ಅಮ್ಮಾ ಎಂದರೆ…!
( ಹ್ಯಾಪಿ ಬರ್ತ್ ಡೇ ಅಮ್ಮಾ!)
ನಮ್ಮ ಅಮ್ಮ ಲೀಲಾ ಮೂರ್ತಿಯವರ 84 ನೇ ಜನ್ಮದಿನ ಇಂದು, ಅವರ ಆಶೀರ್ವಾದಗಳು ನನ್ನ ಮೇಲಿದೆ. ನಾವು ಚೆನ್ನೈನಲ್ಲಿ, ಅಮ್ಮ ಬೆಂಗಳೂರಲ್ಲಿ ತಮ್ಮನ ಮನೆಯಲ್ಲಿ. 6 ತಿಂಗಳ ಮೇಲಾಯಿತು ದರ್ಶನವಿಲ್ಲ. ಮೊಬೈಲಿನಲ್ಲೇ ಸಂಭಾಷಣೆ.
ನನ್ನ ಅಮ್ಮ ಮೊದಲಿಂದಲೂ ತಾಯಿ ಮಮತೆ ಪ್ರೀತಿಯೊಂದಿಗೆ ನನಗೆ ಸಾಹಿತ್ಯಾಸಕ್ತಿಯನ್ನೂ ಹುಟ್ಟಿನಿಂದಲೇ ಉಣಬಡಿಸಿದ್ದಾರೆ.
ನಾವು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಗಳಾಗಿ 25 ವರ್ಷ ಕಳೆದೆವು . ಆಗ 1970-80 ರ ದಶಕದಲ್ಲಿ ನಾನು ಶಾಲಾ- ಕಾಲೇಜು ವಿದ್ಯಾರ್ಥಿ. ಮಲ್ಲೇಶ್ವರಂ ಸರ್ಕಲ್ ಬಳಿ ಚಿಕ್ಕ ಬಾಡಿಗೆ ಮನೆಯಲ್ಲಿ ಅಪ್ಪ ಒಬ್ಬರೇ ಕೆಲಸದಲ್ಲಿದ್ದು ನಾವು ಮೂರು ಮಕ್ಕಳು ಮತ್ತು ಅಜ್ಜಿ ಎಲ್ಲರೂ ಜೊತೆಯಲ್ಲೇ ಇದ್ದೆವು. ಅಪ್ಪ ಆಗ ಬಿ ಇ ಎಲ್ ನಲ್ಲಿ ನೌಕರಿಯಲ್ಲಿದ್ದು ಗಾಂಧಿಬಜಾರ್, ತರಂಗ ಮುಂತಾದ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಅಪ್ಪ ಅಮ್ಮ ಇಬ್ಬರಿಗೂ ಕನ್ನಡ ಸಾಹಿತ್ಯಾಸಕ್ತಿ ಮತ್ತು ಆಗೆಲ್ಲಾ ಲಘು ಸಂಗೀತ ಪ್ರೇಮ ( ಮೈಸೂರು ಅನಂತಸ್ವಾಮಿ ಕಚೇರಿಗಳು) ನಮ್ಮ ಮನೆಯಲ್ಲಿ ಸಹಜ ಪ್ರವೃತ್ತಿಯಾಗಿ ಬೆಳೆದುಬಂದಿತ್ತು. ಕನ್ನಡಪ್ರಭ ಪ್ರಜಾವಾಣಿ ಪೇಪರ್ ಸಹಾ ಮನೆಗೆ ಬರುತಿತ್ತು. ಆ ಕಡೆ ಲೇಖಕಿ ಎ ಪಂಕಜಾ ಮತ್ತು ಎನ್ ಪಂಕಜಾ ಮನೆ, ಈ ಕಡೆ ತಿರುಗಿದರೆ ಕವಿ ಜಿ ಪಿ ರಾಜರತ್ನಂ, ಇನ್ನೊಂದೆಡೆ ಅರಳುಮಲ್ಲಿಗೆ ಪಾರ್ಥಸಾರಥಿ, ಹೀಗೆ ಕನ್ನಡ ಸಾಹಿತ್ಯದ ಕಂಪು ಪಸರಿಸಿದ್ದ ಅದ್ಭುತ ಕ್ಷೇತ್ರ ಅದು.
