ಆ ಸಮಯ…ಆನಂದಮಯ…

ಆ ಸಮಯ…ಆನಂದಮಯ…
“ಎಷ್ಟೊತ್ತಾಯ್ತು ಬಂದು?’
” ಚಹ ಅಥವಾ ಕಾಫಿ?”
“ಇಲ್ಲ , ಇಲ್ಲ, ಬೇಡ…”
“ಮಜ್ಜಿಗೆಯಾದರೂ ತೆಗೆದುಕೊಳ್ಳಿ”
“ನಾಯಿಗೆ ಹೆದರುತ್ತೀರಾ? ಇಲ್ಲಾಂದ್ರೆ ‘ಗೋಪೀ’ನ ಇಲ್ಲಿಗೇ ಕರೆಸಿಕೊಳ್ಳುತ್ತೇನೆ’
‌‌ ಹೀಗೆ ಪ್ರಾರಂಭವಾದ , ನಮ್ಮ ಮಾತುಕತೆಯನ್ನು ನಿರಾಳವಾಗಿ ಮುಗಿಸಿ ಹೊರಬಂದಾಗ ಅರ್ಧ ಗಂಟೆ ಮೀರಿತ್ತು. “ದೊಡ್ಡವರ ಭೇಟಿ, ಹೇಗೆ ನಡೆದುಕೊಂಡರೆ ಹೇಗೋ ಏನೋ ಎಂಬ ಅಳುಕು ಅದಾಗಲೇ ಮಾಯವಾಗಿ ಹೋಗಿತ್ತು. ಅಲ್ಲಿದ್ದಷ್ಟು ಹೊತ್ತೂ ಒಂದೇ ಒಂದು ನಿಮಿಷ ಅವರ ಸ್ಥಾನಮಾನದ ಅರಿವು ಮೂಡದಂತೆ, ಎಷ್ಟೋ ವರ್ಷಗಳ ಪರಿಚಯವಿದ್ದವರ ಹಾಗೆ, ತಮ್ಮ ಹಣ, ಅಧಿಕಾರ,
ಅಂತಸ್ತು, ವಿದ್ಯೆ, ಬಿಸಿನೆಸ್ ಯಾವುದರ ಬಗ್ಗೆ ಒಂದಕ್ಷರವೂ ಅವರ ಮಾತುಗಳಲ್ಲಿ ಇಣುಕದಂತೆ , ನಮ್ಮ ಬಗ್ಗೆ, ನಾನು ಅವರಿಗೆ ಕೊಟ್ಟ’ ನೀರ ಮೇಲೆ ಅಲೆಯ ಉಂಗುರ ‘ ಪುಸ್ತಕದ ಬಗ್ಗೆ, ನಮ್ಮೂರು ಹುಬ್ಬಳ್ಳಿ , ಶಿಗ್ಗಾಂವ ಬಗ್ಗೆ, ಆಶ್ಚರ್ಯವೆಂದರೆ ನನ್ನೂರು ರಟ್ಟೀಹಳ್ಳಿಯಲ್ಲಿರುವ ತಮ್ಮ ಪರಿಚಿತರ ಬಗ್ಗೆ, ಅಲ್ಲಿಯ ಕುಮದ್ವತಿ ನದಿ, ಕದಂಬೇಶ್ವರ ದೇವಸ್ಥಾನಗಳ ಬಗ್ಗೆ, ಶಿಗ್ಗಾಂವಿಯ ತಮ್ಮ ಜೀವನದ ಬಗ್ಗೆ ತುಂಬ nostalgic ಆಗಿ ಮಾತನಾಡಿದ್ದಲ್ಲದೇ ನಮಗೂ ಭೇಟಿಯನ್ನು ಅತ್ಯಂತ ಸರಳ, ಸುಲಭ, ಸಹಜವಾಗಿಸಿದ್ದು ಅವರ ವಿಶೇಷ.” ನಾನು ಕೊಟ್ಟ ಪುಸ್ತಕವನ್ನು ಒಂದರೆಕ್ಷಣ ತಿರುವಿಹಾಕಿ ” ನೀರ ಮೇಲೆ ಅಲೆಯ ಉಂಗುರ ‘_ಇದು “ಬೇಡಿ ಬಂದವಳು ” ಚಿತ್ರಗೀತೆಯ ಸಾಲು. ಚಂದ್ರಕಲಾ ಅದರ ನಾಯಕಿ ,( The movie is inspired by the 1847 novel Jane Eyre by Charlotte Bronte.The movie was remade in Tamil in 1969 as Shanti Nilayam. ಅದರದೇ
ಕನ್ನಡ ರೂಪಾಂತರ ಆಧಾರಿತ ಎಂದು ನೆನೆಸಿ ಆ ಹಾಡಿನ ಇನ್ನೂ ಎರಡು , ಮೂರು ಸಾಲುಗಳನ್ನು ಹಾಡಿದರು.” ಖಂಡಿತ ಓದುತ್ತೇನೆ, ಪೂರ್ತಿಯಾಗಿಯೇ ಓದುತ್ತೇನೆ , ನಾನು ಓದುವದು ನನ್ನ ವಿಮಾನ ಪಯಣದಲ್ಲಿ ಮಾತ್ರ, ಉಳಿದಂತೆ ಸಮಯದ ಕೊರತೆ’ ಎಂದು ಹೇಳಿ, ತಮ್ಮ ಇತ್ತೀಚೆಗಿನ ‘ ಸಾಫ್ಟ್ ಮನ’ ಪುಸ್ತಕವನ್ನು ಸಹಿಯೊಂದಿಗೆ ನನ್ನ ಕೈಗಿತ್ತರು.
‌ಇದಿಷ್ಟೂ ಯಾರ ಬಗ್ಗೆ ಎಂಬುದು ನಿಮಗೀಗ ಅರ್ಥವಾಗಿರಬಹುದು ಎಂದುಕೊಳ್ಳುತ್ತೇನೆ. ಅವರೇ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಕನ್ನಡತಿ ಶ್ರೀಮತಿ ಸುಧಾ ಮೂರ್ತಿಯವರು.
ನಾನವರ ಊರು ಶಿಗ್ಗಾಂವಿಗೆ ತೀರಾ ಹತ್ತಿರದವಳು. ಅವರದೇ ಹುಬ್ಬಳ್ಳಿ_ ಧಾರವಾಡದ ಗಂಡು ಕನ್ನಡದಲ್ಲಿ ಮಾತು. ಅದೇ ಕಾರಣಕ್ಕೆ ನನಗೂ ಅವರಿಗೂ ಹೋಲಿಕೆ ಕಂಡ ಹಲವರಿದ್ದಾರೆ. ಅದರ ಬಗ್ಗೆ ಹೇಳಿ ನಕ್ಕಾಗ ಅವರು ,” ನನಗೂ ಒಂದಿಬ್ಬರು ನೀವು ಥೇಟ್ ಸುಧಾ ಮೂರ್ತಿಯವರಂತೆಯೇ ಕಾಣುತ್ತೀರಿ ಎಂದು ಹೇಳಿದ್ದಿದೆ’ ಎಂದು ನಸುನಕ್ಕರು. ನಾನು ಅವರ ಗುಂಪಿನ follower. ಅವರ ಭಾಷಣ, ವಿಡಿಯೋಗಳನ್ನು ತಪ್ಪದೇ follow ಮಾಡುತ್ತೇನೆ. ಅವರ ಅನೇಕ ಪರಿಚಯಸ್ಥರು ನಮಗೂ ಚನ್ನಾಗಿ ಪರಿಚಯ. ಆದರೂ ಭೇಟಿಗೆ ಮೊದಲು ಕೊಂಚ ಅಳುಕಿತ್ತು. ಮಾತನಾಡಲು