ಅ-ಭಯ..

(ಇದು ನನ್ನ ಅನುವಾದದ ಮತ್ತೊಂದು ಕವನ.ಕಳೆದ ವರ್ಷ ಗೆಳತಿ ರಾಧಾ ಕುಲಕರ್ಣಿ ಮುಂಬೈಯಿಂದ ಅನುವಾದಿಸಲೆಂದೇ ಕಳುಹಿಸಿದ್ದರು…ಅನುವಾದಿಸಿದ್ದೆ.. ಅಕ್ಟೋಬರ್-19ರಂದು ( ಇಂದು) ಇದು ನನಗೆ ನಿಜವಾಗಿಯೂ ಅಭಯಗೀತೆ..)

ಅ-ಭಯ..

ಸಗ್ಗದಲ್ಲಿಯೇ ಕುಳಿತು
ನಿನ್ನನ್ನು ನೋಡುತಿಹೆ..
ಹಿಗ್ಗುವೆನು..ಕುಗ್ಗುವೆನು ನಿನ್ನ ಜೊತೆಗೆ..
ನಿನ್ನಿಂದ ನಾನೆಂದೂ
ದೂರ ಹೋಗಿಲ್ಲೆಂದು
ಸಂಜ್ಞೆಗಳ ಕಳುಹುತಿಹೆ ನಿನ್ನ ಬಳಿಗೆ…

ನೀನು ನಕ್ಕಾಗೊಮ್ಮೆ
ನಾನೂನು ನಗುತಲಿಹೆ
ಮಲಗಿರಲು ಪಕ್ಕದಲೆ ಬಂದುಬಿಡುವೆ…
ಯಾವುದೇ ಕಾರಣಕೆ
ಕಣ್ಣು ಹನಿಗೂಡಿದೊಡೆ
ಎನ್ನ ತೋಳ್ಗಳ ಬಳಸಿ ಬಂಧಿಸಿಡುವೆ…

ಒಂದಿಲ್ಲ ಒಂದುದಿನ
ನಾನು ಬರುವೆನು ಎಂದು
ನೀನು ಕಾಯುವದೆನಗೆ ಮೊದಲೆ ಗೊತ್ತು…
ನೀನೆಂದೂ ಏಕಾಕಿ
ಅಲ್ಲ,ಜೊತೆಯಲೆ ಇರುವೆ
ಇದ ತಿಳಿಸಬಯಸುವೆನು ಮೂರು ಹೊತ್ತು…

ನೀನಿಲ್ಲದಾ ಬಾಳು
ನನಗೇಕೆ ಬೇಕೆಂದು
ಯಾವತ್ತೂ ತರಬೇಡ ಮನದ ಒಳಗೆ…
ಇಲ್ಲಿ, ಈ ಸಗ್ಗದಲಿ
ನಾನು ಸುಖದಿಂದಿರುವೆ
ಬಂದಾಗ ತೋರಿಸುವೆ ನನ್ನ ಬಳಿಗೆ….

ನಿನಗೆ ದಕ್ಕಿದ ಬಾಳು
ನಿನಗಿತ್ತ ಬಳುವಳಿ
ಮನಸಾರೆ ಬದುಕಿ ಬಾ ನಗುನಗುತಲಿ…
ನಿನ್ನ ಪ್ರತಿ ಉಸಿರಲ್ಲು
ನನ್ನದೂ ಇದೆಯಂದು
ಮತ್ತೊಮ್ಮೆ ಬದುಕುವೆನು ಹೊಸ ಹುರುಪಲಿ..

( ಕನ್ನಡ ರೂಪ: ಶ್ರೀಮತಿ,ಕೃಷ್ಣಾ ,ಕೌಲಗಿ)

Leave a Reply