ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..!
ಹಿಂದೊಮ್ಮೆ ಒಬ್ಬ ರಾಜ ಆಗಾಗ ಮಂತ್ರಿಯನ್ನು ಕರೆದು ಆತನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ಒಮ್ಮೊಮ್ಮೆ ಸಿಟ್ಟಿನಿಂದ ಒರಟಾಗಿಯೂ ವರ್ತಿಸುತ್ತಿದ್ದ. ಎಲ್ಲರೂ ಶಭಾಷ್ ಅಂದ ಕಾರ್ಯದಲ್ಲಿ ಕೂಡಾ ರಾಜ ಏನೋ ಕೊಂಕು ಕಾಣುತ್ತಿದ್ದ. ಯಾರ ಕಣ್ಣಿಗೂ ಕಾಣಿಸದ ಕೊರತೆ, ಮಹಾರಾಜರಿಗೇಕೆ ಹೀಗೆ ಗೋಚರಿಸುತ್ತೆ…? ಮಂತ್ರಿಯ ವ್ಯಾಕುಲತೆಗೆ ಕಾರಣವಾದದ್ದೇ ಇದು. ರಾಜ್ಯಾಡಳಿತ ಎಲ್ಲಾ ಸರಿಯಾಗಿ ನಡೆಯುತ್ತಿದ್ದರೂ ರಾಜನಿಗೆ ತನ್ನ ಮೇಲೇಕೆ ಕೋಪ…? ಮಂತ್ರಿ ಯೋಚಿಸಿಯೇ ಯೋಚಿಸಿದ. ಬಹಳ ದಿನಗಳ ತೊಳಲಾಟದ ನಂತರ ಸತ್ಯವೊಂದು ಸ್ಪಷ್ಟವಾಯಿತು.
ಹಾಗಂತ ನಡೆದದ್ದಾದರೂ ಇಷ್ಟೇ…! ರಾಜ ಕ್ಷೌರ ಮಾಡಿಸಿಕೊಳ್ಳುವಾಗ ಲೋಕಾಭಿರಾಮವಾಗಿ ಮಾತಿನ ಮಧ್ಯೆ ಕ್ಷೌರಿಕನಲ್ಲಿ ರಾಜ್ಯದ ಸ್ಥಿತಿ-ಗತಿಯ ಬಗ್ಗೆ ವಿಚಾರಿಸುತ್ತಿದ್ದ. ಆತನ ಮಾತುಗಳಾದರೋ ಹೀಗಿತ್ತು; ರಾಜ್ಯದಲ್ಲಿ ಬಹಳ ಬಡತನವಿರುವುದಾಗಿಯೂ, ಪ್ರಜೆಗಳು ತುಂಬಾ ಕಷ್ಟಪಡುತ್ತಾರೆಂದೂ ರಾಜನಿಗೆ ಕಿವಿಯೂದಿದ. ರಾಜ್ಯದ ಪ್ರಸಕ್ತ ಪರಿಸ್ಥಿತಿ ಕೇಳಿ ರಾಜ ಕಳವಳಗೊಂಡ. ಈ ಕಾರಣದಿಂದಲೇ ಮಂತ್ರಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಳ್ಳುತ್ತಿದ್ದ. ಇದಕ್ಕೆಲ್ಲಾ ಪರಿಹಾರವೆಂಬಂತೆ ಮಂತ್ರಿ ಕೊನೆಗೂ ಒಂದು ಉಪಾಯ ಮಾಡಿದ. ಕ್ಷೌರಿಕನ ಮನೆಗೆ ಸ್ವಲ್ಪ ದುಡ್ಡು ಮತ್ತು ದವಸ-ಧಾನ್ಯಗಳನ್ನು ಕಳುಹಿಸಿ ಸುಮ್ಮನಿದ್ದುಬಿಟ್ಟ. ಮುಂದಿನ ತಿಂಗಳು ಮತ್ತೆ ಕ್ಷೌರ ಮಾಡುವಾಗ, ಎಂದಿನಂತೆ ಪ್ರಜೆಗಳ ಯೋಗಕ್ಷೇಮದ ಬಗ್ಗೆ ರಾಜನ ಮಾತು ಮೊದಲಾಯಿತು. ರಾಜ್ಯದ ಜನರೆಲ್ಲಾ ಉಂಡುಟ್ಟು ಕ್ಷೇಮವಾಗಿದ್ದಾರೆಂದು ಕ್ಷೌರಿಕ ತಿಳಿಸಿದ. ರಾಜ್ಯವೀಗ ಸುಭಿಕ್ಷವಾಗಿದೆಯೆಂದೂ ಮಾತು ಸೇರಿಸಿದ. ರಾಜ ಈಗ ನಿಜಕ್ಕೂ ಗೊಂದಲಕ್ಕೆ ಬಿದ್ದ. ಒಂದು ತಿಂಗಳ ಹಿಂದಷ್ಟೇ ಕಷ್ಟ-ಕಾರ್ಪಣ್ಯ ಎದುರಿಸುತ್ತಿದ್ದ ರಾಜ್ಯದ ಜನ ತಿಂಗಳೊಂದರಲ್ಲೇ ಸುಖ ಸಮೃದ್ಧಿ ಸಾಧಿಸುವುದೆಂದರೇನು..? ಈ ಸಾಧನೆಯ ಹಿಂದಿದ್ದ ಮಂತ್ರಿಯ ಮಾಯಾಜಾಲವಾದರೂ ಏನು..? ಯಾವ ಮಂತ್ರದಂಡ ಪ್ರಯೋಗಿಸಿರಬಹುದು..? ತನ್ನ ನಡವಳಿಕೆ ಮಂತ್ರಿಯಲ್ಲೇನಾದರೂ ಬದಲಾವಣೆ ತಂದಿತಾ, ಅಂತ ಅಚ್ಚರಿಗೊಂಡ. ಮಂತ್ರಿಗೆ ಹೋಯಿತು ಬುಲಾವು. ಕೇವಲ ತಿಂಗಳೊಂದರಲ್ಲೇ ರಾಜ್ಯ ಸಮೃದ್ಧಿಯಾದ ಕಾಡುತ್ತಿದ್ದ ಪ್ರಶ್ನೆ ಮುಂದಿಟ್ಟ. ಅದಕ್ಕೆ ಮಂತ್ರಿಯ ಉತ್ತರವಾದರೋ ಹೀಗಿತ್ತು.
