ಆರು ಹಿತವರು ನಿನಗೆ ಈ “ಮೂವರೊಳಗೆ”?

ಆರು ಹಿತವರು ನಿನಗೆ ಈ “ಮೂವರೊಳಗೆ”?
ಮನುಷ್ಯ ಸಂಘ ಜೀವಿ. ನಡಿಗೆ, ಮಾತು ಬರುತ್ತಿದ್ದಂತೆಯೇ ಗುಂಪಿನೊಳಗಿರಲು ಬಯಸುತ್ತಾನೆ… ಸ್ನೇಹಿತರ ಗುಂಪು ಬೆಳೆಯುತ್ತ ಹೋಗುತ್ತದೆ. ಮೊದಮೊದಲು ‘ಸಮಾನ ವಯಸ್ಕರು’ ಗೆಳೆಯರೆನಿಸಿಕೊಳ್ಳುತ್ತಾರೆ. ಕ್ರಮೇಣ ‘ಸಮಾನ ಮನಸ್ಕರ’ ಗುಂಪು ಆಪ್ತವೆನಿಸುತ್ತದೆ. ಎಲ್ಲರಲ್ಲಿಯೂ ಸ್ವಲ್ಪ ಮಟ್ಟಿನ ಇದ್ದೇಯಿರುತ್ತದೆ. ಅದಕ್ಕೆ ಪುಷ್ಟಿಕೊಡುವ, ಪ್ರಶಂಸಿಸುವ, ಪ್ರಶಸ್ತ್ಯ ಸಿಗುವ ಕಡೆಗೆ ಮನುಷ್ಯ ಸೆಳೆಯಲ್ಪಡುತ್ತಾನೆ. ಹೀಗಾಗಿ ಆ ಹಂತದವರ ಸ್ನೇಹವನ್ನು ಸರಿಯಾಗಿ ಅಳೆಯಲಾಗುವದಿಲ್ಲ. ಅದು ಪ್ರೇಮಕ್ಕೂ ಮೊದಲಿನ  infatuation ಇದ್ದಹಾಗೆ. ಮನಸ್ಸಿಗೆ ಹಿತವೆನಿಸುತ್ತದೆ. Boosting ಅನಿಸುತ್ತದೆ. ಕೊಂಚಮಟ್ಟಿಗೆ ಅದೂ ಬೇಕು. ಆದರೆ ಆ ಹಂತದಲ್ಲಿ ನಿಮ್ಮನ್ನು ಹೊಗಳಿ, ತಮ್ಮ ಕಾರ್ಯಸಾಧಿಸಿಕೊಂಡು ನಂತರ ನಿಮ್ಮನ್ನು ಅಲಕ್ಷಿಸುವವರ ಸ್ವಾರ್ಥಿಗಳ ಸಂಖ್ಯೆ ಜಾಸ್ತಿ. ಇದು ಮೊದಲ ವರ್ಗ.
ಎರಡನೇ ವರ್ಗದವರು, “ನೀ ನನಗಾದರೆ ನಾ ನಿನಗೆ” – ಎಂಬ ವ್ಯಾಪಾರೀ ಬುದ್ಧಿಯವರು. ಅಳೆದು ತೂಗಿ ಸ್ನೇಹ ಸಂಪಾದಿಸಿ ನೀವೆಷ್ಟು ಅವರಿಗೆ ಪ್ರಯೋಜನಕಾರಿ ಎಂಬುದರ ಮೇಲೆ ಗೆಳೆತನದ expiry date fix  ಮಾಡುವವರು. ಅವರಿಗೆ ನಿಮ್ಮಿಂದ “returns” ಇಲ್ಲವೆಂದು ಎಂದು ಗೊತ್ತಾಯ್ತೋ ಅಂದೇ ಅಲ್ಲಿಗೆ ಸಂಪರ್ಕ ಕಡಿತ.  Business ಬಂದ್. ಇಲ್ಲಿಯಾದರೂ ಭೇತಿಯಾದರೂ ಸಹ ನಿಮಗೆ ಒಂದು ಮುಗುಳ್ನಗೆಯೂ ದಕ್ಕಲಿಕ್ಕಿಲ್ಲ. ನಿಮ್ಮೊಡನೆ ಮಾತಾಡುವದೂ ಮರ್ಯಾದೆಗೆ ಕಡಿಮೆ ಎನಿಸುವಂತೆ ನಡೆದುಕೊಂಡಾರು. ಮತ್ತೆ ಅನಿವಾರ್ಯ ಪ್ರಸಂಗ ಬಂದಾಗ ಏನೂ ಆಗಿಯೇಯಿಲ್ಲ ಎಂಬಂತೆ ನಿಮ್ಮೆದುರು ಹಾಜರಾದಾರು.
