ರಾಂಗ್ ನಂಬರ್!

ರಾಂಗ್ ನಂಬರ್!

4

ಅದೆಲ್ಲ ಶುರುವಾದದ್ದು ಒಂದೇ ಒಂದು ಫೋನ್ ಕಾಲ್ನಿಂದ. ನಿವೃತ್ತ ಲೆಕ್ಕದ ಮೇಷ್ಟ್ರು ಶಿವಲಿಂಗಯ್ಯನವರಿಗೆ ಆ ಮುಸ್ಸಂಜೆ ಇದ್ದಕ್ಕಿದ್ದಂತೆ ಹಾಸನದಲ್ಲಿರುವ ತಮ್ಮನ ಜೊತೆ ಮಾತಾಡಬೇಕು ಅನ್ನಿಸಿತು. ಆಗಷ್ಟೇ ಸಂಜೆ ಕರಗಿತ್ತು, ರಾತ್ರಿ ಇಳಿದಿರಲಿಲ್ಲ. ಅವರ ಮನೆಯ ಹಜಾರದಲ್ಲಿ ಇನ್ನೂ ಬೆಳಕಾಡುತ್ತಿತ್ತು. ಆ ಹೊತ್ತಲ್ಲಿ ಮೇಷ್ಟರು ಕಿಟಕಿಯ ಬಳಿ ಕುಳಿತುಕೊಂಡು ಅಲ್ಲೇ ಪಕ್ಕದಲ್ಲಿಟ್ಟಿದ್ದ ಹಳೇ ಕಾಲದ ಫೋನಿನ ಮುಕ್ಕಾಲು ಕೇಜಿ ಭಾರದ ರಿಸೀವರ್ ಎತ್ತಿಕೊಂಡರು. ಆಮೇಲೆ ಅದರ ಪಕ್ಕದಲ್ಲಿದ್ದ ಟೆಲಿಫೋನ್ ಡೈರಿ ಎತ್ತಿಕೊಂಡು ಐ ಜೆ ಕೆ ಎಲ್ ಎಮ್ ಎಂದು ಹುಡುಕಾಡಿ, ಮಹೇಶ ಅನ್ನುವ ಹೆಸರನ್ನು ಹುಡುಕಿ, ಅದರ ಪಕ್ಕದಲ್ಲಿ ಚಿತ್ತುಚಿತ್ತಾಗಿ ಬರೆದಿದ್ದ ಹತ್ತು ಅಂಕಿಗಳ ನಂಬರನ್ನು ಟರ್ರ.. ಟ್ಟ್ರ್ರಾ… ಟರ್ರ್.. ಟರ್ರ್ರ್ರ್… ಎಂದು ಹತ್ತು ಸಲ ತೋರು ಬೆರಳಿನಿಂದ ತಿರುಗಿಸುತ್ತಾ ಡಯಲ್ ಮಾಡಿದರು.
ಅವರಿಗೆ ಆ ಹಳೇ ಕಾಲದ ಡಯಲ್ ಫೋನೆಂದರೆ ಇಷ್ಟ. ಈ ಕಾಲದ ಒತ್ತುಗುಂಡಿ ಫೋನೆಂದರೆ ಅಷ್ಟಕ್ಕಷ್ಟೇ. ಅದು ಸಿಡಿಲು ಬಂದರೆ ಸುಟ್ಟು ಹೋಗುತ್ತೆ, ಮಳೆ ಬಂದರೆ ಕೆಟ್ಟು ಹೋಗುತ್ತದೆ. ಸರಿಯಾಗಿ ಕೇಳಿಸೋದಿಲ್ಲ ಅಂತ ನಂಬಿದ್ದರು ಅವರು. ಅದಕ್ಕೆ ಸರಿಯಾಗಿ ಮಳೆ ಬಂದಾಗೆಲ್ಲ ಆ ಹೊಸ ಫೋನುಗಳು ಸುಟ್ಟು ಹೋದ ಉದಾಹರಣೆಗಳು ಅವರ ಕಿವಿಗೆ ಬೀಳುತ್ತಿದ್ದವು. ಹೀಗಾಗಿ ಅವರು ಆ ಹಳೇ ಕಾಲದ ಫೋನೇ ವಾಸಿ ಅನ್ನುವ ಖಚಿತ ತೀರ್ಮಾನಕ್ಕೆ ಬಂದಿದ್ದರು.
