ನನ್ನದೂ ಒಂದು ಜೀವ

ನನ್ನದೂ ಒಂದು ಜೀವ

“ಎಷ್ಟು ದಿನ ಆಯ್ತು ನನ್ನ ಬಟ್ಟೆ ತೊಳೆಯದೆ ಹಾಗೇ ಉಳಿದಿದೆ. ನನಗೆ ಬೇಕಾದ ಬಟ್ಟೆನೆ ಇಲ್ಲ ಇವತ್ತು” ಗಂಡನ ಗೊಣಗಾಟ. “ಅಮ್ಮ ನನ್ನ ಶೂ ಎಲ್ಲಿಟ್ಟೀ?” ಸಿಗತಾನೇ ಇಲ್ಲ. ಸಾಕ್ಸೂ ತೊಳೆದಿಲ್ಲ ವಾಸನೆ ಬರ್ತಾ ಇದೆ. ತೊಳೆದ ಸಾಕ್ಸು ಎಲ್ಲವ್ವ? ಮಗನ ತೊಳಲಾಟ. “ಅಮ್ಮಾ ನಂಗೆ ಕಾಫಿನೇ ಬೇಕು.. ಮಗನ ಚೀರಾಟ. ‘ನನಗೆ ಚಹಾ ಬೇಕು’ ಅವ್ನಿಗಾದ್ರೆ ಹೇಳಿದ್ದು ಮಾಡಿಕೊಡ್ತಿಯಲ್ಲ.
“ಅವ್ವಾ ನಂಗೆ ಸ್ವಲ್ಪ ಗುಳಿಗೆ ಕೊಡ್ತೀ ಏನೆ? ಈ ಹುಡುಗರು ಮಾತೇ ಕೇಳಲ್ಲ. ನಮ್ಮ ಮಕ್ಳು ಹಿಂಗ್ ಮಾಡ್ತಿದ್ದಿಲ್ಲಾ ನೋಡು..
ಅಮ್ಮಾ ತಿಂಡಿ ರೆಡಿ ಆಯ್ತಾ?
ಆಯ್ತು ಹಾಗೇ ಹೋಗ್ಬೇಡಾ, ತಿಳಿತಾ.
ಡಬ್ಬಿ ಕಟ್ಟಿದ್ದೀಯಾ?
ಕಟ್ಟಿದ್ದೀನಿ ಬ್ಯಾಗಿಗೆ ಹಾಕ್ಕೊ ಮರಿಬೇಡ.
ನನ್ನ ಯುನಿಫಾರಂ ಎಲ್ಲಿದೆ? ಇಸ್ತ್ರಿ ಆಗಿದೆಯಾ?
ಅಮ್ಮಾ ಇವತ್ತು ಶಾಲೆಯಲ್ಲಿ ಮೀಟಿಂಗ್ ಇದೆ. ಅಪ್ಪಂಗೆ ಟೈಂ ಇಲ್ಲವಂತೆ ನೀನು ಸಂಜೆ 4 ಗಂಟೆಗೆ ಶಾಲೆಗೆ ಬರಬೇಕು.
ಬರ್ತೀನಿ ಆದರೆ, 5-10 ನಿಮಿಷ ತಡವಾಗಬಹುದು. ನನ್ನ ಆಫೀಸ್ನಲ್ಲಿ ಕೇಳ್ಕೊಂಡು ಬರ್ಬೇಕು.
