ಬದಲಾಗುತ್ತಿರುವ ಯುಗದಲ್ಲಿ ಅಮ್ಮ

ಬದಲಾಗುತ್ತಿರುವ ಯುಗದಲ್ಲಿ ಅಮ್ಮ
ಅವ್ವ, ಅಮ್ಮ, ಆಯಿ, ಮಾ, ಮಾಮ್, ಮಮ್ಮಿ ಹೇಗೇ ಕರೆಯಲಿ, ಆಕೆ ಅಮ್ಮ. ತಾಯಿ. ತನ್ನ ಒಡಲಿನಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಲಿದೆ ಎಂಬುದನ್ನು ಅರಿಯುತ್ತಿದ್ದಂತೆಯೇ ಹೆಣ್ಣು ಸಾಮಾನ್ಯವಾಗಿ ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುತ್ತಾಳೆ. ಒಬ್ಬ ಸಾಮಾನ್ಯ ಹುಡಿಗೆ ದೈವತ್ವಕ್ಕೇರುವ ಪಯಣ ಇಲ್ಲಿಂದಲೇ ಆರಂಭ. ಮಗುವಿಗಾಗಿ ಅನೇಕ ತ್ಯಾಗಗಳನ್ನು ಆಕೆ ಮಾಡಬೇಕಾಗುತ್ತದೆ. ತನ್ನ ಸುಖಗಳನ್ನು ಮರೆತು ತಾಯಿಯಾಗುವುದಕ್ಕೆ ಸಿದ್ಧಳಾಗುತ್ತಾಳೆ. ತನ್ನ ಗರ್ಭದಲ್ಲಿರುವ ಮಗುವಿಗೆ ಹೊಕ್ಕುಳಬಳ್ಳಿಯ ಮುಖಾಂತರ ಅಮೃತವನ್ನುಣಿಸುತ್ತಾಳೆ. ಇದು ಇಂದು ನಿನ್ನಿನ ಸಂಬಂಧವಲ್ಲ. ನಮ್ಮ ದೇವ ದೇವತೆಗಳಲ್ಲಿಯೂ ಕೂಡ ಅಮ್ಮಂದಿರಿದ್ದಾರೆ. ಅಂದರೆ ಯುಗ ಯುಗಾಂತರಗಳದ್ದು.
ಜನ್ಮ ನೀಡುವುದರೊಂದಿಗೆ ತಾಯಿ ಮಗುವಿನ ಈ ಹೊಕ್ಕುಳ ಬಳ್ಳಿಯ ಸಂಬಂಧ ಮುಗಿಯಲಿಲ್ಲ. ಇದು ನಂತರವೂ ಮುಂದುವರೆದು ಮೊದಲು ಅಪರೋಕ್ಷವಾಗಿದ್ದ ಈ ಸಂಬಂಧ ಈಗ ಪರೋಕ್ಷವಾಗುತ್ತದೆ. ತಾಯಿ ಈಗ ಒಬ್ಬ ಪೋಷಕಿಯಗಿ, ದೈಹಿಕವಾಗಿ, ಮಗುವನ್ನು ಸಾಕಿ ಸಲಹುತ್ತಾಳೆ. ತನ್ನದೇ ರಕ್ತ ಮಾಂಸಗಳನ್ನು ಹಂಚಿಕೊಂಡು ಹುಟ್ಟಿದ ಮಗುವಿಗೆ ಪಾಲನೆ ಪೋಷಣೆಯನ್ನು ಒದಗಿಸುತ್ತಾಳೆ. ಕೆಲವು ವರ್ಷಗಳ ವರೆಗಂತೂ ಮಗು ಅವಳ ಮೇಲೇ ಪೂರ್ತಿಯಾಗಿ ಅವಲಂಬಿತವಾಗುತ್ತದೆ. ಮಕ್ಕಳು ದೊಡ್ಡವರಾದಂತೆ ದೈಹಿಕವಾಗಿ ಸ್ವತಂತ್ರವಾಗತೊಡಗಿದರೂ ಪ್ರೀತಿ, ಸಹಕಾರ, ಸೌಹಾರ್ದತೆಗಳು ಮುಂತಾದ ಧನಾತ್ಮಕ ಗುಣಗಳನ್ನು ಹೊಂದಲು ಸಾಮಾಜೀಕರಣ, ಶಾಲಾ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳ ಮಹತ್ವ, ಮುಂತಾದವುಗಳನ್ನು ಅರಿಯಲು ಮಗು ತಾಯಿಯನ್ನೇ ಅವಲಂಬಿಸುತ್ತಾನೆ. ಮೊದಲು ದಿನದ ಇಪ್ಪತ್ತುನಾಲ್ಕೂ ಗಂಟೆಗಳೂ, ನಂತರ ದಿನದ 18 ಗಂಟೆಗಳೂ, ಅದರ ನಂತರ ದಿನದ ಹತ್ತು ಹನ್ನೆರಡು ಗಂಟೆಗಳೂ ಜೊತೆಗೇ ಇರುವುದರಿಂದ ಮಗು ಸಹಜವಾಗಿಯೇ ತಾಯಿಯ ಪ್ರಭಾವಕ್ಕೊಳಗಾಗುತ್ತದೆ. ಮಗುವಿನಲ್ಲಿ ಒಳ್ಳೆಯ ಸಂಸ್ಕಾರ, ಗುಣ ನಡತೆ, ಸ್ವಭಾವಗಳನ್ನು ರೂಪಿಸುವವಳೇ ತಾಯಿ. ಅದಕ್ಕೇ ಹೇಳುತ್ತಾರೆ, “ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು” ಎಂದು.
ಕಾಲ ಬದಲಾಯಿತು. ಶಿಲಾಯುಗದಿಂದ ಈ ಆಧುನಿಕ ಡಿಜಿಟಲೈಜ್ಡ್ ಯುಗದ ವರೆಗೂ ಮನುಷ್ಯ ಪಯಣಿಸಿದ. ಆದರೆ ತಾಯಿಯ ಈ ಪಾತ್ರ ಮಾತ್ರ ಬದಲಾಗಲಿಲ್ಲ. ಅದೇ ಗರ್ಭ, ಅದೇ ಹೊಕ್ಕುಳ ಬಳ್ಳಿ.. ಆದರೂ ಜವಾಬ್ದಾರಿಗಳು ಬದಲಾದುವು.