ಶಿವಲಿಂಗಯ್ಯ ಆ ಹಳೇ ಫೋನಿನಿಂದ ತಮ್ಮನ ಮೊಬೈಲಿಗೆ ಫೋನ್ ಮಾಡಿ ಕಾದರು. ಅತ್ತಲಿಂದ ಫೋನು ರಿಂಗಾಗುವ ಸದ್ದು ಕೇಳಿ ಬರಲಿಲ್ಲ. ಅದರ ಬದಲಿಗೆ ಕೇಳಿಬಂದದ್ದು ಶಿವಲಿಂಗಯ್ಯನವರು ತುಂಬ ಮೆಚ್ಚಿದ್ದ ಹಿಂದಿ ಹಾಡು: ಹಮೇ ತುಮ್ಸೇ ಪ್ಯಾರ್ ಕಿತ್ನಾ, ಯೇ ಹಮ್ ನಹೀ ಜಾನ್ತೇ.. ಮಗರ್ ಜೀ ನಹೀ ಸಕ್ತೇ.. ತುಮ್ಹಾರೇ ಬಿನಾ..
ಶಿವಲಿಂಗಯ್ಯನಿಗೆ ಅರೆಕ್ಷಣ ಆಶ್ಚರ್ಯವಾಯಿತು. ತಾವು ಫೋನ್ ಮಾಡಿದ್ದು ಮೊಬೈಲಿಗೋ ಯಾವುದಾದರೂ ರೇಡಿಯೋ ಸ್ಟೇಷನ್ನಿಗೋ ಎಂಬ ಅನುಮಾನ ಬಂತು. ಫೋನ್ ಲೈನಿಗೆ ಯಾವುದಾದರೂ ರೇಡಿಯೋ ಸ್ಟೇಷನ್ನು ಸಿಕ್ಕಿಬಿಟ್ಟಿದೆಯೋ ಎಂದುಕೊಂಡು ಫೋನ್ ಕಟ್ ಮಾಡೋಣ ಅಂದುಕೊಳ್ಳುವಳ್ಳುವಷ್ಟರಲ್ಲಿ ಅವರ ಕಿವಿಗೆ ಹಲೋ ಅನ್ನುವ ಮಧುರವಾದ ದನಿಯೊಂದು ಕೇಳಿಸಿತು.
ಅಂಥ ಸುಮಧುರ ಕಂಠವನ್ನು ಅವರು ಕೇಳಿಯೇ ಇರಲಿಲ್ಲ. ಅದು ಕಿವಿಗೆ ಬೀಳುತ್ತಲೇ ಶಿವಲಿಂಗಯ್ಯ ಒಂದು ಸಾರಿ ದಂಗಾಗಿಹೋದರು. ಆ ಸ್ಥಿತಿಯಲ್ಲಿ ಅವರಿಗೆ ಮಾತೇ ಹೊರಡಲಿಲ್ಲ. ಆಗಷ್ಟೇ ಕೇಳಿದ ಹಮೇ ತುಮ್ಸೇ ಪ್ಯಾರ್ ಕಿತ್ನಾ ಹಾಡು, ಅದು ಕರೆದುಕೊಂಡು ಹೋದ ಯೌವನದ ದಿನಗಳ ನೆನಪು, ಆ ನೆನಪಿನ ಬೆನ್ನಿಗೇ ಎಂದೂ ಕೇಳಿರದ, ಎಲ್ಲಿಯೋ ಕೇಳಿದ್ದೇನೆ ಅನ್ನಿಸಿದ ಆ ಮಂಜುಳ ಧ್ವನಿ. ಶಿವಲಿಂಗಯ್ಯ ಕಂಪಿಸಿದರು.
ಹಲೋ ಯಾರು ಮಾತಾಡ್ತಿರೋದು ಹೇಳೀ..
ಆ ಧ್ವನಿ ಮತ್ತೊಮ್ಮೆ ಉಲಿಯಿತು. ನಾನು ಅನ್ನುವುದಕ್ಕೆ ಯತ್ನಿಸಿದರು. ಧ್ವನಿ ಹೊರಗೆ ಬರಲು ನಿರಾಕರಿಸಿದಂತಿತ್ತು. ಆ ಸ್ವರದಲ್ಲಿರುವ ಆಪ್ತತೆ, ಮಾಧುರ್ಯ ಮತ್ತು ಅದು ಸೃಷ್ಟಿಸಿರುವ ಅಪೂರ್ವ ಜಗತ್ತು ತಮ್ಮ ಒಂದು ಮಾತಿನಿಂದ ಕರಗಿಹೋಗುತ್ತದೆ ಅನ್ನುವ ಆತಂಕದಲ್ಲಿ ಶಿವಲಿಂಗಯ್ಯ ಸುಮ್ಮನೆ ಉಳಿದುಬಿಟ್ಟರು.
ಆಕೆ ಮತ್ತೆ ಮಾತಾಡಿದಳು. ಹಲೋ… ಮಾತಾಡಿ ಪ್ಲೀಸ್.. ಕೇಳಿಸ್ತಾ ಇದೆಯಾ. ಯಾರು ಬೇಕಾಗಿತ್ತು ನಿಮಗೆ.. ಎಲ್ಲಿಂದ ಮಾತಾಡ್ತಿದ್ದೀರಿ.. ಹಲೋ… ಹಲೋ..’ ಹಲೋ ಅನ್ನುವ ಧ್ವನಿ ಅವರ ಚಿತ್ತಪೃಥ್ವಿಯಲ್ಲಿ ಅನುರಣಿಸುತ್ತಾ ಸಾಗಿತು. ಆ ದನಿಯೆಂಬ ಮಾಯಾಜಿಂಕೆಯ ಹಿಂದೆ ಮನಸ್ಸು ವೈದೇಹಿಯಾಯಿತು.

ಹಲೋ.. ಮಾತಾಡಿ… ಹಲೋ.. ಕೇಳಿಸ್ತಿಲ್ಲ.. ನಾನೇ ಮಾಡ್ತೀನಿ ಇರಿ… ಎಂದು ಮತ್ತೊಮ್ಮೆ ಕೊಂಚ ಎತ್ತರದ ದನಿಯಲ್ಲಿ ಮಾತಾಡಿ, ಆಮೇಲೆ ಫೋನ್ ಕಟ್ ಮಾಡಿದ್ದೂ ಶಿವಲಿಂಗಯ್ಯನವರಿಗೆ ಗೊತ್ತಾಗಲೇ ಇಲ್ಲ. ಅವರು ರಿಸೀವರ್ ಹಿಡಿದುಕೊಂಡು ಹಾಗೇ ಕೂತಿದ್ದರು. ಸ್ವಲ್ಪ ಹೊತ್ತಿನ ನಂತರ ಅವರ ಕಿವಿಗೆ ಕೇಳಿಸುತ್ತಿದ್ದದ್ದು ಡಿಸ್ಕನೆಕ್ಟ್ ಆದ ಫೋನ್ ಲೈನಿನ ಗುಯ್ಗುಡುವ ಸದ್ದು. ಶಿವಲಿಂಗಯ್ಯ ಹಾಗೇ ಕೂತುಬಿಟ್ಟರು.
ಹಲೋ.. ಎಂಬ ಸುಸ್ವರದ ಅಲೆ ಅವರ ಮನಸ್ಸಿನೊಳಗೆ ಉಯ್ಯಾಲೆ ಆಡುತ್ತಿತ್ತು. ಮತ್ತೆ ಅವಳಿಗೆ ಫೋನ್ ಮಾಡೋಣ ಅಂದುಕೊಂಡರು. ಆದರೆ ತಾನು ಡಯಲ್ ಮಾಡಿದ ಆ ರಾಂಗ್ ನಂಬರ್ ಯಾವುದು ಅನ್ನುವುದು ಅವರಿಗೆ ನೆನಪಾಗಲೇ ಇಲ್ಲ.
*******
ಆವತ್ತಿನಿಂದ ಶಿವಲಿಂಗಯ್ಯ ತಾನಾಗಿ ಉಳಿಯಲಿಲ್ಲ. ಅವರನ್ನು ಆ ಧ್ವನಿ ಹಗಲೂ ಇರುಳೂ ಕಾಡಿತು. ಯಾವ ದಿವ್ಯ ವೀಣೆಯಿದು.. ಯಾರೀ ಸುರವೈಣಿಕ ಎಂದು ಬೆಳಗ್ಗೆ ರೇಡಿಯೋ ಉಲಿಯುತ್ತಿದ್ದರೆ ಅವರ ಮನಸ್ಸು ಆ ಸ್ವರದತ್ತ ಹಾಯುತ್ತಿತ್ತು. ಎಲ್ಲಾದರೂ ಏನಾದರೂ ಸದ್ದಾದರೆ ಆ ದನಿ ಮರುಕಳಿಸುತ್ತಿತ್ತು. ಈ ಜನ್ಮವನ್ನು ಸಾರ್ಥಕಗೊಳಿಸುವುದಕ್ಕೆ ಬಂದ ಅಮರನಾದ ಅದು ಅನ್ನುವುದು ಅವರಿಗೆ ಕ್ರಮೇಣ ಖಾತ್ರಿಯಾಗತೊಡಗಿತು.
ಲೆಕ್ಕದ ಮೇಷ್ಟ್ರು ಶಿವಲಿಂಗಯ್ಯನ ಲೆಕ್ಕ ತಪ್ಪುತ್ತಾ ಇದೆ ಅನ್ನುವುದು ಮೊದಲು ಗೊತ್ತಾದದ್ದು ಅವರ ಗೆಳೆಯ ಪುಟ್ಟಲಿಂಗಯ್ಯನಿಗೆ. ಸದಾ ಸಂಜೆ ವಾಕಿಂಗಿಗೆ ಶಿವಲಿಂಗಯ್ಯನ ಜೊತೆ ಹೋಗುತ್ತಿದ್ದ ಪುಟ್ಟಲಿಂಗಯ್ಯ ಮಾರನೇ ಸಂಜೆ ಬಂದಾಗ ಶಿವಲಿಂಗಯ್ಯ ಟೆಲಿಫೋನಿನ ಮುಂದೆ ಕೂತಿದ್ದರು. ವಾಕಿಂಗ್ ಬರೋಲ್ವಾ ಅಂತ ಕೇಳಿದ್ದಕ್ಕೆ, ಇಲ್ಲ ಯಾವುದೋ ಫೋನ್ ಬರೋದಿದೆ ಅಂತ ಹೇಳಿ, ಅವನನ್ನು ಸಾಗಹಾಕಿದರು. ಫೋನಿನ ಮುಂದೆ ಪ್ರತಿಷ್ಠಾಪಿತರಾಗಿ ಅಹೋರಾತ್ರಿ ಕಾದರು. ಟೆಲಿಫೋನಿನ ಮುಂದೆ ಕೂತು ಅದೇನು ತಪಸ್ಸು ಮಾಡ್ತಿದ್ದೀರಿ ಅನ್ನುವ ಹೆಂಡತಿ ಗಿರಿಜೆಯ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ. ತಾನೇಕೆ ಫೋನಿನ ಮುಂದೆ ಕಾಯುತ್ತಿದ್ದೇನೆ ಅನ್ನುವುದು ಅವರಿಗೂ ಗೊತ್ತಿರಲಿಲ್ಲ.
ಆಗಷ್ಟೇ ಡಿಸೆಂಬರ್ ಕಾಲಿಡುತ್ತಿತ್ತು. ಶಿವಲಿಂಗಯ್ಯನನ್ನೂ ಮಂಜು ಮುಸುಕಿದ ಮುಂಜಾನೆ, ಇಬ್ಬನಿ ಹನಿಸುವ ಸಂಜೆ, ಚಂದಿರನೂ ಮಂಕಾಗಿ ಉರಿಯುವ ಬೆಳದಿಂಗಳ ರಾತ್ರಿ ಬಿಡಲಿಲ್ಲ. ಫೋನ್ ಮುಂದೆ ಕೂತು, ಊಟಕ್ಕೆ ಕುಳಿತಾಗ, ಸ್ನಾನ ಮಾಡುವ ಹೊತ್ತಿಗೆ, ದೇವರ ಮುಂದೆ ಪೂಜೆಗೆ ಕೂತಾಗ ಶಿವಲಿಂಗಯ್ಯ ಒಂದೇ ಒಂದು ಸಾರಿ ಫೋನ್ ಮಾಡು ಅಂತ ತಮ್ಮೊಳಗೇ ಕೇಳಿಕೊಂಡರು. ಮತ್ತೆ ಕುಳಿತು ಲೆಕ್ಕ ಹಾಕಿದರು. ನಾನು ಫೋನ್ ಮಾಡ್ತೀನಿ ಅಂತ ಹೇಳಿದಳಲ್ಲ. ಹಾಗಿದ್ದರೆ ಯಾಕೆ ಮಾಡಲಿಲ್ಲ. ತನ್ನ ನಂಬರು ಅವಳ ಮೊಬೈಲಿನಲ್ಲಿ ದಾಖಲಾಗಿರಲೇಬೇಕು. ಹಾಗಿದ್ದರೆ ಇಂದಲ್ಲ ನಾಳೆ ಫೋನ್ ಮಾಡೇ ಮಾಡುತ್ತಾಳೆ. ಮಾಡೇ ಮಾಡುತ್ತಾಳೆ.
