ತೆರೆದ ಬಾಗಿಲಿನ ವರ್ಣವ್ಯವಸ್ಥೆ

ತೆರೆದ ಬಾಗಿಲಿನ ವರ್ಣವ್ಯವಸ್ಥೆ

ವರ್ಣವು ‘ಜಾತಿ’ಯಾಗಿರದೆ ಮುಕ್ತವ್ಯವಸ್ಥೆಯಾಗಿತ್ತು ಎನ್ನುವುದಕ್ಕೆ ಇತಿಹಾಸದ ಮತ್ತಷ್ಟು ಉದಾಹರಣೆಗಳನ್ನು ನೋಡೋಣ.

ಮತ್ಯ್ಸಕುಲದ ಮೂಲದವರು ಎನ್ನಲಾದ ನಾಥಸಂಪ್ರದಾಯದ ಮಹಾಸಿದ್ಧರೂ ಪುರಾಣಪ್ರಸಿದ್ಧರೂ ಆದ ಗೋರಕ್ಷನಾಥರನ್ನು ಬ್ರಾಹ್ಮದ ಅತ್ಯುನ್ನತ ಸ್ಥಿತಿಗೇರಿದವರೆಂದು ಎಲ್ಲ ಕುಲಪಂಗಡಗಳವರೂ ಅತ್ಯುಚ್ಚ ಗೌರವದಿಂದ ಕಾಣುತ್ತಾರೆ. ಕ್ರಿ.ಶ. 13ನೇ ಶತಮಾನದ ಹಿನ್ನೆಲೆಯಲ್ಲಿ ಕನ್ನಡಿಗರಾದ ಗೊಲ್ಲರ ವಂಶದ ಸೇವುಣರು ಕ್ಷಾತ್ರಪ್ರವೃತ್ತಿಯಿಂದ ರಾಜ್ಯ ಕಟ್ಟಿ, ಬಲಯುತ ಆಳ್ವಿಕೆ ನಡೆಸಿದವರು. ಪರಕೀಯ ಆಕ್ರಮಣಕಾರರನ್ನು ತಡೆಹಿಡಿದರಲ್ಲದೆ ಹಲವು ಸಾಹಿತ್ಯ, ಕಾವ್ಯ, ಕಲಾ ಪ್ರಕಲ್ಪಗಳನ್ನು ಪೋಷಿಸಿದವರಿವರು.

ಬ್ರಾಹ್ಮಣವರ್ಣದ ಬಗೆಗೆ ಹಲವು ಅಪಾರ್ಥಗಳನ್ನು ಮೂಡಿಸಲಾಗಿದೆ. ಅಧ್ಯಯನ-ಅಧ್ಯಾಪನ-ಯಜನ-ಯಾಜನ ಹಾಗೂ ವೇದಸಂರಕ್ಷಣೆಯ ಒಲವನ್ನೂ, ತ್ಯಾಗಕ್ಕೆ ಸಿದ್ಧವಾಗಿರುವ ನಿಃಸ್ವಾರ್ಥ ಮನೋಭಾವವನ್ನು ಹೊಂದಿದವರಿಗಾಗಿ ಇದ್ದ ವೃತ್ತಿವಲಯವೇ ‘ಬ್ರಾಹ್ಮಣವರ್ಣ’. ಲೋಕದಲ್ಲಿರುತ್ತಲೂ ಲೋಕೋತ್ತರದ ಜ್ಞಾನ-ಸಿದ್ಧಿಗಳತ್ತ ವಾಲುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವವರು ಬ್ರಾಹ್ಮಣರೆನಿಸುತ್ತಿದ್ದರು. ‘ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ವಿಪ್ರ ಉಚ್ಯತೇ’ (ಕರ್ಮದಿಂದ ಮಾತ್ರವೇ ವಿಪ್ರನಾಗುವುದೇ ಹೊರತು ಹುಟ್ಟಿನಿಂದಲ್ಲ) ಎನ್ನುವ ಪ್ರಸಿದ್ಧ ಉಕ್ತಿಯನ್ನು ಬ್ರಾಹ್ಮಣರೇ ಮುಕ್ತವಾಗಿ ಬಳಸುವುದನ್ನು ಕಂಡಾಗ, ತತ್ವತಃ ‘ಗುಣಕರ್ಮಗಳಿಂದಲೇ ಬ್ರಾಹ್ಮಣ್ಯ’ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಬ್ರಾಹ್ಮಣ್ಯವು ಮೂಲತಃ ಹುಟ್ಟಿನಿಂದಾಗುವ ‘ಪಂಗಡ’ವಾಗಿರಲಿಲ್ಲ. ಹಲವು ಕಾಲಘಟ್ಟಗಳಲ್ಲಿ ಬೇರೆ ಬೇರೆ ಕಸುಬಿನವರು ಬ್ರಾಹ್ಮಣ್ಯದ ಗುಣಕರ್ಮಗಳನ್ನು ಮೈಗೂಡಿಸಿಕೊಂಡರು ಎನ್ನುವುದನ್ನು ಇತಿಹಾಸದ ಪುಟಗಳಲ್ಲಿ ನೋಡಬೇಕಿದೆ.