ಹೌದು, ದಿನನಿತ್ಯದ ಕುಟುಂಬದ ಸಂದರ್ಭ, ಸನ್ನಿವೇಶಗಳಿವು. ಒಂದು ಕುಟುಂಬದಲ್ಲಿಯ ಆರು ಸದಸ್ಯರಲ್ಲಿ 5 ಸದಸ್ಯರು ಅಮ್ಮಾ ಎಂಬ ಯಂತ್ರಕ್ಕೆ ಪ್ರಶ್ನೆಗಳ ರೂಪದಲ್ಲಿ ಎಸೆಯುತ್ತಿರುವ ಬಾಂಬ್ಗಳಿವು. ಈ ಎಲ್ಲಾ ಪ್ರಶ್ನೆಗಳಿಗೆ ಪಟಪಟಾಂತ ಉತ್ತರಿಸುತ್ತಾ ತನ್ನ 8-10 ಕೆಲಸಗಳನ್ನು ನಿಭಾಯಿಸುತ್ತಾ ತನ್ನ ಶಕ್ತಿ, ಸಾಮರ್ಥ್ಯ ಸದುಪಯೋಗ ಮಾಡುವವಳೂ ಆಕೆಯೆ. ಸಮಾನತೆ, ಸಮಾನ ಅವಕಾಶ, ಎಲ್ಲಾ ಬಾಯಿ ಮಾತಿನ ಮುತ್ತುಗಳಾಗಿವೆ ಅಷ್ಟೆ. ವಿವಾಹ ಅನ್ನೋ ಬಂಧನದಲ್ಲಿ ಬಿದ್ದ ಆಕೆ ಮನೆಯ ಸಂಪೂರ್ಣ ಜವಾಬ್ದಾರಿಯ ಹೊಣೆ ಹೊತ್ತು, ಬಂದ ದಿನದಿಂದ ಅಂತಿಮ ಕ್ಷಣದವರೆಗೆ ನಿವೃತ್ತಿ ಇಲ್ಲದೆ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲೆ ಜೀವನ ಸವಿಸುತ್ತಾಳೆ. ‘ಸಮಾನತೆ’ ಕೇವಲ ನೌಕರಿ ಮಾಡುವಾಗ ಸಂಬಳ ಮನೆಗೆ ತಂದು ಕುಟುಂಬದ ಸದಸ್ಯರ ಪ್ರಶ್ನೆಗಳಿಗೆ ಏಕಾಂಗಿಯಾಗಿ ಉತ್ತರಿಸಬೇಕು. ನಂತರ ತಾನೂ ತಿಂದೋ, ತಿನ್ನದೆಯೋ ಕಛೇರಿಯ ಮೆಟ್ಟಿಲು ಹತ್ತುವುದರಲ್ಲಿ ದಣಿದು ನೀರುನೀರಾಗಿರುತ್ತಾಳೆ. ಆಕೆಯ ಹೊಟ್ಟೆಯ ಪಾಡು, ಬೇಕು ಬೇಡ, ಆಸೆ ಆಕಾಂಕ್ಷೆ ಕುರಿತಂತೆ ಕೇಳುವವರ್ಯಾರು? ಪ್ರಾಣಿ, ಪಕ್ಷಿಗಳಿಗೂ ತಮ್ಮ ಬಳಗ, ಗುಂಪುಗಳಲ್ಲಿ ಪ್ರೀತಿ, ವಾತ್ಸಲ್ಯ ಹಂಚಿಕೊಳ್ಳುತ್ತವೆ. ಅತೀ ಬುದ್ಧಿಜೀವಿಯಾದ ಈ ಮನುಷ್ಯ ಪ್ರಾಣಿಗೆ ಪ್ರೀತಿ, ಬಂಧನ, ಮಮತೆ ಕರುಣೆ ಎನ್ನುವುದೇ ಇಲ್ಲವೆ.
ಸಂಜೆ ಮಕ್ಕಳು, ಪತಿರಾಯ ಮನೆಗೆ ಬರುವುದರಲ್ಲಿ ಆಕೆಗೆ ಮನೆ ಸೇರುವ ತವಕ, ಭಯ, ಆತಂಕ. ಏಕೆಂದ್ರೆ ಆಕೆ ಬಂದ ನಂತರವೇ ಎಲ್ಲರಿಗೂ ಚಹಾದ ಆದರಾಥಿತ್ಯ. ಬಾಗಿಲಲ್ಲಿ ನಿಂತು ಇಡೀ ದಿನ ಕಾಯಕ ನಿರ್ವಹಿಸಿದ ಪತಿರಾಯನಿಗೆ ‘ಬ್ಯಾಗ್’ ತೆಗೆದುಕೊಂಡು ಸ್ವಾಗತ ಮಾಡುವುದೂ ಉಂಟು. ಬಂದ್ಮೇಲೆ ಕೇಳ್ತೀರಾ?
“ಮೊದ್ಲು ಚಹಾ ಮಾಡು, ಬಹಳ ಟೆನ್ಷನ್ ಆಗಿದೆ.”
ಅಮ್ಮ ದಿನಾ ಅದೇ ತರ ತಿಂಡಿಬೇಡ ಬೇರೆ ಏನಾದ್ರೂ ಮಾಡು ಪ್ಲೀಸ್.
“ಅವ್ವಾ ಗುಳಿಗಿ ತಗೊಂಡು ತಗೊಂಡು ಬಾಯಿ ಕೆಟ್ಟಿದೆ ಒಂದು ಸ್ವಲ್ಪ ಸಜ್ಜಕಾ ಮಾಡ್ತೀ ಏನೇ?” ಅತ್ತೆಯ ಗೋಗರಿಕೆ.
