ನಮ್ಮ ಬಗ್ಗೆ

ಮೊದಲ ಸಲ ಪೂರ್ಣಚಂದ್ರ ತೇಜಸ್ವಿ ಅವರ ಕಥಾ ಸಂಕಲನ “ಪರಿಸರದ ಕಥೆ” ಓದಿದಾಗ ಕಥೆಯ ಭಾಗವಾಗಿ ಮೈಮರೆತೆ, ಆದರೆ ಒಂದು ವಿಚಾರ ಮನಸ್ಸಿಗೆ ಮುಳ್ಳಿನಂತೆ ಚುಚ್ಚಿತು…ನಮ್ಮ ಮಕ್ಕಳು ಇಂತಹ ಅಮೂಲ್ಯ ಪುಸ್ತಕ ಓದಬಹುದೇ? ಕನ್ನಡ ಭಾಷೆ ನಮ್ಮ ಮುಂದಿನ ಪೀಳಿಗೆಗೆ ನಮ್ಮತನದೊಂದಿಗೆ ಬೆಸೆಯಬಹುದೇ? ಇಂತಹ ಸಾಹಿತ್ಯ ಓದದೇ ಅವರು ಏನನ್ನು ಕಳೆದುಕೊಳ್ಳುತ್ತಾರೆ ಎಂದು ಹೇಗೆ ತಿಳಿಸಬಹುದು..ಇಂತಹ ವಿಚಾರ ನಮ್ಮೆಲ್ಲರಿಗೆ ಬರುವುದು ಅತಿಶಯೋಕ್ತಿಯೇನಲ್ಲ… ನಮ್ಮ ಭಾಷೆ, ನಮ್ಮ ಶ್ರೀಮಂತ ಸಾಹಿತ್ಯ ಈಗಿನ ಜಗದ ಬದಲಾವಣೆಯಲ್ಲಿ ಎಲ್ಲಿ ತಲುಪುವದೂ ಎಂದು ಪ್ರತಿಯೊಬ್ಬ ಕನ್ನಡಿಗನು ಚಿಂತಿಸುವ ವಿಚಾರವಾಗಿದೆ.

ನಾವು ಪ್ರೀತಿಸುವ ವ್ಯಕ್ತಿಗಳೊಂದಿಗೆ ನಮ್ಮ ಮಧುರ ಅನುಭವ ಹಂಚಿಕೊಳ್ಳುವುದು ನಮ್ಮೆಲ್ಲರ ಪ್ರಿಯ ಸಂಗತಿ, ಇದು ಸಮಾಜದ ಸಾಮಾನ್ಯ ನಿಯಮ. ಇದು ನಮ್ಮ ಮೇಲಿನ ಚಿಂತನೆಯ ತಳಹದಿ, ನಮ್ಮ ಕೆಲಸದ ಅಡಿಪಾಯ. ನಾವು ನಮ್ಮ ಯೋಜನೆಗಳೊಂದಿಗೆ ಸಾಧಿಸ ಹೊರಟಿರುವ ಗುರಿ.

ಮೂಕ ಸಂಸ್ಥೆಯು “ವಿವಿಡ್ಲಿಪಿ” ಮತ್ತು “ರೇಡಿಯೋ ಗಿರ್ಮಿಟ್” ಯೋಜನೆಗಳೊಂದಿಗೆ ನಮ್ಮ ಕನ್ನಡ ಭಾಷೆಯ, ನಮ್ಮ ಶ್ರೀಮಂತ ಸಾಹಿತ್ಯದ ಸುಂದರ, ಸೃಜನಾತ್ಮಕ ಹಾಗು ವೈಯಕ್ತಿಕ ಅಭಿವ್ಯಕ್ತ ಕೃತಿಗಳನ್ನು ಡಿಜಿಟಲ್ ಅಂದರೆ ಗಣೀಕೃತ ಮಾದರಿಯಲ್ಲಿ ನಮ್ಮ ಪ್ರಿಯ ಓದುಗರಿಗೆ ಮತ್ತು ಮುಂದಿನ ಪೀಳಿಗೆಗೆ ತರುತ್ತಿದ್ದೇವೆ. ಕೃತಿಗಳು ಸಾಹಿತ್ಯ (ಪುಸ್ತಕ), ಸಂಗೀತ, ಕಲೆ, ನಾಟಕ, ಚಲನಚಿತ್ರ ಅಥವಾ ಬೇರೆ ಯಾವುದೇ ಮಾದರಿಯಲ್ಲಿ ಇರಬಹುದು.

ಕನ್ನಡ ಭಾಷೆ, ಸಂಗೀತ, ಕಲೆ, ನಾಟಕ, ಸಂಸ್ಕೃತಿ ಪ್ರೇಮಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿರಬಹುದು, ಅವರನ್ನು ಕನ್ನಡ ನಾಡಿನೊಂದಿಗೆ ಬೆಸೆಯುವದೇ ನಮ್ಮ ಉದ್ದೇಶ. ಅವರು ತಮ್ಮ ಜೀವನದ ಗುರಿಗಾಗಿ ದೇಶ ವಿದೇಶ ಸುತ್ತುವಾಗ ನಮ್ಮ ನಾಡಿನ- ಸಿರಿಗನ್ನಡ ನಾಡಿನ ಅದ್ಭುತ, ಸಮಾಯಾತೀತ, ಅಮೂಲ್ಯ ಕೃತಿಗಳು ಅವರಿಗೆ ತಲುಪುವಂತೆ ಮಾಡುವದು ನಮ್ಮ ಗುರಿ.

ಎಲ್ಲಾದರೂ ಇರಿ, ಎಂತಾದರು ಇರಿ… ಎಂದೆಂದಿಗೂ ಕನ್ನಡ ಓದಿರಿ, ಕೇಳಿರಿ, ನೋಡಿರಿ, ನಮ್ಮತನದೊಂದಿಗೆ ಜೇವನದ ಪ್ರತಿ ಕ್ಷಣ ಆನಂದದ ಅನುಭೂತಿ ಪಡಿಯಿರಿ.