Need help? Call +91 9535015489

📖 Print books shipping available only in India. ✈ Flat rate shipping

ಅವಳು ಅತ್ತಿಹೂವು

ಅವಳು ಅತ್ತಿಹೂವು

ಶರ್ಮಿಳೆ ಬರುತ್ತಿದ್ದಾಳೆ ಎಂದು ಶಿಬಿಗೆ ಗೊತ್ತಾಗೋ ಹೊತ್ತಿಗೆ ತೀರಾ ತಡವಾಗಿತ್ತು. ಶರ್ಮಿಳೆಯ ವಾಟ್ಸ್ ಅಪ್  ಮೆಸೇಜ್ ಒಂದಲ್ಲ ಮೂರಲ್ಲ ಇಪ್ಪತ್ತಕ್ಕೂ ಹೆಚ್ಚು ಬಂದು ಶಿಬಿಯ ಸ್ಮಾರ್ಟ್ ಫೋನ್ ಮೇಲೆ ಬಿದ್ದಿದ್ದವು.
ಶರ್ಮಿಳೆ ಸುಮ್ಮನೇ ಬರಲಿಕ್ಕಿಲ್ಲ. ಅಷ್ಟೊಂದು ದೂರದಿಂದ ಆಕೆ ಬರುತ್ತಾಳೆ ಎಂದರೆ ಏನೋ ಇರಲೇಬೇಕು. ಹಾಗೇ ನೋಡಿದರೆ ಶರ್ಮಿಳೆ ಅದೆಷ್ಟು ಸಾರಿ ಬಂದು ಹೋಗುತ್ತಾಳೋ ಏನೋ? ಅದನ್ನೆಲ್ಲಾ ಶಿಬಿಗೆ ಗಮನಿಸುವುದೂ ಇಲ್ಲ. ಈ ಬಾರಿ ಅವಳು ತಾನು ಬರುತ್ತಿರುವ ಕುರಿತು ಮೆಸೇಜ್ ಕಳುಹಿಸಿದ್ದಾಳೆ. ಆ ಮೆಸೇಜ್ ನಲ್ಲಿ ಸ್ಪಷ್ಟವಾಗಿ ಶಿಬಿ ಏರ್ಪೋರ್ಟ್ ಗೆ ಎಷ್ಟು ಹೊತ್ತಿಗೆ ಬರಬೇಕು ಎಂಬುದನ್ನು ಸೂಚಿಸಿದ್ದಾಳೆ. ಕಮ್ ಅಲೋನ್ ಅಂತ ಬೇರೆ ಆದೇಶ ಇದೆ. ಅಲೋನ್ ಅಂದರೆ ಡ್ರೈವರ್ ಇರಬಾರದು, ನೀನು ಮಾತ್ರಾ ಸಾಕು ಎಂಬುದು ನಿರ್ದೇಶನ ಶಿಬಿಗೆ ಇರೋದು ಒಂದೇ ನಂಬರು. ಅವನು ಸ್ಮಾರ್ಟ್ ಫೋನ್ ಗೆ ಅದನ್ನು ಲಿಂಕ್ ಮಾಡಿಟ್ಟಿದ್ದ. ಅವನ ಆರ್ಡಿನರಿ ಫೋನ್ ನಲ್ಲಿ ಮೆಸೇಜು ಮತ್ತು ಕಾಲ್ ಬಿಟ್ಟರೆ ಇನ್ನೇನೂ ಸೌಲಭ್ಯ ಇಲ್ಲ. ಅದಕ್ಕೆ ಕಾರಣ ಅವನಿಗೆ ಈ ಫೋನ್ ಬಳಕೆಯ ಕುರಿತು ಅವನು ತಲುಪಿರುವ ಸಾಚುರೇಶನ್ ಪಾಯಿಂಟ್.
ಮೊಬೈಲ್ ಫೋನ್ ಅಂದರೆ ಅವನಿಗೆ ರೇಜಿಗೆ. ಹಾಗಂತ ಅವನು ಅದನ್ನು ಬಳಸದೇ ಇರುವುದಕ್ಕೂ ಆಗದ ಸ್ಥಿತಿ. ಯಾವೆಲ್ಲಾ ರೀತಿ ಅವೈಡ್ ಮಾಡಬಹುದೋ ಆ ರೀತಿಯೆಲ್ಲಾ ಅವನು ಅದನ್ನು ಅವಾಡ್ ಮಾಡಿಯೇ ಬದುಕುತ್ತಾನೆ. ಇದೂ ಒಂದು ಫೋಬಿಯಾಕ್ಕೆ ಸೇರಿದೆ ಎಂಬುದು ಅವನಿಗೆ ಗೊತ್ತಾಗಿದೆ.
ಹಾಗಾಗಿ ಶರ್ಮಿಳೆಯ ಸಂದೇಶ ನೋಡೋ ಹೊತ್ತಿಗೆ ತಡವಾಗಿತ್ತು.
ರಿಸೆಪ್ಷನಿಸ್ಟ್  ಸೀಮಾ ಗಂಗಾಧರ್ ಬಳಿಯೇ ಹೆಚ್ಚಾಗಿ ಅವನ ಫೋನ್ ಇರುತ್ತದೆ. ಅವಳ ಕೈಗಿಟ್ಟು ಕಚೇರಿ ಒಳಗೆ ಹೋದರೆ ಮತ್ತೆ ಅವನು ಅದನ್ನು ಸಂಜೆ ವೇಳೆಗೇ ತೆರೆಯೋದು. ಕಾರಲ್ಲಿ ಹೋಗುತ್ತಿದ್ದರೆ ಫೋನ್ ಚಾಲಕ ಜೈನುದ್ದೀನ್ಗೆ ಕೊಡುತ್ತಾನೆ. ಯಾರೇ ಕರೆ ಮಾಡಿದರೂ ಉತ್ತರಿಸುವುದೇ ಜೈನುದ್ದೀನ್.
ಹಾಗಾಗಿ ಅವನು ಎರಡನೇ ದಿನ ವಾಟ್ಸಪ್ ಚೆಕ್ ಮಾಡುವಾಗಲೇ ಶರ್ಮಿಳೆಯ ಸಂದೇಶ ಸಿಕ್ಕಿದ್ದು.

ಶಿಬಿ ತಾನೇ ಕಾರು ಚಲಾಯಿಸುತ್ತಾ ಹೋಗಿ ಏರ್ಪೋರ್ಟ್ ನಿಂದ  ಶರ್ಮಿಳೆಯನ್ನು ಬರಮಾಡಿಕೊಂಡ. ಅವಳ ಖದರು ಸ್ವಲ್ಪವೂ ಬದಲಾಗಲಿಲ್ಲ ಎಂಬುದನ್ನು ಅವಳು ಏರ್ಪೋರ್ಟ್ ಲಾಂಜ್ನಲ್ಲಿ ಕಪ್ಪುಚಾಳೀಸು ಹಾಕಿಕೊಂಡು ಧಿಮಾಕಿನಲ್ಲಿ ನಿಂತಾಗಲೇ ಗಮನಿಸಿದ್ದ. ಶರ್ಮಿಳೆಯ ಬಳಿಗೆ ಅವನೇ ಹೋಗಿದ್ದಾಯಿತು. ಮೊದಲ ನೋಟಕ್ಕಾದರೂ ಚಾಳೀಸು ಕೀಳುತ್ತಾಳೆ ಎಂದುಕೊಂಡರೆ ನೋ. ಅವಳು ಮುಚ್ಚಿದ ಕಣ್ಣೊಳಗೆ ನಕ್ಕಳೋ ಗೊತ್ತಾಗಲಿಲ್ಲ. ಯಾವ ನೋಟವನ್ನು ಬೀರಿರಬಹುದು. ಅದರಲ್ಲಿ ತುಂಟತನವಿತ್ತೇ, ಧಿಮಾಕಿನ ರಾಶಿಯಿತ್ತೇ, ಅವಳ ಎಂದಿನ ವರಸೆಯಾದ ಅಹಂಕಾರದ ಬೀರು ಇತ್ತೇ ಗೊತ್ತಾಗಲಿಲ್ಲ. ಶರ್ಮಿಳೆಯಲ್ಲಿ ಇವೆಲ್ಲವೂ ಅಲ್ಲದ ಒಂದು ಲಯ ಇದೆ, ಅದು ಅಪರಿಮಿತ ಪ್ರೀತಿ. ಅದನ್ನು ಕಣ್ಣ ನಗುವಿನಲ್ಲಿ ಅವಳು ಹಾಯಿಸಬಲ್ಲಳು ಎಂಬುದು ಶಿಬಿಗೆ ಗೊತ್ತಿತ್ತು, ಆದರೆ ಏರ್ಪೋರ್ಟ್ ನ ಈ ಮುಖಾಮುಖಿಯಲ್ಲಿ ಅದು ನೆನಪಿಗೆ ಬರಲಿಲ್ಲ.
