ದ್ರೌಪದಿಯಿಂದ ಆಸೀಫಾ ವರೆಗೆ

ದ್ರೌಪದಿಯಿಂದ ಆಸೀಫಾ ವರೆಗೆ
ಹೆಣ್ಣು ಸಂಸಾರದ ಕಣ್ಣು… ಎಂದರು.. ಕಣ್ಣಿನ ಸ್ಥಾನ ಕೊಟ್ಟರು.. ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂದು ನಾರಿಯನ್ನು ದೇವರ ಸ್ಥಾನಕ್ಕೇರಿಸಿ ಪೂಜಿಸಿ ಎಂದೂ ಹೇಳಲಾಯಿತು. ಆದರೆ ನಾರಿಯನ್ನು ಕೊಂಡುತಂದ ವಸ್ತುವಿನಂತೆ ಮಾರಲಾಯಿತು.. ಕೊಳ್ಳಲಾಯಿತು… ಗುಲಾಮಳಂತೆ ನಡೆಸಿಕೊಂಡರು. ಧರ್ಮಾತ್ಮನೂ ಅವಳನ್ನು ಪಣಕ್ಕಿಟ್ಟ. ದುರುಳರು ಮಾನಹಾನಿಗೆ ಪ್ರಯತ್ನಿಸಿದರು. ಇತರ ಧರ್ಮ ಭೀರುಗಳಲ್ಲಿ ಒಬ್ಬ ಹುಟ್ಟುಗುರುಡ… ಇನ್ನುಳಿದವರು ಕಣ್ಣಿದ್ದೂ ಕುರುಡರು. ಧರ್ಮದ ನೆಪ ಹೇಳಿ ಮುಂದಿನ ದೃಶ್ಯಕ್ಕಾಗಿ ಮೈಯೆಲ್ಲಾ ಕಣ್ಣಾಗಿ ಕಾಯ್ದು ಕುಳಿತರು. ಧರ್ಮದ ಪ್ರಶ್ನೆ ಬಂದಾಗ ಒಂದೊಂದು ನೆಪ ಹೇಳಿ ತಪ್ಪಿಸಿಕೊಂಡರು. ಆದರೆ ದುರ್ಘಟನೆ ನಡೆಯುವುದು ಒಬ್ಬ ಪುರುಷೋತ್ತಮನಿಂದಾಗಿ ತಪ್ಪಿತು. ಈಗ ಅಂಥ ಪುರುಷೋತ್ತಮರಿದ್ದರೂ ಅವರಿಗೆ ಜೀವಬೆದರಿಕೆ, ಅವರ ಮನೆಯ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯದ ಬೆದರಿಕೆ… ಒಟ್ಟಿನಲ್ಲಿ ದುರುಳರ ಅಟ್ಟಹಾಸ ಮಿತಿ ಮೀರಿದೆ.
ಕೇವಲ ಒಬ್ಬ ಆಸೀಫಾ ಅಲ್ಲ, ಇಲ್ಲಿ ದಾಮಿನಿಯರೂ ಇದ್ದಾರೆ, ದಾನಮ್ಮನೂ ಇದ್ದಾರೆ, ಇಡೀ ಹೆಣ್ಣು ಜಾತಿಯೇ ಇಂಥ ನರರಾಕ್ಷಸರ ಕೈಗೆ ಸಿಲುಕಿ ನಲುಗಿದೆ. ಒಂದೊಂದು ಅತ್ಯಾಚಾರವಾದಾಗಲೂ ಎರಡು ದಿನ ಸುದ್ದಿಯಾಗುತ್ತದೆ. ಜಾತಿಯ ಬಣ್ಣ ಬಳಿಯಲಾಗುತ್ತದೆ. ಆಯಾ ಜಾತಿಯವರನ್ನು ಎತ್ತಿಕಟ್ಟಲಾಗುತ್ತದೆ. ಸುಡುವ ಮನೆಯ ಬೆಂಕಿಯಲ್ಲಿ ತಮ್ಮ ಹೂರಣ ಬೇಯಿಸಿಕೊಂಡು ಕಡುಬಿನ ಕನಸು ಕಾಣುತ್ತಾರೆ… ದೌರ್ಜನ್ಯ ನಡೆಯುವಾಗ ಅನುಭವಿಸುವ ಯಾತನೆ. ಮನೋವೇದನೆ ಜಾತಿವಾರು ಲೆಕ್ಕದಲ್ಲಿ ಹೆಚ್ಚು ಕಡಿಮೆಯಾಗುತ್ತದೆಯೇ? ಇದಂತೂ ಇನ್ನೂ ಘೋರ ದುರಂತ.
ಭಾರತ ಎತ್ತ ಸಾಗುತ್ತಿದೆ?
