ಅರ್ಥ

ಅರ್ಥ
ವೇದಾಂತದ ಪರಿಭಾಷೆಯಲ್ಲಿ ಪ್ರತಿಯೊಂದು ಜೀವಾತ್ಮವೂ ಸಹ ‘ಪುರುಷ’ ಎಂದೂ, ವಿಶೇಷ ಲೋಕಗಳಿಂದ ಕೂಡಿರುವ ಶಕ್ತಿಕ್ಷೇತ್ರವನ್ನು ‘ಪ್ರಕೃತಿ’ ಎಂದೂ ಎನ್ನುತ್ತೇವೆ. ಹೀಗೆ ಪುರುಷನು ‘ಆತ್ಮಕ್ಷೇತ್ರವಾಗಿ’ ಮತ್ತು ಪ್ರಕೃತಿಯು ‘ಶಕ್ತಿಕ್ಷೇತ್ರವಾಗಿ’ ಒಂದು ಶುದ್ಧಚೈತನ್ಯ ಅಥವಾ ಮಹಾಮೂಲಚೈತನ್ಯದಿಂದ ಹೊರಬಂದು ಎರಡಾಗಿ ವಿಭಜಿಸಲಾಗಿದೆ ಎನ್ನುವುದು ಸೃಷ್ಟಿಯ ರಚನಾ ಕಾರ್ಯಕ್ರಮದ ಮೂಲಸಂರಚನಾ ಸಿದ್ಧಾಂತ. ಒಂದು ಮೂಲಚೈತನ್ಯದಿಂದ ‘ಶಕ್ತಿಕ್ಷೇತ್ರವಾಗಿ’ ಹೊರಬಂದ ‘ಪ್ರಕೃತಿಶಕ್ತಿ’ಯು ಅನೇಕ ಆಯಾಮಗಳಲ್ಲಿನ ಅನೇಕ ಲೋಕಗಳಾಗಿ ಬದಲಾಗುತ್ತಹೋಗುತ್ತದೆ. ಹಾಗೆಯೇ, ಮೂಲಚೈತನ್ಯದಿಂದ ಒಂದು ‘ಆತ್ಮಕ್ಷೇತ್ರ’ವಾಗಿ ಹೊರಬಂದ ‘ಪುರುಷಶಕ್ತಿ’ ಅನೇಕಾನೇಕ ಅಂಶಾತ್ಮಗಳಾಗಿ ಬಿಡುಗಡೆಯಾಗಿ ಆಯಾ ಲೋಕಗಳಲ್ಲಿ ಇದ್ದಾಗ ಆಯಾ ಆತ್ಮಗಳಾಗಿ ಬದಲಾಗುತ್ತ ಬಗೆಬಗೆಯ ಜೀವಾತ್ಮಗಳು ತಯಾರಾಗುತ್ತವೆ. ನಾಲ್ಕು ಪುರುಷಾರ್ಥಗಳ ಪೈಕಿ ಮೊದಲ ಮೂರರ ಆಚರಣೆಯ ಗುರಿಯೆ ನಾಲ್ಕನೆ ಪುರುಷಾರ್ಥವಾದ ಮೋಕ್ಷವನ್ನು ಪಡೆಯುವುದು. ಇಹಲೋಕದ ಸಂಬಂಧಗಳಿಗೆ ನ್ಯಾಯ ಸಲ್ಲಿಸುವುದೆ ಧರ್ಮ. ಒಳ್ಳೆಯ ಮಗ ಅಥವಾ ಮಗಳಾಗಿ, ಒಳ್ಳೆಯ ತಮ್ಮ, ತಂಗಿ, ಗಂಡ, ಹೆಂಡತಿಯಾಗಿ ಎಲ್ಲಾ ಸಂಬಂದಗಳ ನಿಗದಿತ ಕರ್ತವ್ಯ ಪಾಲಿಸುವುದೆ ಧರ್ಮ. ಅಂತಹ ಧರ್ಮದ ಪಾಲನೆಗೆ ಸಂಪತ್ತು ಅತ್ಯಗತ್ಯ. ಆದ್ದರಿಂದ ಹಣದ ಗಳಿಕೆ ಅನಿವಾರ್ಯ, ಅದುವೆ ಅರ್ಥ. ಜೀವನದ ಪ್ರತಿ ಹಂತದಲ್ಲಿಯೂ ವಿವಿಧ ಆಸೆಗಳಿಗೆ ತೆರೆದುಕೊಳ್ಳುವ ಮನುಜ ಯೌವನದಲ್ಲಿ ಅತೀವವಾದ ಕಾಮವಾಂಛೆಗೆ ಸಿಲುಕುತ್ತಾನೆ. ಅದನ್ನು ಖಂಡಿತ ಪೂರೈಸಿಕೊಳ್ಳಲೆಬೇಕು. ಇಲ್ಲವಾದರೆ ಆತನ ವ್ಯಕ್ತಿತ್ವ ಬೆಳೆಯಲಾರದು. ಕಾಮದಿಂದ ಮುಕ್ತಿ ಹೊಂದಲು ಅದನ್ನು ಅನುಭವಿಸುವುದೊಂದೆ ಮಾರ್ಗ. ಭಾರತೀಯ ದರ್ಶನಗಳ ಪ್ರಕಾರ ಚತುರ್ವಿಧ ಪುರುಷಾರ್ಥಗಳಲ್ಲಿ ಮೋಕ್ಷವು ಕೊನೆಯದು.
ಮನುಷ್ಯನ ಮರಣ ಸಂಭವಿಸಿದಾಗ ದೇಹದೊಳಗಿನ ಆತ್ಮ ಮರುಹುಟ್ಟು ಪಡೆಯದೆ ಪರಮಾತ್ಮನಲ್ಲಿ ಐಕ್ಯ ಹೊಂದುವುದು ಮೋಕ್ಷ. ಈ ಸ್ಥಿತಿಯು ಸ್ವರ್ಗಕ್ಕಿಂತ ಶ್ರೇಷ್ಠ. ಏಕೆಂದರೆ ಸ್ವರ್ಗ ಪ್ರಾಪ್ತಿ ಕೇವಲ ಮನುಷ್ಯನ ಪಾಪ ಪುಣ್ಯಗಳನ್ನು ಆಧರಿಸಿದ್ದು ಅದು ಮುಗಿದ ಮೇಲೆ ಕರ್ಮಾನುಸಾರ ಮರು ಹುಟ್ಟು ಪಡೆಯಬೇಕಾಗುತ್ತದೆ. ಆದರೆ ಮುಕ್ತಿ ಅಥವಾ ಮೋಕ್ಷದ ಸ್ಥಿತಿ ಅನಂತಕಾಲ ಅನಂದಾತಿಶಯದಲ್ಲಿ ಇರುವಂತಹ ಸ್ಥಿತಿ. ಕಾಮದಿಂದ ತಮೋಗುಣ, ಅರ್ಥದಿಂದ ರಜೋಗುಣ, ಧರ್ಮದಿಂದ ಸಾತ್ವಿಕಗುಣ ಮತ್ತು ಮೋಕ್ಷದಿಂದ ಶುದ್ಧಸಾತ್ವಿಕ ಗುಣಗಳು ಉದ್ಭವಿಸುತ್ತವೆ. ಆದ್ದರಿಂದ, ಮನುಷ್ಯನ ವಿವಿಧ ಗುಣಗಳ ಅನುಸಾರವಾಗಿಯೇ ಮನುಷ್ಯ ಪರಿಪೂರ್ಣವಾಗಿ ಪರಿಣಿತಿ ಹೊಂದಬೇಕಾದರೆ ಕಾಮ+ ಅರ್ಥ+ಧರ್ಮ+ಮೋಕ್ಷ ನಾಲ್ಕೂ ಬೇಕಾಗಿದೆ.