********
ಫೋನಿನ ಮುಂದೆ ಕುಳಿತು, ಅದು ರಿಂಗಾದಾಗೆಲ್ಲ ಉಲ್ಲಸಿತರಾಗುತ್ತಾ, ರಿಸೀವರ್ ಎತ್ತಿದಾಗೆಲ್ಲ ಅದೇ ಹಳೆಯ ದನಿಗಳು ಮುರುಕು ಮುರುಕಾಗಿ ಬಂದು ಕಿವಿಗೆ ಅಪ್ಪಳಿಸಿದಾಗ ಬೇಸರ ಪಡುತ್ತಾ ಶಿವಲಿಂಗಯ್ಯನ ದಿನಗಳು ಉರುಳಿದವು. ಮುಸ್ಸಂಜೆ ಫೋನ್ ರಿಂಗಣಿಸಿದರೆ ಅವಳದೇ ಇರಬೇಕು ಅನ್ನುವ ಊಹೆ. ಒಂದು ದಿನ ಅವರ ಗಿರಿಜೆ ಮುಸ್ಸಂಜೆಯ ಕರೆಯೊಂದಕ್ಕೆ ಉತ್ತರಿಸಿದ್ದು ಆಗಷ್ಟೇ ಮನೆಗೆ ಬರುತ್ತಿದ್ದ ಅವರಿಗೆ ಕೇಳಿಸಿತ್ತು. ಆಕೆ ಅಯ್ಯ… ರಾಂಗ್ ನಂಬರ್.. ಇಡಮ್ಮಾ ಫೋನು… ನೋಡ್ಕೊಂಡು ಮಾಡೋಕ್ಕಾಗಲ್ವಾ’ ಅಂತ ರೇಗುವುದಷ್ಟೇ ಕೇಳಿಸಿತು. ಶಿವಲಿಂಗಯ್ಯ ಸಿಟ್ಟಲ್ಲಿ ಬಂದು ಫೋನ್ ಎತ್ತಿಕೊಳ್ಳುವ ಹೊತ್ತಿಗೆ ಫೋನ್ ಕಟ್ಟಾಗಿತ್ತು. ಆವತ್ತು ಗಿರಿಜೆ ಹೊಡೆಸಿಕೊಳ್ಳಲಿಲ್ಲ ಅಷ್ಚೇ. ಯಾರದು, ಧ್ವನಿ ಹೇಗಿತ್ತು.. ಏನಂದಳು ಅಂತ ಮತ್ತೆ ಮತ್ತೆ ಕೇಳಿದರು. ಗಿರಿಜೆ ಯಾವಳೋ ಹಾಳು ಮುಂಡೇ, ಅದ್ಯಾಕೆ ಹಾಗಾಡ್ತೀರಿ ಅಂತ ತನ್ನ ತವರಿಗೆ ಭಾಷೆಗೆ ಮರಳುವ ತನಕ ಅವಳನ್ನು ಕಾಡಿದರು.
ದಿನ ಉರುಳಿದ ಹಾಗೇ ಆ ದನಿ ಅವರೊಳಗೆ ಹರಳುಗಟ್ಟುತ್ತಾ ಹೋಯಿತು. ಮತ್ತೊಂದು ಮುಸ್ಸಂಜೆ ಆ ದನಿ ಯಾವುದು ಅನ್ನುವುದನ್ನು ಪತ್ತೆ ಮಾಡಲೇಬೇಕು ಅಂದುಕೊಂಡು ಶಿವಲಿಂಗಯ್ಯ ನಿರ್ಧಾರ ಮಾಡಿಬಿಟ್ಟರು. ಮೊದಲ ದಿನ ಫೋನ್ ಮಾಡಿದ ಭಂಗಿಯನ್ನೇ ಕೂತು, ತಮ್ಮನ ನಂಬರ್ ಹುಡುಕಿ ರಿಸೀವರ್ ಎತ್ತಿಕೊಂಡು ತಮ್ಮನ ನಂಬರ್ ಡಯಲ್ ಮಾಡಿದರು, ತಮ್ಮನೇ ಫೋನೆತ್ತಿಕೊಂಡು ಏನಣ್ಣಾ, ಚೆನ್ನಾಗಿದ್ದೀಯ’ ಅಂತ. ಹೂಂ ಅನ್ನದೇ ಉಹೂಂ ಅನ್ನದೇ ಫೋನಿಟ್ಟರು.
ಅಂದರೆ ತಾನು ಯಾವುದೋ ಒಂದು ನಂಬರ್ ಬೇರೆ ಒತ್ತಿದ್ದೇನೆ. ಆಗ ಅದು ದೇವಕನ್ನಿಕೆಗೆ ಹೋಗಿದೆ. ಯಾವ ನಂಬರ್ ಬೇರೆ ಒತ್ತಿರಬಹುದು. ಹತ್ತಂಕಿಯ ನಂಬರ್ ಮುಂದಿಟ್ಟುಕೊಂಡು ಶಿವಲಿಂಗಯ್ಯ ಅದರ ವಿವಿಧ ಸಂಭವನೀಯತೆಯನ್ನು ಲೆಕ್ಕ ಹಾಕಿದರು. ೯೪೮೦೪೪೯೪೪೭ ನಂಬರಲ್ಲಿ ತಪ್ಪಾದರೆ ಏನಾಗಿರಬಹುದು. ಮೊದಲ ಮೂರಂಕಿ ತಪ್ಪಾಗಿರಲಿಕ್ಕಿಲ್ಲ. ಆಮೇಲಿನ ಸಂಖ್ಯೆ ತಪ್ಪಾಗಿರಬಹುದೇ. ಇದರಿಂದ ಎಷ್ಟು ನಂಬರ್ ಹುಟ್ಟುವುದಕ್ಕೆ ಸಾಧ್ಯ.