ಶಿಬಿ ಕಾರು ಓಡಿಸುತ್ತಿದ್ದರೆ ಹತ್ತಿರದಲ್ಲೇ ಕುಳಿತಿದ್ದ ಶರ್ಮಿಳೆ ಏಕಾಏಕಿ ವಿಂಡೋ ಬದಿಗೆ ಒತ್ತರಿಸಿದ್ದನ್ನು ಗಮನಿಸಿದ ಶಿಬಿ ಫಾರ್ಮಲ್ ಮಾತಿಗೆ ಶುರುವಿಟ್ಟುಕೊಂಡ.
ಅವನ ಮಾತಿಗೆ ಏಕಾಏಕಿ ಬ್ರೇಕ್ ಹಾಕಿದ ಶರ್ಮಿಳೆ ನನಗೆ ಅತ್ತಿಮರದ ನೀರು ಕುಡಿಯಬೇಕು. ಅದಕ್ಕಾಗಿಯೇ ನಾನು ಬಂದಿದ್ದು, ಅರೇಂಜ್ ಮಾಡು ಎಂದಳು.
ಅತ್ತಿಮರದ ನೀರಾ? ಎಂದ ಶಿಬಿ.
ಹೂಂ. ಅದೇ ಅತ್ತಿಮರದ ನೀರು. ಅದನ್ನೇ ಕುಡಿಯಬೇಕು.
ಯಾವ ಡಾಕ್ಟರ್ ಹೇಳಿದ? ಯಾಕೆ ಹೇಳಿದ ಅಂತ ಕೇಳಬಹುದಾ?
ಯಾಕೋ ಡಾಕ್ಟರ್ ಹೇಳಿದರೆ ಮಾತ್ರಾ ಕುಡಿಯುವುದಾ ಅದನ್ನು?
ಶಿಬಿ ಮಾತನಾಡಲಿಲ್ಲ. ಇವತ್ತೇ ಹೋಗಬೇಕು. ನಾಳೆ ಬೆಳಗ್ಗೆ ನನಗೆ ಅತ್ತಿಮರದ ನೀರು ಬೇಕೇ ಬೇಕು. ಮತ್ತೆ ಶರ್ಮಿಳೆ ಹೇಳಿದಾಗ ಶಿಬಿ ಸೊಲ್ಲೆತ್ತಲಿಲ್ಲ.
ಆ ಅತ್ತಿಮರದ ಬಳಿಗೆ ಹೋಗಲು ಏನಿಲ್ಲಾ ಎಂದರೂ ಆರು ಗಂಟೆ ಬೇಕು. ಒಂದು ಸರಾಗ ಡ್ರೈವ್ ಮಾಡಿಕೊಂಡು ಹೋಗುವ ಹುಮ್ಮಸ್ಸೂ ಇದ್ದ ಹಾಗಿಲ್ಲ. ಆದರೆ ಶರ್ಮಿಳೆ ಯಾವ ಪ್ರಸ್ತಾಪಕ್ಕೂ ಒಪ್ಪುವ ಹಾಗೆ ಕಾಣುತ್ತಿಲ್ಲ.
ನೀನೇ ಬರುತ್ತಿಯಾ, ಅತ್ತಿ ಮರದ ಬುಡಕ್ಕೆ ನಾನೊಬ್ಬಳೇ ಹೋಗುವುದಿಲ್ಲ ಶರ್ಮಿಳೆಯ ಮಾತಿನಲ್ಲಿ ರೆಚ್ಚೆ ಇತ್ತು.
ಯೆಸ್ ಅಂದ ಶಿಬಿ. ಕಣ್ಣು ರಸ್ತೆ ಮೇಲೆಯೇ ನೆಟ್ಟಿತ್ತು.
ಕಾರನ್ನು ಸೀದಾ ಹೊರಳಿಸಿಕೊಂಡ.