ಶಿಲಾಯುಗದ ಮಾತು ಬಿಡಿ, ಈಗ 50 -60 ವರ್ಷಗಳ ಹಿಂದೆ ನಾವು ನೋಡಿದ ಜಗತ್ತಿಗೂ, ಇಂದು ಕಾಣುತ್ತಿರುವ ಜಗತ್ತಿಗೂ ಬಹಳಷ್ಟು ಅಂತರವಿದೆ. ಈ ನಡುವೆ ಅನೇಕ ಬದಲಾವಣೆಗಳನ್ನು ನಾವು ಕಂಡಿದ್ದೇವೆ. ನಾವು ಚಿಕ್ಕವರಿರುವಾಗ ತಂದೆಗೆ ಗಳಿಸಿ ತಂದು ಹಾಕುವ ಜವಾಬ್ದಾರಿ. ಆದರೆ ತಾಯಿಗೆ ಮಕ್ಕಳನ್ನು ಹೆರುವ, ಅವುಗಳನ್ನು ಪೋಷಿಸುವ, ಮನೆಯ ಹಿರಿಯರ ಆರೈಕೆ ಮಾಡುವ, ಪತಿಯ ಯೋಗಕ್ಷೇಮವನ್ನು ನಿಭಾಯಿಸುವ, ಮನೆಗೆ ಬಂದು ಹೋಗುವ ಅತಿಥಿ ಅಭ್ಯಾಗತರ ಕಾಳಜಿ ವಹಿಸುವ ಜವಾಬ್ದಾರಿ ಇತ್ತು. ಬೆಳಗಿನಿಂದ ಸಂಜೆಯ ವರೆಗೂ ಮನೆಗೆಲಸದಲ್ಲಿಯೇ ಇರುತ್ತಿದ್ದ ಅವಳಿಗೆ ತನ್ನ ಬಗ್ಗೆ ಯೋಚಿಸುವಷ್ಟೂ ಸಮಯ ದೊರೆಯುತ್ತಿರಲಿಲ್ಲ. ಮಕ್ಕಳಿಗೆ ಎಂದು ಪ್ರತೇಕವಾದ ಸಮಯವೂ ಸಿಗುತ್ತಿರಲಿಲ್ಲ. ಆದರೂ ಅವಳಿಗೆ ಅದರ ಕಾಳಜಿ ಇರುತ್ತಿರಲಿಲ್ಲ. ಅದಕ್ಕಾಗಿ ಮನೆಯಲ್ಲಿ ಹಿರಿಯರಿದ್ದರು. ಅವರು ಹೇಳುವ ಕಥೆಗಳು ಮಕ್ಕಳಿಗೆ ನೀತಿಪಾಠವನ್ನು ಕಲಿಸುತ್ತಿದ್ದವು. ಗುರು ಹಿರಿಯರಿಗೆ ಕೊಡಬೇಕಾದ ಗೌರವದ ಪಾಠದ ತರಬೇತಿಯೂ ಅಪರೋಕ್ಷವಾಗಿ ಮನೆಯಲ್ಲಿಯೇ ಆಗುತ್ತಿತ್ತು. ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣವಿತ್ತು. ಮನೆಯಲ್ಲಿ ಅನೇಕ ಮಕ್ಕಳು ಕೂಡಿ ಬೆಳೆಯುತ್ತಿದ್ದುದರಿಂದ ಸ್ನೇಹ, ಸೌಹಾರ್ದತೆಯ ಪಾಠವೂ, ಸಹಕಾರದ ಹಾಗೂ ಪ್ರೀತಿ, ತ್ಯಾಗಗಳ ಪಾಠವೂ ಅಲ್ಲಿಯೇ ದೊರೆಯುತ್ತಿತ್ತು. ಅದಕ್ಕೇ ಮನೆಯೇ ಮೊದಲ ಪಾಠಶಾಲೆಯಾಗಿತ್ತೇನೋ. ಹೆಚ್ಚಾಗಿ ತಾಯಿಯಾದವಳು ಮನೆಯಿಂದ ಹೊರಗೆ ದುಡಿಯಲು ಹೋಗುತ್ತಿರಲಿಲ್ಲ. ಆಗಿನ ಕಾಲದಲ್ಲಿ ಈಗಿನಂತೆ ಜೀವನ ಸರಳವಾಗಿರಲಿಲ್ಲ. ಎಲ್ಲದಕ್ಕೂ ಯಂತ್ರಗಳು ಕಾಲಿಟ್ಟಿರಲಿಲ್ಲ. ಮನೆಯಲ್ಲಿ ದುಡಿದು ಗಳಿಸಿ ಸಂಸಾರ ಸಾಗಿಸುವವರು ಯಾರೂ ಇಲ್ಲದಾಗ, ಅಥವಾ ಒಬ್ಬರ ಗಳಿಕೆ ಸಾಲದಿರುವಂಥ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಹಿಳೆ ಹೊರಗೆ ಕೆಲಸಕ್ಕೆ ಹೋಗುತ್ತಿದ್ದಳು. ಕರಿಯರ್‍ಗಾಗಿ ದುಡಿಯುವ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ. ಆಗಲೂ ಕೂಡ ಅವಿಭಕ್ತ ಕುಟುಂಬಗಳು ಹೆಚ್ಚಾಗಿರುತ್ತಿದ್ದುದರಿಂದ ಮಕ್ಕಳ ಬಗ್ಗೆ ಯೋಚನೆ ಮಾಡುವ ಅಗತ್ಯವಿರಲಿಲ್ಲ. ಹೀಗಾಗಿ ತಾಯಿಯಾದವಳು ಅಷ್ಟೊಂದು ಆಪ್ತವಾಗಿ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಲಿರಲಿಲ್ಲ.
ಈಗ ಜಗತ್ತು ಕ್ಷಿಪ್ರವಾಗಿ ಬದಲಾಗುತ್ತಿದೆ. ಅದರೊಂದಿಗೇ ತಾಯಿಯ ಸ್ವರೂಪವೂ ಕೂಡ ಬದಲಾಗುತ್ತಿದೆ. ಅದು ಕೇವಲ ಅಡಿಗೆ ಮನೆಗೆ ಸೀಮಿತವಾಗುಳಿದಿಲ್ಲ. ಆಕೆ ಈಗ ಸಿದ್ಧಮಾದರಿಯ ತಾಯಿಯಾಗಿಯೂ ಉಳಿದಿಲ್ಲ. “ಇವನು ಬಸವ. ಇವಳು ಕನಕ. ಕನಕಳು ತಾಯಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾಳೆ. ಬಸವನು ಅಪ್ಪನ ಜೊತೆಗೆ ಪೇಟೆಗೆ ಹೋಗುತ್ತಾನೆ” ಎಂಬ ಪಾಠದಿಂದ ಆಕೆ ಬಲು ದೂರ ಬಂದಿದ್ದಾಳೆ. ಆಕೆ ಮನೆಯೊಳಗಿನ ನಾಲ್ಕು ಗೋಡೆಗಳಲ್ಲಿ ಬಂಧಿಯಾಗಿಲ್ಲ. ಅವಳು ಇಂದು ಅಡಿಗೆಮನೆಯಲ್ಲಿಯ ಕೇವಲ ಒಂದು ಕಿಟಕಿಗಾಗಿ ಕಾತರಿಸುತ್ತಿಲ್ಲ. ವಿಶಾಲ ವಿಶ್ವದ ತೆರೆದ ಆಕಾಶದಡಿಯಲ್ಲಿ ನಿಂತಿದ್ದಾಳೆ. ಅವಳ ಪಾತ್ರ ಮೂಲಭೂತವಾಗಿಯೇ ಬದಲಾಗಿದೆ. ಈಗಿನ ಅಮ್ಮ ಕಿಚನ್ನಿನಿಂದ ಕೀಬೋರ್ಡಿಗೆ ಜಿಗಿದಿದ್ದಾಳೆ. ಮಂಗಳನ ಅಂಗಳದಲ್ಲಿದ್ದಾಳೆ. ಸಾಮಾನ್ಯ ಸ್ತ್ರೀಯೂ ಕೂಡ ಸುಶಿಕ್ಷಿತಳಾಗಿದ್ದು ಮಕ್ಕಳ ದೈಹಿಕ, ಶೈಕ್ಷಣಿಕ, ಆರ್ಥಿಕ ಅವಶ್ಯಕತೆಗಳನ್ನು ಪೂರೈಸಬಲ್ಲವಳಾಗಿದ್ದಾಳೆ.