ಪ್ರಾರಂಭಿಸಿದ ಮೇಲೆ ಆ ಅಡ್ಡಗೋಡೆಯೂ ಬಿದ್ದುಹೋಗಿ ನಿರಾಳವಾಗಿ ನಡೆದ ಅವರೊಂದಿಗಿನ ಸಂಭಾಷಣೆಯ ಒಂದೊಂದು ಮಾತೂ ಒಂದೊಂದು ಮುತ್ತು. ಮತ್ತೊಂದು ನಾನು ಅವರಲ್ಲಿ ಗಮನಿಸಿದ ಅಂಶವೆಂದರೆ, ಅವರ ಬಗೆಗೆ ಅಕಸ್ಮಾತ್ತಾಗಿ ಬಂದ ಯಾವುದೇ ಪ್ರಶಂಸೆಯ ಮಾತುಗಳನ್ನು ಪ್ರಯತ್ನ ಪೂರ್ವಕವಾಗಿ ಜಾಣತನದಿಂದ ಮರೆಸಿ ಮಾಡುತ್ತಿದ್ದ ವಿಷಯಾಂತರ. ಅಂಥ ವಿಷಯಗಳಿಗೆ ಮುದ್ದಾಂ ಆಗಿ ತೋರುತ್ತಿದ್ದ ನಿರಾಸಕ್ತಿ. ನಮ್ಮ ಅತ್ಯಂತ ಚಿಕ್ಕ ಸಾಧನೆಯನ್ನೂ ಹಿರಿದಾಗಿಸಿ, ವೈಭವೀಕರಿಸಿ, ಹೆಚ್ಚು ಮಹತ್ತರವಾಗಿ ಪ್ರದರ್ಶಿಸುವ ‘ರೋಗ’ ಇದ್ದ ನಮ್ಮಂಥವರು ಕಲಿಯಬೇಕಾದ್ದು ಬೆಟ್ಟದಷ್ಟಿದೆ.” ಎಂಬುದನ್ನು ಕಂಡುಕೊಂಡೆ .” ಅವರೇ ಸ್ವಂತಕ್ಕೆ ಒಂದು ವಿಶ್ವ ವಿದ್ಯಾಲಯವಿದ್ದಂತೆ” ಎಂಬುವ ಮಾತನ್ನು ಓದಿದ್ದೆ…ಕೇಳಿದ್ದೆ… ಇಂದು ಕಣ್ಣಾರೆ ಕಂಡೆ…ಹತ್ತು ಪುಸ್ತಕಗಳ ಓದು ಕೊಡಲಾರದಷ್ಟು ಬಂಡವಾಳವನ್ನು ನನ್ನ ಇಂದಿನ ಭೇಟಿ ಕೊಟ್ಟದ್ದು ಮಾತ್ರ ನಿಜ…ನಮಗೆ ಕೊಟ್ಟ ಹದಿನೈದು ನಿಮಿಷದ ಅವಧಿ ಇಮ್ಮಡಿಯಾಗಿ ಅರ್ಧಗಂಟೆ ಅದಾಗಲೇ ಮಿಕ್ಕಿ ಹೋದದ್ದು ಗೊತ್ತಾದದ್ದು ಅವರ ಮುಂದಿನ ಭೇಟಿಯ schedule ಅವರ ಗಮನಕ್ಕೆ ಅವರ ಸೆಕ್ರೆಟರಿ ತಂದಾಗಲೇ. ‘ ಇನ್ನು ಸಾಕು’ ‘ಹೋಗಿಬನ್ನಿ’ ‘Time ಆಯ್ತು’ ‘ಮತ್ತೆ ಭೇಟಿಯಾಗೋಣ’ ಇಂಥ ಯಾವ ಮಾತುಗಳಿಲ್ಲದೇ ನಿಧಾನವಾಗಿ ಸೋಫಾದಿಂದ ಎದ್ದು , ಕೈಮುಗಿದು, ಬಾಗಿಲವರೆಗೆ ಬಂದು ಸೌಜನ್ಯದಿಂದ ಬೀಳ್ಕೊಟ್ಟದ್ದರಲ್ಲೂ ನಮಗೊಂದು ಘನವಾದ ಕಲಿಕೆ…