ಸೂರತ್, ಕರಾವಳಿ ಹಾಗೂ ಶೇನವೀ ಬ್ರಾಹ್ಮಣರಲ್ಲಿ ಕೆಲವರು ಮೂಲತಃ ಮತ್ಸ್ಯಾರಿಕೆಯ ವೃತ್ತಿಯಿದ್ದವರು. ಪರಶುರಾಮರು ಅವರಲ್ಲಿ ಯೋಗ್ಯತೆಯನ್ನು ಗುರುತಿಸಿ ಬ್ರಾಹ್ಮಣ್ಯವನ್ನಿತ್ತರೆಂಬ ಕಥೆಯಿದೆ. ಕಶ್ಮೀರದ ಅವರ್ಣೀಯ ರಾಜಕುಮಾರಿಯಾದ ಭಾಂಡ್ಲೀ ಎಂಬವಳನ್ನು ವರಿಸಿದ ಬ್ರಾಹ್ಮಣನಿಗೆ ಹುಟ್ಟಿದ ವಂಶದವರು ‘ದಕೌತ್ ಬ್ರಾಹ್ಮಣರು’. ಕ್ಷತ್ರಿಯ ತಂದೆ ಹಾಗೂ ಬೇಡರ ಕುಲದ ತಾಯಿಯನ್ನು ಹೊಂದಿದ್ದ ‘ಕಾಯವ್ಯ’ ಎಂಬವನು ಜ್ಞಾನದಿಂದ ಬ್ರಾಹ್ಮಣ್ಯವನ್ನು ಪಡೆದವನು. ಬಂಗಾಳದ ‘ವ್ಯಾಸೋಕ್ತ ಬ್ರಾಹ್ಮಣರೂ’ ಮೂಲತಃ ಮತ್ಸ್ಯುಲದವರೇ. ಇವರು ಕೈವರ್ತ ಹಾಗೂ ಮಹಿಶ್ಯ ಎಂಬ ಕುಲದವರುಗಳಿಗೆ ‘ಸೇವೆ’ಯ ಶಿಷ್ಟಾಚಾರವನ್ನು ಮುಂದುವರೆಸಿದ್ದರು. ಬಂಗಾಳದ ಮಧ್ಯಶ್ರೇಣೀ ಬ್ರಾಹ್ಮಣರು ಇಂದಿಗೂ ಕುಂಬಾರರು, ಕ್ಷೌರಿಕರು ಹಾಗೂ ಬಡಗಿಕುಲದವರಾದ ‘ನೊಬೊಶಾಖಾ’ ಪಂಗಡದವರ ‘ಸೇವೆ’ ಶಿಷ್ಟಾಚಾರವನ್ನು ಉಳಿಸಿಕೊಂಡಿದ್ದಾರೆ. ಅಂತೆಯೇ ರಾಪಾಲಿ ಬ್ರಾಹ್ಮಣರು, ಮಾಲೀ ಬ್ರಾಹ್ಮಣರು, ಚಾಮರ್ವಾ ಬ್ರಾಹ್ಮಣರು ಅವರವರ ಮೂಲ ಕುಲದವರತ್ತ ಗೌರವ ತೋರಲು ‘ಸೇವೆ’ಯ ಶಿಷ್ಟಾಚಾರಗಳನ್ನು ಪಾಲಿಸುತ್ತಾರೆ. ‘ಬ್ರಾಹ್ಮಣ್ಯ’ದ ವಲಯಕ್ಕೆ ಬಂದಮೇಲೂ ಹುಟ್ಟಿದ ಮೂಲಗಳನ್ನು ಗೌರವಿಸುವ ಈ ಸಂಪ್ರದಾಯ ಎಷ್ಟು ಅರ್ಥಪೂರ್ಣ! ಎಲ್ಲ ಲೌಕಿಕರೂ ವಿದ್ಯೆ, ತ್ಯಾಗ ಮತ್ತು ತಪಸ್ಸುಗಳ ಮೂಲಕ ಕ್ರಮೇಣ ಲೋಕೋತ್ತರ ಬ್ರಾಹ್ಮಣ್ಯವನ್ನು ಸಿದ್ಧಿಸಿಕೊಳ್ಳುವ ಪ್ರೇರಣೆ ಮೂಲದಲ್ಲಿತ್ತು ಎನ್ನುವುದು ತಿಳಿಯುತ್ತದೆ. ವೈಶ್ಯ, ವತ್ಸ, ಮತಂಗ, ಶಾಬರ, ಜಾಬಾಲ ಮುಂತಾದ ಬ್ರಾಹ್ಮಣ ಗೋತ್ರನಾಮಗಳನ್ನು ಪದಶಃ ಅರ್ಥೈಸಿದರೆ, ಪ್ರಾಯಶಃ ಅವು ತಮ್ಮ ಮೂಲಪುರುಷನ ಕುಲವೃತ್ತಿಯನ್ನೇ (ವ್ಯಾಪಾರ, ಗೋಪಾಲನ, ವನ್ಯವೃತ್ತಿಗಳು, ದಾಸ್ಯ ಮುಂತಾದುವನ್ನು) ಸೂಚಿಸುತ್ತವೆ.

