ಮುತ್ಸದ್ಧಿ ಯಾರು

ಮುತ್ಸದ್ಧಿ ಯಾರು

ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ವಿವರಗಳನ್ನು ಓದುತ್ತಿರುವಾಗ, ಚಾನೆಲ್ಲುಗಳ ಚರ್ಚೆ ಹೆಸರಿನಲ್ಲಿ ಹುಚ್ಚುಚ್ಚಾದ ವರ್ತನೆ, ಮಾತು ನೋಡಿದಾಗ ನಮ್ಮ ದೇಶದಲ್ಲಿ ಏನು ನಡೀತಾ ಇದೆ, ಏನಾದರೂ ಪ್ರಬುದ್ಧತೆ ಇದೆಯಾ ಅನ್ನುವ ಸನ್ನಿವೇಶ ಬಂದೊದಗಿದೆ. ಅಂದರೆ ಹೆಚ್ಚಿನ ನಾಯಕರು, ಮಂತ್ರಿಗಳು, ಪುಢಾರಿಗಳು, ಮಾಧ್ಯಮ ನೇತಾರರು ಒಂದು ಮ್ಯಾಚುರಿಟಿ, ಪಕ್ವತೆ ಪ್ರದರ್ಶನ ಮಾಡತಾ ಇಲ್ಲ ಅನಿಸುತ್ತಿದೆ. ಮಾತನಾಡುವ ಸ್ಯಾಂಪಲ್ ನೋಡ್ರಿ “ಅವರ ಯಾರಿಗೆ ಹುಟ್ಟ್ಯಾರೋ ಗೊತ್ತಿಲ್ಲ”, “ನಿಚಾ” ‘ಇನ್ನೊಬ್ಬ ಭೂಪ 5000ರೂಪಾಯಿಗೆ ಸಿಗೋ ಪಾನ್ ತಿಂದು ಹೆಚ್ಚಿಗಿ ಆಗಿ’ ಹೀಗೆ ಒಂದೇ, ಎರಡೇ ಹಲವಾರು ಉದಾಹರಣೆ ಕೊಡಬಹುದು. ಪ್ರತಿ ಚಾನೆಲ್‍ನಲ್ಲಿ ಪ್ರತಿ ಪತ್ರಿಕೆಯಲ್ಲಿ, ರಾಜಕಾರಣಿಗಳು ಭಾಗವಹಿಸುವ ಸಮಾರಂಭಗಳಲ್ಲಿ ಅದೂ ಈಗ ಚುನಾವಣಾ ಸಮಯದಲ್ಲಿ ಇವೆಲ್ಲ ನಿತ್ಯ ಮಾಮೂಲಾಗಿದೆ.
ಮ್ಯಾಚುರಿಟಿ ಅಂದರೆ ಮಾಗಿದ, ಪಕ್ವತೆ ಸೂಚಿಸುವ ಸ್ಥಿತಿ. ಅದೊಂದು ಕ್ಯಾಲುಕುಲೇಟೆಡ್ ಸಹಿಷ್ಣುತೆ. ತಾಳ್ಮೆ, ಸಹನೆ ಮತ್ತು ವಿನಯತುಂಬಿದ ಮಾತು, ತೂಕದ ಮಾತುಗಳ ಸಾಕಾರತೆ. ಮುತ್ಸದ್ಧಿ ಅಂದರೆ ಮ್ಯಾಚುರಿಟಿಯ ರೂಪ. ಇಂದು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಮತ್ತು ನಾವುಗಳು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಎಲ್ಲಿಯಾದರೂ ಈ ಮುತ್ಸದ್ಧಿತನದ ಅಭಾವ ನೋಡಬಹುದಾಗಿದೆ. ಹಲವಾರು ನಾಯಕರು ಎಲ್ಲ ಕಡೆ ಸಿಗುತ್ತಾರೆ. ಆದರೆ ಮುತ್ಸದ್ಧಿಗಳು ಸಿಗುವುದಿಲ್ಲ.