ಆದರೂ ತಾಯಿಗೆ ಈಗ ಅನೇಕ ಕಾರಣಗಳಿಂದಾಗಿ ಜವಾಬ್ದಾರಿಯೂ ಹೆಚ್ಚಿವೆ. ಮೇಲಿನ ಜವಾಬ್ದಾರಿಗಳೊಂದಿಗೆ ಇನ್ನೂ ಕೆಲವು ಹೊಸ ಜವಾಬ್ದಾರಿಗಳು ಸೇರಿವೆ. ಮಕ್ಕಳ ಬೆಳವಣಿಗೆ, ವಿಕಾಸಗಳೊಂದಿಗೆ ಶೈಕ್ಷಣಿಕ ಜವಾಬ್ದಾರಿಯೂ ಕೂಡಿದೆ. ಒಂದು ಸಂತಸದ ವಿಷಯವೆಂದರೆ ಇಂದು ಮನೆ-ಮಕ್ಕಳು ಕೇವಲ ತಾಯಿಯ ಜವಾಬ್ದಾರಿಯಲ್ಲ. ಅದು ಏಕಮುಖವಾಗಿಲ್ಲ. ನೌಕರಿಯಲ್ಲಿ ಹೇಗೆ ಸಮಪಾಲನ್ನು ಆಕೆ ಹೊರುವಳೋ, ಅದೇ ರೀತಿಯಾಗಿ ಆತನೂ ಮಕ್ಕಳ ಲಾಲನೆ ಪಾಲನೆಯಲ್ಲಿ ಸಮಪಾಲನ್ನು ಹೊರುತ್ತಿದ್ದಾನೆ. ಆದರೂ ಅವಳ ಕೆಲವು ಜವಾಬ್ದಾರಿಗಳು ಅವಳ ಹೆಗಲಿಗೇ ಇವೆ. ಮಹಿಳೆಯು ಬಡ್ತಿ ಪಡೆಯುವುದಕ್ಕೆ ನಿರಾಕರಿಸುವುದು ಮತ್ತು ಹಿಂದೇಟು ಹಾಕುವುದಕ್ಕೆ ಕೂಡ ತಾಯ್ತನವು ಕಾರಣವಾಗುತ್ತದೆ. ಮೊದಲಿನ ಕಾಲದಲ್ಲಿಯೂ ಮಾತೃತ್ವವು ಅನೇಕ ಜವಾಬ್ದಾರಿಗಳನ್ನು ಎದುರಿಸಬೇಕಾಗಿತ್ತಾದರೂ ಅವುಗಳ ರೂಪ ಬೇರೆಯದಾಗಿರುತ್ತಿತ್ತು. ವೇಗದಿಂದ ಬದಲಾಗುತ್ತಿರುವ ಜಗತ್ತಿನ ಶೈಲಿಯು ಪ್ರತಿದಿನ ಹೊಸ ಹೊಸ ಒತ್ತಡಗಳನ್ನು ಸೃಷ್ಟಿಸುತ್ತಿದೆ. ಅದರಲ್ಲೂ ವಿಶೇಷರೂಪದಲ್ಲಿ ಹೊರಗೆ ದುಡಿಯುತ್ತಿರುವ ತಾಯಂದಿರು ಈ ಮಾತೃತ್ವದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈಗಿನ ವಿಭಕ್ತ ಕುಟುಂಬಗಳಲ್ಲಿ ಈ ಸಮಸ್ಯೆ ಬಹಳ. ಅಂಥ ಸಮಯಗಳಲ್ಲಿ ಮನೆಯಲ್ಲಿ ಹಿರಿಯರ ಅವಶ್ಯಕತೆ ಕಾಡುತ್ತದೆ. ಇರಲಿ.
ಮೊದಲನೆಯದಾಗಿ ಸಮಯದ ಅಭಾವವಿದ್ದಾಗಲೂ ಮಗು ಕೆಲವು ಸಂದರ್ಭಗಳಲ್ಲಿ ತಾಯಿಯ ಮೇಲೆಯೇ ಅವಲಂಬಿತವಾಗಿರುವುದು. ಮಗು ಚಿಕ್ಕದಾಗಿರುವಾಗಂತೂ ಈ ಸಮಸ್ಯೆ ಬಹಳ ಕಾಡುತ್ತದೆ. ಪುಟ್ಟ ಮಗುವಿನ ತಾಯಂದಿರು ಮಕ್ಕಳನ್ನು ಬೇಬಿ ಸಿಟ್ಟಿಂಗಿನಲ್ಲಿ ಬಿಡುತ್ತಿದ್ದರೂ ಮಗುವಿನ ಆರೋಗ್ಯ ಸರಿಯಿಲ್ಲದಿರುವಾಗ ಮಗುವನ್ನು ವೈದ್ಯರ ಹತ್ತಿರ ಕರೆದೊಯ್ಯಲು, ಅದರ ಆರೈಕೆ ಮಾಡಲು ಒಮ್ಮೊಮ್ಮೆ ರಜೆ ಹಾಕಬೇಕಾಗುತ್ತದೆ. ಮಗುವಿನ ಜೊತೆಗೆ ಅರ್ಧರಾತ್ರಿಯ ವರೆಗೂ ಎಚ್ಚರವಿರಬೇಕಾಗುತ್ತದೆ. ಅನಿವಾರ್ಯವಾದಾಗ ಮಾರನೆಯ ದಿನ ಆಫೀಸಿಗೂ ಹೋಗಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ದಣಿವು, ಅಸಹಾಯಕತೆಗಳು ಕಾಡುತ್ತವೆ. ಮಕ್ಕಳಿಗೆ ಸಮಯ ನೀಡಲಾಗದ ಅಸಹಾಯಕತೆಯನ್ನು ಮುಚ್ಚಿಹಾಕಲು ಆಕೆ ಅವರಿಗೆ ಬೇಡಿದ ವಸ್ತುಗಳನ್ನು ನೀಡುವ, ಮುಂದೆ ದೊಡ್ಡವರಾದಾಗ ಅವರು ಇಚ್ಛಿಸಿದ ಶಿಕ್ಷಣವನ್ನು ನೀಡುವದರೊಂದಿಗೆ ಕಾಂಪೆನ್ಸೇಟ್ ಮಾಡುತ್ತ ಸಮಾಧಾನ ಪಟ್ಟರೂ ಮಕ್ಕಳಲ್ಲಿ ಅಸುರಕ್ಷತೆ, ಏಕಾಕಿತನ ಕಾಡುತ್ತದೆ. ಮಕ್ಕಳು ದೊಡ್ಡವರಾಗುತ್ತ ಹೋದಂತೆಯೂ ಈ ಏಕಾಕಿತನ ಅವರನ್ನು ಕಾಡುತ್ತದೆ. ಈಗಿನ ತಾಯಂದಿರು ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಆಧುನಿಕ ಹಾಗೂ ಪಾಶ್ಚಿಮಾತ್ಯ ಪದ್ಧತಿಯನ್ನು ಅನುಸರಿಸುವುದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಬ್ಬೊಂಟಿಗರಾಗಿ ಮಲಗುವುದನ್ನು ರೂಢಿಸುತ್ತಾರೆ. ಮಗುವಿಗೆ ಒಮ್ಮೊಮ್ಮೆ ರಾತ್ರಿಯಲ್ಲಿ ಭಯವಾದರೂ ಅದು ಅದನ್ನು ಹತ್ತಿಕ್ಕಿಕೊಂಡು ಮಲಗಲು ಕಲಿಯುತ್ತದೆ. ಇಂಥ ಸಮಯದಲ್ಲಿ ಅದು ತಾಯಿಯ ಮಡಿಲನ್ನು ಬಯಸುವುದು ಸಹಜ. ತಾಯಿಯಾದವಳು ಮಗುವಿನ ಬೆಳವಣಿಗೆ, ಪಾಲನೆ ಪೋಷಣೆಗೆ ಪ್ರಪ್ರಥಮ ಆದ್ಯತೆ ಕೊಟ್ಟರೂ, ಆಕೆ ಹೃದಯದಲ್ಲಿ ಪ್ರೀತಿಯ ಸಾಗರವನ್ನೇ ಹೊಂದಿದ್ದರೂ ಅದನ್ನು ತಿಳಿಯುವಷ್ಟು ಅದು ಪ್ರಬುದ್ಧವಾಗಿರುವುದಿಲ್ಲವಲ್ಲ. ಅಲ್ಲದೆ ಮಗು ಎಷ್ಟೇ ದೊಡ್ಡದಾದರೂ ಅದು ತಾಯಿಯ ಸಾಮೀಪ್ಯವನ್ನೇ ಬಯಸುತ್ತದೆ ಎಂಬುದು ಅತ್ಯಂತ ಸತ್ಯವಾದ ಮಾತು. ಆಕೆಯ ಪ್ರೀತಿಗೆ ಯಾವದೇ ಬೆಲೆ ಬಾಳುವ ವಸ್ತುವು ಸಾಟಿಯಾಗದು. ಮಗು ಒಂದಿಷ್ಟು ದೊಡ್ಡದಾದಾಗಲೂ ಕೂಡ ತಾನು ಶಾಲೆಯಿಂದ ಬಂದಾಗ ತಾಯಿ ತನ್ನೆದುರಿಗೆ ಇರಬೇಕು, ತನ್ನ ಶಾಲೆಯ ಅನುಭವಗಳನ್ನು ಆಕೆ ಆಸ್ಥೆಯಿಂದ ಕೇಳಬೇಕು, ತನ್ನ ಗೆಳೆಯರೊಂದಿಗಿನ ಅಂದಿನ ಅನುಭವಗಳನ್ನು ಆಕೆ ಕೇಳಿ ವಿಮರ್ಶಿಸಬೇಕು, ತಮ್ಮನ್ನು ಅರಿಯಬೇಕು, ಕೆಲವೊಂದು ಸಮಸ್ಯೆಗಳನ್ನು ಎದುರಿಸುವಾಗ ಅಮ್ಮ ಸಲಹೆಯನ್ನು ನೀಡಲಿ ಎಂದು ಬಯಸುತ್ತದೆ. ತಮಗೆ ಆಧುನಿಕ ಸೌಕರ್ಯಗಳನ್ನು ಒದಗಿಸಿಕೊಡುವುದಕ್ಕಿಂತ ಆಕೆಯ ಒಂದೇ ಒಂದು ಅಪ್ಪುಗೆ ಅವರಿಗೆ ಆಪ್ಯಾಯಮಾನ. ಆದರೆ, ಈಗಿನ ಜಗತ್ತಿನಲ್ಲಿ ಅದು ಅಸಾಧ್ಯ. ಆದರೂ ತಾಯಂದಿರು ಆದಷ್ಟು ಹೆಚ್ಚಿನ ಸಮಯವನ್ನು ಜೊತೆಗಿರಲು ಸರಿದೂಗಿಸುವುದು ಒಂದು ದೊಡ್ಡ ಸಾಹಸವೇ ಸರಿ. ಆದರೂ ಇದನ್ನು ಆಕೆ ಸಾಧ್ಯವಾಗಿಸಿಕೊಳ್ಳಲೇಬೇಕಾಗಿದೆ. ಹೊಸ ರೀತಿಯ ದಿನಚರಿಯನ್ನು ಹಾಕಿಕೊಳ್ಳಬೇಕಾಗಿದೆ. ಮಕ್ಕಳ ಮಾತುಗಳನ್ನು ಕೇಳಿಸಿಕೊಳ್ಳುವ, ಅವರ ಸಮಸ್ಯೆಗಳನ್ನು ಆಲಿಸಿಕೊಳ್ಳುವುದಕ್ಕೆ ಸಮಯವನ್ನು ಇಟ್ಟುಕೊಳ್ಳಬೇಕಾಗಿದೆ.
ಅಲ್ಲದೆ ಬದಲಾಗುತ್ತಿರುವ ಸಮಯದ ಜೊತೆಗೆ ಅವರ ಸುರಕ್ಷಿತತೆಯ ಬಗೆಗೂ ಯೋಚಿಸಬೇಕಾಗಿದೆ. ಮೂರು ವರ್ಷಗಳಿಗೇ ತಾಯಿಯನ್ನು ಅಗಲಿ ಶಾಲೆಗೆ ಹೋಗಬೇಕಾದ ಮಕ್ಕಳ ಸುರಕ್ಷಿತತೆಯಂತೂ ಈಗ ಅತ್ಯಂತ ನಾಜೂಕಿನ ವಿಷಯವಾಗಿದೆ. ಸಣ್ಣ ಮಕ್ಕಳನ್ನೂ ಕಾಮುಕ ಕಣ್ಣಿನಿಂದ ನೋಡುವ ಕೆಟ್ಟ ಜನರು ಮಕ್ಕಳಿಗೆ ಏನೂ ಮಾಡಲು ಹೇಸರು. ಹೀಗಾಗಿ ಮಗು ಗಂಡೇ ಇರಲಿ, ಹೆಣ್ಣೇ ಇರಲಿ, ಅದಕ್ಕೆ ತನ್ನನ್ನು ತಾನು ಇಂಥವರಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನೂ, ಒಳ್ಳೆಯ ಸ್ಪರ್ಶ, ಹಾಗೂ ಕೆಟ್ಟ ಸ್ಪರ್ಶಗಳ ನಡುವಿನ ಅಂತರವನ್ನೂ ತಿಳಿಸಿಕೊಡಬೇಕಾಗಿದೆ. ಮಕ್ಕಳಿಗೆ ನಿರ್ಭಯವಾಗಿ ಇಂಥ ಸಂದರ್ಭಗಳು ಅನುಭವಕ್ಕೆ ಬಂದಲ್ಲಿ ಅದನ್ನು ತಂದೆ ತಾಯಿಯರಲ್ಲಿ ಹೇಳಬೇಕೆಂದು ತಿಳಿಸಿಕೊಡಬೇಕಾಗುತ್ತದೆ. ಅಲ್ಲದೆ ತಮಗೆ ಸಲ್ಲದುದೇನಾದರೂ ಸಂಭವಿಸುತ್ತಲಿದೆ ಎಂದೆನ್ನಿಸಿದರೆ ಮೌನವಾಗಿರದೆ ಅದರ ವಿರುದ್ಧ ದನಿ ಎತ್ತುವುದರ ಅವಶ್ಯಕತೆಯನ್ನೂ ಹೇಳಬೇಕಾಗುತ್ತದೆ.