ಶಿವಲಿಂಗಯ್ಯ ಬರೆಯುತ್ತಾ ಹೋದರು: ೯೪೮೦೧೪೯೪೪೭, ೯೪೮೦೨೪೯೪೪೭, ೯೪೮೦೩೪೯೪೪೭, ೯೪೮೦೫೪೯೪೪೭… ಹೀಗೆ ಬರೆಯುತ್ತಾ ಬರೆಯುತ್ತಾ ಅವರ ಮುಂದೆ ಐನೂರೆಪ್ಪತ್ತಕ್ಕೂ ಹೆಚ್ಚು ಫೋನ್ ನಂಬರ್ಗಳಿರುವ ಪಟ್ಟಿ ಸಿದ್ದವಾಯ್ತು.
ಆವತ್ತಿನಿಂದ ಅವರದು ಅದೇ ಕೆಲಸ ಆಯ್ತು. ಬೆಳಗಾಗೆದ್ದು ಆ ಟೆಲಿಫೋನ್ ಪಟ್ಟಿಯನ್ನೆತ್ತಿಕೊಂಡು ಒಂದೊಂದೇ ನಂಬರ್ ಡಯಲ್ ಮಾಡುವುದು. ಆ ಹಳೇ ಫೋನಿನಲ್ಲಿ ನಂಬರ್ ಡಯಲ್ ಮಾಡುತ್ತಾ, ಅದು ಟರ್ರ.. ಟ್ಟ್ರ್ರಾ… ಟರ್ರ್.. ಟರ್ರ್ರ್ರ್… ಎಂದು ಸದ್ದು ಮಾಡುತ್ತಾ, ಮರು ಕ್ಷಣವೇ ಗೊಗ್ಗರು ದನಿಯೊಂದು ಹಲೋ ಅನ್ನುತ್ತಿದ್ದಂತೆ ಫೋನ್ ಕಟ್ ಮಾಡುತ್ತಾ, ಹಲೋ, ಪೊಲೀಸ್ ಸ್ಚೇಷನ್, ಹಲೋ ಕಟ್ಟಿಗೆ ಡಿಪೋ, ಹಲೋ ಹಾಲಿನ ಡೈರಿ, ಯಾವ ನಂಬರ್ ಬೇಕ್ರೀ, ರಾಂಗ್ ನಂಬರ್, ಫೋನ್ ಮಾಡಿ ಮಾತಾಡೋದಕ್ಕೇನ್ರೀ ರೋಗ, ಈ ನಂಬರ್ ಅಸ್ತಿತ್ವದಲ್ಲಿ ಇಲ್ಲ, ನೀವು ಕರೆ ಮಾಡಿರುವ ಚಂದಾದಾದರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಸದ್ಯಕ್ಕೆ ದೊರಕುತ್ತಿಲ್ಲ, ಸ್ವಿಚಾಫ್ ಮಾಡಿದ್ದಾರೆ, ದಯವಿಟ್ಟು ನೀವು ಡಯಲ್ ಮಾಡಿದ ನಂಬರ್ ಸರಿಯಿದೆಯೋ ಪರೀಕ್ಷಿಸಿ….
ಹೀಗೆ ಶಿವಲಿಂಗಯ್ಯನವರ ಹಗಲು ರಾತ್ರಿಗಳು ಸಾಗಿದವು. ಆ ತಿಂಗಳ ಬಿಲ್ಲು ಆರು ಸಾವಿರದ ಎಪ್ಪತ್ತೆಂಟು ಬಂತು. ಶಿವಲಿಂಗಯ್ಯ ಅಲ್ಲಾಡಲಿಲ್ಲ. ಆವತ್ತು ಗಿರಿಜೆ ಅವರನ್ನು ಹಿಡಕೊಂಡು ರೇಗಾಡಿ ಕೂಗಾಡಿದರು. ನಿಮಗೆ ಹುಚ್ಚು ಹಿಡಿದಿದೆ ಅಂದರು. ಒಂದು ದಿನ ಇದರಿಂದ ಬೇಸತ್ತು, ಶಿವಲಿಂಗಯ್ಯನವರಿಗೆ ಗೊತ್ತಾಗದ ಹಾಗೆ ಫೋನಿನ ವೈರು ಕತ್ತರಿಸಿಟ್ಟರು.
