ಜನ್ಮಾಂತರ

ಜನ್ಮಾಂತರ

ಕೆಲವು ಅನುಭವಗಳನ್ನು, ಸುಮ್ಮನೆ ಹೊಳೆದದ್ದನ್ನು ಹೇಗೆ ಹಿಡಿದಿಡಬೇಕು ಎಂಬುದೇ ಸಮಸ್ಯೆ. ಬರೆಯಲು ಕುಳಿತುಕೊಳ್ಳುವ ಹೊತ್ತಿಗೆ ಸ್ವಷ್ಟವಾದಂತೆ ಕಾಣಿಸುವ ಸಂಗತಿ, ಬರೆಯುತ್ತಾ ಹೋದಂತೆ ಗೋಜಲು ಗೋಜಲಾಗುತ್ತದೆ. ನಾನು ಹೇಳಹೊರಟದ್ದಕ್ಕೆ ಮತ್ತೊಂದು ಆಯಾಮವೂ ಇರಬಹುದೇನೋ ಅನ್ನಿಸತೊಡಗುತ್ತದೆ. ಇದನ್ನೇ ಬೇರೆ ಪ್ರಕಾರದಲ್ಲಿ, ಬೇರೆ ಮಾಧ್ಯಮದಲ್ಲಿ, ಬೇರೆ ರೂಪದಲ್ಲಿ ಹೇಳಬಹುದಿತ್ತೇನೋ ಎಂಬ ಗುಮಾನಿ ಶುರುವಾಗುತ್ತದೆ.
ಅಂಥ ಗುಮಾನಿ ಹುಟ್ಟಿಸಿದ, ನಾನು ಅಪನಂಬಿಕೆಯಲ್ಲೇ ಮುಂದುವರಿಸಿಕೊಂಡು ಹೋದ ಒಂದು ಪ್ರಸಂಗ ಇಲ್ಲಿದೆ. ಇದರ ಮೊದಲ ಭಾಗ ಮುಗಿಸುವ ಹೊತ್ತಿಗೆ ನಾನೇನೂ ಹೇಳುತ್ತಿಲ್ಲ ಅನ್ನಿಸಿತು. ಮುಂದುವರಿಸುತ್ತಿದ್ದಂತೆ ಹೇಳಿದ್ದನ್ನೇ ಹೇಳುತ್ತೇನೆ ಅನ್ನಿಸಿತು. ಮುಗಿಸಿದ ನಂತರ ಹೇಳಬೇಕಾದ್ದನ್ನು ಹೇಳಿಲ್ಲ ಎಂದು ಗಾಬರಿಯಾಯಿತು.
ಒಂದು ಅಸಫಲ ಭಾಷಣದಂತೆ, ಕೂಡಿಕೊಳ್ಳದ ಪ್ರೇಮದಂತೆ, ಫಲಿಸದ ಕಣ್ಣೋಟದಂತೆ ಈ ಪ್ರಸಂಗ ಕೂಡ. ನನ್ನಿಂದ ಸಾಧ್ಯವಾದರೆ ಇದನ್ನು ಮತ್ತೊಮ್ಮೆ ಮತ್ತೆಂದಾದರೂ ಬರೆಯುತ್ತೇನೆ. ಸದ್ಯಕ್ಕೆ ಇಷ್ಟು:
****
ಅರಸೀಕೆರೆಯ ಶಂಬಾ ಜೋಯಿಸರ ಒಬ್ಬಳೇ ಮಗಳು ಅನ್ನಪೂರ್ಣ ದಿಕ್ಕು ತೋಚದೇ ಕೂತಿದ್ದಳು. ಮನೆ ಬಿಟ್ಟು ಹೋಗಿ ಹನ್ನೆರಡು ದಿನಗಳಾಗಿದ್ದರೂ ಶಂಬಾ ಜೋಯಿಸರು ಮನೆಗೆ ಮರಳಿರಲಿಲ್ಲ. ಆವತ್ತಿಗೆ ಸರಿಯಾಗಿ ಹನ್ನೆರಡು ದಿವಸಗಳ ಹಿಂದೆ ಒಂದು ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ’ ಎಂದು ಗೋಡೆಗೂ ಗಾಳಿಗೂ ಹೇಳಿದಂತೆ ಹೇಳಿ ಎದ್ದು ಹೋದ ಜೋಯಿಸರು ಅವಳಿಗೆ ಮತ್ತೆ ಕಾಣಿಸಿಕೊಂಡದ್ದು ಟೀವಿಯಲ್ಲಿ.