ಇಂದು ತಾಯಿ ಮಕ್ಕಳಿಗಾಗಿ ಬೇಕಾದಷ್ಟು ಸೌಲಭ್ಯಗಳನ್ನು ಒದಗಿಸಿದ್ದರೂ ಮಗುವಿನ ಶೈಕ್ಷಣಿಕ ವಿಕಾಸದ ಕಡೆಗೆ ಸ್ವತಃ ಕಾಳಜಿ ವಹಿಸಬೇಕಾಗಿದೆ. ಎಷ್ಟೇ ಟ್ಯೂಟರುಗಳನ್ನು ಇರಿಸಲಿ, ತಾಯಿಯ ಒಂದು ಕಣ್ಣು ಅವರ ಮೇಲೆ ಇದ್ದೇ ಇರಬೇಕಾಗುತ್ತದೆ. ಮಗುವಿನ ಆಂತರ್ಯದ ಸಖಿ ಅವಳೇ. ಸ್ನೇಹಿತರ ಬಗೆಗಿನ ಅವರ ಧೋರಣೆಗಳು, ಪರಿಸರದೊಂದಿಗೆ ಹೊಂದಿಕೊಳ್ಳುವ ಬಗೆಗಿನ ಅವರ ಮಾನಸಿಕ ತೊಂದರೆಗಳಿದ್ದಲ್ಲಿ ಅವಳೇ ಬಗೆಹರಿಸಬೇಕಾಗುತ್ತದೆ. ಹೀಗಾದಾಗಲೇ ಅವಳು ಮಗುವಿಗೆ ಹತ್ತಿರದವಳಾಗುತ್ತಾಳೆ. ಇಂದಿನ ತಾಯಿ ಜಾಣಳು. ಹೊರ ಜಗತ್ತಿನ ತಿಳಿವಳಿಕೆ ಇರುವವಳು. ಅದರಿಂದ ಆಕೆ ಅನುಭವಿಸಬೇಕಾದ ಕಠಿಣ ಪ್ರಸಂಗಗಳೂ ಅನೇಕ. ಮಕ್ಕಳು ಹೊಸದಾಗಿ ಈ ಜಗತ್ತಿಗೆ ತೆರೆದುಕೊಳ್ಳುತ್ತಿರುವುದರಿಂದ ಅವರಿಗೆ ಸಹಜವಾಗಿ ಎಲ್ಲ ವಿಷಯಗಳಲ್ಲೂ ಕುತೂಹಲ ಹೆಚ್ಚು. ಅನೇಕ ಪ್ರಶ್ನೆಗಳು ಅವರ ತಲೆಯಲ್ಲಿ. ಎಲ್ಲದಕ್ಕೂ ಸಮರ್ಪಕವಾಗಿ ಉತ್ತರಿಸಲೇಬೇಕಾಗಿರುವುದು ಪಾಲಕರ, ಅದರಲ್ಲೂ ತಾಯಿಯೇ ಹೆಚ್ಚು ಹೆಣಗಬೇಕಾಗುತ್ತದೆ. ಉತ್ತರ ಸಮರ್ಪಕವಾಗಿರದೇ ಹೋದರೆ ಅವ್ವ ದಡ್ಡಿ. ಅವಳಿಗೆ ಏನೂ ಬರುವುದಿಲ್ಲ ಎಂದು ಹೇಳಿಬಿಡುತ್ತಾರೆ. ಕಾಲಕ್ಕೆ ನೆನಪಾದ ತಪ್ಪು ಉತ್ತರಗಳನ್ನೂ ಹೇಳುವಂತಿಲ್ಲ. ಈಗಿನ ಮಕ್ಕಳು ಡಿಜಿಟಲೈಜ್ಡ್ ಆಗುತ್ತಿರುವುದೂ ಒಂದು ರೀತಿಯಿಂದ ಹಗುರವೆನ್ನಿಸಿದರೂ ಇಲೆಕ್ಟ್ರಾನಿಕ್ ಉಪಕರಣಗಳ ಉಪಯೋಗ, ಸಣ್ಣ ಪುಟ್ಟ ರಿಪೇರಿ ಎಲ್ಲವನ್ನು ತಾಯಿ ಕಲಿತಿರಬೇಕಾಗುತ್ತದೆ.
ಈಗಿನ ಗಂಡು ಮಕ್ಕಳ ತಾಯಂದಿರಲ್ಲಿ ಇನ್ನೂ ಒಂದು ಹೆಚ್ಚಿನ ಜವಾಬ್ದಾರಿ ಸೇರಿಕೊಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳು. ಅದರಲ್ಲೂ ಬಾಲಾಪರಾಧಿಗಳು ಹೆಚ್ಚುತ್ತಿರುವುದನ್ನು ನಿಯಂತ್ರಿಸುವುದಕ್ಕೂ ಇಂದಿನ ತಾಯಂದಿರು ಪ್ರಯತ್ನ ಪಡಬೇಕಾಗಿದೆ. ತಾಯಿಯರು ಮಕ್ಕಳಿಗೆ ಈ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ. ತಾಯಿಯಾದವಳು ಒಳ್ಳೆಯ ಸಂಸ್ಕಾರಗಳನ್ನು ಕೊಡುವುದರ ಜೊತೆಗೇ ಹೆಣ್ಣಿನ ಅಸ್ತಿತ್ವದ ಬಗ್ಗೆ, ಅವಳಿಗೆ ಗೌರವ ಕೊಡುವುದರ ಬಗ್ಗೆಯೂ ನೈತಿಕ ಶಿಕ್ಷಣ ನೀಡಬೇಕಾಗಿದೆ. ಗಂಡು ಹೆಣ್ಣುಗಳ ನಡುವೆ ಇರಬೇಕಾದ ಅಂತರವನ್ನು ಸಂಸ್ಕಾರಯುತವಾಗಿ ಹೇಳಿಕೊಡಬೇಕು. ನೀನು ಗಂಡುಮಗ.. ನೀನೇನೇ ಮಾಡಿದರೂ ನಡೆಯುತ್ತದೆ ಎಂಬ ಅಹಂಭಾವವನ್ನು ಮಕ್ಕಳಲ್ಲಿ ಬೆಳೆಸಬಾರದು.
ಜಗತ್ತು ಎಷ್ಟೇ ಮುಂದುವರೆದಿರಲಿ, ಗಂಡು ಹೆಣ್ಣುಗಳೆಂಬ ಸಲಿಗೆಯಿಂದ ಹೆಗಲ ಮೇಲೆ ಕೈಯಿರಿಸಿಕೊಂಡು ಓಡಾಡಲಿ, ಒಂದು ವಯೋಮಾನದ ನಂತರ ಹೆಣ್ಣು ಗಂಡುಗಳು ತಮ್ಮ ನಡುವೆ ಕಾಯ್ದುಕೊಳ್ಳಬೇಕಾದ ಅಂತರದ ಬಗ್ಗೆಯೂ ಮಕ್ಕಳಿಗೆ ತಿಳಿಸಿಹೇಳುವುದು ಕೂಡ ತಾಯಂದಿರ ಕೆಲಸ. ಸ್ನೇಹ ಹಾಗೂ ಸಂಪರ್ಕಗಳ ನಡುವಿನ ಅಂತರವನ್ನು ತಿಳಿಸಿಹೇಳಬೇಕು. ಜೀವನದಲ್ಲಿ ನೈತಿಕತೆಗೆ ಕೊಡಬೇಕಾದ ಮಹತ್ವದ ಬಗ್ಗೆ ತಿಳಿಹೇಳುವುದು ತಾಯಿಯದೇ ಜವಾಬ್ದಾರಿ. ಅಂದರೇ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾದೀತು.