ಇನ್ನು ನಮ್ಮಂಥ ಸಾಮಾನ್ಯರ ಅಳವಿಗೆ ನಿಲುಕುವಂತೆ ಹೇಳಬೇಕೆಂದರೆ ಪುರುಷಾರ್ಥವೆಂದರೆ ಪುರುಷನ ಅಪೇಕ್ಷೆ. ಪುರುಷನು ಬಯಸುವ ಪ್ರಯೋಜನಗಳೇ ಪುರುಷಾರ್ಥಗಳು. ಆದರೆ ಈ ಪುರುಷಾರ್ಥದಲ್ಲಿನ ಪುರುಷ ಎಂಬ ಪದಕ್ಕೆ ಗಂಡಸು ಎಂದರ್ಥವಲ್ಲ. “ಪುರಿಶೇತೇ ಇತಿ ಪುರುಷಃ” ಎಂಬ ಅರ್ಥವಿದೆ. ದೇಹವೆಂಬ ಪುರದಲ್ಲಿ ವಾಸಿಸುತ್ತಿರುವ ಜೀವನೇ ಪುರುಷ. ಹಾಗಾಗಿ, ಪುರುಷಾರ್ಥವೆಂದರೆ ಜೀವದ ಅಪೇಕ್ಷೆಗಳು. ಇದು ಪುರುಷರಷ್ಟೇ ಸಮಾನವಾಗಿ ಸ್ತ್ರೀಯರಿಗೂ ಅನ್ವಯಿಸುತ್ತದೆ, ಜೀವದ ಅಪೇಕ್ಷೆಗಳೇನು? ದೇಹವು ಜೀವವೆಂಬ ಚೈತನ್ಯಶಕ್ತಿಯ ಒಡಲು. ಜೀವತತ್ವದವರೆಗೂ ಸಂಚಾರವುಳ್ಳ ಋಷಿಮುನಿಗಳು ಜೀವದಿಂದಲೇ ನೇರವಾಗಿ ಅದರ ಅಪೇಕ್ಷೆಗಳನ್ನು ಅರಿತರು. ಧರ್ಮ-ಅರ್ಥ-ಕಾಮ ಮತ್ತು ಮೋಕ್ಷಗಳೇ ಜೀವವು ಬಯಸುವ ಪ್ರಯೋಜನಗಳು ಎಂದು ತಮ್ಮ ಅಲೌಕಿಕ ಅನುಭವಗಳನ್ನು ಆಧರಿಸಿ ಘೋಷಿಸಿದರು. ಒಟ್ಟಿನಲ್ಲಿ ಅರ್ಥವೆಂದರೆ ಮನುಷ್ಯನ ಆರ್ಥಿಕ ಹಾಗೂ ರಾಜನೈತಿಕ ಜೀವನಕ್ಕೆ ಸಂಬಂಧಿತವಾದ ಅಧಿಕಾರ ಹಾಗೂ ಸಂಪತ್ತಿನ ಲಾಲಸೆಯಾಗಿದೆ. ಕೇವಲ ಧನವಷ್ಟೇ ಅಲ್ಲ, ಮನುಷ್ಯನ ಕಾಮನೆಯನ್ನು ತೀರೀಸಿಕೊಳ್ಳಲು ಸಹಾಯಕವಾಗುವ ಐಹಿಕ ಸುಖಭೋಗಗಳ ಪ್ರಾಪ್ತಿಯೂ ಕೂಡ ಅರ್ಥದಲ್ಲಿ ಬರುತ್ತದೆ.