ಅತ್ತಿ ಮರ.
ಶಿಬಿಯ ಜೀವನದ ಭಾಗವೇ ಅದು. ಎಂದೂ ಹೂವು ಬಿಡದ ಅತ್ತಿಮರ. ಅಪ್ಪ ಹೇಳುತ್ತಿದ್ದ, ಅತ್ತಿ ಹೂವು ದೇವತೆಗಳಿಗೆ ಮಾತ್ರಾ ಕಾಣಸಿಗುತ್ತದೆ. ರಾತ್ರಿ ಆ ಹೂವು ಕೊಯ್ಯಲು ದೇವಗಂಧರ್ವ ಕಿನ್ನರಿ ಕಿಂಪುರುಷರು ಬಂದೇ ಬರುತ್ತಾರೆ. ಹೂವು ಮಾಯವಾಗಿ ಕಾಯಿ ಮಾತ್ರಾ ಆಮೇಲೆ ಕಾಣುತ್ತದೆ. ಹೂವನ್ನು ಮನುಷ್ಯ ಕಾಣಬೇಕಾದರೆ ಅವನೂ ಆ ದೈವತ್ವದ ಸ್ಥಿತಿಗೆ ತಲುಪಬೇಕು.
ಆ ಬಾಲ್ಯದಲ್ಲಿ ಆ ಕಥೆಗಳು ಶಿಬಿಯನ್ನು ಅತ್ತಿ ಮರದತ್ತ ಸೆಳೆದು ತಂದಿದ್ದವು. ಅತ್ತಿಹೂವು ಹುಡುಕಬೇಕು, ತಾನೂ ಕೊಯ್ಯಬೇಕು ಎಂದು ಅಮ್ಮನಿಗೆ ರೆಚ್ಚೆ ಹಿಡಿದಿದ್ದ. ಅದೇನು ಮಕ್ಕಳಾಟಿಕೆಯಾ? ಅತ್ತಿ ಹೂವುನ್ನು ಕಂಡವರು ಇದ್ದಾರಾ? ಅದನ್ನೇನಾದರೂ ಕೊಯ್ಯುವುದಕ್ಕೆ ಹೋದವರು ವಾಪಾಸ್ಸು ಬಂದಿದ್ದಾರಾ? ಏನು ಅಂತ ತಿಳಕೊಂಡಿದ್ದೀ ನೀನು ? ಎಂದು ಅಪ್ಪ ಗದರಿಸಿ ಹುಣಿಸೇಮರದ ಅಡರು ಮುರಿದು ತಂದು ಬೀಸಿದಲ್ಲಿಗೆ ಶಿಬಿಯ ಅತ್ತಿಹೂವಿನ ಆಸೆ ಮುರಿದುಕೊಂಡು ಮಣ್ಣು ತಿಂದಿತ್ತು.
ಆಮೇಲೆ ಎಂದೂ ಶಿಬಿ ಅತ್ತಿಹೂವಿನ ಆಸೆ ಮಾಡಲೇ ಇಲ್ಲ.
ಮನೆ ಮುಂದಿನ ತೋಟ. ಕೆಳಗೆ ಇಳಿದು ಹೋಗಲು ಮೆಟ್ಟಿಲು. ಯಾವ ಕಾಲದಲ್ಲೋ ಕೆಂಪುಕಲ್ಲಿನಲ್ಲಿ ಅಚ್ಚುಕಟ್ಟಾಗಿ ಕಟ್ಟಿದ ಆ ಮೆಟ್ಟಿಲುಗಳ ಸಂದಿನಲ್ಲಿ ಪಾಚಿಗಿಡಗಳು. ಎಷ್ಟು ಬಾರಿ ಎಣಿಸಿದರೂ ತಪ್ಪುವ ಮೆಟ್ಟಿಲುಗಳ ಲೆಕ್ಕ.