ನಾವು ಚಿಕ್ಕವರಿದ್ದಾಗ ನಮ್ಮ ಜಗತ್ತು ಬಹಳ ಚಿಕ್ಕದು. ಅಲ್ಲಿ ಎಂದಾದರೊಮ್ಮೆ ಬರುವ ಒಳ್ಳೆಯ ಸಿನಿಮಾ, ಅದೂ ರಾಜಕುಮಾರನ ಅಭಿನಯದ ಪೌರಾಣಿಕ ಸಿನಿಮಾ ಇದ್ದರಂತೂ ಬಲು ಖುಶಿ. ಮನೆಯ ಜನರೆಲ್ಲ ಒಟ್ಟಿಗೆ ಕುಳಿತು ನೋಡುವ ಸಿನಿಮಾಗಳವು. ಉಳಿದ ಸಮಯದಲ್ಲಿ ಶಾಲೆ… ಮನೆಗೆಲಸವೂ ಅಷ್ಟೊಂದೇನೂ ಇರುತ್ತಿರಲಿಲ್ಲ. ಹೊರಾಂಗಣ ಆಟಗಳು, ಮನೆಯಲ್ಲಿ ಕುಳಿತು ಆಡುವ ಪಗಡೆ, ಕೌಡಿ. ಕೇರಂ ಮುಂತಾದುವು. ಮುಂದೆ ನಮ್ಮ ಮಕ್ಕಳ ಸಮಯದಲ್ಲಿ ಆಟಗಳು ಬದಲಾಗುವುದಕ್ಕೆ ಕಾರಣವಾದ ಟಿವಿಗಳು ಬಂದವು. ಆದರೂ ನ್ಯಾಶನಲ್ ಪ್ರೊಗ್ರಾಂನ ಒಂದೇ ಚ್ಯಾನೆಲ್ಲು. ಕೆಲವೇ ಕೆಲವು ನಿರ್ಧಾರಿತ ಸೀರಿಯಲ್ಲುಗಳು. ನಮ್ಮ ಮಕ್ಕಳಿಗೆ ಮನೆಗೆಲಸವಿರುತ್ತಿದ್ದರೂ ಅದನ್ನು ಮುಗಿಸಲು ತಾಯಂದಿರ ನೆರವೇ ಮುಖ್ಯವಾಗಿರುತ್ತಿತ್ತು. ಈಗಿನಂತೆ ಕ್ಯಾಲಕ್ಯುಲೇಟರು, ಸ್ಮಾರ್ಟ ಫೋನು, ಗೂಗಲ್ಲುಗಳಿರುತ್ತಿರಲಿಲ್ಲ. ನೆಟ್ ಎಂದರೆ ಮಾಸ್ಕಿಟೋ ನೆಟ್ಟೇ ಸರಿ! ಏನಾದರೂ ಸಮಸ್ಯೆ ಬಂದಾಗ ಪುಸ್ತಕಗಳ ಮೊರೆ ಹೋಗಬೇಕಾಗುತ್ತಿತ್ತು. ಆದರೆ ಈಗಿನ ತಾಯಿ ಕಂಪ್ಯೂಟರ ಜ್ಞಾನವನ್ನು ಹೊಂದಿರುವವಳು. ಸುಶಿಕ್ಷಿತಳು. ಹೊರಜಗತ್ತಿನ ತಿಳಿವಳಿಕೆ ಇರುವವಳು. ಹೊಸ ಹೊಸ ಟೆಕ್ನಿಕ್‍ಗಳು ಅರಿಯದ ವಿಷಯಗಳನ್ನು ಸುಲಭವಾಗಿ ಅರಿಯುವಂತೆ ಮಾಡಿವೆ. ಅಭ್ಯಾಸಕ್ಕೆ ಅನೇಕ ಸಾಧನಗಳಿರುವುದರಿಂದ ಇಂದು ಮಕ್ಕಳ ಹೋಮ್ ವರ್ಕ್ ಹೊರೆಯಾಗಿಲ್ಲ. ಪ್ರತಿಯೊಂದು ಸಮಸ್ಯೆಗೂ ನೆಟ್ಟಿನಲ್ಲಿ ಉತ್ತರಗಳು ದೊರೆಯುತ್ತವೆ. ಆದರೆ ಅಪಾಯವೇನೂ ಕಡಿಮೆಯಿಲ್ಲ. ಇಂದು ಮಕ್ಕಳು ತಮಗೆ ತಿಳಿಯದ ಯಾವುದೇ ವಿಷಯಕ್ಕೂ ನೆಟ್ಟನ್ನು ಅವಲಂಬಿಸುವುದರಿಂದ ಬಹು ಬೇಗ ಪ್ರೌಢತೆಯ ಹಂತವನ್ನು ತಲುಪುತ್ತಿದ್ದಾರೆ. ಅಲ್ಲದೆ ತಾವು ಮನೆಯಲ್ಲಿಲ್ಲದ ಸಮಯದಲ್ಲಿ ಏನನ್ನು ನೋಡುವರೋ, ಏನನ್ನು ಮಾಡುವರೋ ಎಂಬ ಹೆದರಿಕೆ ಪಾಲಕರನ್ನು ಕಾಡುತ್ತದೆ.
ಇಂದಿನ ಸಿಲೆಬಸ್ ಮಾತ್ರ ಅತ್ಯಂತ ಕ್ಲಿಷ್ಟವಾದದ್ದು. ಇಲ್ಲಿ ಒಂದು ಜೋಕ್ ನೆನಪಾಗುತ್ತದೆ. ಈಗಿನ ಮಕ್ಕಳಿಗೆ ಪ್ರಾಜೆಕ್ಟ್ ವರ್ಕ್ ಅಂತ ಇರುತ್ತದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತೇ ಇರುವ ವಿಷಯ. ನರ್ಸರಿಯಿಂದ ಹಿಡಿದು ಮೂರು ನಾಲ್ಕನೆಯ ಕ್ಲಾಸಿನ ಮಕ್ಕಳು ಆ ಪ್ರಾಜೆಕ್ಟ್ ವರ್ಕ್ ಹೇಗೆ ಮಾಡಿಯಾರು? ಅದು ತಾಯಂದಿರದೇ ಜವಾಬ್ದಾರಿ. ಅದಕ್ಕೂ ಅಂಕಗಳಿರುತ್ತವಲ್ಲ. ಅಂದು ಒಬ್ಬ ತಾಯಿ ಮಗಳನ್ನು ಶಾಲೆಯಿಂದ ಕರೆತಂದಾಗ ಮುಖ ಸಪ್ಪಗಾಗಿತ್ತು. ಕಾರಣ ಇಷ್ಟೇ. ಇವಳು ಅತ್ಯಂತ ಮುತುವರ್ಜಿ ವಹಿಸಿ ಮಾಡಿದ್ದ ಪ್ರಾಜೆಕ್ಟ್‍ಗೆ ಎರಡನೆಯ ಸ್ಥಾನ ಬಂದಿತ್ತು. ಮೊದಲ ಸ್ಥಾನ ಇನ್ನೊಬ್ಬ ಹುಡಿಗೆಯ ಪಾಲಾಗಿತ್ತು. ಅದಕ್ಕೆ ಕಾರಣವೆಂದರೆ ಹಲ್ಲಿನ ರಚನೆಯ ಬಗ್ಗೆ ಇವಳು ಪೇಟೆಯಿಂದ ಪ್ಲ್ಯಾಸ್ಟಿಕ್ ಹಲ್ಲನ್ನು ತಂದು ಅಂಟಿಸಿದ್ದರೆ ಆ ಹುಡಿಗೆಯ ತಾಯಿ ತನ್ನ ಪುಟ್ಟ ಮಗಳ ಅಲುಗಾಡುತ್ತಿರುವ ಹಲ್ಲನ್ನೇ ಕಿತ್ತು ಅಂಟಿಸಿದ್ದಳು! ನನ್ನಂಥವರಿಗೆ ಇದು ದಿಗಿಲಿನ ಸುದ್ದಿಯೇ! ಅಲ್ಲಾ, ಒಂದು ವೇಳೆ ಕಣ್ಣಿನದೇನಾದರೂ ಪ್ರಾಜೆಕ್ಟ್ ಮಾಡುವುದಿದ್ದರೆ!