ಧರ್ಮವು ಮೊಟ್ಟಮೊದಲ ಪುರುಷಾರ್ಥ. ಧರ್ಮ ಎಂಬ ಪದವು ಸಂಸ್ಕೃತದ ‘ಧೃ’ ಧಾತುವಿನಿಂದ ಬಂದಿದೆ. ಯಾವುದು ಧರಿಸುತ್ತದೆಯೋ ಅದು ಧರ್ಮ. ವಿಶ್ವವನ್ನೆಲ್ಲಾ ಭಗವಂತನೇ ಧರಿಸಿರುವುದರಿಂದ ಮೊಟ್ಟಮೊದಲ ಧರ್ಮ ಭಗವಂತನೇ. ‘ಕೃಷ್ಣಂ ಧರ್ಮಂ ಸನಾತನಮ್’ ಎಂದಿದ್ದಾರೆ. ಮುಂದಕ್ಕೆ ಭಗವತ್ಸಂಕಲ್ಪಕ್ಕೆ ತಕ್ಕಂತೆ ಸೃಷ್ಟಿಕಾರ್ಯದಲ್ಲಿ ಜೀವವೂ ಮತ್ತು ಅದರ ಒಡಲಾದ ದೇಹವೂ ವಿಕಾಸಗೊಳ್ಳುವುದು. ಉದಾಹರಣೆಗೆ ಆರೋಗ್ಯವು ದೇಹದ ಒಂದು ಸ್ಥಿತಿ. ಅದಿದ್ದಾಗ ಚಟುವಟಿಕೆಯಿಂದಲೂ ಇರಬಲ್ಲ ಹಾಗೆಯೇ ಸುಖನಿದ್ರೆಯನ್ನೂ ಮಾಡಬಲ್ಲ. ಅಂತೆಯೇ ಯೋಗಭೋಗಗಳೆರಡನ್ನೂ ಬಯಸುವ ಜೀವಕ್ಕೆ ಎರಡನ್ನೂ ಕೊಡಬಲ್ಲ ಸ್ಥಿತಿಯೇ ಇರಬೇಕು. ಇಂತಹ ಸ್ಥಿತಿಗೆ ಎರಡನೆಯ ಘಟ್ಟದಲ್ಲಿ ಪ್ರಧಾನವಾಗಿ ಧರ್ಮವೆಂದು ಹೆಸರು. ‘ಯತಃ ಅಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ’. ಇಂದ್ರಿಯಧರ್ಮ, ಮನೋಧರ್ಮ, ಬುದ್ಧಿಧರ್ಮ ಎಲ್ಲವೂ ಆತ್ಮಧರ್ಮದಲ್ಲಿ ನಿಲ್ಲುವಂತಿರಬೇಕು. ಧರ್ಮವು ಹಿಮ್ಮುಖವಾದಾಗ ಭಗವದ್ರೂಪವನ್ನು ತಾಳಿದರೆ ಮುಂದೆ ವಿಕಾಸಗೊಂಡಾಗ ಆಚಾರವೆನ್ನಿಸಿಕೊಳ್ಳುತ್ತದೆ. ಜಡ ಪದಾರ್ಥಗಳಲ್ಲಿಯೂ ಆಯಾ ಪದಾರ್ಥದ ಅನನ್ಯತೆಯೇ ಅದರ ಧರ್ಮ. ಆಯಾ ಪದಾರ್ಥಗಳ ಇರುವಿಕೆಗೆ ಅವುಗಳ ಧರ್ಮವೇ ಕಾರಣ. ಧರ್ಮವಿದ್ದರೆ ಮಾತ್ರ ನಂಬಿಕೆಗೂ ಅರ್ಹವಾಗುತ್ತದೆ.
ಎರಡನೆಯ ಪುರುಷಾರ್ಥವು ಅರ್ಥ. ಪ್ರಕೃತಿಯಲ್ಲಿರುವ ಸಮಸ್ತ ಪದಾರ್ಥಗಳೂ ಅರ್ಥವೇ. ಈಶ್ವರಸೃಷ್ಟಿಯೆಲ್ಲವೂ ಐಶ್ವರ್ಯವೇ. ಆಯಾ ಪದಾರ್ಥಗಳ ಧರ್ಮವರಿತು ಮೂಲಭೂತವಾದ ಧರ್ಮಕ್ಕೆ ಹಾನಿಯಾಗದಂತೆ ಬಳಸಿದಾಗ ಪರಮಾರ್ಥ. ಅರ್ಥ-ಕಾಮಗಳು, ಧರ್ಮ-ಮೋಕ್ಷದ ಸೀಮೆಯೊಳಗೆ ಇರಬೇಕು. ಆದ್ದರಿಂದಲೇ ಜ್ಞಾನಿಗಳು ‘ಧರ್ಮಾರ್ಥಕಾಮಮೋಕ್ಷ’ ಎಂಬುದಾಗಿ ಅರ್ಥ-ಕಾಮಗಳನ್ನು ಧರ್ಮ-ಮೋಕ್ಷಗಳ ನಡುವೆ ಇಟ್ಟಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಜೀವನವನ್ನು ಎಲ್ಲಾ ರೀತಿಯಲ್ಲಿ ಸುಖಮಯವನ್ನಾಗಿಸುವಲ್ಲಿ ಚತುರ್ವಿಧ ಪುರುಷಾರ್ಥಗಳ ಕಾರ್ಯ ಮಹತ್ವದ್ದು. ಆದರೆ ಇವೆಲ್ಲವುಗಳಲ್ಲಿ ಧರ್ಮವನ್ನು ಮೊಟ್ಟ ಮೊದಲು ಇರಿಸಲೂ ಒಂದು ಕಾರಣವಿದೆ. ಮನುಷ್ಯನ ಅರ್ಥ ಹಾಗೂ ಕಾಮಗಳ ಹಿಂದೆ ಬಿದ್ದು ಸಮಾಜದಲ್ಲಿ ಅವ್ಯವಸ್ಥೆಯನ್ನು ಹುಟ್ಟು ಹಾಕುತ್ತಿದ್ದನು. ಅಷ್ಟೇ ಅಲ್ಲದೆ ಕೊನೆಯ ಪುರುಷಾರ್ಥವನ್ನೇ ಮರೆಯುತ್ತಿದ್ದನು! ಈ ಅರ್ಥ ಹಾಗೂ ಕಾಮಗಳು ವಿಕೃತ ಜೀವನಕ್ಕೆ ಆಹ್ವಾನ ಇತ್ತಂತೆ. ಅರ್ಥ ಹಾಗೂ ಕಾಮಗಳನ್ನು ಬಿಟ್ಟು ನಮ್ಮ ಜೀವನ ಮುಂದೆ ಸಾಗದು. ನಾವು ಇವೆರಡರಿಂದ ಮುಕ್ತರಾಗಲಾರೆವು. ಆದರೂ ಅರ್ಥ ಸಂಪಾದನೆಯ ಭೂತವು ಮಾನವನ ತಲೆಯನ್ನು ಒಮ್ಮೆ ಹೊಕ್ಕರೆ ಮುಗಿಯಿತು. ಅವನ ವಿನಾಶ ನಿಶ್ಚಿತ. ಅದರಂತೆಯೇ ಕಾಮವೆನ್ನುವುದು ಮನುಷ್ಯನನ್ನು ಉನ್ಮತ್ತನನ್ನಾಗಿಸುತ್ತದೆ. ಸಮಾಜದಲ್ಲಿ ಅವನ ಮರ್ಯಾದೆಯನ್ನೇ ಕಳೆಯುವಂಥದು. ಇಂದು ಸಮಾಜದಲ್ಲಿ ಈ ಎರಡೂ ಪುರುಷಾರ್ಥಗಳ ಕಾರಣದಿಂದಾಗಿ ಮೋಕ್ಷ ಎಂಬ ಕಲ್ಯಾಣಕರ ಪುರುಷಾರ್ಥವನ್ನು ಉಪೇಕ್ಷಿಸಲಾಗುತ್ತಿದೆ. ಭ್ರಷ್ಟಾಚಾರ, ಅನಾಚಾರ, ಬಲಾತ್ಕಾರಗಳು ಹೆಚ್ಚುತ್ತಿವೆ. ಮನುಷ್ಯ ದಿನಗಳೆದಂತೆ ನಾನಾ ರೀತಿಯ ಮನೋರೋಗಗಳಿಗೆ ತುತ್ತಾಗುತ್ತಿದ್ದಾನೆ. ಧರ್ಮದ ಈ ಒಂದು ಕತ್ತಿಯು ಕೈಯಲ್ಲಿ ಇದ್ದರೆ ಮನುಷ್ಯನು ತನ್ನ ಮನದ ಕಲುಷಿತ ವಿಚಾರಗಳಿಗೆ, ತನ್ನ ಕೆಟ್ಟ ಆಶೆ-ಆಕಾಂಕ್ಷೆಗಳಿಗೆ ಕಡಿವಾಣ ಹಾಕಬಲ್ಲ. ತನ್ನ ಜೀವನವನ್ನು ಸರಳ, ಶಾಂತ ಹಾಗೂ ಆನಂದಮಯ ಸ್ಥಿತಿಗೆ ಒಯ್ಯಬಲ್ಲ.