ಶರ್ಮಿಳೆ ಮಾತ್ರಾ ಪ್ರತೀ ಬಾರಿ ಲೆಕ್ಕ ಒಪ್ಪಿಸುತ್ತಾಳೆ. ಶಿಬಿ ಮತ್ತು ಶಂಕರ ಅದು ತಪ್ಪು ಎಂದು ರೇಗಿಸುತ್ತಾರೆ. ಶರ್ಮಿಳೆಗೆ ಸಿಟ್ಟು ಬರುತ್ತದೆ. ಆಮೇಲೆ ಅಲ್ಲಿ ಮಹಾಯುದ್ಧ. ಶಿಬಿ ಮತ್ತು ಶಂಕರ ಕುರ್ಯೋ ಮುರ್ಯೋ ಎಂಬ ಹಾಗೇ ಅವರ ತಲೆಗೂದಲ ಮುಷ್ಠಿಯಲ್ಲಿ ಹಿಡಿದು ಬಗ್ಗಿಸಿ ಹೊಡೆಯುತ್ತಾಳೆ. ಆ ಹೊಡೆತ ತಿನ್ನುವ ಆ ಖುಶಿಗೆ ಶಿಬಿ ಬೆನ್ನು ಒಡ್ಡಿಸಿ ಕೊಡುತ್ತಾನೆ. ಮೆಟ್ಟಿಲಿಳಿದರೆ ಬಾವಿ. ಕಳೆದ ವರ್ಷ ಆ ಬಾವಿಯನ್ನು ಅಪ್ಪ ಮುಚ್ಚಿಸಿದ. ಕೇಳಿದ್ದಕ್ಕೆ ಉತ್ತರ ಸರಿಯಾಗಿ ಕೊಡಲಿಲ್ಲ. ಊರೆಲ್ಲಾ ಬೋರ್ವೆಲ್ ತೆಗೆಸಿ ನೀರು ಹಿಂಡಿಹಿಂಡಿ ಎತ್ತಿದ್ದಾರೆ. ಇನ್ನು ಈ ಬಾವಿಯಲ್ಲಿ ಏನಿರುತ್ತದೆ ಮಣ್ಣಂಗಟ್ಟಿ. ಮಾಘಮಾಸಕ್ಕೇ ಬತ್ತಿ ಬರಡಾಗುತ್ತದೆ ಎಂದಿದ್ದ.
ನೆಲ್ಲಿಮರದ ಹಲಗೆ ಏನು ಮಾಡಿದೆ? ಎಂದು ಕೇಳುತ್ತಾನೆ ಶಿಬಿ.
ಅದನ್ನು ಎತ್ತಲಿಲ್ಲ.
ನೀನೇ ಹೇಳುತ್ತಿದ್ದೆ ನಿನ್ನ ಮುತ್ತಾತನ ಕಾಲದ್ದಂತೆ ಆ ನೆಲ್ಲಿಮರದ ಹಲಗೆಗಳು ಅಂತ. ಈಗ ಅದನ್ನು ಎತ್ತಿ ತೆಗೆದಿಟ್ಟಿದ್ದರೆ ಚೆನ್ನಾಗಿತ್ತು ಎಂದು ಶಿಬಿ ಸಲಹೆ ನೀಡಿದರೆ, ಯಾಕೋ ಟೀವೀಯಲ್ಲಿ ಚಿದಂಬರ ರಹಸ್ಯ ಪ್ರೋಗ್ರಾಂ ಹಾಕಿಸೋ ಪ್ಲಾನ್ ಇತ್ತಾ ನಿಂದೂ ಆ ನೆಲ್ಲಿಹಲಗೆಗಳನ್ನು ಇಟ್ಟುಕೊಂಡು ಎಂದು ಅಪ್ಪ ರೇಗುತ್ತಾನೆ.
ಶಿಬಿ ಮಾತಾಡುವುದಿಲ್ಲ.
ಬಾವಿ ದಾಟಿ ಹತ್ತು ಮಾರು ಹೋದರೆ ಅಲ್ಲಿದೆ ಆ ಅತ್ತಿಮರ. ಅದರ ಬುಡದಲ್ಲಿ ಸಣ್ಣಗೆ ಜುಳುಜುಳು ಹರಿಯುವ ನೀರ ತೊರೆ. ನೀರಿನ ನೆನಕೆಗೆ ಸದಾ ಜಾರುವ ಕರ್ಗಲ್ಲುಗಳು. ಅದರ ಮೇಲೆ ಕೈ ಇಟ್ಟು ನೀರು ತಿರುಗೀ ತಿರುಗೀ ಕೈ ಮೇಲೆ ತಣ್ಣಗಿನ ನೀರು ಹಾಯುವ ಹೊತ್ತಿಗೆ ಕಾಯುತ್ತಿದ್ದ ಕ್ಷಣಗಳು.
