ನಾಡಿಗೇ ಭೂಷಣರಾಗಿದ್ದ ”ಶಿವಣ್ಣ ಕಾಕಾ’ ನಾಡಗೀರ ಮಾಸ್ತರ್

ಸೆಪ್ಟೆಂಬರ್ 5 ಶಿಕ್ಶಕರ ದಿನವೆಂದು ಆಚರಿಸುತ್ತೇವೆ. ಆದರೆ ನಮಗೆ ಪಾಠ ಕಲಿಸಿದ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳನ್ನು ದಿನನಿತ್ಯ ನೆನಸುತ್ತೇವೆ. ಅಂಥ ಪ್ರಾತಃಸ್ಮರಣೀಯರು ನನ್ನ ಗುರುಗಳಾಗಿದ್ದ ನಾಡಗೀರ ಮಾಸ್ತರರು. ದಾಸರೆಂದರೆ ಪುರಂದರ ದಾಸರಯ್ಯ ಎನ್ನುವ ಧಾಟಿಯಲ್ಲಿ ಅವರ ವಿದ್ಯಾರ್ಥಿಗಳಿಗೆ ’ಮಾಸ್ತರ್’ ಅಂದರೆ ಅವರೊಬ್ಬರೇ – ನಾಡಗೀರ್ ಮಾಸ್ತರರು. ಹತ್ತಿರದವರು ’ಶಿವಣ್ಣ ಕಾಕಾ’ ಅಂತ ಕರೆಯುತ್ತಿದ್ದರು.

ಸಾಲಿ ಅಂದ್ರ ನಾಡಗೀರ್ ಮಾಸ್ತರರ ಸಾಲಿ (ಉತ್ತರ ಕರ್ನಾಟಕಲ್ಲಿ ಶಾಲೆ) ಅಂತ ಎಲ್ಲೆಡೆ ಪ್ರಸಿದ್ಧವಾದ ಧಾರವಾಡದ ಮಾಳಮಡ್ಡಿಯ ಕೆ ಇ ಬೋರ್ಡ್ ಹೈಸ್ಕೂಲ್. ಅದರಲ್ಲಿ ಅವರು ಸೇವೆ ಸಲ್ಲಿಸಿದ ನಾಲ್ಕು ದಶಕಗಳು (1938-1976).ಅದರಲ್ಲಿ 20 ವರ್ಷ ಹೆಡ್ಮಾಸ್ಟರ್ ಅಂತ. ಅವರು ಕಲಿಸಿದ ವಿದ್ಯಾರ್ಥಿಗಳು ಸಾವಿರಾರು. ಅವರೆಲ್ಲರ ಮನದಲ್ಲಿ ಅವರು ಸ್ಥಿರವಾಗಿ ನೆಲೆಸಿದ್ದಾರೆಂದರೆ ಅತಿಶಯೋಕ್ತಿಯಲ್ಲ. ನನ್ನ ಮಟ್ಟಿಗಂತೂ ಅದು ಶಂಬರ್ ಟಕ್ಕೆ ಖರೆ. 1975ರಲ್ಲಿ ರಾಷ್ಟ್ರಪತಿಗಳ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯಿಂದ ಭೂಷಿತರಾದರು. ”ರಾಂಕ್ ಬ್ಯಾಂಕ್ ” ಅಂತ ಹೆಸರು ಗಳಿಸಿದ್ದ ಆ ಶಾಲೆಯ ಹಳೆಯ ವಿದ್ಯಾರ್ಥಿ ಗುರುರಾಜ ಕರ್ಜಗಿ ಹೇಳುವಂತೆ “ಆದರ್ಶ ಶಿಕ್ಷಕರ ಮೆರವಣಿಗೆಯೇ ಇತ್ತು ಆ ಶಾಲೆಯಲ್ಲಿ!“ ಅವರ ಪ್ರಯತ್ನ ಮತ್ತು ಪ್ರೋತ್ಸಾಹದಿಂದ ಅನೇಕ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರು.