ಆವತ್ತು ರಾತ್ರಿ ಅವಳು ಚಾನಲ್ ತಡಕಾಡುತ್ತಿದ್ದಾಗ ಥಟ್ಟನೆ ಅಪ್ಪನ ಮುಖ ಮಿಂಚಿದಂತಾಗಿ ಮತ್ತೆ ವಾಪಸ್ಸು ಹೋದಳು. ಹಾಗೆ ಅಪ್ಪನ ಮುಖ ಕಾಣಿಸಿದ್ದೂ ತನ್ನ ಭ್ರಮೆ ಇರಬಹುದೇನೋ ಅಂದುಕೊಂಡು ಸುಮ್ಮನಾದಳು. ಆಕೆ ಆ ಚಾನಲ್ಲಿಗೆ ವಾಪಸ್ಸು ಬರುವ ಹೊತ್ತಿಗೆ ಅಲ್ಲಿ ಜಾಹೀರಾತು ಓಡುತ್ತಿತ್ತು. ಜಾಹೀರಾತು ಮುಗಿಯುವ ಒಂದೆರಡು ನಿಮಿಷಗಳ ಕಾಲ ಅನ್ನಪೂರ್ಣೆ ಆತಂಕದಲ್ಲೇ ಕಾದಳು. ಆಮೇಲೆ ನೋಡಿದರೆ ಅಲ್ಲೊಬ್ಬ ನಿರೂಪಕ ವಿಚಿತ್ರವಾಗಿ ಏನೋ ಹೇಳುತ್ತಿದ್ದ. ಅದಾದ ನಂತರ ಕತ್ತಲ ಕೋಣೆಯ ನಡುವೆ ಚೆಲ್ಲಿದ ಅರೆಬೆಳಕಿನಲ್ಲಿ ಮಲಗಿದ್ದ ಶಂಬಾ ಜೋಯಿಸರನ್ನು ಅನ್ನಪೂರ್ಣೆ ನೋಡಿದಳು. ಅವರ ಪಕ್ಕ ಕುಳಿತ ಅವಧೂತನಂತೆ ಕಾಣಿಸುತ್ತಿದ್ದ ಗಡ್ಡಧಾರಿಯೊಬ್ಬ ಅವರನ್ನು ಏನೇನೋ ಪ್ರಶ್ನೆ ಕೇಳುತ್ತಿದ್ದ. ಅವರು ಯಾವುದೋ ಲೋಕದಲ್ಲಿರುವವರಂತೆ ಉತ್ತರಿಸುತ್ತಿದ್ದರು.
ಅನ್ನಪೂರ್ಣೆಗೆ ಅದನ್ನು ಬಹಳ ಹೊತ್ತು ನೋಡುವುದಕ್ಕೆ ಆಗಲಿಲ್ಲ. ಅಪ್ಪ ಹೋಗಿ ಹೋಗಿ ಇಂಥ ಕಾರ್ಯಕ್ರಮಗಳಿಗೆ ಯಾಕೆ ಹಾಜರಾಗುತ್ತಾರೆ ಎಂದು ಗೊಣಗಿಕೊಳ್ಳುತ್ತಾ, ಅನ್ನಪೂರ್ಣೆ ಕೊಂಚ ಹೊತ್ತು ಚಡಪಡಿಸಿದಳು. ಅವತ್ತಿಗೆ ಅಪ್ಪ ಹೊರಟು ಹೋಗಿ ಆರು ದಿನಗಳಾಗಿದ್ದವು. ಆರು ದಿನ ಅವರು ಟೀವಿ ಚಾನಲ್ಲಿನ ಸ್ಟುಡಿಯೋದಲ್ಲೇ ಇದ್ದರಾ, ಇನ್ನೂ ಅಲ್ಲಿಯೇ ಇದ್ದಾರಾ ಎಂಬಿತ್ಯಾದಿ ಉತ್ತರ ಸಿಗದ ಪ್ರಶ್ನೆಗಳನ್ನು ಹೊತ್ತುಕೊಂಡು ಅವಳು ಆ ರಾತ್ರಿ ಟೀವಿ ಚಾನಲ್ಲಿಗೆ ಫೋನ್ ಮಾಡಿದಳು. ಆಗ ಅವಳಿಗೆ ಗೊತ್ತಾದದ್ದು ಇಷ್ಟು; ಆ ಕಾರ್ಯಕ್ರಮ ರೆಕಾರ್ಡ್ ಆಗಿ ಐದಾರು ದಿನಗಳಾಗಿವೆ. ಕಾರ್ಯಕ್ರಮದ ಗೆಸ್ಟ್ ಸುಮಾರು ಒಂದೂವರೆ ಗಂಟೆ ಕಾಲ ಮಾತ್ರ ಸ್ಟುಡಿಯೋದಲ್ಲಿರುತ್ತಾರೆ. ಆಮೇಲೆ ಅವರನ್ನು ಅಲ್ಲಿ ಉಳಿಸಿಕೊಳ್ಳಲಾಗುವುದಿಲ್ಲ.’