ವಯಸ್ಸಾದವರು ನಾಳೆ ಮಾಡ್ತೀನಿ ಅಂದ್ರೆ ತಪ್ಪಾಗಿ ತಿಳಿತಾರೇನೋ! ತಮಗೆ ಬೇಕಾದ್ದು ಮಾಡ್ಕೊಳ್ತಾರೆ ಅಂತಾರಲ್ಲಾ ಅಂತ ಸ್ವಲ್ಪ ಸಜ್ಜಕ, ಆಲೂ ಬಜ್ಜಿ, ಪಕೋಡಾ ಏನೋ ಒಂದೆರಡು ತಿನಿಸು ರೆಡಿಯಾಯ್ತು. ಸರಿ ಈಗ ಆಕೆ ಮುಖಕ್ಕೆ ಸ್ವಲ್ಪ ನೀರು ಗೊಜ್ಜಿಕೊಂಡು ಅಂಗಳ ಕಸ, ನೀರು ಹಾಕಿ, ದೇವರಿಗೆ ದೀಪ ಹಚ್ಚಿ ಬರುವುದರಲ್ಲಿ ಅಮ್ಮಾ ಹೋಂ ವರ್ಕ್ ತುಂಬಾ ಇದೆ. ನೀನು ಸಹಾಯ ಮಾಡ್ಬೇಕು. ಟೀಚರೇ ಹೇಳಿದ್ದಾರೆ. ಅಮ್ಮ ಅಪ್ಪರ ಸಹಾಯ ಪಡಿರೀ ಅಂತ. “ಪುಟ್ಟಾ ಸುಸ್ತಾಗ್ತಾ ಇದೆ. ಅಪ್ಪಂಗೆ ಹೇಳು”.
‘ಇಲ್ಲ ಅಪ್ಪನ ಫ್ರೆಂಡ್ಸ್ ಎಲ್ಲಾ ಒಂದು ಅಂಗಡಿ ಹತ್ರ ಸೇರತಾರಲ್ಲ ಸ್ವಲ್ಪ ಹರಟೆ ಹೊಡ್ದು, ಫ್ರೆಶ್ ಆಗಿ ಬರ್ತಾರಂತೆ. ಅವರು ಹೊರಗೆ ಹೋಗ್ತಿದಾರೆ’ ಈಗೇನೂ ಕೆಲ್ಸಾ ಇರಲ್ಲ ಅಮ್ಮನ ಹತ್ರಾನೇ ಹೇಳಿಸ್ಕೊ ಅಂತ ಹೇಳಿದ್ದಾರೆ. ಅಣ್ಣಾಗೆ ತುಂಬಾ Project work ಇದೆ ಅಂತೆ. ಬೇಗ ಬಾ ಅಮ್ಮ. ಆಕಾಶದಗಲ ಬಾಯಿತೆಗೆಯುತ್ತಾ ಆಕಳಿಸುತ್ತಾ Home work ಹೇಳಿಕೊಡಲು ಕೂಡುತ್ತಾಳೆ.
ಕೆಲವೇ ತಾಸುಗಳಲ್ಲಿ ಪುನಃ ಕುಕ್ಕರ್ ಹೊಡೆಸಿ ಅನ್ನ ಸಾಂಬಾರ್, ಊಟಕ್ಕೆ ಬಡಿಸೋದು, ತೆಗೆಯೋದು, ಸ್ವಚ್ಛಗೊಳಿಸಿ, ನಾಳೆಯ ಅಲ್ಪಸ್ವಲ್ಪ ತಯಾರಿ (ಸಿದ್ಧತೆ) ಮಾಡಿ ಇನ್ನೇನು ಈ ಒಂದು ದಿನದ ಕಾಯಕ ಮುಗಿತಪ್ಪಾ ಅಂದಾಗ, ಅತ್ತೆ ಎನಿಸಿಕೊಂಡ ರಾಜಮಾತೆಯ ಡೈಲಾಗು. ಸ್ವಲ್ಪ ಕಾಲಿಗೆ ಎಣ್ಣೆ ಹಚ್ಚಿ ಮಲಗಿಬಿಟ್ರೆ ನಿನಗೆ ಪುಣ್ಯ ಬರುತ್ತೆ. ಬೆಳಗ್ಗೆಯಿಂದ ರಾತ್ರಿಯವರೆಗಿನ ಪುಣ್ಯಾಪುಣ್ಯಾಫಲಗಳು ಕಡಿಮೆ ಆಗಿತ್ತು ಅನಿಸುತ್ತೆ ಈಗ ಕಾಲಿಗೆ ಎಣ್ಣೆ ಹಚ್ಚಿದ ಪುಣ್ಯ ಹೆಚ್ಚಿನದು. ಇಲ್ಲ ಎನ್ನುವಂತಿಲ್ಲ. ಕಡೇ ಗಳಿಗೆಯಲ್ಲಿರುವ ಜೀವ ಅದನ್ನೂ ಪೂರೈಸಿಯೇ ಹಾಸಿಗೆ ಕಾಣಲು ಭಾಗ್ಯ. ಈ ನಡುವೆ ಸ್ವಂತಕ್ಕೊಂದು ಏನಾದರೂ ಓದುವುದು, ಮನರಂಜನೆಗೆಂದು ಟಿ.ವಿ. ನೋಡುವುದು ದೂರದ ಮಾತು. ನಿಂತಲ್ಲೆ ಕಣ್ಣು ತೇಲುತ್ತಿರುತ್ತವೆ. ನಿದ್ರಾದೇವಿ ಸಂಪೂರ್ಣ ದೇಹವನ್ನು ಆವರಿಸಿ ಬಿಟ್ಟಿರುತ್ತಾಳೆ. ಮತ್ತೆ ನಾಳೆಯ ಚಿಂತೆಯಲ್ಲೆ ನಿದ್ರೆ. ಇದೇ ಕಾಲಚಕ್ರ. ಎಲ್ಲಿಯವರೆಗೆ ಹೀಗೆ?