ಸ್ವಾಮಿ; ಕ್ಷೌರಿಕ ಹಿಂದೆ ಸ್ವಲ್ಪ ಕಷ್ಟದಲ್ಲಿದ್ದ. ಹಾಗಾಗಿ ಆತನಿಗೆ ಜಗತ್ತೆಲ್ಲಾ ಕಷ್ಟ-ತೊಂದರೆಯಲ್ಲಿದ್ದಂತೆ ಭಾಸವಾಯಿತು. ವೈಯಕ್ತಿಕ ಕಷ್ಟವನ್ನೇ ಸಾರ್ವತ್ರಿಕವೇನೋ ಎಂಬಂತೆ ಭಾವಿಸಿದ. ಇದನ್ನು ಗಮನಿಸಿದ ನಾನು ಆತನ ತೊಂದರೆ ನಿವಾರಿಸಿದೆ. ಈ ತಿಂಗಳು ತನಗೆ ತಾಪತ್ರಯ ಇಲ್ಲದ್ದರಿಂದ ಆತನಿಗೆ ಇಡೀ ಜಗತ್ತೇ ಸುಖವಾಗಿದ್ದಂತೆ ಕಂಡಿತು. ಈ ವಿಚಾರ ಅರಿಯದ ನೀವು ನಿಜವಾಗಿಯೂ ಪ್ರಜೆಗಳು ತೊಂದರೆಯಲ್ಲಿದ್ದಾರೆಂದು ಭಾವಿಸಿ ಕಳವಳಪಟ್ಟಿರಿ ಅಷ್ಟೆ ಅಂದ. ಇನ್ನು ಕಥೆ ಕಾಡಿಗೆ ಹೋಗಲಿ..!
ಇದ್ಯಾವುದೋ ಅಡುಗೂಲಜ್ಜಿ ಕಥೆಯಷ್ಟೇ ಅಂದುಕೊಂಡು, ಇನ್ನು ಲೌಕಿಕದತ್ತ ಕಣ್ಣು ಹಾಯಿಸಿದರೆ, ಅಲ್ಲಿ ಕಾಣುವುದಾದರೂ ಏನು..? ಹೇಗೆ ನೋಡಿದರೂ, ಈಗಲು ಸಣ್ಣ ಸಣ್ಣ ಕಷ್ಟಗಳು ಬಂದೆರಗಿದಾಗೆಲ್ಲಾ ನಮಗೋ ಇಡೀ ಲೋಕವೇ ಘೋರ, ಭೀಕರ ಅನ್ನಿಸತೊಡಗುತ್ತದೆ. ಒಂದೊಮ್ಮೆ ಸಣ್ಣ ಖುಷಿ ದಕ್ಕಿದರಂತೂ ಬಿಡಿ, ಜಗತ್ತೆಲ್ಲಾ ಸಂಭ್ರಮೋಲ್ಲಾಸದಲ್ಲಿ ಹಸಿರಾಗಿರುವಂತೆ ಗೋಚರಿಸುತ್ತದೆ!
ಅಲ್ಲಿಗೆ ಆಗಬೇಕಾದ್ದು ಇಷ್ಟೇ; ಹೀಗೆ ಲೌಕಿಕದಲ್ಲಿ ಇದ್ದುಕೊಂಡೇ ಅಲೌಕಿಕದತ್ತ ಮುಖ ಮಾಡುವುದು. ಇಲ್ಲಿ ಬಂಧನಗಳಿರುತ್ತವೆ, ಘರ್ಷಣೆಗಳಿರುತ್ತವೆ, ಪಾಶವಿರುತ್ತದೆ. ಆದರೆ ಅದರ ನಡುವಿನಲ್ಲಿ ಇದ್ದುಕೊಂಡೇ ತಾನು ಕನಸಿದುದನ್ನು ಸಾಧಿಸುತ್ತಾ ಹೋಗುವುದು. ಇದಕ್ಕೆ ಪೂರ್ಣ ರೂಪದಲ್ಲಿ ಸಹಕರಿಸುವುದು ನಮ್ಮ ದೃಢ ಸಂಕಲ್ಪ. ಕೊನೆಗೂ ಸೋಲು-ಅಥವಾ-ಗೆಲುವನ್ನು ಒಟ್ಟಾಗಿಯೇ ಜೀರ್ಣಿಸಿಕೊಳ್ಳುವ ತಾತ್ವಿಕ ನಿಲುವನ್ನ ಪೋಷಿಸಿಕೊಂಡು ಬರುವುದು ಸಮರ್ಥನೀಯವೆನಿಸುತ್ತದೆ. ಈಗ ಇವೆಲ್ಲವನ್ನು ಒಳಗೊಂಡ ನಮ್ಮ ನೆಮ್ಮದಿ ಸ್ಥಿರವಾಗಿರಲಿ. ಖುಷಿ ಎಲ್ಲರದ್ದೂ ಆಗಲಿ.
You must log in to post a comment.