ಶಾಲೆಯಲ್ಲಿ ಕೊನೆಯ ಪರೀಕ್ಷೆ ಯಾವತ್ತೂ ತೃತೀಯ ಭಾಷೆ ಹಿಂದಿಯದ್ದು. ಐವತ್ತು ಮಾರ್ಕಿನ ಆ ಪರೀಕ್ಷೆಗೆ ಬರೆಯಲು ಒಂದೂಕಾಲು ಗಂಟೆ. ಪರೀಕ್ಷೆ ಮುಗಿಸಿ ಹೋ ಎಂದು ಓಡುತ್ತಾ ಬಂದು ಜಗುಲಿ ಒಳಗೆ ಚೀಲ ಎಸೆದು ಬಚ್ಚಲಿನ ಒಳಗೆ ಶರಟು ಕಿತ್ತು ಹಾಕಿ ಅದೇ ಕೆಂಪುಕಲ್ಲಿನ ಮೆಟ್ಟಿಲು ಇಳಿಯುತ್ತಾ ಓಡೋಡಿ ಬಂದು ಬಾವಿ ಒಳಗೊಮ್ಮೆ ಇಣುಕಿ ರಾಟೆಗೆ ಜೋತುಬಿದ್ದಿದ್ದ ಹುರಿಹಗ್ಗದ ಬಳ್ಳಿಯನ್ನು ಒಮ್ಮೆ ಕಿರ್ರೆಂದು ಎಳೆದು ಬಿಟ್ಟು ಜಂಪ್ ಮಾಡಿ ನೀರಝರಿಯತ್ತ ಓಡಿ ಅದೇ ಅತ್ತಿಮರದ ಬುಡದಲ್ಲಿ ಕೂತರೆ ಅದೇ ಮೆದುವಾದ ಕಲ್ಲಿನ ಮೇಲೆ ಅಂಗೈ ಇಟ್ಟು ತಣ್ಣಗೆ ಮಾಡಿಕೊಂಡು.. ಕೈಮೇಲೆ ಕೈ ಇಟ್ಟು ರಾಶಿರಾಶಿ ಕೈ ರಾಶಿ…
ಆ ದಿನ ಮಾತ್ರಾ ಶರ್ಮಿಳೆಯ ಆ ಅಂಗೈಯಲ್ಲಿ ಏನಿತ್ತು?
ಏನದು ಒಳಗೆ ಹರಿದ ಹೂರಣ?
���ಂಗೈ ಅವುಕಿದಾಗ ಸಾಗಿದ ಸಂದೇಶ ಮಿದುಳೆಂಬ ಮಾಯಾಕೋಶದಲ್ಲಿ ಶಾಶ್ವತವಾಗಿ ನೆಟ್ಟದ್ದಕ್ಕೆ ಹೆಸರೇನು?
ಅತ್ತಿಮರದ ಬೇರುಗಳನ್ನು ಬಡ್ಡು ಚೂರಿಯಲ್ಲಿ ಕತ್ತರಿಸಿ ಜುಳುಜುಳನೇ ಇಳಿದು ಬರುವ ನೀರನ್ನು ಬಾಯಿಗಿಟ್ಟು ಕುಡಿದಾಗ ಇಡೀ ಮೈ ಸಪಾಟಾಗಿ ಮನಸ್ಸು ತುಂಬಾ ಗೆಜ್ಜೆಯ ನಾದ.
ಶರ್ಮಿಳೆ ಅತ್ತಿ ಮರದ ಬುಡಕ್ಕೆ ಬಗ್ಗಿ ನೀರೂರುತ್ತಿದ್ದಾಗ ಹಿಂದಿನಿಂದ ಬಾಗಿ ಅವಳನ್ನು ತಬ್ಬಿಕೊಂಡಾಗ ಅವಳು ಆ ಹಿಡಿತದಲ್ಲೇ ಶಾಖವೇರಿಸಿಕೊಂಡದ್ದು. ಆ ಬಿಗುವಿನಲ್ಲಿ ಆ ಮೃದುವಾದ ಅವುಕಿನಲ್ಲಿ ಸಿಕ್ಕಿದ್ದು ಶಾಶ್ವತವಾಗಿತ್ತಾ?
