ಬಂದೇ ಬರತಾವ ಕಾಲಾ…..
ಅದೊಂದು ಕಾಲವಿತ್ತು.
ಅಪರೂಪಕ್ಕೆ ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ಹಿಂಬಾಲಿಸಿ ರಸ್ತೆಗಳಗುಂಟ ಓಡುವುದು, ಕಣ್ಣಿನ ಗುಡ್ಡೆ ಹೊರಬರುವಷ್ಟು ಅಗಲವಾಗಿ ತೆರೆದು ಯಾರಾದರೂ ಕಾಣುತ್ತಾರೆಯೇ ಎಂದು ನೋಡುವುದು, ಅಲ್ಲಿಂದ ಅಕಸ್ಮಾತ್ ಜಾರಿಬಿಟ್ಟರೆ ಎಂದು ಹೌಹಾರುವದು, ಹಾರಾಟ ಮುಗಿಸಿದ ನಂತರ ನಿಲುಗಡೆ ಎಲ್ಲಿ? ಹೇಗೇ? ಎಂದು ಕಲ್ಪನೆ ಮಾಡುವುದು, ಒಂದೇ ಎರಡೇ…
– ಬಾಲ್ಯದ ಹುಚ್ಚುಚ್ಚಾರಗಳು, ಹುಡುಗಾಟಗಳು…
ನಮ್ಮ ಹಳ್ಳಿಯ ಒಬ್ಬ ಹುಡುಗಿಯನ್ನು ಪರದೇಶಕ್ಕೆ ಹೋಗಿಬಂದ ಹುಡುಗನಿಗೆ ಮದುವೆ ಮಾಡಿ ಕೊಟ್ಟಾಗ ಊರಲ್ಲಿ ಜನಜಾತ್ರೆ ಸೇರಿತ್ತು, ಅವನ ದರ್ಶನ ಪಡೆದು ಪುನೀತರಾಗಲು. ಅವನನ್ನು ಹತ್ತಿರದಿಂದ ನೋಡಿ, ಅವನಿಗೂ ನಮ್ಮಂತೆಯೇ ಎರಡೇ ಕೈಗಳು, ಎರಡೇ ಕಾಲುಗಳು,- ಏನೂ ವ್ಯತ್ಯಾಸವೇ ಇಲ್ಲ
ಎಂದು ಗೊತ್ತಾದಾಗ ಆದ ನಿರಾಶೆ ಅಷ್ಟಿಷ್ಟಲ್ಲ…
ಮುಂದೆ ಒಂದಿಷ್ಟು ಊರು/ವಯಸ್ಸು/ ಲೋಕಜ್ಞಾನ (???) ಬೆಳೆದಂತೆ ಪರದೇಶಗಳ ಬಗ್ಗೆ ಕಲ್ಪನೆ/ ವಾಸ್ತವಗಳ , ಅಂತರ ಗೊತ್ತಾದಾಗ ನಮಗೂ ಒಂದು ಅವಕಾಶ ಸಿಕ್ಕಬಾರದೇ ಎಂಬ ಆಶೆ ಮೊಟ್ಟೆಯಿಡತೊಡಗಿತು. ಮಕ್ಕಳು ದೊಡ್ಡವರಾದರು, ಓದಿದರು, ಜಾಣರಾದರು, ಪರದೇಶಕ್ಕೂ ಹೊರಟು ನಿಂತರು. ಮಗ ಅಮೇರಿಕೆಗೆ, ಮಗಳು ಲಂಡನ್ ಗೆ… ಕಳಿಸುವಾಗಿನ ತಾಕಲಾಟದ್ದು ಮತ್ತೊಂದು ಅಧ್ಯಾಯ. ಅದು ತೊಂಬತ್ತರ ದಶಕ, ಈಗಿನಂತೆ ಮನೆಗಿಬ್ಬರು ಆಗ ಇನ್ನೂ ಹೋಗುತ್ತಿರಲಿಲ್ಲ. ಹಣ ಜೋಡಿಸುವ ಹೊಣೆಗಾರಿಕೆ ಮತ್ತೊಂದು ತಲೆಬೇನೆ… ಹೀಗಾಗಿ ಕಳಿಸುವವರಿಗೂ ಹೇಗೋ/ ಏನೋ/ಎಂತೋ ಗಾಬರಿ.
” ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಸಿಕ್ಕಿತು”- ಅವರು ಹೋಗಿಯೂ ಆಯಿತು. ಈಗ ನಾನೂ ಇಂಥದಕ್ಕೆಲ್ಲ ಅನಿವಾರ್ಯವಾಗಿ Update ಆಗಲೇಬೇಕಾಯಿತು, ಆದೆ. ಮುಂದೊಂದು ದಿನ ನನ್ನ pass port ಮಾಡಿಸಿದಾಗ ಮತ್ತೆ ಎದೆಯಲ್ಲಿ ಅವಲಕ್ಕಿ ಕುಟ್ಟುವುದು ಶುರುವಾಯಿತು.
ಅದನ್ನೂ ಗೆಲ್ಲಲೇಬೇಕಿತ್ತು, ಹೇಗೋ ಗೆದ್ದದ್ದೂ ಆಯ್ತು.
ಪರಿಣಾಮ East America, West America, London, Paris, Italy, Dubai, Singapore, Malaysia, Thiland, ಮುಂತಾಗಿ ಸುತ್ತಾಡಿದ್ದೂ ಆಯಿತು, ಕೆಲವೊಮ್ಮೆ ಒಬ್ಬಂಟಿಯಾಗಿ, ಕೆಲವೊಮ್ಮೆ ಮಕ್ಕಳು ಹಾಗೂ ಇತರರೊಂದಿಗೆ. ಆದರೆ ಬಾಲ್ಯದ ಮುಗ್ಧತೆ ಕಟ್ಟಿಕೊಟ್ಟ ಆ ನಿರ್ಮಲ ಆನಂದವನ್ನು ಅನುಭವಿಸಿದ ರೀತಿ ಮಾತ್ರ ಇಂದಿಗೂ ಅನನ್ಯ ಎಂದೇಕೆ ಅನಿಸುತ್ತದೆಯೋ!!! ಬಹುಶಃ
ಮತ್ತೆ ಬರಲಾರದೆಂದೇ ಇರಬೇಕು…
ಆಶ್ಚರ್ಯಕರ ಮಾತೆಂದರೆ, ನಾನು ಆಕಾಶದಲ್ಲಿ ಮೊದಮೊದಲು ಹಾರಾಡುವಾಗಲೆಲ್ಲ ನಾವು ಮಾಡುತ್ತಿದ್ದಂತೆಯೇ ಯಾರಾದರೂ ಮಕ್ಕಳು ಕೇಕೆ ಹಾಕುವುದು, ರಸ್ತೆಗಳಲ್ಲಿ ಓಡುವದು ಮಾಡುತ್ತಾರೆಯೇ ಎಂದು ಕಿಟಿಕಿಯಿಂದ ನೋಡಿದರೆ ಅವರೆಲ್ಲ ನಮ್ಮ ವಿಮಾನದಲ್ಲಿಯೇ ಅಲ್ಲಲ್ಲಿ ಕುಳಿತಿದ್ದು ಕಾಣಬೇಕೇ…!!!!!