ಆ ಶಾಲೆಯಲ್ಲಿ ನಾನು ಕಲಿತದ್ದು ಮೂರೇ ವರ್ಷಗಳಾದರೂ ಅವರೊಡನೆ ನನ್ನ ಸಂಬಂಧ, ಪತ್ರ ವ್ಯವಹಾರ ಅವರು ನಿಧನರಾಗುವ ತನಕ ಇತ್ತು. ನಾನು ಸಾಲಿ ಬಿಟ್ಟ ನಂತರವೇ ಅವರು ನನಗೆ ಇನ್ನೂ ಹತ್ತಿರವಾದರು. ತಮ್ಮ ತೊಂಬತ್ತನೆಯ ವಯಸ್ಸಿನವರೆಗೆ ನನ್ನೂಡನೆ ಪತ್ರವ್ಯವಹಾರ ನಡೆಸುತ್ತಿದ್ದರು: ಅದರಲ್ಲಿ ಹಾಸ್ಯವಿರುತ್ತಿತ್ತು, ಬೋಧನೆಯಿರುತ್ತಿತ್ತು; ಚೇಷ್ಟೆ ಸಹ! ಅದೇ ತರಹ ಅಗಣಿತ ಹಳೆಯ ವಿದ್ಯಾರ್ಥಿಗಳಿಗೂ ಸ್ವಹಸ್ತದಿಂದಲೇ ಪತ್ರಗಳನ್ನು ಬರೆಯುತ್ತಿದ್ದರು. ಅವರ ಪತ್ರಗಳ ಸಂಗ್ರಹದ ಆಧಾರದ ಮೇಲೆಯೇ ಒಂದು ಲೇಖನ ಬರೆದಿದ್ದೆ: Nadgir master -my guru and my pen pal! (’ನನ್ನ ಮಾಸ್ತರ್-ನನ್ನ ಪೆನ್ ಫ್ರೆಂಡ್ ಸಹ’) ಅಂತ! ಬಡತನ ಕಷ್ಟ ಕಾರ್ಪಣ್ಯಗಳೊಡನೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದು ನಮಗೂ ಕಲಿಸಿದ್ದರು. ಬದುಕಿದ್ದಷ್ಟು ದಿನ ಬಡತನ. ಅವರ ಆಸ್ತಿಯೆಂದರೆ ಅವರ ಶಿಷ್ಯವೃಂದ. ಆ ದಿನಗಳ ನೆನಪಿನ ಭಂಡಾರವೇ ನಮ್ಮ ಜೀವನಕ್ಕೆ ಭಂಡವಾಳು. ಅವರ ಆದರ್ಶ ನಮಗೆ ದಿಕ್ಸೂಚಿ.