ಅದಾಗಿ ಐದಾರು ದಿನ ಕಳೆದರೂ ಶಂಬಾ ಜೋಯಿಸರು ಮನೆಗೆ ಬಾರದೇ ಇದ್ದಾಗ ಅನ್ನಪೂರ್ಣೆಗೆ ದಿಗಿಲು ಶುರುವಾಯಿತು. ಅಪ್ಪ ಸಾಮಾನ್ಯವಾಗಿ ಹೋಗುವ ಜಾಗಗಳನ್ನೆಲ್ಲ ನೋಡಿಕೊಂಡು ಬಂದಳು. ತನಗೆ ಗೊತ್ತಿರುವ ಅವರ ಸ್ನೇಹಿತರ ಜೊತೆ ಫೋನ್ ಮಾಡಿ ಮಾತಾಡಿದಳು. ಅವರ್ಯಾರೂ ಜೋಯಿಸರನ್ನು ವಾರದಿಂದೀಚೆಗೆ ನೋಡಿರಲಿಲ್ಲ. ಅವರು ಟೀವಿಯಲ್ಲಿ ಕಾಣಿಸಿಕೊಂಡಿದ್ದನ್ನು ಕೆಲವರು ನೋಡಿದ್ದರು ಅಷ್ಟೇ.
ಅಪ್ಪನಿಗೆ ಮನೆ ಬಿಟ್ಟು ಹೋಗುವುದಕ್ಕಾಗಲೀ, ಹೇಳದೇ ಕೇಳದೇ ಎಲ್ಲಿಗೋ ಹೊರಟು ಹೋಗುವುದಕ್ಕಾಗಲೀ ಕಾರಣಗಳೇ ಇರಲಿಲ್ಲವಲ್ಲ ಅಂದುಕೊಳ್ಳುತ್ತಾ ಅನ್ನಪೂರ್ಣೆ ಆತಂಕದಿಂದ ಅಷ್ಟೂ ದಿನಗಳ ಪತ್ರಿಕೆ ತರಿಸಿ ಕೂಲಂಕಷವಾಗಿ ಓದಿದಳು. ಅಪರಿಚಿತ ಶವ ಪತ್ತೆ ಎಂಬ ಸುದ್ದಿಯ ವಿವರಗಳನ್ನು ಅವಲೋಕಿಸಿದಳು. ಯಾವ ವಿವರವೂ ಸಿಗದಿದ್ದಾಗ, ತಾನೇ ಸ್ವತಃ ಪೊಲೀಸ್ ಸ್ಟೇಷನ್ನಿಗೆ ಹೋಗಿ ವಿಚಾರಿಸಿಕೊಂಡು ಬಂದಳು. ಅಪ್ಪನಿಗೆ ಅಲ್ಪಸ್ವಲ್ಪ ಪರಿಚಯ ಇದ್ದವರನ್ನು ಹುಡುಕಿಕೊಂಡು ಹೋಗಿ ವಿಚಾರಿಸಿದಳು. ಯಾವ ಪ್ರಯೋಜನವೂ ಆಗಲಿಲ್ಲ.