ಯಾವುದರಲ್ಲಿ ಈ ಹೆಣ್ಣಿಗೆ ಸಮಾನತೆ ಇದೆ ಎಂದು ಒಪ್ಪುವುದು? ಈ ಎಲ್ಲವನ್ನೂ ಮೀರಿ ಹೆಣ್ಣು ವರ್ತಿಸಿದರೆ ಆಕೆಗೆ ಗಯ್ಯಾಳಿ ಪಟ್ಟ. ಬೇಜವಾಬ್ದಾರಿ ಹೆಂಗಸು. ಎಲ್ಲಾ ಬಿಟ್ಟು ನಿಂತಿದ್ದಾಳೆ. ಅತ್ತೆ ಮಾವನ ಸೇವೆ ಮಾಡಲ್ಲ. ಗಂಡನಿಗೆ ಹೇಗೆ ಬೇಕೋ ಹಾಗೆ ಮಾತಾಡ್ತಾಳೆ ಅನ್ನೋ ನೂರು ಬಿರುದುಗಳು ಯಾವುದೇ Influence ಇಲ್ಲದೆ ಬರುತ್ತವೆ. ಎಲ್ಲವನ್ನು ನಿಭಾಯಿಸಿದಾಗ ಮಾತ್ರ ಬರುವ ಪ್ರಶಸ್ತಿಗಳು? ಕಷ್ಟ. ಅದು ಗೊತ್ತಿದ್ದೂ ಯಾರೂ ಹೇಳುವುದಿಲ್ಲ.
ಎಲ್ಲೊ ಕೆಲವು ಕುಟುಂಬಗಳು ಹೆಣ್ಣಿನ ಕೆಲಸಕಾರ್ಯಗಳಲ್ಲಿ ಕೈಜೋಡಿಸಿ ಆಕೆಗೂ ಪ್ರೀತಿ, ವಾತ್ಸಲ್ಯ, ಕರುಣೆಯಿಂದ ಕಂಡು, ಆದರಿಸಿ, ಗೌರವಿಸಿ ನೆಮ್ಮದಿಯಿಂದಿರಲು ಅವಕಾಶ ಕೊಟ್ಟಿರುವುದೂ ಉಂಟು. ಇಂದಿನ ದಿನಮಾನದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಸಾಕಷ್ಟು ಹೆಣ್ಣು ಮಕ್ಕಳನ್ನು ಕಣ್ಣಿನಿಂದ ನೋಡಿದ್ದೂ ತುಂಬಾ ಸರಿಯಾಗಿಯೇ ಇದೆ. ಈ ನಡುವೆಯೂ ಇನ್ನೂ ಹಲವು ಹೆಣ್ಣು ಮಕ್ಕಳು ಸಾಕಪ್ಪ ಈ ಜೀವನ ಎಂದು ನಿಟ್ಟುಸಿರು ಬಿಡುತ್ತಿರುವುದೂ ಸತ್ಯವೇ ಆಗಿದೆ. ಇಷ್ಟ ಇರಲಿ, ಬಿಡಲಿ ಸಂಸಾರ ಸಾಗರ ನಿರ್ವಹಿಸಲು ದುಡಿಯಲು ಸಿದ್ಧಳಾಗುತ್ತಾಳೆ. ಆಕೆಗೆ ವೃತ್ತಿ ಜೀವನ ಇಷ್ಟ ಇದೆಯೋ ಇಲ್ಲವೊ ಎಂಬುದನ್ನು ಕೇಳುವವರ್ಯಾರು? ಇಚ್ಛೆಗಳಿಗೆ ನೀರೆರೆಯುವವರ್ಯಾರು? ಕತ್ತೆಯಂತೆ ದುಡಿಯುತ್ತಿದ್ದರೂ, ಆಕೆ ತನ್ನ ಜವಾಬ್ದಾರಿ ಸರಿಯಾಗಿಯೇ ನಿಭಾಯಿಸುತ್ತಿದ್ದಾಳೆ ಎನ್ನುವವರೇ ಇದ್ದಾರೆಯೇ ಹೊರತು, ಆಕೆಯ ಆರೋಗ್ಯ, ಗೊಂದಲಗಳನ್ನು ಅರಿತು ನೆಮ್ಮದಿಯ ಜೀವನ ನೀಡುವವರು ಕಡಿಮೆ.