1960ರ ದಶಕದಲ್ಲಿ ಶಾಲೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿದ್ದಿಲ್ಲ ಅಂತ ಪೂರ್ತಿ ಪಗಾರಕ್ಕೆ ಸಹಿ ಹಾಕಿ ಅರ್ಧದಷ್ಟನ್ನೆ ಮನೆಗೊಯ್ಯುತ್ತಿದ್ದರು. ಅದರಿಂದಾಗಿ ಅವರ ಪ್ರತಿಭಾವಂತ ಮಗನ means tested ಸ್ಕಾಲರ್ಶಿಪ್ಪಿಗೆ ಸಂಚಕಾರ ಬಂದು ಅರ್ಧದಷ್ಟೇ ಸಿಕ್ಕಿತ್ತು. ಇದರಿಂದ ಹತಾಶನಾದ ಆತನಿಂದ ಬಂದ ’ಅಕ್ಷಮ್ಯ ಅಪರಾಧ” ಅಪವಾದವನ್ನು ಸಹಿಸಿಕೊಡ ನಂಜುಂಡ ನಮ್ಮ ಹೆಡ್ಮಾಸ್ಟರ್ ಶಿವರಾವ್ ಗುರುರಾವ್ ನಾಡಗೀರ್ (ಎಸ್ ಜಿ) ಸರ್ -ಎಂಥ ಅನ್ವರ್ಥಕ ನಾಮ! ಶಿಸ್ತಿನ ಸಾಕಾರ ಸ್ವರೂಪರಾಗಿದ್ದ ಅವರು ಆಗಾಗ್ಗೆ ಸಿಟ್ಟಿನ ಪ್ರತಿರೂಪ ತಳೆದು ’ದೂರ್ವಾಸ ಮುನಿ’ ಅನ್ನುವ ಉಪನಾಮ ಗಳಿಸಿದ್ದರೂ ಅವರ ಶಿಷ್ಯ ವಾತ್ಸಲ್ಯ ಅಪಾರ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಂಥ ಒಂದು ಪ್ರಸಂಗದಲ್ಲಿ ತಮಗೆ ಕಪಾಳ ಮೋಕ್ಷ ಕೊಟ್ಟಿದ್ದ ನಾಡಗೀರ್ ಮಾಸ್ತರರೇ ತಾವು ಪ್ರಸಿದ್ಧ ವಾಗ್ಮಿಗಳಾಗಲು ಕಾರಣವೇನೋ ಎಂದು ಉದ್ಗಾರ ತೆಗೆದಿದ್ದಾರೆ ಗುರುರಾಜ ಕರಜಗಿಯವರು ಒಂದು ಲೇಖನದಲ್ಲಿ! ‘ವಜ್ರಾದಪಿ ಕಠೋರಾನಿ, ಮೃದೂನಿ ಕುಸುಮಾದಪಿ‘ ನೆನಪಾಗುತ್ತದೆ. ನಾನು ಎನ್ ಆರ್ ಐ ಆಗಿ 4 ದಶಕಗಳದರೂ ಧಾರವಾಡಕ್ಕೆ ಹೋದಾಗೆಲ್ಲ ಅವರನ್ನು ಭೆಟ್ಟಿಯಾಗಿ ಆಶೀರ್ವಾದ ಪಡೆಯದೆ ಒಮ್ಮೆಯೂ ಮರಳಿ ಬಂದಿಲ್ಲ. ಆಗಿನ ಕಾಲದಲ್ಲೇ ಎಮ್ ಎ ಪಾಸಾಗಿದ್ದರೂ ಉತ್ತಮ ಪಗಾರಕ್ಕಾಗಿ ಕಾಲೇಜ್ ಸೇರದೆ, ಆದರ್ಶಗಳ ತಳಪಾಯದ, ‘ತೇಜಸ್ವಿ‘ ಧ್ಯೇಯವಾಕ್ಯಗಳನ್ನು ಹೊತ್ತ ಕರ್ನಾಟಕ ಎಜ್ಯುಕೇಶನ್ ಬೋರ್ಡಿನಲ್ಲಿ ಶಾಲೆಯ ಶಿಕ್ಷಕರಾಗಿ ಜೀವವಿಡೀ ತೇಯ್ದವರು. ಅವರ ಇಂಗ್ಲಿಷ್ ಕಲಿಕೆಯ, ಹಾಸ್ಯಪ್ರವೃತ್ತಿಯ ಲಾಭ ಪಡೆದಿದ್ದೇನೆ. ಒಮ್ಮೆ ಇಂಗ್ಲೆಂಡಿನಿಂದ ಒಂದು ದುಬಾರಿ ಪಾರ್ಕರ್ ಅಥವಾ ಪೈಲಟ್ ಪೆನ್ನು ಒಯ್ದು ಕೊಟ್ಟಿದ್ದೆ. ‘ನೀನು ಕೊಟ್ಟ ಶಾಹಿ ಪೆನ್ನನ್ನು ಹೆಮ್ಮೆಯಿಂದ ಇಟ್ಟುಕೊಂಡಿದ್ದೇನೆ‘ ಅಂದರು. ನಮ್ಮೆಲ್ಲರ ಜೀವನ ನೌಕೆಗೆ ಪೈಲಟ್ ಚುಕ್ಕಾಣೆ ಹಿಡಿದ ನಾಡಗೀರ್ ಮಾಸ್ತರ್ ಅವರ ನೆನಪಿಗೆ ನಮೋನ್ನಮಃ! A teacher never dies; and a great teacher lives forever!

ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯು ಕೆ.

Leave a Reply