ಇದಾಗಿ ಆರು ತಿಂಗಳ ನಂತರ ಅವಳಿಗೆ ಅಪ್ಪನ ಬಗ್ಗೆ ಮಾಹಿತಿ ಸಿಕ್ಕಿತು. ಒಂದು ಗುರುವಾರ ಮುಸ್ಸಂಜೆ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋದ ಅನ್ನಪೂರ್ಣೆಗೆ ಅಚಾನಕ್ ಸಿಕ್ಕಿದ ಕೇಶವಾಚಾರ್ಯರು ಜೋಯಿಸ ಮನೆಗೆ ಬಂದ್ನೇನಮ್ಮಾ’ ಎಂದು ಕೇಳಿ, ಅವನ್ಯಾಕೆ ಬರ್ತಾನೆ ಹೇಳು, ಅವಳ ಜೊತೆ ಸುಖವಾಗಿದ್ದಾನೆ’ ಎಂದು ಹೇಳಿ, ಆದ್ರೂ ನಿನ್ನನ್ನು ಒಂಟಿಯಾಗಿ ಬಿಟ್ಟು ಹೋಗಬಾರದಿತ್ತು, ಧೂರ್ತ’ಎಂದು ಟೀಕಿಸಿ ಮುಖ ಹುಳ್ಳಗೆ ಮಾಡಿಕೊಂಡರು.
****
ಕೇಶವಾಚಾರ್ಯರು ಕೊಟ್ಟ ತುಮಕೂರಿನ ವಿಳಾಸದಲ್ಲಿ ಜೋಯಿಸರಾಗಲೀ, ಅವರು ಜೊತೆಗೆ ಸಂಸಾರ ಮಾಡಿಕೊಂಡಿದ್ದಾರೆ ಎಂದು ಕೇಶವಾಚಾರ್ಯರು ಹೇಳಿದ ಮೀನಾಕ್ಷಿಯಾಗಲೀ ಅನ್ನಪೂರ್ಣೆಗೆ ಸಿಗಲಿಲ್ಲ. ಅವರು ಕೊಟ್ಟ ವಿಳಾಸ ತಪ್ಪಿರಬಹುದೇನೋ ಅಂದುಕೊಂಡು ಅನ್ನಪೂರ್ಣೆ ಆರೆಂಟು ಸಾರಿ ಅವರನ್ನು ಹುಡುಕಿಕೊಂಡು ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿಬಂದಳು.
ಅನ್ನಪೂರ್ಣೆಗೆ ಅಪ್ಪ ಕಣ್ಮರೆಯಾದ ನಂತರ ಅನೇಕ ಸಮಸ್ಯೆಗಳು ಎದುರಾದವು. ತಾಲೂಕಾಫೀಸಿನಲ್ಲಿ ಸೀನಿಯರ್ ಕ್ಲರ್ಕ್ ಆಗಿ ನಿವೃತ್ತರಾಗಿದ್ದ ಜೋಯಿಸರಿಗೆ ಪ್ರತಿ ತಿಂಗಳೂ ಮೂರೂವರೆ ಸಾವಿರ ರುಪಾಯಿ ಪಿಂಚಣಿ ಬರುತ್ತಿತ್ತು. ಮನೆ ಖರ್ಚು ಸಾಗುತ್ತಿದ್ದದ್ದು ಅದೇ ದುಡ್ಡಲ್ಲಿ. ಜೋಯಿಸರಿಲ್ಲದೇ, ಅನ್ನಪೂರ್ಣೆ ಆ ಹಣವನ್ನು ಡ್ರಾ ಮಾಡುವಂತಿರಲಿಲ್ಲ. ಅಲ್ಲದೇ, ವರ್ಷದ ಕೊನೆಗೆ ಬ್ಯಾಂಕಿನವರು ಜೋಯಿಸರು ಬಂದು ಸಹಿ ಮಾಡಬೇಕೆಂದೂ, ಅವರು ಬದುಕಿದ್ದಾರೆ ಅನ್ನುವುದನ್ನು ಸಂಬಂಧಪಟ್ಟ ಇಲಾಖೆಗೆ ಕಳಿಸಿಕೊಡಬೇಕೆಂದೂ ಪಟ್ಟು ಹಿಡಿದರು. ಅಪ್ಪ ಬೇರೆ ಊರಿಗೆ ಹೋಗಿದ್ದಾರೆ, ಇನ್ನೇನು ಬರುತ್ತಾರೆ ಎಂದು ಸುಳ್ಳು ಹೇಳಿದ್ದಳು ಅನ್ನಪೂರ್ಣೆ. ನಂತರ ಬ್ಯಾಂಕಿನವರು ವಿಚಾರಿಸುವುದನ್ನೂ ಬಿಟ್ಟರು. ಮಾರನೇ ತಿಂಗಳಿಂದ ಜೋಯಿಸರ ಅಕೌಂಟಿಗೆ ಪಿಂಚಣಿ ಹಣ ಜಮಾ ಆಗುವುದು ನಿಂತೇ ಹೋಯಿತು.