12ನೇ ಶತಮಾನದ ಕರ್ನಾಟಕದ ಹೊಯ್ಸಳರ ರಾಣಿ ಶಾಂತಲೆ ಹಾಗೂ ಅವಳ ಪತಿ ಬಿಟ್ಟಿದೇವರು (ವಿಷ್ಣುವರ್ಧನ) ಜೈನಕುಲದವರಾದರೂ ಶ್ರೀವೈಷ್ಣವ ಗುರುಗಳಾದ ರಾಮಾನುಜರಲ್ಲಿ ಅಮಿತ ಭಕ್ತಿಗೌರವಗಳನ್ನಿಟ್ಟವರು. ಅವೈದಿಕವೆನಿಸುವ ಜೈನಮತದವರಾದರೂ ಈ ಅನುಪಮ ದಂಪತಿ ವೈದಿಕಮೂಲದ ಶೈವ ವೈಷ್ಣವಾದಿ ಮತಗಳನ್ನೂ ಪೋಷಿಸಿದವರು, ಹಲವು ವಿಶ್ವಪ್ರಸಿದ್ಧ ದೇವಾಲಯಗಳನ್ನು ಕಟ್ಟಿಸಿದವರು. 16ನೇ ಶತಮಾನದ ಕೊನೆಯಲ್ಲಿ ವಿರಕ್ತಿಗೆ ಹೆಸರಾದ ದಿಗಂಬರ ಜೈನರ ಕುಲದಲ್ಲಿ ಹುಟ್ಟಿದವಳಾದರೂ, ಉಲ್ಲಾಳದ ರಾಣಿಯಾಗಿ ಸಿಂಹಾಸನವೇರಿದವಳು ರಾಣಿ ಅಬ್ಬಕ್ಕ. ಅಪ್ರತಿಮ ಕ್ಷಾತ್ರತೇಜಸ್ಸನ್ನು ಮೆರೆದು ಪೋರ್ಚುಗೀಸರನ್ನು ಹೊಡೆದೋಡಿಸಿದ ‘ಅಭಯರಾಣಿ’.