ಅರ್ಥವು ಮನುಷ್ಯನ ಜೀವನದ ಉದ್ದೇಶವಾದ ಅನ್ನ, ವಸ್ತçಗಳನ್ನು ಒದಗಿಸಿಕೊಟ್ಟು ಅವನನ್ನು ಪೋಷಿಸುತ್ತದೆ. ನಮ್ಮ ಜೀವನಕ್ಕೆ ಅನ್ನ ಹಾಗೂ ವಸ್ತçಗಳನ್ನು ಗಾಳಿ, ನೀರುಗಳಂತೆ ವಿಪುಲವಾಗಿ ಆ ದೇವನು ಒದಗಿಸಿರುವುದಿಲ್ಲ. ಹಾಗೆಂದು ಅವುಗಳ ಕೊರತೆಯೂ ಇಲ್ಲ. ಆದರೂ ಮಾನವನದು ಸಂಗ್ರಹ ಮಾಡುವಂಥ ಆಶೆಯ ಬುದ್ಧಿ. ಈ ಪ್ರವೃತ್ತಿಯು ನಮಗೆ ರಾಮಾಯಣ ಹಾಗೂ ಮಹಾಭಾರತ ಕಾಲದಿಂದಲೂ ಇದೆ. ಯುದ್ಧಗಳಿಗೆ ಹೊನ್ನು, ಹೆಣ್ಣು ಮಣ್ಣುಗಳ ಒಡೆತನದ ಆಶೆಯೇ ಕಾರಣವಾಗಿದೆ. ಹೀಗಾಗಿ ಇವು ಎಲ್ಲರಿಗೂ ಸುಲಭವಾಗಿ, ಅಗತ್ಯಕ್ಕೆ ತಕ್ಕಂತೆ ಸಮನಾಗಿ ಪೂರೈಕೆಯಾಗುತ್ತಿಲ್ಲ. ಅನ್ನ-ವಸ್ತ್ರಗಳನ್ನು ಭಗವಂತನು ವಿಲಾಸಕ್ಕಲ್ಲ, ವಿಕಾಸಕ್ಕೆ ಒದಗಿಸಿದ್ದಾನೆ ಎಂಬುದನ್ನು ಮರೆತಿದ್ದೇವೆ. ಪೋಷಣೆಗೆ ಬೇಕಾದಂಥವನ್ನು ನಾವು ಇಂದು ಆಸ್ತಿಯನ್ನಾಗಿ ಮಾಡಿಕೊಂಡಿದ್ದೇವೆ. ಇಂದು ಧನಕನಕವುಳ್ಳವನೇ ಹಿರಿಯಣ್ಣನಾಗಿದ್ದಾನೆ. ಹಣ ಸಂಪಾದನೆ, ಅದು ಯಾವ ರೀತಿಯಿಂದಲೇ ಆಗಲಿ ಮಾಡಬೇಕು, ಹೆಚ್ಚು ಶ್ರೀಮಂತರಾಗಬೇಕು ಅನ್ನುವ ಹಪಾಹಪಿತನವನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಇಂದಿನ ಜೀವನ ರೀತಿಗೆ ಹಣ ಸಂಪಾದನೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದ್ದರೂ ಅದನ್ನು ಧರ್ಮದ ರೀತಿಯಲ್ಲಿ, ಧರ್ಮದ ಚೌಕಟ್ಟಿನಲ್ಲಿ ಮಾಡಬೇಕು ಅನ್ನುತ್ತದೆ ವೇದ.
ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಲಿದ್ದಾರೆ. ಬಡತನವು ಹೆಚ್ಚುತ್ತಹೊರಟಿದೆ. ಇದು ಕುಕರ್ಮಗಳನ್ನು ಮಾಡಲು ಪ್ರೇರಿಸುವುದರಿಂದಲೇ ಅರ್ಥದ ಗಳಿಕೆಯು ಪುರುಷಾರ್ಥದಲ್ಲಿ ಎರಡನೆಯ ಮಹತ್ವದ ಸ್ಥಾನ ಗಳಿಸಲು ಕಾರಣವಾಗಿದೆ. ಹಾಗಾದರೆ ಹಣ ಸಂಪಾದನೆಯನ್ನು ಹೇಗೆ ಮಾಡಬೇಕು? ಅಕ್ರಮ ಹಣ ಸಂಪಾದನೆ ಸಲ್ಲದು, ಹಣ ಸಂಪಾದನೆಯೇ ಗುರಿಯಾಗಬಾರದು ಎನ್ನುತ್ತದೆ ಋಗ್ವೇದದ ಈ ಮಂತ್ರ:
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ |
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ || (ಋಕ್.೧೦.೩೪.೧೩.)
ದಾಳಗಳಿಂದ ಜೂಜಾಡಬಾರದು, ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. ನಿಜವಾದ ದುಡಿಮೆಯಿಂದ ಲಭಿಸುವ ಹಣದಲ್ಲಿ ಸಂತುಷ್ಟನಾಗಿರು. ಕಷ್ಟದ ದುಡಿಮೆಯಲ್ಲೇ ಗೋಸಂಪತ್ತು, ದಾಂಪತ್ಯಸುಖವಿದೆ ಎಂದು ಇದರ ಅರ್ಥ. ಇಲ್ಲಿ ದಾಳ ಎಂದರೆ ಪಗಡೆಯಾಟದಲ್ಲಿ ಉಪಯೋಗಿಸುವ ಆಟದ ಸಾಧನವೆಂಬ ಅರ್ಥ ಬರುವುದಾದರೂ, ಅದನ್ನು ಸೂಚ್ಯವಾಗಿ ಬಳಸಲಾಗಿದ್ದು, ಎಲ್ಲಾ ರೀತಿಯ ಜೂಜುಗಳಿಗೂ, ಅಕ್ರಮ ರೀತಿಯಲ್ಲಿ ಹಣ ಸಂಪಾದಿಸುವ ಎಲ್ಲಾ ವಿಧಾನಗಳಿಗೂ (ಉದಾ: ಬೆಟ್ಟಿಂಗ್, ಕಾಳಸಂತೆ, ಲಾಟರಿ, ಲಂಚ, ಇತ್ಯಾದಿ) ಇದು ಅನ್ವಯವಾಗುತ್ತದೆ.
ಅಥರ್ವವೇದದ ಈ ಮಂತ್ರ ಅನುಕರಣೀಯ, ಪುರುಷಾರ್ಥದ ನೈಜ ಮೌಲ್ಯ ಇಲ್ಲಿ ಕಾಣಸಿಗುತ್ತದೆ:
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ || (ಅಥರ್ವ.೩.೨೪.೫.)
ನೂರು ಕೈಗಳಿಂದ ಚೆನ್ನಾಗಿ ಸಂಪಾದನೆ ಮಾಡು. ಸಾವಿರ ಕೈಗಳಿಂದ ಚೆನ್ನಾಗಿ ಕೊಡು. ನಿನ್ನ ಕಾರ್ಯದ ವಿಸ್ತಾರ ಈ ರೀತಿ ಸಾಧಿತವಾಗಲಿ ಎಂಬ ಆಶಯ ಅತ್ಯಂತ ಉದಾತ್ತವಾದದ್ದು. ಎಷ್ಟು ಕಷ್ಟಪಟ್ಟು ದುಡಿಯಲು ಸಾಧ್ಯವೋ ಅಷ್ಟು ದುಡಿದು ಹೇರಳವಾಗಿ ಹಣ ಸಂಪಾದನೆ ಮಾಡಬೇಕು. ಆದರೆ ಅದನ್ನು ಧಾರಾಳವಾಗಿ ಅವಲಂಬಿತರಿಗೆ, ಅವಶ್ಯಕತೆಯಿರುವವರಿಗೆ ಉಪಯೋಗಿಸಬೇಕು. ಅದರಲ್ಲಿಯೇ ಜೀವನದ ಸಾರ್ಥಕತೆಯಿದೆ ಎನ್ನುವ ಈ ಉದಾತ್ತತೆಗೆ ಸಾಟಿಯಿಲ್ಲ. ಹಣ ಮಾಡಬೇಕು, ಆದರೆ ಅಕ್ರಮವಾಗಿಯಲ್ಲ. ಹಾಗಾದರೆ ಹಣವನ್ನು ಸಂಪಾದಿಸುವುದು ಹೇಗೆ? ಈ ಮಂತ್ರ ದಾರಿ ತೋರಿಸುತ್ತಿದೆ:
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಬ್ಯಾತ್ || (ಋಕ್.೧೦.೩೧.೨.)