ಜೋಯಿಸರಿಗೆ ಅರಸೀಕೆರೆಯಲ್ಲಿ ಸ್ವಂತ ಮನೆಯಿತ್ತು. ಮದುವೆಯಾಗಿ ಮೂರು ವರ್ಷಕ್ಕೆ ಗಂಡ ಮುರಳಿಯೊಂದಿಗೆ ಜಗಳಾಡಿಕೊಂಡು ಅಪ್ಪನ ಮನೆ ಸೇರಿಕೊಂಡಿದ್ದ ಅನ್ನಪೂರ್ಣೆಗೆ ಮರಳಿ ಗಂಡನ ಹತ್ತಿರ ಹೋಗುವುದಕ್ಕೆ ಮನಸ್ಸಾಗಿರಲಿಲ್ಲ. ಅವನೇನೋ ನಾಲ್ಕೈದು ಬಾರಿ ಬಂದು ಕರೆದುಹೋಗಿದ್ದ. ಸಿಗಂದೂರಿನಲ್ಲಿ ಬೇಕರಿ ಇಟ್ಟುಕೊಂಡಿದ್ದ ಮುರಳಿಯ ಜೊತೆಗಿದ್ದಷ್ಟೂ ದಿನ ಅವಳಿಗೆ ಅಪ್ಪನೇ ನೆನಪಾಗುತ್ತಿದ್ದ. ಬೆಳಗ್ಗೆ ಎದ್ದು ಹೋಗಿ ಬೇಕರಿಯಲ್ಲಿ ಕೂರುವುದು, ಮುರಳಿ ಅಂಗಡಿಗೆ ಬಂದ ನಂತರ ಮನೆಗೆ ಹೋಗಿ ಅಡುಗೆ ಕೆಲಸ ಮಾಡುವುದು- ತನ್ನ ಜೀವನ ಇಷ್ಟೇ ಅನ್ನುವುದು ಕ್ರಮೇಣ ಅವಳಿಗೆ ಖಾತ್ರಿಯಾಗಿಬಿಟ್ಟಿತ್ತು. ಒಂದು ಮಗುವಾದ ಮೇಲೆ ಎಲ್ಲಾ ಸರಿಹೋಗುತ್ತದೆ ಎಂದು ಭರವಸೆಯಲ್ಲಿ ಕಾಯುತ್ತಿದ್ದ ಅನ್ನಪೂರ್ಣೆಗೆ ಕ್ರಮೇಣ ಅದು ಕೂಡ ಎಲ್ಲರ ಬದುಕಿನಲ್ಲೂ ಸಂಭವಿಸುವ ಸಾಮಾನ್ಯ ಘಟನೆ ಅನ್ನಿಸತೊಡಗಿ, ಅದರಲ್ಲೂ ಆಸಕ್ತಿ ಕಳಕೊಂಡು ಬಿಟ್ಟಿದ್ದಳು. ಒಂದು ಬೆಳ್ಳಂಬೆಳಗ್ಗೆ ಬೇಕರಿಗೆ ತಾನಿನ್ನು ಕಾಲಿಡುವುದಿಲ್ಲ ಎಂದು ಘೋಷಿಸಿ, ಅದೇ ವಿಚಾರಕ್ಕೆ ಮುರಳಿಯ ಜೊತೆ ದೊಡ್ಡದೊಂದು ಜಗಳ ಆಡಿ, ಅರಸೀಕೆರೆಗೆ ವಾಪಸ್ಸು ಬಂದ ಅನ್ನಪೂರ್ಣೆ ಮತ್ತೆ ವಾಪಸ್ಸು ಹೋಗುವ ಯೋಚನೆಯನ್ನೇ ಮಾಡಿರಲಿಲ್ಲ. ಜೋಯಿಸರೂ ಕ್ರಮೇಣ ಅವಳನ್ನು ವಾಪಸ್ಸು ಕಳುಹಿಸಬೇಕು ಎಂಬುದನ್ನು ಮರೆತೇಬಿಟ್ಟರು.
