ಅಪರೂಪವಾಗುತ್ತಿರುವ ಅಕ್ಕಿಮುಡಿ

ಅಪರೂಪವಾಗುತ್ತಿರುವ ಅಕ್ಕಿಮುಡಿ
ಅನಾದಿ ಕಾಲದಿಂದಲೂ ಕೃಷಿಕರು ತಮ್ಮ ಆಹಾರ ಸಾಮಗ್ರಿಗಳನ್ನು ಮಳೆಗಾಲದಲ್ಲಿ ಕೆಡದಂತೆ ಸುರಕ್ಷಿತವಾಗಿ ಶೇಖರಿಸಿ ಇಡಲು ತಮ್ಮದೇ ಆದ ಹಲವು ವಿಧಾನಗಳನ್ನು ಕಂಡುಕೊಂಡಿದ್ದರು. ಇದರಲ್ಲಿ ಅಕ್ಕಿಮುಡಿ (ಭತ್ತದ ಮುಡಿ) ಕರಾವಳಿ , ಘಟ್ಟ ಪ್ರದೇಶದ ರೈತರ ಮನೆಗಳಲ್ಲಿ ಬಳಕೆಯಲ್ಲಿರುವ ಒಂದು ಅಪರೂಪದ ಧಾನ್ಯ ಸಂಗ್ರಹದ ವ್ಯವಸ್ಥೆ. ಕರಾವಳಿ ಮಲೆನಾಡಿನ ಭಾಗದಲ್ಲಿ ಮಳೆಯ ಆರ್ಭಟ ಜಾಸ್ತಿ. ವಾತಾವರಣದ ತಂಪಿಗೆ ಅಕ್ಕಿ ಭತ್ತ ಹಾಳಾಗದಂತೆ ದಾಸ್ತಾನು ಮಾಡಲು ಸಂಪೂರ್ಣವಾಗಿ ಭತ್ತದ ಹುಲ್ಲಿನಿಂದ (ಬೈಹುಲ್ಲು) ಮುಡಿ (ಮೊಡೆ) ಕಟ್ಟುವರು. ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ್ಯಗಳಲ್ಲಿ ಒಂದಾದ ಮುಡಿಯನ್ನು ಕಟ್ಟುವುದು ಒಂದು ಕಲಾತ್ಮಕವಾದ ವಿದ್ಯೆ . ಭತ್ತದ ಹುಲ್ಲಿನ ಒಳಭಾಗದಲ್ಲಿ ನಿರ್ದಿಷ್ಟವಾದ ಉಷ್ಣತೆಯಿದ್ದು, ಶೇಖರಿಸಲ್ಪಟ್ಟ ಅಕ್ಕಿಯ ಗುಣಮಟ್ಟ ಕಡಿಮೆಯಾಗುವುದಿಲ್ಲ. ಬಿತ್ತನೆ ಬೀಜದ ತಳಿಯನ್ನು ಸಂಗ್ರಹಿಸಿಡಲು ನೆರವಾಗುವ ಇದು ಹಳ್ಳಿಗರ ಬೀಜ ಬ್ಯಾಂಕ್ ಕೂಡಾ ಹೌದು. ಶುಭ ಸಮಾರಂಭ ಮತ್ತು ಮಂಗಲಕಾರ್ಯಗಳಲ್ಲಿ ಅಕ್ಕಿ ಮುಡಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.ಒಂದು ಕಾಲದಲ್ಲಿ ವ್ಯಕ್ತಿಯ ಅಂತಸ್ತನ್ನು ಸಾರುತ್ತಿದ್ದ ಅಕ್ಕಿಮುಡಿ ಇದೀಗ ನೇಪಥ್ಯಕ್ಕೆ ಸರಿದಿದೆ. ಕಾಲದ ಬದಲಾವಣೆಯ ಹೊಡೆತಕ್ಕೆ ಸಿಲುಕಿ, ಕೃಷಿ ಇಂದು ನಮ್ಮ ಆದ್ಯತೆಯಾಗಿ ಉಳಿದಿಲ್ಲ. ಜೊತೆಗೆ ಬದಲಾದ ಕಾಲಘಟ್ಟದಲ್ಲಿ ಆಹಾರ ಸಾಮಗ್ರಿಗಳ ಶೇಖರಣೆಗೆ ಹೊಸ ಹೊಸ ವ್ಯವಸ್ಥೆಗಳು ಬಂದಿರುವುದರಿಂದ ಮುಡಿ ಕಟ್ಟುವ ಕಲೆ ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿಗೆ ಬಂದಿದೆ .
ಹೊಸ್ಮನೆ ಮುತ್ತು

Leave a Reply