ಅಮ್ಮನಿಂದ ನನಗೂ ಕಾದಂಬರಿ ಓದುವ ಹವ್ಯಾಸ ಅಂಟಿಕೊಂಡಿತು.
ನಗರ ಕೇಂದ್ರ ಗ್ರಂಥಾಲಯದ ಮಲ್ಲೇಶ್ವರಂ ಶಾಖೆಯ ಫಿಕ್ಷನ್ ಸೆಕ್ಷನ್ ಇಬ್ಬರೂ ಸೇರಿ ಖಾಲಿ ಮಾಡಿದ್ದೇವೇನೋ.. ಅನಂತರ ರಾಜಾಜಿನಗರ ಶಾಖೆಗೂ ಲಗ್ಗೆ ಹಾಕಿದ್ದೆವು. ಅಷ್ಟು ಬಿಡದೇ ಓದುತ್ತಿದ್ದೆವು, ಎರವಲು ಎರಡು ಪುಸ್ತಕ ಎರಡು ವಾರಕ್ಕೆ ಕೊಟ್ಟರೆ ಒಂದೇ ವಾರಕ್ಕೆ ವಾಪಸ್. ಅಮ್ಮ ಹೇಗೆ ಅಷ್ಟು ದೊಡ್ಡ ಸಂಸಾರವನ್ನು ನಿಭಾಯಿಸುತ್ತಾ ನಾವು ಮೂರು ಮಕ್ಕಳನ್ನೂ ಓದಿಸುತ್ತಾ ಸಾಹಿತ್ಯ ಓದುವುದನ್ನೂ ಬಿಡದೇ ಹೇಗೆ ಉಳಿಸಿಕೊಂಡಿದ್ದರೋ ನನಗೆ ಇಂದು ಆಶ್ಚರ್ಯವಾಗುತ್ತದೆ.
ನಾವು ಓದಿದ್ದ ಪ್ರಮುಖ ಲೇಖಕರೆಂದರೆ ಶ್ರೀನಿವಾಸರಾವ್ ಕೊರಟಿ , ತ ಪು ವೆಂಕಟರಾಮ್, ಟಿಕೆ ರಾಮರಾವ್, ವಾಣಿ, ತ್ರಿವೇಣಿ, ಅನುಪಮಾ ನಿರಂಜನ, ಅಶ್ವಿನಿ ಹೀಗೆ ಆಗಿನ ಇನ್ನೂ ಹಲವು ಖ್ಯಾತನಾಮರು… ಅಪ್ಪ ಮಾತ್ರ ಕವನ, ಕಾವ್ಯ ಮತ್ತು ಆಧ್ಯಾತ್ಮಿಕ ಸಾಹಿತ್ಯಕ್ಕೆ ಒತ್ತುಕೊಟ್ಟವರು.
ಇದಲ್ಲದೇ ಪ್ರತಿವರ್ಷ ನಮ್ಮನ್ನು ಅಪ್ಪ ಅಮ್ಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಕರೆದೊಯ್ಯುತ್ತಿದ್ದರು. ಮೂರೂ ದಿನ ಇರುತ್ತಿದ್ದೆವು. ಹಾಸನ, ಶಿವಮೊಗ್ಗ ಮತ್ತು ಮಡಿಕೇರಿಯ ಸಮ್ಮೇಳನಗಳಿಗೆ ಹೋಗಿದ್ದು ನನಗೆ ನೆನಪಿದೆ. ಮನೆಯಲ್ಲೂ ಹಲವಾರು ಸಾಹಿತ್ಯ, ಆಧ್ಯಾತ್ಮದ ಪುಸ್ತಕಗಳಿದ್ದವು. ಆಗಿನ ಮುಕ್ಕಾಲು ವಾಸಿ ಎಲ್ಲಾ ಪ್ರಮುಖ ಕನ್ನಡ ಚಿತ್ರಗಳಿಗೂ ಕರೆದೊಯ್ದು ಸಿನೆಮಾಸಕ್ತಿ ಸಹಾ ಹುಟ್ಟುಹಾಕಿದರು.