ಅಷ್ಟೂ ವರ್ಷ ನೀರಸವಾಗಿ ಕಳೆದ ಅನ್ನಪೂರ್ಣೆಗೆ, ಇದೀಗ ಅಪ್ಪ ಕಾಣೆಯಾಗಿರುವುದು ತನ್ನ ಜೀವನದ ಒಂದು ರೋಚಕ ಘಟನೆ ಅನ್ನಿಸತೊಡಗಿತು. ಅರಸೀಕೆರೆಯ ಕಾಲೇಜು ಹುಡುಗಿಯರಿಗೆ ಹೊಸ ಹೊಸ ನಮೂನೆಯ ಚೂಡಿದಾರ, ಗಾಗ್ರ ಚೋಲಿ ಹೊಲಿದುಕೊಟ್ಟು ಒಂದಷ್ಟು ಸಂಪಾದಿಸುತ್ತಿದ್ದ ಅನ್ನಪೂರ್ಣೆಗೆ, ಅಪ್ಪನನ್ನು ಹೇಗಾದರೂ ಮಾಡಿ ಹುಡುಕಲೇ ಬೇಕು ಎಂಬ ಹಟ ಮೂಡಿಬಿಟ್ಟಿತು. ಅಪ್ಪ ಎಲ್ಲಿಗೆ ಹೋಗಿರಬಹುದು ಎಂದು ಅವಳು ತರ್ಕಬದ್ಧವಾಗಿ ಲೆಕ್ಕ ಹಾಕಲು ಆರಂಭಿಸಿದಳು.
ಅವಳ ಹುಡುಕಾಟ ಶುರುವಾದದ್ದು ಅಪ್ಪ ಮನೆ ಬಿಟ್ಟ ದಿನದಿಂದ. ಆವತ್ತು ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿದ್ದ ಅಪ್ಪ, ಮರಳಿ ಬಂದಿಲ್ಲ. ಅವರು ಹೋಗಿದ್ದು ಟೀವಿ ಚಾನಲ್ಲಿನಲ್ಲಿ ಬರುವ ಪೂರ್ವಜನ್ಮದ ರಹಸ್ಯ ಬಿಚ್ಚಿಡುವ ಕಾರ್ಯಕ್ರಮಕ್ಕೆ. ಆ ಕಾರ್ಯಕ್ರಮದಲ್ಲಿ ಏನೋ ನಡೆದಿರಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಟೀವಿ ಚಾನಲ್ಲಿಗೆ ಹೋದ ಅನ್ನಪೂರ್ಣೆಗೆ ಅಲ್ಲೊಂದಷ್ಟು ವಿವರಗಳು ಸಿಕ್ಕವು. ಜೋಯಿಸರ ಪೂರ್ವಜನ್ಮವನ್ನು ಬಗೆಯುತ್ತಾ ಸತ್ಯಬೋಧರು, ಅವರ ಪೂರ್ವಜನ್ಮದ ಕತೆಯನ್ನು ಅವರ ಬಾಯಿಯಿಂದಲೇ ಹೇಳಿಸಿದ್ದರಂತೆ.