ಹಣವನ್ನು ನಾವು ಎಲ್ಲ ರೀತಿಗಳಿಂದಲೂ ಗಳಿಸಬಹುದು. ಭ್ರಷ್ಟಾಚಾರ, ಅನಾಚಾರ, ಕೊಲೆ, ಸುಲಿಗೆಗಳು ಧರ್ಮಮಾರ್ಗದ ಸಂಪಾದನೆಗಳಲ್ಲ. ಅವುಗಳ ಅಂತ್ಯವೂ ದುರಂತವೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸದಸದ್ವಿವೇಕದಿಂದ ಸನ್ಮಾರ್ಗದಲ್ಲಿ ನ್ಯಾಯಯುತವಾಗಿ ದುಡಿಯಬೇಕು. ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ವಿಧೇಯತೆಯಿಂದ ಸಂಪಾದನೆ ಮಾಡಬೇಕು. ಸದ್ವಿಚಾರ, ಸದಾಚಾರಗಳಿಂದ ಕೂಡಿದ ಮಾತುಗಳನ್ನಾಡಬೇಕು. ಮನಸ್ಸಿನಿಂದ ಶ್ರೇಯಸ್ಕರವಾದ ಶಕ್ತಿಯನ್ನು ಗ್ರಹಿಸಬೇಕು. ಈ ದಾರಿಯಲ್ಲಿ ನಡೆದು ಮಾಡುವ ಸಂಪಾದನೆಯೇ ನೈಜ, ಅರ್ಥಪೂರ್ಣ ಅರ್ಥಸಂಪಾದನೆ. ಸದ್ವಿಚಾರಗಳನ್ನು ಮಾಡೋಣ, ಒಳ್ಳೆಯ ರೀತಿಯಲ್ಲಿ ಸಂಪಾದಿಸೋಣ, ಸಮಾಜದಿಂದ ನಾವು ಗಳಿಸುವ ಹಣವನ್ನು ಉಚಿತ ರೀತಿಯಲ್ಲಿ ಸ್ವಂತದ ಉಪಯೋಗಕ್ಕೆ ಅಲ್ಲದೆ ಸಮಾಜದ ಒಳಿತನ್ನೂ ಗಮನದಲ್ಲಿರಿಸಿ ವಿನಿಯೋಗಿಸೋಣ ಎಂಬ ವೇದದ ಕರೆ ಸದಾಕಾಲಕ್ಕೂ ಒಪ್ಪಿಗೆಯಾಗುವಂತಹದು.
ಆದ್ದರಿಂದಲೇ ನಮ್ಮ ತತ್ವಜ್ಞಾನದಲ್ಲಿ ವಿಶ್ವ ಕಲ್ಯಾಣದ ಕಲ್ಪನೆಗೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದೆ. ಸರ್ವಭೂತ ಹಿತೇ ರತಃ ಮತ್ತು ಸರ್ವೆ ಭವಂತು ಸುಖಿನಃ ಎಂಬ ಮಾತುಗಳನ್ನು ಅಳವಡಿಸಿಕೊಂಡು ಧರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಲು ಹೇಳಿದೆ. ನಮ್ಮ ಋಷಿ-ಮುನಿಗಳು ಜೀವನದಲ್ಲಿ ಸಮಸ್ತವೂ ಈ ನಾಲ್ಕರ ಚೌಕಟ್ಟಿನಲ್ಲಿರುವಂತೆ ಜೀವನವನ್ನು ರೂಪಿಸಿಕೊಟ್ಟಿದ್ದಾರೆ. ಇದನ್ನು ಅರಿತು ಅಳವಡಿಸಿಕೊಂಡು ಬಾಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ.

Leave a Reply