ಮುತ್ಸದ್ಧಿ ಅಂದರೆ ಯಾರು? ನುರಿತ, ಅನುಭವಿ, ಯಾವುದೇ ಭಾವನೆಗಳನ್ನು ನಿಯಂತ್ರಿತವಾಗಿ ಮುಖದಲ್ಲಿ ತೋರಿಸಬಲ್ಲ ಸಾಮರ್ಥ್ಯಉಳ್ಳವ, ಮಿತಭಾಷಿ, ತೂಕದ ಮಾತಿನ ವಾಗ್ಮಿ, ಕುಶಾಗ್ರಮತಿ, ಚಾಣಾಕ್ಷ, ನಮ್ಮ ತಲೆಮಾರಿನವರು ನೋಡದ ಮಹಾತ್ಮ ಗಾಂಧಿ, ಸರದಾರ ವಲ್ಲಭಭಾಯಿ ಪಟೇಲ್, ಈ ಪಂಗಡಕ್ಕೆ ಸೇರುವರು. ಇತಿಹಾಸದ ಪುಟಗಳನ್ನು ತೆರೆದರೆ ಚಾಣಕ್ಯ, ವಿದ್ಯಾರಣ್ಯ, ಬಸವಣ್ಣ, ಅವರುಗಳನ್ನು ಹೆಸರಿಸಬಹುದು. ಇವರೆಲ್ಲ ಧರ್ಮ ಮತ್ತು ರಾಜಕಾರಣ, ಸಮಾಜ ಸುಧಾರಣೆ, ವೈಯಕ್ತಿಕ ಜವಾಬ್ದಾರಿಗಳನ್ನು ಅರಿತುಕೊಂಡು ಸಮನ್ವಯತೆ ಮಾದರಿಯಲ್ಲಿ ನಂಬಿ ನಡೆಯುವರಾಗಿದ್ದರು. ಇದರಲ್ಲಿ ಯಾರೂ ರಾಜರಾಗಲಿ, ಸಾರ್ವಭೌಮರಾಗಿರಲಿಲ್ಲ. ಅವರೆಲ್ಲ ಒಂದು ರೀತಿಯಿಂದ ರಾಜರನ್ನು ಮಾಡುವರಾಗಿದ್ದರು. ಅವರಾರಿಗೂ ಅವರ ಕುಟುಂಬ ಮುಖ್ಯವಾಗಿರಲಿಲ್ಲ. ಅದಕ್ಕೂ ಹೆಚ್ಚಿನ ದೇಶ, ಸಾಮ್ರಾಜ್ಯ ಮೌಲ್ಯಾಧಾರಿತ ಸಮಾಜ ಕಟ್ಟುವುದೇ ಮುಖ್ಯವಾಗಿತ್ತು.
ಇಂದು ಕಾಲ ಬದಲಾದಂತೆ, ಶಿಕ್ಷಣ ಕ್ರಮ ಬದಲಾದಂತೆ, ಎಲ್ಲವೂ ಬದಲಾಗುತ್ತಿದೆ. ಆಗಿನ ಉದಾಹರಿಸಬಹುದಾದ ಧುರೀಣರು, ನಾಯಕರು ಈಗಿಲ್ಲ. ಕಾನೂನು ಸಮ್ಮತವಲ್ಲದ ಸಿಕ್ಕಾಪಟ್ಟೆ ಮಾರ್ಗಗಳಿಂದ ಸಿಕ್ಕಪಟ್ಟೆ ದುಡ್ಡು ಮಾಡಿದವರು, ಮಾಡುವ ಹವಣಿಕೆ ಹಂಬಲಗಳನ್ನು ತುಂಬಿಕೊಂಡವರು, ಜಾತಿ ಒಳಜಾತಿಗಳ ಬಲೂನಗಳಲ್ಲಿ ಮೇಲೆ ಯಶಸ್ಸಿನ ಆಕಾಶದಲ್ಲಿ ಎರಬೇಕೆನ್ನುವರಿಂದ ತುಂಬಿಕೊಂಡ ಸಾಂದ್ರತೆ ಹೆಚ್ಚಿರುವ ಸನ್ನಿವೇಶದಲ್ಲಿ ರೋಲ್ ಮಾಡೆಲ್ಲುಗಳನ್ನು ಹುಡುಕುವುದು ಸಾಮಾನ್ಯರಿಗೆ ಕಠಿಣ. ಇನ್ನು ಜಾಣ ಜನರಿಗೆ ಅನುಕೂಲ ಸಿಂಧು ಮಾರ್ಗ ಮಾರ್ಗದ ಒಂದು ಭದ್ರ ಬುನಾದಿಯೆಂದರೆ ಆ ಸಿದ್ಧಾಂತ ಮಾರ್ಗವನ್ನು ಮೆಚ್ಚುವರು ಇದ್ದೆ ಇರುತ್ತಾರೆ. ಅವರ ಸಂಖ್ಯೆ ಕ್ರಮೇಣ ಪೋಷಿಸುವರ ಸಾಮರ್ಥ್ಯದ ಮೇಲೆ ಹೆಚ್ಚಾಗುತ್ತಾ ಹೋಗುತ್ತದೆ. ಲೇಟೆಸ್ಟ್ ಉದಾಹರಣೆ ಎಂದರೆ ಮತ ರಾಜಕಾರಣದ ಅನುಕೂಲ ಸಿಂಧು ಮಾರ್ಗ ಲಿಂಗಾಯಿತ ಮತ್ತು ವೀರಶೈವ ಮತರಾಜಕಾರಣ, ಸ್ವಾಮಿ ಪ್ರತಿಷ್ಠತೆ, ಮತ್ತು ಮೈನಾರಿಟಿ ಅಸ್ತ್ರಗಳನ್ನು ಮಾಡಿಕೊಳ್ಳುವ ಒಂದು ವ್ಯವಸ್ಥಿತ ಅನುಕೂಲಸಿಂಧೂಮಾರ್ಗದಲ್ಲಿ ನುಡಿದದ್ದೇ ಬಂತು, ಆಡಿದ್ದೇ ಬಂತು ಅನ್ನುವ ರೀತಿ ಢಾಳಾಗಿ ಕಂಡು ಬಂದಿರುವುದು. ಎಲ್ಲರೂ ತಮ್ಮ ತಮ್ಮ ಪ್ರತಿಪಾದನೆಯ ರೀತಿಯಲ್ಲಿ ಆಹಾ ಎನ್ನುವ ವಿಚಾರಗಳನ್ನು ಪರಿಪಕ್ವತೆ ಮುಟ್ಟಿದ ಅಂದರೆ ಸಂಶಯದ ಮ್ಯಾಚುರಿಟಿ ಪದಪುಂಜಗಳ ಪ್ರಯೋಗಿಸುವುದನ್ನು ನೋಡಿದಾಗ ಅಯ್ಯೋ ಇಲ್ಲಿಗೆ ಬಂತಲ್ಲ ಪರಿಸ್ಥಿತಿ ಅನಿಸುತ್ತದೆ. ಇಲ್ಲಿ ನೆನಪಿಡಬೇಕು. ಇಂತಹವಕ್ಕೂ ಚಪ್ಪಾಳೆ ಪ್ರಶಂಸನೆಗಳು ಇರುತ್ತವೆ. ಆನ ಮರುಳೋ ಜಾತ್ರೆ ಮರುಳೋ ಅನ್ನುವ ಸಮೂಹ ಸನ್ನಿಯಲ್ಲಿ ಮೈಕು ಸಿಕ್ಕಾಗ, ಯಾವ ಯಾವುದೋ ಕಾರಣಕ್ಕಾಗಿ ಟ್ರಕ್ಕುಗಟ್ಟಲೇ ಬಂದ ಜನಸಮೂಹದ ಮುಂದೆ ತಮ್ಮ ತಮ್ಮ ಪಕ್ವತೆಯ ಪ್ರದರ್ಶನ ಎಲ್ಲ ಪುಡಿ, ಪಡ್ಡೆ ನಾಯಕರು ಮಾಡಿಯೇ ಬಿಡುತ್ತಾರೆ. ಇಂಥಹದರಲ್ಲಿ ಜನ ಸಮುದಾಯ, ಸರ್ಕಾರ ಕೃಪಾಪೋಷಿತ ಸ್ವಾಮಿಗಳೂ ಹಿಂದೆ ಬಿದ್ದಿಲ್ಲ. ಅಧಿಕಾರ ಹೊಂದಿದ ಮಂತ್ರಿಗಳು, ಅಧಿಕಾರದ ರುಚಿ ಕಂಡ ರುಚಿಗಾರರು ಯಾರೂ ಸುಮ್ಮನೆ ಕೂಡುವ ಜಾಯಮಾನದವರೇ ಇರುವುದಿಲ್ಲ. ಹೇಗೋ ಹೇಗೋ ಮಾಡಿ ತುಂಬಿದ ಸಭೆಗಳಿಗೆ ಬಂದ ಜನಮಂದೆ ಎದುರು ನಿಂತಾಗ ಮಾತನಾಡಿದವನೆ ನಾಯಕ, ಅದರಲ್ಲೂ ಚಪ್ಪಾಳೆ ಎಲ್ಲವೂ ನಾಯಕತ್ವಕ್ಕೆ ಪ್ರಚೋದನೆಯೇ.