——————————————-
ಕಾರು ಬಂದು ನಿಂತಾಗ ಸರಿ ರಾತ್ರಿ ಕಳೆದಿತ್ತು. ಅಪ್ಪ ಎದ್ದು ಬರಲಿಲ್ಲ. ಅಮ್ಮ ಸಾವಧಾನವಾಗಿ ಬಾಗಿಲು ತೆರೆದಳು.
ಆಮ್ಮಾ ನಮ್ಮದು ಊಟ ಆಗಿದೆ ಎಂದ ಶಿಬಿ.
ಹೂಂ ಎಂದು ಹೇಳುತ್ತಾ ಅಮ್ಮ ಕೋಣೆ ಸೇರಿದಳು. ಜೊತೆಯಲ್ಲಿ ಲೈಟ್ನ್ನೂ ಆಫ್ ಮಾಡಿಕೊಳ್ಳುತ್ತಾ. ಎಡಭಾಗದ ಹಜಾರವನ್ನು ಸೇರಿದ ಶಿಬಿ ಈಸೀಚೇರ್ ಮೇಲೆ ಮೈ ಹಾಸಿದ. ಕಾಲು ಸಪಾಟಾಗಿ ಇಳಿಬಿಟ್ಟ. ಶರ್ಮಿಳೆ ಟೀಪಾಯ್ ಮೇಲಿನ ಪೇಪರ್ ಎತ್ತಿಕೊಂಡಳು. ಅವಳಿಗೆ ಓದುವುದಕ್ಕೆ ಏನೂ ಇಲ್ಲ ಎಂಬುದು ಶಿಬಿಗೆ ಗೊತ್ತಿತ್ತು. ಬಲಭಾಗದ ಕೋಣೆಗೆ ಶರ್ಮಿಳೆ ಇಣುಕಿದಳು. ಹಾಸಿಗೆ ಸುರುಟಿಯೇ ಇತ್ತು. ಗಿಳಿಬಾಗಿಲ ಸಂದಿಗೆ ಸಿಲುಕಿಸಿಟ್ಟಿದ್ದ ಬೆಡ್ ಶೀಟ್ ಎಳೆದುಕೊಂಡಳು. ಶಿಬಿಯ ಕಣ್ಣಾಲಿಗಳು ಮುಚ್ಚಿಮುಚ್ಚಿ ಬಂದವು.
ಎಚ್ಚರವಾದಾಗ ಶರ್ಮಿಳೆ ಕಾಣಿಸಲಿಲ್ಲ. ಅವಳೆಲ್ಲಿ ಹೋಗಿರುತ್ತಾಳೆ, ಅಲ್ಲೇ ಅತ್ತಿಮರದ ಬುಡದಲ್ಲಿ ಇರುತ್ತಾಳೆ ಎಂದು ಶಿಬಿಗೆ ಗೊತ್ತೇ ಇತ್ತು. ಶಿಬಿ ಸಾವಧಾನವಾಗಿ ಎದ್ದು ಹೊರಟ. ಗೂಡಿನಲ್ಲಿದ್ದ ನಾಯಿಮರಿ ಹೊಸತಾ ಎಂದು ಮುತ್ತುಮಲ್ಲಿಗೆ ಕೊಯ್ಯುತ್ತಿದ್ದ ಅಮ್ಮನಿಗೆ ಕೇಳಿದ. ಹೂಂ ಎಂಬಷ್ಟೇ ಉತ್ತರ ಅಮ್ಮನದ್ದು. ಅಪ್ಪ ಕ್ಯಾಕರಿಸುತ್ತಿದ್ದ ಶಬ್ದ ಬಚ್ಚಲಿನ ಕಡೆಯಿಂದ ಕೇಳುತ್ತಿತ್ತು.