ತಂಜಾವೂರಿನ ಶುಕವಾಣಿ (ಮಧುರವಾಣಿ) ಎಂಬ ದೇವದಾಸಿಯು, ಅಸಾಧಾರಣ ಪಾಂಡಿತ್ಯ-ಪ್ರತಿಭೆ-ರಾಜನಿಷ್ಠೆಗಳಿಂದ ಮಾನ್ಯಳೆನಿಸಿ, 1600ರ ಕಾಲದಿಂದ ತಂಜಾವೂರಿನಲ್ಲಿ ಆಳ್ವಿಕೆ ನಡೆಸಿದ ರಾಜಾ ರಘುನಾಥನಾಯಕನ ಕೈಹಿಡಿದು ಮಹಾರಾಣಿಯಾದವಳು. ಬಂಗಾಳದ ರಾಜಾ ಲಕ್ಷ್ಮಣಸೇನನ ಆಧ್ಯಾತ್ಮಿಕ ಗುರುವು ‘ದೋಯಿ’ ಎನ್ನುವ ನೇಯ್ಗೆಯವನಾಗಿದ್ದ. ಜ್ಞಾನವು ವರ್ಣಲಿಂಗಾತೀತ ಎನ್ನುವ ಪ್ರಜ್ಞೆಯು ಆ ಸಮಾಜದಲ್ಲಿದ್ದದ್ದು ಇದರಿಂದಲೇ ತಿಳಿಯುವುದಿಲ್ಲವೆ?

ಹುಟ್ಟಿನಲ್ಲಿ ಬ್ರಾಹ್ಮಣರಾದರೂ 1718ರಲ್ಲಿ ಪ್ರಾರಂಭವಾದ ಅಧಿಕಾರದ ಚುಕ್ಕಾಣಿ ಹಿಡಿದು ಶೌರ್ಯಸಾಹಸಗಳ ಕ್ಷಾತ್ರವನ್ನು ಮೆರೆದವರು ಮಹಾರಾಷ್ಟ್ರದ ‘ಪೇಶ್ವೆ’ರಾಜವಂಶದವರು. 1835ರಲ್ಲಿ ಬ್ರಾಹ್ಮಣಕುಲದಲ್ಲಿ ಹುಟ್ಟಿ, ಅಮೋಘ ಶೌರ್ಯದ ಕ್ಷಾತ್ರವನ್ನು ಮೆರೆದು ಬ್ರಿಟಿಷರಿಗೆ ನೀರು ಕುಡಿಸಿದ ವೀರಯೋಧೆ ಝಾನ್ಸಿರಾಣಿ ಲಕ್ಷ್ಮೀಬಾಯಿ! 1854ರಲ್ಲಿ ಕೇರಳದಲ್ಲಿ ಹುಟ್ಟಿ, ಅಧ್ಯಾತ್ಮದೆತ್ತರಕ್ಕೇರಿ, ಸಮಾಜಸೇವೆಗಾಗಿ ಜೀವನವನ್ನೇ ತೇಯ್ದ ಕೇರಳದ ಮಹಾತ್ಮ ನಾರಾಯಣಗುರುವನ್ನು ಎಲ್ಲ ವರ್ಣದವರೂ ಪರಮಾದರದಿಂದ ಕಾಣುತ್ತಾರೆ. ಮತ್ತಷ್ಟು ಉದಾಹರಣೆಗಳನ್ನು ನೋಡೋಣ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply