ಬಾಲಾ ಹೋಗಿ ಬಾಚಿ ಬಂತು ಡುಂ ಡುಂ

ಬಾಲಾ ಹೋಗಿ ಬಾಚಿ ಬಂತು ಡುಂ ಡುಂ
ಕನಿಷ್ಟ ಹತ್ತು ವರ್ಷಗಳಿಗೊಮ್ಮೆ ಈ ಜಗತ್ತು ಮಗ್ಗಲು ಬದಲಾಯಿಸಯತ್ತದಂತೆ…. ಆ ಲೆಕ್ಕಕ್ಕೆ ಎಪ್ಪತ್ಮೂರಕ್ಕೆ ಏಳು ಮಗ್ಗಲುಗಳನ್ನು ನಾನು ಕಂಡಿದ್ದೇನೆ ಅಂದಹಾಗಾಯ್ತು ನನ್ನ ತಿಳುವಳಿಕೆ ಬಂದಾಗಿನಿಂದ ಆದ ಬದಲಾವಣೆಗಳನ್ನು ನೆನೆಸಿದರೆ ದಿಕ್ಕು ತಪ್ಪಿದಂತೆ ಆಗುತ್ತದೆ. ಆಶ್ಚರ್ಯ, ಸಂತೋಷ, ವಿಷಾದಗಳ ಮಿಶ್ರ ಭಾವವೊಂದು ಅನುಭವಕ್ಕೆ ಬರುತ್ತದೆ. ಬದುಕೊಂದು ಪ್ರವಾಹ ಅದರ ಹರಹರನ್ನು, ದಿಕ್ಕನ್ನು, ಬದಲಿಸಲಾಗುವದಿಲ್ಲ. ಒಪ್ಪಿಕೊಳ್ಳುವದೊಂದೇ ದಾರಿ.
ನಾನು ಹುಟ್ಟಿದ್ದು ಅತಿ ಸಣ್ಣ ಹಳ್ಳಿ. ಸಾರಿಗೆ ವ್ಯವಸ್ಥೆ ಕಡಿಮೆ. ಹೆಚ್ಚು ಹೊರಸಂಪರ್ಕವಿರದ ಕಾರಣ ನಡೆದುಹೋಗಬಹುದಾದ ಊರುಗಳದೇ ಒಂದು ಪುಟ್ಟ ದ್ವೀಪಗಳ ನಡುಗಡ್ಡೆ ಇದ್ದ ಹಾಗೆ ಎಲ್ಲರೂ ಏನಿದೆಯೋ ಅದರಲ್ಲೇ ತೃಪ್ತರು. ಹೆಚ್ಚಿನ ಕನಸುಗಳಿಲ್ಲದ ಪುಟ್ಟ ದೃಷ್ಟಿಕೋನ. ಕ್ರಮೇಣ ಡಾರ್ವಿನ್ ನ ವಿಕಾಸವಾದ ಎಲ್ಲ ಕಡೆಯಾಗತೊಡಗಿದಂತೆ
ನಮ್ಮಲ್ಲಿಯೂ ಶುರುವಾಗಿದ್ದು ಇದೀಗ ಯಾವ ಹಂತ ಮುಟ್ಟಿದೆಯೆಂದರೆ ಒಬ್ಬಳೇ ಕುಳಿತಾಗ ನೆನೆದರೆ ಅದರಲ್ಲಿ ಮುಳುಗಿಯೇ ಹೋಗಿರುತ್ತೇನೆ ಮೂಲ ಸ್ಥಾನ ಅಡುಗೆ ಮನೆಯಿಂದ ಶುರುವಾದ ಕ್ರಾಂತಿಯ ಬಗ್ಗೆ ಒಂದೇ ಹೇಳಬೇಕೆಂದರೆ ಅದೇ ಒಂದು ಸಂಪುಟವಾಗುವಷ್ಟು.
ಅಡಿಗೆ ಕೆಲಸಕ್ಕೆ ಆಗ ಬಳಸುತ್ತಿದ್ದುದು ತೊಗರಿ ಕಟ್ಟಿಗೆ, ಜೋಳದ ದಂಟು, ಹತ್ತಿ ಕಟ್ಟಿಗೆ ಮುಂತಾದ, ಸುಲಭಕ್ಕೆ ದೊರೆಯುತ್ತಿದ್ದ ಉರುವಲು… ನಂತರ ಕಾಡುಕಟ್ಟಿಗೆಯಂಥ ಕಚ್ಚಾ ಉರುವಲು… ಆಮೇಲೆ ಇದ್ದಿಲು ಒಲೆ, ಹೊಟ್ಟು ತುಂಬುವ ಒಲೆಗಳ ಸರದಿ. ಒಲೆಯ ಮಧ್ಯದಲ್ಲಿ ಒಂದು ಕೊಳವೆಯಿಟ್ಟು ಒತ್ತಿ ಒತ್ತಿ ಹೊಟ್ಟು ತುಂಬಿ ಒಂದು ಬೆಂಕಿಯ ಕಿಡಿ ಹಾಕಿದರೆ ಆಯಿತು. ಕ್ರಮೇಣ ಒಳಗೊಳಗೆ ಹೊತ್ತಿಕೊಂಡು ಶಾಖ ಉತ್ಪತ್ತಿಯಾಗುವ ರೀತಿ ಪರಿಸರ ಸ್ನೇಹಿಯೇನೂ ಆಗಿರಲಿಲ್ಲ. ಒಕ್ಕಲುತನವಿದ್ದವರ ಮನೆಯಿಂದ ದನದ ಸಹಣಿ ಸಂಗ್ರಹಿಸಿ ಹಿತ್ತಲು ಗೋಡೆಗೆ ಚಲುವಿನ ಚಿತ್ತಾರ ಬಿಡಿಸಿ ಒಣಗಿದ ಮೇಲೆ ಉರುವಲಾಗಿಸುತ್ತಿದ್ದ ‘ಕುಳ್ಳುಗಳ’ ರೀತಿಯಂತೂ “ಅವಶ್ಯಕತೆಯು ಸಂಶೋದನೆಯ ತಾಯಿ” ಎಂಬುದನ್ನು ದಿನಾಲೂ ನೆನೆಸುತ್ತಿತ್ತು. ಇವುಗಳಲ್ಲಿ ಇದ್ದುದರಲ್ಲಿ ಕಬ್ಬಿಣದ ಇದ್ದಿಲು ಒಲೆಗಳೇ ಎಷ್ಟೋ ವಾಸಿ..
ಮುಂದೆ ಈ ಪದ್ಧಿತಿಯನ್ನು ಹಿಂದೆ ಹಾಕಿದ್ದು ಬತ್ತಿ ಸ್ಟೋಗಳು. ಸ್ಟೋದ ಚಿಮಣಿ ಎಣ್ಣೆಯ    tank ನಲ್ಲಿ ಎಣ್ಣೆ ತುಂಬಿಸಿ ಸಾಲು ದೀಪದ ಬದಲು ವೃತ್ತಾಕಾರದ ದೀಪೋತ್ಸವ… ಹತ್ತು ಹದಿನೈದು ಬತ್ತಿಗಳ ಸ್ಟೋಗಳು,  pump stove  ಗಳು ತಕ್ಕ ಮಟ್ಟಿಗೆ ಪರಿಸರವನ್ನು ಹೊಗೆ ಮುಕ್ತ ಮಾಡುತ್ತಿದ್ದರೂ ಸಮಸ್ಯೆ ಪರಿಹಾರವಾಯಿತು ಎಂಬಷ್ಟೇನೂ ಆಗಲಿಲ್ಲ.
ಇದಕ್ಕೆ ಪರ್ಯಾಯವಾಗಿ ಬಂದ ಎಲೆಕ್ಟ್ರಿಕ್ ಒಲೆಗಳಾಗಲೀ, ಉಕ್ಕಿನ    gas stove  ಗಳಾಗಲೀ ಸಂಪ್ರದಾಯಿಕ ಜನರ ಮನವನ್ನು ಒಲಿಸದಿದ್ದರೂ (ಮಡಿ-ಹುಡಿ) ಆಧುನಿಕತೆ ಒಪ್ಪಿಕೊಂಡ ಮನಸ್ಸುಗಳಿಗೆ ಅಷ್ಟರ ಮಟ್ಟಿಗೆ ಉತ್ತಮ ಪರಿಹಾರವಾಗಿ ಕಂಡಿರಲು ಸಾಕು.
ಇಷ್ಟು ಹೊತ್ತಿಗಾಗಲೇ ಆಧುನಿಕತೆಯ ಗಾಳಿ ಬೀಸಿ, ಬದಲಾದ ಸಾರಿಗೆಯಿಂದಾಗಿ ನಾಲ್ಕು ನಗರಗಳ ಪರಿಚಯವಾಗಿ ಸುಲಭ ಸುಧಾರಣೆಯ ಮಾರ್ಗಗಳು ತೆರೆದಂತೆ ಜನರೂ ಬದಲಾಗುತ್ತ ಹೋಗಿ  Solar gas  ಗಳಂಥ ಪರಿಸರ ಸ್ನೇಹೀ ಪದ್ಧತಿಗಳವರೆಗೆ ಬಂದು ತಲುಪಿದ್ದು ಒಂದು ವಿಕಾಸವಾದದ ಕಥೆಯೇ ಅನ್ನಬಹುದು.
ಐದು ತಲೆಮಾರಿಗಳಿಗೆ ಸಾಕ್ಷಿಯಾದ, ಎಲ್ಲ ಬದಲಾವಣೆಗಳಿಗೂ ಸ್ವತಃ ಪ್ರತ್ಯಕ್ಷ ದಿರ್ಶಿಯಾದ ನನ್ನ ಅನುಭವಗಳೇ ಇಷ್ಟೋಂದು ಇರುವಾಗ, ಆಹಾರ ಬೇಯಿಸದೇ, ಕಚ್ಚಾ ತಿನ್ನುತ್ತಿದ್ದ, ಕಲ್ಲಿಗೆ ಕಲ್ಲು ತಿಕ್ಕಿ ಬೆಂಕಿ ಉತ್ಪಾದಿಸುತ್ತಿದ್ದ ದಿನಗಳ ಕಥೆ ಎಷ್ಟು ರೋಮಾಂಚನಕಾರಿಯಾಗಿ ಇದ್ದಿರಬಹುದು?
“ಭೂತ” ವನ್ನು ‘ಬದುಕು’ವದೂ ಒಂದು ರೋಮಾಂಚಕಾರೀ ಅನುಭವವೇ ಅಲ್ಲವೇ?

Leave a Reply