ಆ ಕತೆಯ ಪ್ರಕಾರ ಪೂರ್ವಜನ್ಮದಲ್ಲಿ ಜೋಯಿಸರ ಹೆಸರು ಕೃಷ್ಣಮೂರ್ತಿ. ತುಮಕೂರಿನಲ್ಲಿ ಆ ಕಾಲಕ್ಕೆ ತುಂಬ ಜನಪ್ರಿಯವಾಗಿದ್ದ ಶಿವಲೀಲಾ ನಾಟಕ ಸಂಘದಲ್ಲಿ ವಿಶ್ವಾಮಿತ್ರನ ಪಾತ್ರ ಮಾಡುತ್ತಿದ್ದರು. ಅವರ ಜೊತೆ ಮೋಹಿನಿಯ ಪಾತ್ರ ಮಾಡುತ್ತಿದ್ದಾಕೆ ಸುಶೀಲೆ. ಕ್ರಮೇಣ ಅವರಿಬ್ಬರ ಮಧ್ಯೆ ಪ್ರೀತಿ ಬೆಳೆಯಿತು. ಸುಶೀಲೆಯನ್ನು ಮದುವೆಯಾಗುವುದಕ್ಕೆ ಕೃಷ್ಣಮೂರ್ತಿ ನಿರ್ಧರಿಸಿದ. ಆ ತೀರ್ಮಾನಕ್ಕೆ ಬಂದದ್ದೇ ತಡ, ಆಕೆ ನಾಟಕಗಳಲ್ಲಿ ನಟಿಸುವುದಕ್ಕೆ ಅಡ್ಡಿಮಾಡತೊಡಗಿದ. ಅವಳು ರಂಗದ ಮೇಲೆ ಮೇನಕೆಯಾಗಿ ರಂಭೆಯಾಗಿ ಕುಣಿಯುವುದು ಅವನಿಗೆ ಅಸಹನೀಯ ಅನ್ನಿಸತೊಡಗಿತು. ಸುಶೀಲೆ ಕೂಡ ಅವನ ಪ್ರೀತಿಗೆ ಸೋತು, ತಾನು ನಾಟಕಗಳಲ್ಲಿ ನಟಿಸದೇ ಇರಲು ನಿರ್ಧರಿಸಿದಳು. ತನ್ನ ತೀರ್ಮಾನವನ್ನು ನಾಟಕ ಕಂಪೆನಿಯ ಮಾಲೀಕ ವರದರಾಜ ಶೆಟ್ಟಿಗೆ ಹೇಳಿದಳು. ಶಿವಲೀಲಾ ನಾಟಕ ಸಂಘದ ಜನಪ್ರಿಯ ನಟಿಯನ್ನು ಕಳೆದುಕೊಳ್ಳಲು ಸಿದ್ಧನಿಲ್ಲದ ಶೆಟ್ಟಿ, ಕೃಷ್ಣಮೂರ್ತಿಯನ್ನು ಕೊಲ್ಲಿಸಿದ. ಆ ಕೊರಗಿನಲ್ಲಿ ಎಲ್ಲದರಲ್ಲೂ ಆಸಕ್ತಿ ಕಳಕೊಂಡ ಸುಶೀಲೆ, ಮೂರು ವರ್ಷದ ನಂತರ ಆತ್ಮಹತ್ಯೆ ಮಾಡಿಕೊಂಡಳು. ಕೃಷ್ಣಮೂರ್ತಿ ಈ ಜನ್ಮದಲ್ಲಿ ಶಂಬಾಜೋಯಿಸರಾಗಿ ಹುಟ್ಟಿದ್ದಾರೆ. ಸುಶೀಲೆ, ಅದಾಗಿ ಮೂವತ್ತು ವರ್ಷಗಳ ನಂತರ ಸುಶೀಲೆಯಾಗಿ ಜನ್ಮ ತಳೆದಿದ್ದಾಳೆ. ಅವಳಿಗೆ ಪೂರ್ವಜನ್ಮದಲ್ಲಿ ಐವತ್ತಾರು ವರುಷ ಆಯಸ್ಸಿತ್ತು. ಅವಳು ಇಪ್ಪತ್ತಾರೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದರಿಂದ ಮೂವತ್ತು ವರ್ಷಗಳ ಕಾಲ ಅಂತರಪಿಶಾಚಿಯಾಗಿ ಅಲೆದಾಡಿ, ತನ್ನ ಆಯಸ್ಸು ಮುಗಿಯುವ ತನಕ ಕಾದಿದ್ದು, ನಂತರ ಮತ್ತೆ ಹುಟ್ಟಿ ಬಂದಿದ್ದಾಳೆ.