ಅಂಗಳದ ತುದಿಯಲ್ಲಿ ಕೆಂಪುಕಲ್ಲಿನ ಮೆಟ್ಟಿಲುಗಳು. ವೇಗವಾಗಿ ಇಳಿದ. ಮುಚ್ಚಿದ್ದ ಬಾವಿಯ ಕುರುಹು ಕಾಣಿಸಿತು. ತುಕ್ಕು ಹಿಡಿದ ರಾಟೆ ಪಕ್ಕದಲ್ಲಿ ಬಿದ್ದಿತ್ತು. ಇದೇಕೆ ಈ ರಾಟೆಯನ್ನು ಇಲ್ಲಿ ಹೀಗೆಯೇ ಬಿಟ್ಟಿದ್ದಾರೆ ಎಂದುಕೊಂಡ. ನೀರತೊರೆಯ ನೇವರಿಸುವಂತೆ ಅತ್ತಿ ಮರ ಹಾಗೇ ನಿಂತಿತ್ತು. ಅದರ ಬುಡದಲ್ಲಿ ಶರ್ಮಿಳೆ ಬೇರನ್ನು ಕತ್ತರಿಸಿ ಚಿಮ್ಮುವ ನೀರಿಗೆ ಬಾಯಿ ಇಟ್ಟಿದ್ದಳು. ಶಿಬಿ ಓಡೋಡಿ ಅತ್ತಿಮರದ ಬಳಿ ನಿಂತ. ಶರ್ಮಿಳೆಯ ಸೊಂಪಾದ ಕೂದಲು ಕೆನ್ನೆ ಕಿವಿ ದಾಟಿ ಕೊರಳ ಮೇಲಿಂದ ಇಳಿದು ನೀರತೊರೆಯತ್ತ ಧಾವಿಸುವಂತೆ ತೊನೆದಾಡುತ್ತಿದ್ದವು. ಶಿಬಿ ಏನಾಗುತ್ತಿದೆ ಎಂದುಕೊಳ್ಳುವ ಮೊದಲೇ ಅವಳನ್ನು ಹಿಂದಿನಿಂದ ಬಾಚಿ ತಬ್ಬಿಕೊಂಡ. ಕೈಗಳು ಅವಳ ಅದೇ ಹಿತವಾದ ಶರೀರದಲ್ಲಿ ರೋಮಿಂಗ್ ಆಗುತ್ತಿದ್ದವು. ಶರ್ಮಿಳೆ ಬಾಗಿದಲ್ಲಿಂದಲೇ ಅವನನ್ನು ಬಿಗಿ ಮಾಡಿಕೊಳ್ಳುತ್ತಿರುವುದು ಶಿಬಿಗೆ ಅರ್ಥವಾಗುತ್ತಿತ್ತು. ತೊರೆಯಲ್ಲಿ ಅದೆಂದಿನಿಂದಲೋ ನೆನೆಯುತ್ತಿದ್ದ ಕಲ್ಲುಹಾಸಿಗೆ ಪಾದವನ್ನೊತ್ತಿ ನೀರನ್ನು ಛಿಲ್ ಎಂದು ಹಾರಿಸಿದ. ಶರ್ಮಿಳೆ ಆ ನಸುಕಿನಲ್ಲಿ ಅವನತ್ತ ತಿರುಗಿಕೊಂಡಳು. ಒಂದು ಪ್ರಚಂಡ ಅಪ್ಪುಗೆಯಲ್ಲಿ ಶಿಬಿಯ ತುಟಿಯನ್ನು ಕಚ್ಚಿದಳು.
I am in therapy for all the feelings including guilt ಎಂಬ ಅವಳ ಉದ್ಗಾರದಲ್ಲಿ ಈಗ ಅರ್ಥ ಸಿಗತೊಡಗಿತು.
ಇಲ್ಲೇ ಒಂದು ಹಟ್ ಕಟ್ಟು. ನಾವಿಬ್ಬರೂ ಇಲ್ಲೇ ಇದ್ದು ಬಿಡೋಣ. ರಾತ್ರಿಯಿಡೀ ಅತ್ತಿ ಹೂವು ಕೊಯ್ಯುತ್ತಾ, ಬೆಳಗಾತ ಅತ್ತಿ ನೀರು ಕುಡಿಯುತ್ತಾ ಎಂದು ಶರ್ಮಿಳೆ ಮುಲುಗುಟ್ಟಿದಳು.
ಅಪ್ಪ ದೇವರಕೋಣೆಯಲ್ಲಿ ಗಂಟಾಮಣಿ ಆಡಿಸುತ್ತಾ ದೊಡ್ಡ ಸ್ವರದಲ್ಲಿ ಮಂತ್ರ ಹೇಳುತ್ತಿದ್ದ, ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ…….

Leave a Reply

This site uses Akismet to reduce spam. Learn how your comment data is processed.