ಈ ಜನ್ಮದಲ್ಲಿ ಕಲಿಕೆಗೆ ಕೊನೆಯಿಲ್ಲ, ನಾವಿನ್ನೂ ಏನೂ ಕಲಿತೇಯಿಲ್ಲ, ಅಥವಾ ಇನ್ನೂ ಕಲಿಯುವುದು ಸಾಕಷ್ಟಿದೆ ಎಂಬ ನಮ್ರ ಭಾವವನ್ನು ಬಿತ್ತಿದ ಇಂಥ ಭೇಟಿಗಳು ನನಗೆ ಲಭಿಸುತ್ತಲೇ ಇರಲಿ ಎಂಬ ಸದಾಶಯ ಹೊತ್ತು ಸುಧಾ ತಾಯಿಯಿಂದ ಬೀಳ್ಕೊಂಡು ಬಂದೆ. ನಾನು ‘ನೀರಮೇಲೆ ಅಲೆಯ ಉಂಗುರ ‘ ಬರೆಯುವಾಗ ಪ್ರೇರಣೆಯಾದದ್ದು ಅವರ ‘ ಸಾಮಾನ್ಯರಲ್ಲಿ ಅಸಾಮಾನ್ಯರು’ ಕೃತಿ. ಅದರಲ್ಲಿ ‘ನಾನೂ ಅವರಾಗಬಾರದಿತ್ತೇ?’ ಹಾಗೂ’ ಕಡಲೆ ಮತ್ತು ಹಲ್ಲುಗಳು’ ಇವೆರಡೂ ಲೇಖನಗಳಿಗೆ ಅವರದೇ ಬದುಕಿನ ಪ್ರೇರಣೆಯಿದೆ. ಮುದ್ರಣವಾದ ಕೂಡಲೇ ಅದರದೊಂದು ಪ್ರತಿ ಅವರ ಕೈಗಿತ್ತು ಆಶೀರ್ವಾದ ಪಡೆಯುವ ಚಿಕ್ಕ ಹಂಬಲವಿತ್ತು. ಆದರೆ ಅವರು ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯಕ್ರಮವೊಂದರಲ್ಲಿ ಸಂಪೂರ್ಣ ವ್ಯಸ್ತರಾದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಪುಸ್ತಕ ಬಿಡುಗಡೆಗೆ ನನ್ನ ಹುಟ್ಟುಹಬ್ಬ ಮೊದಲೇ ತಳುಕು ಹಾಕಿಕೊಂಡದ್ದರಿಂದ ಮುಂದೆ ಹಾಕುವಂತಿರಲಿಲ್ಲ. ಕಾರಣ ಅವರಿಗೆ ಪ್ರತಿ ಕೊಡುವದಾಗದೇ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಕೊಟ್ಟು ಮುಗಿಸಿ ಸಾಂಕೇತಿಕ ಬಿಡುಗಡೆ ಮಾಡಿ ಆಯಿತು. ನಂತರ ಅವರ ಭೇಟಿಯ ದಿನಾಂಕ ನಿಗದಿಯಾಗಿ ಅವರಿಗೆ ಭೇಟಿಯಾಗಿ ಪ್ರತಿಕೊಟ್ಟು ಬಂದೆ. ಆದರೆ ಕೆಲವೇ ಕೆಲವು ನಿಮಿಷಗಳ ಈ ಭೇಟಿಯ ಗುಂಗು ಸುಲಭವಾಗಿ ಮನಸ್ಸಿನಿಂದ ಅಳಿಯುವಂಥದ್ದಲ್ಲ. Thank you Sudha Murthy Madam…
Leave a Reply