ಇಂದಿನ ಕಾಲದಲ್ಲಿ ಖರ್ಚು ಬಹಳ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ತುಂಬಾ ಬೇಕು. ಗಂಡ, ಹೆಂಡತಿ ಇಬ್ಬರೂ ದುಡಿದರೇನೇ ಸಂಸಾರ ಏಳಿಗೆ ಸಾಧ್ಯ ಎಂಬಿತ್ಯಾದಿ ಆದರ್ಶದ ನುಡಿಗಳು ಹೆಣ್ಣು ದುಡಿಯಲು ಸಿದ್ಧವಾಗುವಂತೆ ಮಾಡಿದೆ. ಯಾವುದರಲ್ಲೂ ನಾನೇನೂ ಕಡಿಮೆ ಇಲ್ಲ ಎಂಬುದನ್ನು ಎಲ್ಲಾ ಕ್ಷೇತ್ರದಲ್ಲಿಯೂ ಸಾಧಿಸಿ ತೋರಿಸಿಯೇ ಬಿಟ್ಟಿದ್ದಾಳೆ. ಇಂತಹ ಸಾಧನೆಯ ಹಾದಿ ಹಿಡಿಯುವ ತವಕ, ಸಾಮರ್ಥ್ಯ ಹೊಂದಿರುವ ಅದೆಷ್ಟೋ ಹೆಣ್ಣು ಮಕ್ಕಳು ಸಂಸಾರ ಜಂಜಾಟದ ಕೂಪಕ್ಕೆ ಬಿದ್ದು ಸಹಕಾರ, ಪ್ರೋತ್ಸಾಹಗಳಿಲ್ಲದೆ ಅವಕಾಶವಂಚಿತರಾಗಿದ್ದಾರೆ. ಕೇವಲ ತನ್ನವರೆನಿಸಿಕೊಂಡವರಿಂದ ಎರಡಕ್ಷರದ ‘ಪ್ರೀತಿ’ ಬಯಸುವ ಹೆಣ್ಣಿನ ಮನಸ್ಥಿತಿ ಪುರುಷ ಪ್ರಧಾನ ಸಮಾಜಕ್ಕೆ ಅರ್ಥವೇ ಆಗಿಲ್ಲ. ಹಾಗಂತ ಎಲ್ಲಾ ಪುರುಷರೂ ಹೀಗೆ ಎಂಬುದಂತೂ ನನ್ನ ವಾದ ಖಂಡಿತಾ ಅಲ್ಲ. ಹತ್ತು ಕೆಲಸಗಳನ್ನು ಕರ್ತವ್ಯಗಳನ್ನು ಏಕಕಾಲ ನಿಭಾಯಿಸುವ ‘ತಾಯಿ’ (ಹೆಣ್ಣು)ಯ ಶಕ್ತಿ ಅನಂತ, ದಿವ್ಯ. ‘ಆಕೆಯದೂ ಒಂದು ಜೀವ’ ಎಷ್ಟು ಅರ್ಥವಾದರೆ ಸಾಕು. ಆಕೆ ಬಯಸುವುದು ‘ಪ್ರೀತಿ’ ಎಂಬ ಎರಡಕ್ಷರ ಮಾತ್ರ.

Leave a Reply