ, ಅದನ್ನು ನನಸು ಮಾಡಲು ಪ್ರಯತ್ನ ಪಡುತ್ತಾ ಮುಂದೆ ಸಾಗಿದ್ದಕ್ಕೇ ಅಲ್ಲವೇ ಇಷ್ಟು ಸಾಧನೆ ಮಾಡಲಾಗಿದ್ದು? ಕ್ಯಾರಿ ಜೀವನವನ್ನು ನೋಡಿದ ಮೇಲೆ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶೆಗಳು, ನಾವೇಕೆ ಅವರ ಹಾಗೆ ಯೋಚಿಸುತ್ತಿಲ್ಲ? ಯಾವಾಗಲೂ ಏಕೆ ದೂರುತ್ತಾ ಕುಳಿತಿರುತ್ತೇವೆ? ಇದೇ ನಮಗೂ, ಸಾಧಕರಿಗೂ ಇರುವ ವ್ಯತ್ಯಾಸ. ಸಾಧಕರು ಸಾಧಿಸುತ್ತಿರುತ್ತಾರೆ, ಉಳಿದವರು ನಮ್ಮಲ್ಲಿ ಅದಿಲ್ಲ, ಇದಿಲ್ಲ ಎಂದು ದೂರುತ್ತಿರುತ್ತಾರೆ. ನೀವ್ಯಾರು ಎಂದು ನೀವೇ ನಿರ್ಧರಿಸಿ.
ಕೃಪೆ : ಅಂತರ್ಜಾಲ

Leave a Reply