ಭಾರತದ ಅಷ್ಟೇ ಏಕೆ, ಇಡೀ ಪ್ರಪಂಚದ ಇತಿಹಾಸದ ಸಿಂಹಾವಲೋಕನ ಮಾಡಿದಾಗ ನಮ್ಮ ಗಮನಕ್ಕೆ ಬರುವ ಸಂಗತಿಯೆಂದರೆ ಅನಾದಿಕಾಲದಿಂದಲೂ ಮಹಿಳೆ ಶೋಷಿತಳೇ. ಅವಳಿಗೆ ಎಂದೂ ಒಂದು ಪ್ರತ್ಯೇಕ ವ್ಯಕ್ತಿತ್ವವನ್ನು ಇತ್ತಿಲ್ಲ. ಅವಳ ಘನತೆ ಗೌರವಗಳೆಲ್ಲ ಪುರುಷನ ಬೆನ್ನಹಿಂದೆಯೇ. ಪುರುಷ ಜಾತಿ ತನ್ನ ಗೆಲುವನ್ನು ವಿಜೃಂಭಿಸುವುದೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರದಲ್ಲಿಯೇ ಆಗಿತ್ತು. ಅದಕ್ಕೇ ಆಗಿನ ಕಾಲದಲ್ಲಿ ಸಹಗಮನ, ಜೋಹರ್ ಇತ್ಯಾದಿ ಬಂದವೇನೋ. ಆದರೆ ಕಾಲ ಬದಲಾದಂತೆ  ಈಗಂತೂ ರಾಜಕೀಯ ಪಕ್ಷಗಳು, ಅವರು ಗೆಲ್ಲಲು  ಬಳಸುವ ದಾಳಗಳಲ್ಲಿ ಹೆಣ್ಣಮೇಲಿನ ಅತ್ಯಾಚಾರವೂ ಸೇರಿದಂತಿದೆ. ಇದು ನೈತಿಕತೆಯ ಅಧಃಪತನವಲ್ಲದೆ ಇನ್ನೇನು?
ಅತ್ಯಾಚಾರಕ್ಕೆ ಕೊನೆಯೇ ಇಲ್ಲವೇ ಎಂಬ ಈ ಪ್ರಶ್ನೆಗೆ ಉತ್ತರ ನಮ್ಮಲ್ಲಿಯೆ ಇದೆ. ಹೆಣ್ಣು ಪ್ರತಿಭಟನೆ ಯ ಹೊಸ ಹೆಜ್ಜೆ ಇಡಬೇಕಾಗಿದೆ. ಯಾವುದೇ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಹೆಣ್ಣು ಜಾತಿಯೇ ಒಗ್ಗಟ್ಟಾಗಿ ಪ್ರತಿಭಟನೆ ಮಾಡಬೇಕು. ಅಲ್ಲಿ ದಲಿತ, ಮೇಲ್ವರ್ಗ, ಅಲ್ಪಸಂಖ್ಯಾತ ಎಂಬ ವಿಂಗಡನೆ ಬೇಡ.
ಪಾತಾಳಕ್ಕಿಳಿದಿರುವ ನೈತಿಕ ಅಧಃಪತನಕ್ಕೆ ಕಾರಣವೇನು…
ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ನಾವು ನಮ್ಮ ಮಕ್ಕಳನ್ನು ಬೆಳೆಸುವ ಪರಿ. ಗಂಡು ಮಕ್ಕಳು ಎಲ್ಲ ರೀತಿಯ ಸ್ವಾತಂತ್ರ್ಯಕ್ಕೂ ಅರ್ಹರು. ಗಂಡು ಮುತ್ತಿನ ಚೆಂಡು.. ಅವನು ಏನೆ ತಪ್ಪು ಮಾಡಿದರೂ ಮಾಫ್. ಯಾಕೆಂದರೆ ಅವನು ಗಂಡಸು.. ಹೆಣ್ಣಿಗಾದರೆ ಮರ್ಯಾದೆಯ ಸೀಮೆಗಳುಂಟು. ಅವಳ ಶೀಲ ಮಹತ್ವದ್ದು. ಶೀಲಗೆಟ್ಟರೆ ಅವಳು ನಾಯಿ ಮುಟ್ಟಿದ ಮಡಿಕೆ. ನಾಯಿಗೆ ಶಿಕ್ಷೆಯಿಲ್ಲ. ಮಡಿಕೆ ಅಡಿಗೆ ಮಾಡಲು ಅನರ್ಹವಾಗುತ್ತದೆ. ನಾವು ಈ ರೀತಿಯ ಮನೋಭಾವವನ್ನು ತೊರೆದು ಸಮಾನತೆಯ ಭಾವವನ್ನು ಹೊಂದಬೇಕಾಗಿದೆ. ಗಂಡು ಮಕ್ಕಳಿಗೆ ಹೆಣ್ಣಿಗೆ ಮರ್ಯಾದೆ ಕೊಡುವುದನ್ನೂ ಕಲಿಸಬೇಕಾಗಿದೆ. ಇಂದಿನ ತಾಯಿಯರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ನಾಳೆಗಾದರೂ ಒಳ್ಳೆಯ ಸಂತತಿಯನ್ನು ಪಡೆದೇವೇನೋ.