ಇದನ್ನು ನಂಬಬೇಕೋ ಬಿಡಬೇಕೋ ಅನ್ನುವುದು ಅನ್ನಪೂರ್ಣೆಗೆ ಅರ್ಥವೇ ಆಗಲಿಲ್ಲ. ಸತ್ಯಬೋಧರು ಮಾತ್ರ, ತನ್ನ ಮಾತಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಬೇಕಿದ್ದರೆ ರಂಗಭೂಮಿಯ ಇತಿಹಾಸ ತೆರೆದು ನೋಡು. ತುಮಕೂರಿನಲ್ಲಿ ಶಿವಲೀಲಾ ನಾಟಕ ಸಂಘ ಇತ್ತು ಎನ್ನುವ ವಿವರ ಅದರಲ್ಲಿದೆ. ಕೃಷ್ಣಮೂರ್ತಿ ಎಂಬ ನಟ ಅಲ್ಲಿದ್ದ ಎಂಬ ವಿವರವೂ ಅಲ್ಲಿ ಸಿಗುತ್ತದೆ. ಅವನು ನಿಗೂಢವಾಗಿ ತೀರಿಕೊಂಡ ಮಾಹಿತಿಯೂ ಇದೆ. ಸುಶೀಲೆ ಆ ಕಾಲದ ಜನಪ್ರಿಯ ನಟಿಯಾಗಿದ್ದಳು, ಅವಳು ನಾಟಕದಿಂದ ಬೇಸತ್ತು, ಏಕಾಂತ ಜೀವನ ನಡೆಸಿ ಆತ್ಮಹತ್ಯೆ ಮಾಡಿಕೊಂಡಳು ಅನ್ನುವುದೂ ಕೂಡ ಅಲ್ಲಿ ದಾಖಲಾಗಿದೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು.
ಅದಾದ ನಂತರ, ಅನ್ನಪೂರ್ಣೆಯನ್ನು ಅರಸೀಕೆರೆಯ ಮನೆಯಲ್ಲಿ ನೋಡಿದವರು ಕಡಿಮೆ. ಆಗೊಮ್ಮೆ ಈಗೊಮ್ಮೆ ಬಂದುಹೋಗುತ್ತಾಳೆ. ವಾಪಸ್ಸು ಗಂಡನ ಮನೆಗೆ ಹೋಗಿದ್ದಾಳೆ, ಸತ್ಯಬೋಧರ ಹತ್ತಿರ ಅವಳೂ ತನ್ನ ಪೂರ್ವಜನ್ಮದ ಬಗ್ಗೆ ತಿಳಿದುಕೊಂಡು ತನ್ನ ಹಿಂದಿನ ಜನ್ಮದ ಸಂಗಾತಿಯನ್ನು ಹುಡುಕಿಕೊಂಡು ತಿರುವನಂತಪುರದಲ್ಲಿ
ಅಲೆದಾಡುತ್ತಿದ್ದಾಳೆ ಎಂಬಿತ್ಯಾದಿ ಸುದ್ದಿಗಳು ಒಂದಷ್ಟು ಕಾಲ ಹಬ್ಬಿದ್ದವು. ಆಮೇಲೆ ಅರಸೀಕೆರೆಯ ಮಂದಿ ಅವಳನ್ನು ಮರೆತೇಬಿಟ್ಟರು. ಜೋಯಿಸರ ಬ್ಯಾಂಕ್ ಅಕೌಂಟನ್ನು ಆರೇಳು ವರ್ಷ ಸುಮ್ಮನೆ ಬಿಟ್ಟದ್ದರಿಂದ, ನಾನ್ ಆಪರೇಟಿವ್ ಅಕೌಂಟ್ ವಿಭಾಗಕ್ಕೆ ವರ್ಗಾಯಿಸಲಾಯಿತು ಎಂಬುದೂ, ಶಿವಮೊಗ್ಗ-ಬೆಂಗಳೂರು ರಸ್ತೆಯನ್ನು ಅಗಲಗೊಳಿಸುವ ಕಾರ್ಯಕ್ರಮದಡಿ, ಜೋಯಿಸರ ಮನೆಯನ್ನು ಸರ್ಕಾರ ಒತ್ತುವರಿ ಮಾಡಿಕೊಂಡು ನೆಲಸಮ ಮಾಡಿಬಿಟ್ಟಿತು ಎಂಬುದೂ ಈ ಕತೆಯ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟ ಈ ನಿರೂಪಕನಿಗೆ ಸಿಕ್ಕ ಖಚಿತ ಹಾಗೂ ನಂಬಲರ್ಹ ಮಾಹಿತಿ.

Leave a Reply