ಸಮೂಹ ಸನ್ನಿಯ ಚಪ್ಪಾಳೆ ಅಮಲೇರಿಸುವ ಮಾದಕತೆಯ ದ್ರವ್ಯ ಹೊಂದಿರುತ್ತದೆ. ಅದು ಒಂದ ಥರಾ ಬಿಯರ್, ಬ್ರ್ಯಾಂಡಿ, ರಮ್, ಜಿನ್, ವೈನ್, ವಿಶ್ಕಿ ಇದ್ದ ಹಾಗೆ. ಕೆಲವರ ಪ್ರಕಾರ ವೈನ್, ಜಿನ್ ಡ್ರಿಂಕೇ ಅಲ್ಲ ಹೆಂಗಸರಿಗಾಗಿ ಮಾತ್ರ ಅನ್ನೋ ಅಭಿಪ್ರಾಯವಿರುತ್ತದೆ. ಹೀಗೆ ಮಾತಿನಿಂದ ಅಮಲೇರಿಸುವ ಪ್ರಕಾರದಲ್ಲಿ, ಸೆಕ್ಸ್ ಸಂಬಂಧಿಸಿದ, ಧರ್ಮ, ಜಾತಿ, ಉಪಜಾತಿ, ತೃತೀಯಲಿಂಗಿ ಸಂಬಂಧಿ, ದೇವರು, ಮೂಢನಂಬಿಕೆಗಳು ಹೀಗೆ ಬ್ರಾಂಡ್ ಹೆಸರಿಸಬಹುದು. ಪ್ರತಿ ವಿಷಯವೂ ಅದರದೇ ಆದ ಅಮಲೇರಿಸುವ ತಾಕತ್ತು ಹೊಂದಿದೆ. ಇನ್ನು ಕೆಲವು ಪದಪುಂಜಗಳಾದ ಮನುವಾದಿ, ಪುರೋಹಿತಶಾಹಿ ಇತ್ಯಾದಿಗಳು ಮಾದಕ ಪೇಯ ತಯಾರು ಮಾಡಲು ಸ್ಕಾಟ್ ಲೆಂಡ ಕಟ್ಟಿಗೆಯ ಪಿಪಾಯಿಗಳಲ್ಲಿ ವರ್ಷಗಟ್ಟಲೇ ಸಂಗ್ರಹಿಸಿ ಇಟ್ಟ ಹಾಗೆ ಶತಮಾನಗಳ ಕಟ್ಟಿಗೆ ಸಂಸ್ಕೃತಿ ಪಿಪಾಯಿಗಳಲ್ಲಿ ಅಧಿಕಾರದ ಅಮಲಿಗಾಗಿ ಯಾವ ಸಂವಿಧಾನ ವಿಧಿ ವಿಧಾನ ಬದಲಿಸದೆ ಜತನದಿಂದ ಸಂಗ್ರಹಿಸಿ ಇಟ್ಟದ್ದು. ಇದೇ ನಾಯಕರಿಗೆ ಬೇಕಾದದ್ದು. ಮುತ್ಸದ್ಧಿಗಳಿಗೆ ಅಲ್ಲ. ಏಕೆಂದರೆ ಮುತ್ಸದ್ಧಿಗಳು ಕಾಲಮಿತಿಯಲ್ಲಿ ಕಾಲದಾಚೆ ಆಗಬಹುದಾದ ಆಮೋದ, ಪ್ರಮೋದ ಮತ್ತು ಪ್ರಮಾದಗಳ ಬಗ್ಗೆ ಅರಿತಿರುತ್ತಾರೆ. ಆದರೆ ಹಿಂಬಾಲಕರು ಮುತ್ಸದ್ಧಿಗಳನ್ನು ನಾಯಕರನ್ನಾಗಿ ಮಾಡಲು ಹೊರಟಾಗ ಅವರು ಅವರಿಗೆನೇ ಗೊತ್ತಿಲ್ಲದ ಹಾಗೆ ಸೀಮಿತ ವರ್ಗಕ್ಕೆ ಸೀಮಿತರಾಗಿ ಬಿಡುವುದು ದೈವ ದುರಂತ. ನಾಯಕನಾಗಿ ಸ್ಥಾಪಿತವಾದ ನಂತರ ಕಾಲ ಕ್ರಮೇಣ ಮುತ್ಸದ್ಧಿಯಾಗಿ ರೂಪುಗೊಳ್ಳುತ್ತ ಅಂದರೆ ಸೂರ್ಯ ಅಥವಾ ತಾಯಿಯ ಹಾಗೆ ಸಾರ್ಥಕತೆ ಪಡೆಯುವುದು. (ಅಂದರೆ ಯಾವ ಆಸೆ, ಅಪೇಕ್ಷೆಗಳಿಲ್ಲದೆ ತಮ್ಮ ಗುರಿ ತಲುಪುವದು.) ಈ ರೀತಿ ವಿಶ್ಲೇಷಣೆ ಮಾಡುತ್ತ ಹೋದಾಗ ನಾವೇ ಯಾರು ಮುತ್ಸದ್ಧಿ ಯಾರು ನಾಯಕರು ಅಂತಾ ನಿರ್ಧರಿಸಬೇಕಾಗುತ್ತದೆ ಅದೂ ಆಗದಿದ್ದರೆ ಕಟುಕ ನಿರ್ಧರಿಸುತ್ತದೆ!
ಕೃಪೆ : ಸಂಯುಕ್ತ ಕರ್ನಾಟಕ

Leave a Reply