ದೇಶವಾಸಿ ಜೀವನ ದರ್ಶನ

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದರೆ, ವಾಸ್ತವ ಸ್ಥಿತಿಯೇ ಬೇರೆ. ಇಂತಹ ವ್ಯವಸ್ಥೆಯನ್ನು ಮತ್ತು ಆ ವ್ಯವಸ್ಥೆಯೊಳಗಿನ ಕಟ್ಟುಪಾಡುಗಳನ್ನು ವ್ಯಂಗ್ಯವಾಗಿ, ಒಮ್ಮೊಮ್ಮೆ ಗಂಭೀರವಾಗಿ ಮತ್ತೊಮ್ಮೆ ಚಿಂತನೆಗೆ ಹಚ್ಚುವಂತೆ ಕವಿ ಮಹಾದೇವ ಕುಕ್ಕರಹಳ್ಳಿ ಅವರು ‘ಪ್ರಜಾಪ್ರಭುತ್ವದ ಶವಯಾತ್ರೆ’ ಕೃತಿಯಲ್ಲಿ ದೇಶವಾಸಿಗಳ ಜೀವನ ದರ್ಶನವನ್ನು ಪದ್ಯದ ರೂಪದಲ್ಲಿ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ. ಕ್ರೂರ ವ್ಯವಸ್ಥೆಯ ವಿಕೃತ ಘಟನೆಗಳಿಂದ ಬಹುದೊಡ್ಡ ಮಾನ, ಪ್ರಾಣ ಹಾನಿಗಳಾಗಿವೆ. ಇಂತಹ ಕೃತ್ಯಗಳನ್ನು ಅಣಕಿಸುತ್ತಲೇ ವ್ಯವಸ್ಥೆಯ ಪ್ರಶ್ನಿಸುವ ಪ್ರಯತ್ನ ಈ ಬರಹದಲ್ಲಿದೆ. ದಲಿತರ ಮೇಲಿನ ಶೋಷಣೆ, ಜಾತಿ ನಿಂದನೆ, ಧರ್ಮಧರ್ಮಗಳ ನಡುವಿನ ಕಿತ್ತಾಟ, ಅತ್ಯಾಚಾರ ಇತ್ಯಾದಿ ಸಮಾಜದಲ್ಲಿನ ಈ ವ್ಯವಸ್ಥೆಯಲ್ಲಿ, ‘ಇದ್ದದ್ದನ್ನ ಇದ್ದ ಹಾಗೆ ಹೇಳಿದರೆ ಕಲ್ ತೊಗೊಂಡ್ ಹೊಡಿತಾರೆ’ ಎಂದು ವ್ಯಂಗ್ಯವಾಗಿ ಹೇಳಿದರೂ ಅದು ನೂರಕ್ಕೆ ನೂರು ಸತ್ಯ. ಬುದ್ಧ, ಬಸವ, ಗಾಂಧಿ ಯಾರಾದ್ರೂ ಆಗಿರಿ ನೀವಿಲ್ಲಿ ಗೊಂತಿಗೆ ಕಟ್ಟಿದ ಹಸುಗಳು ಎಂದು ಹೇಳುತ್ತಾ ಸ್ವಂತಿಕೆಯು ಹತ್ಯೆಯಾದ ಬಗೆಯನ್ನು ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ಮಡೆಸ್ನಾನ, ಅಣ್ಣ ಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹ ಮತ್ತು ಇಡೀ ದೇಶವೇ ತಲೆ ತಗ್ಗಿಸಿದ ನಿರ್ಭಯ ಅತ್ಯಾಚಾರ ಘಟನೆಗಳು ಸಂಕಟಗಳಿಂದ ಪದ್ಯಗಳಾಗಿ ಹೊರಹೊಮ್ಮಿವೆ. ಇವೆಲ್ಲವೂ ಸಮಾಜಕ್ಕೆ ಅಂಟಿದ ಕಳಂಕದಂತೆ, ರಕ್ತ ಮಾಸಿದರೂ ನೆನಪು ಮಾಸದಂತೆ. ಇಂತಹ ಸನ್ನಿವೇಶಗಳನ್ನು ಓದುವಾಗ ಎಂಥವರಿಗೂ ಅಂತರಾಳದಲ್ಲಿ ವ್ಯವಸ್ಥೆಯ ವಿರುದ್ಧ ಅಸಹ್ಯ, ರೌದ್ರತೆ ಹುಟ್ಟುವುದು ಸಹಜ. ಅಷ್ಟರಮಟ್ಟಿಗೆ ಈ ಕೃತಿ ಮತ್ತೆ ಮತ್ತೆ ಓದಿಸಿಕೊಳ್ಳಲು ಶಸಕ್ತವಾಗಿದೆ.

courtsey:prajavani.net

https://www.prajavani.net/artculture/book-review/jeevana-darshana-675040.html

Leave a Reply