ಅತಿ ಆಧುನಿಕತೆಯ ದುಷ್ಪರಿಣಾಮವೇನೋ
ಅದು ಕೆಲವೊಂದು ಅಂಶ ನಿಜವೇನೋ. ಆಧುನಿಕತೆಯ ಮುಸುಕಿನಲ್ಲಿಯ ನೈತಿಕ ಸ್ವಚ್ಛಂದತೆಗೆ ಕಡಿವಾಣ ಬೀಳಬೇಕಿದೆ. ಸ್ವಾತಂತ್ರ್ಯ ಹಾಗೂ ಸ್ವಚ್ಛಂದತೆಗಳ ನಡುವಿನ ಅಂತರದ ಅರಿವನ್ನು ಇಂದಿನ ಯುವಪೀಳಿಗೆಗೆ ಮೂಡಿಸಬೇಕಾಗಿದೆ. ಅಂತರ್ಜಾಲದ ಹಿಂಸಾತ್ಮಕ ದುಷ್ಪರಿಣಾಮವೇ
ಯಾವುದೇ ವೈಜ್ಞಾನಿಕ ಆವಿಷ್ಕಾರವಿರಲಿ, ಅದಕ್ಕೆ ಎಲ್ಲ ವಿಷಯಗಳಿಗಿರುವಂತೆ ಎರಡು ಮಗ್ಗುಲುಗಳಿವೆ. ನಾವು ಹಂಸದಂತೆ ಒಳ್ಳೆಯದನ್ನು ಸ್ವೀಕಾರ ಮಾಡಬೇಕು. ಅಲ್ಲದೆ, ಅತಿಯಾದ ಹಿಂಸೆಯ ವೈಭವೀಕರಣದಲ್ಲಿ ಪಾಲುಗೊಳ್ಳುತ್ತ ಕ್ಷಣಿಕ ಪ್ರಚಾರದ ಲೋಭಕ್ಕೊಳಗಾಗುತ್ತಿರುವ ಸಮೂಹಮಾಧ್ಯಮಗಳ ಮೇಲೂ ಕಡಿವಾಣ ಬೀಳಬೇಕು.
ಶಾಲಾ ಕಾಲೇಜುಗಳಲ್ಲಿ ನೈತಿಕ ಬೋಧನೆಯ ಕೊರತೆಯೇ?
ಅದೂ ಕೆಲವು ಮಟ್ಟಿಗೆ ನಿಜ. ಗುರುವಾದವ ಮಕ್ಕಳಿಗೆ ಆದರ್ಶವಾಗಬೇಕು. ಈಗಿನ ಕೆಲವು ಗುರುಗಳನ್ನು ನೋಡಿದರೆ ಅವರು ಗುರುವೆನ್ನಿಸಿಕೊಳ್ಳಲು ಅನರ್ಹರೇ ಎಂಬ ಭಾವನೆ ಬರುತ್ತದೆ. ಶಿಷ್ಯರ ಹೆಗಲಮೇಲೆ ಕೈಯಿರಿಸಿ ಅವರೊಂದಿಗೆ “ಹಾಂ ಯಾರ್… ನಾ ಯಾರ್” ಎನ್ನುತ್ತ ಬಾರುಗಳಲ್ಲಿ ಕಾಲ ಕಳೆಯುವವರನ್ನು ನೋಡಿದರೆ ನಮ್ಮ ಯುವಪೀಳಿಗೆಗೆ ಇವರೇ ಮಾದರಿಯೇ ಎಂಬ ಹೆದರಿಕೆ ಕಾಡುತ್ತದೆ. ಕೇವಲ ಟೀಚರಾಗದೆ ಗುರುಗಳಾದರೆ ಮಾತ್ರ ಭಾರತದ ಶಿಷ್ಯ ಸಂಕುಲ ಒಳ್ಳೆಯ ದಾರಿ ಹಿಡಿದೀತು…  ಅಂದು ರಾವಣನೂ ಕೂಡ ಸೀಮಿತ ದುಷ್ಟ ನಾಗಿದ್ದ… ಇಂದಿನ ಈ ರಾವಣರ ಪೀಳಿಗೆ ಸೀಮಾತೀತವಾಗಿದೆ. ಇದನ್ನು ಸದೆಬಡಿಯುವುದಕ್ಕಾಗಿ ಪ್ರತಿ ಹೆಣ್ಣಿನಲ್ಲೂ ಕಾಳೀಮಾತೆಯ ಆವಾಹನೆಯಾಗಬೇಕಾಗಿದೆ. ನಮ್ಮನ್ನು ರಕ್ಷಣೆ ಮಾಡಲು ಇಲ್ಲಿ ಕೃಷ್ಣರ ಕೊರತೆಯಿದೆ. ನಮ್ಮ ರಕ್ಷಣೆಗಾಗಿ ನಾವೇ ಖಡ್ಗ ಹಿಡಿಯಬೇಕಾಗಿದೆ.
ಮಾಲತಿ ಮುದಕವಿ.

Leave a Reply