ನಾನು ಶಾಲೆಯಲ್ಲಿ ಹಲವಾರು ಚರ್ಚಾಸ್ಪರ್ಧೆಗಳಲ್ಲಿ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಲೂ ಅಪ್ಪ, ಅಮ್ಮನೇ ನೇರ ಕಾರಣ.
ನಾನು ಆ ಕಾಲದಲ್ಲೇ ಶಂಕರ್ ಬುಕ್ ಬ್ಯಾಂಕ್, ಸಂಪಿಗೆ ರಸ್ತೆಯಿಂದ ಬಾಡಿಗೆಗೆ ತಂದು ಇಂಗ್ಲೀಷ್ ಪತ್ತೇದಾರಿ ಕಾದಂಬರಿಗಳ ಸಾಲು ಸಾಲೇ ಓದುತ್ತಿದ್ದೆ. ನನ್ನಿಂದ ಅಮ್ಮನೂ ಜೇಮ್ಸ್ ಹ್ಯಾಡ್ಲಿ ಚೇಸ್, ಆಲಿಸ್ಟೆರ್ ಮ್ಯಾಕ್ಲೀನ್ ಮುಂತಾದ ಪ್ರಖ್ಯಾತರ ಕಾದಂಬರಿಗಳನ್ನೂ ಓದಿದ್ದಾರೆ. ಅಮ್ಮ ಆ ಕಾಲದಲ್ಲೇ ಬಿ ಎ ಉತ್ತಮ ದರ್ಜೆಯಲ್ಲಿ ಮೈಸೂರಿನಲ್ಲಿ ಓದಿದವರು. ಕುವೆಂಪು ಅವರ ಲೆಕ್ಚರ್ಸ್ ಕೇಳಿದ್ದಾರೆ.
ಇದರ ನಡುವೆಯೂ ನಾವು ವಿದ್ಯೆಯಲ್ಲಿ, ಫಲಿತಾಂಶಗಳಲ್ಲಿ ಮೊದಲ ದರ್ಜೆಯಲ್ಲೇ ಇದ್ದೆವು. ಅದನ್ನು ಮಾತ್ರ ಬಲಿಗೊಡಲು ಬಿಡಲಿಲ್ಲ.
ಇದೆಲ್ಲಾ ಇಂತಾ ತಂದೆತಾಯಿಗಳ ಪೋಷಣೆಯಲ್ಲೇ ಪಡೆಯಲು ಸಾಧ್ಯ .ನಾವಲ್ಲದೇ ನನ್ನ ಮಗ ಚಿನ್ಮಯನನ್ನು ಸಹಾ ಬೆಂಗಳೂರಿನಲ್ಲಿ ಅವನು ನೌಕರಿಯಲ್ಲಿದ್ದಾಗ ಕೆಲವು ವರ್ಷಗಳ ಕೆಳಗೆ ಮನೆಯಲ್ಲೇ ನೋಡಿಕೊಂಡಿದ್ದಾರೆ.
ನನ್ನ ಎಲ್ಲಾ ಕತೆ ಕಾದಂಬರಿಯನ್ನೂ (2015 ರ ನಂತರ ಆರಂಭಿಸಿದ್ದು) ಅಮ್ಮ ಮೊದಲು ಓದಿದ್ದಾರೆ, ನನಗೆ ಪೂರ್ಣ ಪ್ರೋತ್ಸಾಹ ಕೊಟ್ಟಿದ್ದಾರೆ
ಅಮ್ಮನಿಗೆ ಈಗ ಇಳಿವಯಸ್ಸು, ಅವರು ನೋಡುತ್ತಿದ್ದ ಟಿವಿ ಧಾರಾವಾಹಿಗಳೂ ಕಡಿಮೆಯಾಗಿದೆ. ವಯೋಸಹಜವಾದ ನಾನಾ ಅನಾರೋಗ್ಯವಿದೆ. ಆದರೂ ನಮ್ಮೆಲ್ಲರ ಪಾಲಿಗೆ ಇನ್ನೂ ಅದೇ ಅನನ್ಯ ಸ್ಥಾನದಲ್ಲಿದ್ದಾರೆ. ಅವರನ್ನು ದೇವರು ಚೆನ್ನಾಗಿ ಪಾಲಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.