ಆವತ್ತು ಫೋನ್ ಮೌನವಾಗಿತ್ತು. ಅದು ಮೌನವಾಗಿದ್ದದ್ದೂ ಅರಿವಿಗೆ ಬಾರದ ಹಾಗೆ ಶಿವಲಿಂಗಯ್ಯ ಫೋನ್ ಮಾಡುತ್ತಲೇ ಇದ್ದರು. ಇವರಿಗೇನಾಗಿದೆ ಅಂತ ಕೇಳಿಕೊಂಡು ಬರೋಣ ಅಂತ ಗಿರಿಜೆ ಸಂತೆಪೇಟೆಯಲ್ಲಿದ್ದ ತನ್ನ ಅಣ್ಣ ಮಹಾದೇವಯ್ಯನನ್ನು ಕೇಳೋಣ ಅಂತ ಅಲ್ಲಿಗೆ ಹೋಗಿ ಅಣ್ಣನ ಜೊತೆ ಮನೆಗೆ ಮರಳುವ ಹೊತ್ತಿಗೆ ರಿಸೀವರ್ ಕೆಳಗೆ ಬಿದ್ದಿತ್ತು.
ಗಾಬರಿಯಲ್ಲಿ ಇಬ್ಬರೂ ಸೇರಿ ಶಿವಲಿಂಗಯ್ಯನವರನ್ನು ಹಾಸಿಗೆಯ ಮೇಲೆ ಮಲಗಿಸುವ ಹೊತ್ತಿಗೆ ಅವರ ಆತ್ಮವು ವ್ಯಾಪ್ತಿ ಪ್ರದೇಶದಲ್ಲಿ ಇರಲಿಲ್ಲ. ಅವನ ತಮ್ಮನಿಗಾದ್ರೂ ಫೋನ್ ಮಾಡಿ ಹೇಳೋಣ ಅಂದುಕೊಂಡು ಮಹಾದೇವಯ್ಯ, ಕೆಳಗೆ ಬಿದ್ದ ರಿಸೀವರ್ ಎತ್ತಿಕೊಂಡರು. ಫೋನ್ ಡೆಡ್ ಆಗಿದ್ಯಾ ಕೇಳಿದರು. ಇಲ್ಲಾ ಕನೆಕ್ಷನ್ ತೆಗೆದಿದ್ದೀನಿ ನೋಡಿ, ಅಲ್ಲಿ ಅಂತ ಗಿರಿಜೆ ತೋರಿಸಿದಳು.
********
ಮಹಾದೇವಯ್ಯ ಫೋನಿನ ಆ ಹಳೇ ಕಾಲದ ಫೋನಿನ ಮುಕ್ಕಾಲು ಕೇಜಿ ಭಾರದ ರಿಸೀವರ್ ಎತ್ತಿಕೊಂಡರು. ಆಮೇಲೆ ಅದರ ಪಕ್ಕದಲ್ಲಿದ್ದ ಟೆಲಿಫೋನ್ ಡೈರಿ ಎತ್ತಿಕೊಂಡು ಐ ಜೆ ಕೆ ಎಲ್ ಎಮ್ ಎಂದು ಹುಡುಕಾಡಿ, ಮಹೇಶ ಅನ್ನುವ ಹೆಸರನ್ನು ಹುಡುಕಿ, ಅದರ ಪಕ್ಕದಲ್ಲಿ ಚಿತ್ತುಚಿತ್ತಾಗಿ ಬರೆದಿದ್ದ ಹತ್ತು ಅಂಕಿಗಳ ನಂಬರನ್ನು ಟರ್ರ.. ಟ್ಟ್ರ್ರಾ… ಟರ್ರ್.. ಟರ್ರ್ರ್ರ್… ಎಂದು ಹತ್ತು ಸಲ ತೋರು ಬೆರಳಿನಿಂದ ತಿರುಗಿಸುತ್ತಾ ಡಯಲ್ ಮಾಡಿದರು.
ಅತ್ತಲಿಂದ ಫೋನು ರಿಂಗಾಗುವ ಸದ್ದು ಕೇಳಿ ಬರಲಿಲ್ಲ. ಅದರ ಬದಲಿಗೆ ಕೇಳಿಬಂದದ್ದು ಹಮೇ ತುಮ್ಸೇ ಪ್ಯಾರ್ ಕಿತ್ನಾ, ಯೇ ಹಮ್ ನಹೀ ಜಾನ್ತೇ.. ಮಗರ್ ಜೀ ನಹೀ ಸಕ್ತೇ.. ತುಮ್ಹಾರೇ ಬಿನಾ..