ಒಳ್ಳೆಯ ಸಂಸ್ಕಾರ ಕಲಿಸಲು ತಾಯಂದಿರು ಸಂಘರ್ಷ ಮಾಡಬೇಕಾಗಿದೆ. ನಮ್ಮ ಮಕ್ಕಳು ದೊಡ್ಡವರಾಗುತ್ತಿದ್ದ ಸಮಯದಲ್ಲಿ ಇನ್ನೂ ಅವಿಭಕ್ತ ಕುಟುಂಬಗಳು ಅಲ್ಲಿಲ್ಲಿ ಕಾಣುತ್ತಿದ್ದವು. ಅಲ್ಲದೆ ರಜೆಯಲ್ಲಿ ಅಜ್ಜ ಅಜ್ಜಿಯರ ಊರಿಗೆ ಹೋಗುವ, ಅವರು ತಮ್ಮ ಮಕ್ಕಳ ಬಳಿಗೆ ಬರುವ ರೂಢಿ ಇನ್ನೂ ಸಶಿಸಿಹೋಗಿರಲಿಲ್ಲ. ಹೀಗಾಗಿ ಒಳ್ಳೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಲು ಅವಕಾಶಗಳಿದ್ದವು. ನಂತರದ ಈ ನ್ಯೂಟ್ರಾನ್ ಪರಿವಾರಗಳಲ್ಲಿ ಮಕ್ಕಳು ಒಂಟಿಯಾಗಿಯೇ ದಿನಗಳನ್ನು ಕಳೆಯುವುದರಿಂದ ಸಾಮಾಜೀಕರಣದ ಪಾಠಗಳು ದೊರೆಯುವುದು ದುಸ್ತರವಾಗಿದೆ. ಮಕ್ಕಳಲ್ಲಿ ಸ್ವಾರ್ಥ, ರೌಡಿತನ, ಹಟಮಾರಿ ಸ್ವಭಾವ ಹೆಚ್ಚಾಗುತ್ತಿದೆ. ಇದರಿಂದಾಗಿಯೂ ತಾಯಂದಿರು ಚಿಂತಿಸುವಂತಾಗಿದೆ.
ಮಕ್ಕಳಿಗೆ ಆಟದ ಮೈದಾನದ ಕೊರತೆ ಕಾಡುತ್ತಿದೆ. ಗಲ್ಲಿಗಳಲ್ಲಿ ಆಟವಾಡುವ ಆ ದಿನಗಳು ಎಲ್ಲಿಯೋ ಕಳೆದುಹೋಗಿವೆ. ದೊಡ್ಡ ದೊಡ್ಡ ಕಾಂಪೌಂಡಿನ ಮನೆಗಳು ಈಗ ವಿರಳವಾಗಿವೆ. ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಅಪಾರ್ಟಮೆಂಟುಗಳು ಮಕ್ಕಳಿಗೆ ಆಡವಾಡಲು ಸ್ಥಳದ ಕೊರತೆಗೆ ಕಾರಣವಾಗಿವೆ. ಹೀಗಾಗಿ ಮಕ್ಕಳು ಬೇರೆ ಬೇರೆ ಆಟದ ಸಾಧನಗಳನ್ನು ಹುಡುಕಿಕೊಂಡಿದ್ದಾರೆ. ವಿಡಿಯೋಗೇಮ್, ಕಂಪ್ಯೂಟರ್‍ನಲ್ಲಿಯ ಆಟಗಳು, ಸ್ಮಾರ್ಟಫೋನುಗಳಲ್ಲಿ ತಲೆ ಹಾಕಿಕೊಂಡು ಕುಳಿತುಕೊಳ್ಳುವ  ಮಕ್ಕಳು ಈಗ ಮನೆಮೂಳರಾಗುತ್ತಿದ್ದಾರೆ. ತಮ್ಮ ಮನೆಮಂದಿಯಿಂದಲೇ ದೂರವಾಗುತ್ತಿದ್ದಾರೆ. ಅಮ್ಮ ಮಕ್ಕಳು ಮನೆಯಲ್ಲಿಯೇ ಫೋನುಗಳಲ್ಲಿ ಚಾಟ್ ಮಾಡುವಂಥ ಪ್ರಸಂಗ ಬಂದಿದೆ. ಸಂವಾದಕ್ಕಾಗಿ ಸಮಯ ಕಾಯುವ ಹಂತಕ್ಕೆ ಬಂದು ತಲುಪಿದ್ದೇವೆ. ಕುರುಕಲು ತಿಂಡಿಗಳು, ಹೊಸ ಜಗತ್ತಿನ ಫಾಸ್ಟ್ ಫುಡ್ ಗಳಿಂದಾಗಿ ಇಂದು ಮಕ್ಕಳು ಬೊಜ್ಜು ಮೈಗೆ ತುತ್ತಾಗುತ್ತಿದ್ದಾರೆ. ಒಬ್ಬಂಟಿಯಾಗಿ ಕಾಲ ಕಳೆಯುವುದರಿಂದಾಗಿ ಅವರಿಗೆ ಹೊರಜಗತ್ತಿನಲ್ಲಿ ಹೇಗೆ ವ್ಯವಹರಿಸಬೇಕೆಂಬುದೇ ಅರಿಯದಾಗಿದೆ. ಸಾಮಾಜೀಕರಣವನ್ನೇ ಮರೆಯುತ್ತಿದ್ದಾರೆ. ಇಂದಿನ ತಾಯಿ ಇದರಿಂದಾಗಿ ಚಿಂತಿತಳಾಗಿದ್ದಾಳೆ. ಪ್ರಾಕೃತಿಕ ಪರಿಸರದಿಂದ ದೂರವಾಗಿ ಉಳಿಯುತ್ತಿರುವುದರಿಂದ ಆರೋಗ್ಯವೂ ಹದಗೆಡುತ್ತಿದೆ. ಮಕ್ಕಳ ಈ ಹೊಸ ಹೊಸ ಅನಾರೋಗ್ಯದ ಸಮಸ್ಯೆಗಳಿಂದಾಗಿ ತಾಯಿ ಚಿಂತಿತಳಾಗಿದ್ದಾಳೆ. ಇನ್ನು ಹೊರಗಿನ ವಾತಾವರಣವಾದರೂ ಸ್ವಚ್ಛವಾಗಿದೆಯೇ? ಹೆಚ್ಚುತ್ತಿರುವ ಜನಸಂಖ್ಯೆ, ಆಧುನೀಕರಣ ಇವುಗಳಿಂದಾಗಿ ವಿರಳಗೊಳ್ಳುತ್ತಿರುವ ಗಿಡ-ಮರ-ಗುಡ್ಡ-ಬೆಟ್ಟಗಳು, ಪ್ರಾಣಿ-ಪಕ್ಷಿಗಳು ಮಾಯವಾಗುವಿಕೆ ಇವೂ ವಾತಾವರಣದ ಮೇಲೆ ಪ್ರಭಾವ ಬೀರುತ್ತಿವೆ. ಶಹರೀಕರಣ, ಔದ್ಯೋಗಿಕ ಕ್ರಾಂತಿಗಳಿಂದಾಗಿ ಹಳ್ಳಿಗಳು ಮಾಯವಾಗುತ್ತಿವೆ. ವಾಹನಗಳ ದಟ್ಟಣೆ, ಕಲುಷಿತ ನೀರು, ಅತಿ ಹೆಚ್ಚಿನ ಗೊಬ್ಬರ ಹಾಗೂ ಕೀಟನಾಶಕಗಳ ಉಪಯೋಗದಿಂದಾಗಿ ಕಲುಷಿತವಾಗುತ್ತಿರುವ ಆಹಾರ, ಇವುಗಳಿಂದಾಗಿಯೂ ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಮಕ್ಕಳ ಜೀವನ ಶೈಲಿಯನ್ನು ಬದಲಾಯಿಸಬೇಕಾಗಿದೆ. ಆಹಾರ ಪದ್ಧತಿಯನ್ನು ವಿಶೇಷವಾಗಿ ರೂಪಿಸಬೇಕಾಗಿದೆ. ಇದೂ ಇಂದಿನ ತಾಯಿಯರ ವಿಶೇಷ ಹೊಣೆಯೇ ಆಗಿದೆ. ನಮ್ಮ ಮಕ್ಕಳು ಚಿಕ್ಕವರಿದ್ದಾಗ ಹರಿಯುವ ಹೊಳೆಯ ನೀರು ಅಮೃತವಾಗಿತ್ತು. ಗಿಡದಿಂದ ನೇರವಾಗಿ ಕಿತ್ತು ತಿನ್ನುವ ಹಣ್ಣು ಹಂಪಲಗಳು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಿದ್ದರು. ಆದರೆ ಇಂದು ಮಕ್ಕಳನ್ನು ಇವೆಲ್ಲದರಿಂದ ಕಾಪಾಡಬೇಕಾಗಿದೆ.
ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರಿಗೆ ವಯಸ್ಸಿಗೆ ತಕ್ಕಂತೆ ಬುದ್ಧಿ, ಪ್ರಬುದ್ಧತೆಗಳು ಬೆಳೆಯುತ್ತವೆ. ಜೀವನದ ಪ್ರಾಮುಖ್ಯತೆಗಳು ಬದಲಾಗುತ್ತವೆ. ಅಮ್ಮನ ಮಡಿಲಿನಿಂದ ಇಳಿದು, ಶಿಕ್ಷಣ, ವೃತ್ತಿ, ಪ್ರೀತಿ, ಪ್ರೇಮ, ಮದುವೆ, ಮಕ್ಕಳು ಹೀಗೆ ಜೀವನದ ವಿವಿಧ ಮುಖಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. ಈ ಸಮಯದಲ್ಲಿ ತಂದೆ ತಾಯಿಯರು ಹಿಂದೆ ಸರಿಯುತ್ತಾರೆ. ಅದಕ್ಕೆ ಕಾರಣ ಆತನ ಅಸಡ್ಡೆಯೂ ಅಲ್ಲ, ನಿರ್ಲಕ್ಷ್ಯವೂ ಅಲ್ಲ. ಜೀವನದ ಅನಿವಾರ್ಯತೆ. ಇದು ಪ್ರೀತಿ ಕಡಿಮೆಯಾದುದರ ಸಂಕೇತವಲ್ಲ. ಆದ್ಯತೆಗಳ ಬದಲಾವಣೆ ಮಾತ್ರ.
ಈಗ ತಾಯಿಯ ಎದುರು ಇನ್ನೊಂದು ಸವಾಲು. ಮೊದಲೆಲ್ಲ ಈ ಮಗನೇ ಅಥವಾ ಮಗಳೇ ನನ್ನೊಂದಿಗೆ ಎಷ್ಟೊಂದು ಸಲಿಗೆಯಿಂದಿದ್ದರಲ್ಲ, ಸ್ನೇಹದಿಂದ ವರ್ತಿಸುತ್ತಿದ್ದರಲ್ಲ, ನಮ್ಮ ಬಾಂಧವ್ಯಕ್ಕೆ ಯಾರದಾದರೂ ದೃಷ್ಟಿ ತಗುಲಿತೇ? ತಮ್ಮ ಪ್ರೀತಿ-ಪ್ರೇಮ, ತಮ್ಮ ಸ್ನೇಹಿತರು, ಎಲ್ಲವನ್ನೂ ಚರ್ಚಿಸುತ್ತಿದ್ದರಲ್ಲ.. ನನ್ನ ನಿಸ್ವಾರ್ಥ ಪ್ರೀತಿಯ ಮೌಲ್ಯ ಈ ಮಕ್ಕಳು ತಮ್ಮ ಬಾಳು ಕಟ್ಟಿಕೊಳ್ಳುವವರೆಗಷ್ಟೇಯೇ? ಹೊಸ ಜಗತ್ತು ರಚಿಸಲು ಕಲಿಸಿಕೊಟ್ಟ ತಂದೆ ತಾಯಿಯರನ್ನೇ ಮಕ್ಕಳು ಅದೇ ಜಗತ್ತಿನಿಂದ ದೂರವಿಡುವುದು ಸರಿಯೇ? ತರ್ಕಬದ್ಧವಾಗಿ ಯೋಚಿಸಿದಲ್ಲಿ ಮಕ್ಕಳೂ ಸರಿ. ಭಾವನಾತ್ಮಕವಾಗಿ ಯೋಚಿಸಿದಾಗ ತಂದೆ ತಾಯಿಯರೂ ಸರಿ.
ಮಗುವಿಗೆ ಜನ್ಮ ಕೊಟ್ಟದ್ದು ಸ್ವ ಇಚ್ಛೆಯಿಂದ. ಮಗುವಿನ ಲಾಲನೆ ಪಾಲನೆ ಮಾಡಿದ್ದು ನಮ್ಮಲ್ಲಿರುವ ಪ್ರೀತಿಯಿಂದ. ಮಗುವನ್ನು ಮನುಷ್ಯನನ್ನಾಗಿ ಮಾಡಿದ್ದು ಅವನಿಗೆ ಒಳಿತಾಗಲಿ ಎಂಬ ಭಾವನೆಯಿಂದ. ಎಲ್ಲವೂ ಸ್ವಇಚ್ಛೆಯಿಂದ ಮಾಡಿರುವಾಗ ಅವರು ನಮ್ಮೊಂದಿಗೇ ಇರಲಿ ಎಂಬ ನಿರೀಕ್ಷೆ ಅಥವಾ ಅವರು ನಮ್ಮನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿ ಎನ್ನುವ ಭಾವ ಎಷ್ಟರ ಮಟ್ಟಿಗೆ ಸರಿ? ಮಕ್ಕಳು ತಮ್ಮ ಜೀವನ ರೂಪಿಸಿಕೊಳ್ಳಲಿ, ಸುಂದರವಾಗಿ ಬದುಕು ಕಟ್ಟಿಕೊಳ್ಳಲಿ, ಬದುಕಿನಲ್ಲಿ ಯಶಸ್ವಿಯಾಗಲಿ, ಅದರ ನಂತರವೂ ನಮ್ಮೊಂದಿಗೆ ಬದುಕಲು ಬಯಸಿದರೆ ಬರಲಿ. ಆಗ ಅವರೊಂದಿಗೆ ಬದಲಾಗುತ್ತಿರುವ ಜಗತ್ತಿನ ಮೌಲ್ಯಗಳೊಂದಿಗೆ ಬದುಕೋಣ ಎಂಬ ಆತ್ಮ ವಿಶ್ವಾಸದ ಪಾಠವೂ ಆಧುನಿಕ ತಾಯಂದಿರಲ್ಲಿರಲಿ.
ಹಾಗೆಂದು ಇಷ್ಟು ದಿನಗಳ ವರೆಗೂ ಬೆನ್ನೆಲುಬಾಗಿ ಕಾಪಾಡಿದ ತಾಯಿ ತಂದೆಯರನ್ನು ಮರೆಯುವುದೂ ಮಕ್ಕಳಿಗೆ ಸಲ್ಲದು. ಆದಿಯೊಂದನ್ನೇ ಹೊಂದಿರುವ ಪೋಷಕರ ಪ್ರೀತಿಗೆ ಅನ್ಯಾಯ ಬಗೆಯದೆ ಮಕ್ಕಳು ಅವರಿಂದ ದೂರವಾಗದಿರಲಿ. ಜಾಗತೀಕರಣದ ಕಾಲಘಟ್ಟದಲ್ಲಿ ಹಿಂದುಳಿದವರೆಂದು ಅವರನ್ನು ಅವಗಣಿಸುವುದು ಬೇಡ. ಇಂದಿನ ಅವರ ಪರಿಸ್ಥಿತಿಯೇ ನಾಳೆ ನಮಗೂ ಕಟ್ಟಿಟ್ಟ ಬುತ್ತಿ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಮಕ್ಕಳು ಮುನ್ನಡೆಯಲಿ ಎಂಬ ಆಶಯ ನನ್ನದು.

ಮಾಲತಿ ಮುದಕವಿ

Leave a Reply