ಒಂದು ತರಹ ಅಧಿಕಾರದಲ್ಲಿರುವವರ ಬೆಂಬಲಿಗರ ಹಾಗೆ. ಸಂಖ್ಯೆಗೆ ನೂರಾರು. ಗೆಳೆತನದ ನಿಜಾರ್ಥದಲ್ಲಿ ಲೆಕ್ಕಕ್ಕೆ ಹಿಡಿಯುವಂತಿಲ್ಲ.
ಮೂರನೇ ವರ್ಗ ಬಲು ಅಪರೂಪ… ತುಂಬಾ ವಿರಳ ಅವರದು ಸ್ನೇಹಕ್ಕಾಗಿ ಸ್ನೇಹ… ಅದಕ್ಕೆ ಬದ್ಧರಾಗಿರುವುದು ಅವರು ಅವರಿಗೇ ಹಾಕಿಕೊಂಡ ನಿಯತ್ತು.. ಪೊಳ್ಳು ತೋರಿಕೆ, ಅಸಹಜವಾಗಿ ಅನುನಯಿಸುವದು ಅವರಿಹೆ ಗೊತ್ತಿರುವುದಿಲ್ಲ. ತಮಗಾದಷ್ಟು ಮಾಡಲು ಸದಾ ಸಿದ್ಧ. ಯಾವ ಹಂತಕ್ಕೂ ಹೋಗಿ ಸಹಾಯ ಮಾಡಿಯಾರು. ಬದಲಿಗೆ ಪ್ರತ್ಯುಪಕಾರ ಬಯಸುವದು ಅವರಿಂದ ಆಗದ ಮಾತು. ಅವರ ಮೊದಲ ಗುರಿ, ಅಂತಿಮಗುರಿ ಎರಡೂ ಒಂದೇ… ಸ್ನೇಹ… ಸ್ನೇಹ…ಸ್ನೇಹ.. ಅಂಥ ಸ್ನೇಹ ನಿಭಾಯಿಸುವದೂ ಸುಲಭ ಸಾಧ್ಯವಲ್ಲ. ಅದೊಂದು ದೊಡ್ಡ ಆಲದದಮರದ ನೆರಳು… ಬೇಕೆಂದಾಗ ಅದರಡಿ ನಿಮಗೆ ನೆಮ್ಮದಿ ಗ್ಯಾರಂಟಿ.
ಇಂಥದೇ ಸ್ನೇಹ ಬೇಕು ಎನ್ನುವದು ಸುಲಭ. ಅದನ್ನು ನಿಭಾಯಿಸುವದು ಸುಲಭವಲ್ಲ. ಪಡೆದುದಕ್ಕಿಂತ ಕೊಡುವದು ಹೆಚ್ಚಾಗಬೇಕು ಅಂತಾರೆ ತಿಳಿದವರು. ಹೆಚ್ಚು ಕೊಡದಾಗದಿದ್ದರೂ ಬರಿ ತೆಗೆದುಕೊಳ್ಳುವದನ್ನು ಮಾಡಬಾರದೆಂಬ ಅರಿವಾದರೂ ಇರಬೇಕು.
ಹಾಗಿದ್ದರೆ.-

social to all,

familiar to few…

friend (at least) to one,

enemy to none…

ಎಂಬಂತಿರುವದು ಕ್ಷೇಮ…. ಏನಂತೀರಿ?

Leave a Reply