ಮಹಾದೇವಯ್ಯನಿಗೆ ಅರೆಕ್ಷಣ ಆಶ್ಚರ್ಯವಾಯಿತು. ತಾವು ಫೋನ್ ಮಾಡಿದ್ದು ಮೊಬೈಲಿಗೋ ಯಾವುದಾದರೂ ರೇಡಿಯೋ ಸ್ಟೇಷನ್ನಿಗೋ ಎಂಬ ಅನುಮಾನ ಬಂತು. ಫೋನ್ ಲೈನಿಗೆ ಯಾವುದಾದರೂ ರೇಡಿಯೋ ಸ್ಟೇಷನ್ನು ಸಿಕ್ಕಿಬಿಟ್ಟಿದೆಯೋ ಎಂದುಕೊಂಡು ಫೋನ್ ಕಟ್ ಮಾಡೋಣ ಅಂದುಕೊಳ್ಳುವಳ್ಳುವಷ್ಟರಲ್ಲಿ ಅವರ ಕಿವಿಗೆ ಹಲೋ ಅನ್ನುವ ಮಧುರವಾದ ದನಿಯೊಂದು ಕೇಳಿಸಿತು.
ಅಂಥ ಸುಮಧುರ ಕಂಠವನ್ನು ಅವರು ಕೇಳಿಯೇ ಇರಲಿಲ್ಲ. ಅದು ಕಿವಿಗೆ ಬೀಳುತ್ತಲೇ ಮಹಾದೇವಯ್ಯ ಒಂದು ಸಾರಿ ದಂಗಾಗಿಹೋದರು. ಆ ಹಾಡಿನ ಬೆನ್ನಿಗೇ ಎಂದೂ ಕೇಳಿರದ, ಎಲ್ಲಿಯೋ ಕೇಳಿದ್ದೇನೆ ಅನ್ನಿಸಿದ ಆ ಮಂಜುಳ ಧ್ವನಿ.
ಹಲೋ ಯಾರು ಮಾತಾಡ್ತಿರೋದು ಹೇಳೀ..
ಆ ಧ್ವನಿ ಮತ್ತೊಮ್ಮೆ ಉಲಿಯಿತು. ನಾನು ಅನ್ನುವುದಕ್ಕೆ ಯತ್ನಿಸಿದರು. ಧ್ವನಿ ಹೊರಗೆ ಬರಲು ನಿರಾಕರಿಸಿದಂತಿತ್ತು. ಆ ಸ್ವರದಲ್ಲಿರುವ ಆಪ್ತತೆ, ಮಾಧುರ್ಯ ಮತ್ತು ಅದು ಸೃಷ್ಟಿಸಿರುವ ಅಪೂರ್ವ ಜಗತ್ತು ತಮ್ಮ ಒಂದು ಮಾತಿನಿಂದ ಕರಗಿಹೋಗುತ್ತದೆ ಅನ್ನುವ ಆತಂಕದಲ್ಲಿ ಮಹಾದೇವಯ್ಯ ಸುಮ್ಮನೆ ಉಳಿದುಬಿಟ್ಟರು.
ಆಕೆ ಮತ್ತೆ ಮಾತಾಡಿದಳು. ಹಲೋ… ಮಾತಾಡಿ ಪ್ಲೀಸ್.. ಕೇಳಿಸ್ತಾ ಇದೆಯಾ. ಯಾರು ಬೇಕಾಗಿತ್ತು ನಿಮಗೆ.. ಎಲ್ಲಿಂದ ಮಾತಾಡ್ತಿದ್ದೀರಿ.. ಹಲೋ… ಹಲೋ..’ ಹಲೋ ಅನ್ನುವ ದನಿ ಅವರ ಚಿತ್ತಪೃಥ್ವಿಯಲ್ಲಿ ಅನುರಣಿಸುತ್ತಾ ಸಾಗಿತು. ಆ ದನಿಯೆಂಬ ಮಾಯಾಜಿಂಕೆಯ ಹಿಂದೆ ಮನಸ್ಸು ವೈದೇಹಿಯಾಯಿತು.
ಗಿರಿಜೆ ಮಲಗಿದ್ದ ಶಿವಲಿಂಗಯ್ಯನವರ ದೇಹದ ಮುಂದೆ ಅಸ್ತಿತ್ವದಲ್ಲಿಲ್ಲದ ನಂಬರಿನ ಹಾಗೆ ಕೂತೇ ಇದ್ದರು.

Leave a Reply