ಭಂಟ

‘ಭಂಟ’ ಹಾಗಂದ್ರೆ! ಕನ್ನಡ ಶಬ್ದಕೋಶದಲ್ಲಿ ವಿವರಿಸುವ ವೀರನೂ ಅಲ್ಲ, ದಾಸನೂ ಅಲ್ಲ. ಮಲೆನಾಡಿನ ಅಡಿಕೆ ಕೃಷಿಕರಲ್ಲಿ ಕೇಳಿ ನೋಡಿ, ‘ಹೋಯ್…! ಓ… ಅದಾ ‘ಸ್ವಾಂಗೆ’ ಕಡಿಯದಾ..! (ಅಡಿಕೆ ಸೋಗೆಯಿಂದ ಹಾಳೆ ಬೇರೆ ಮಾಡೋ ಸಾಧನ) ಎನ್ನುವ ಉತ್ತರ ಬರುತ್ತದೆ. ಹೌದು, ‘ಟ್ರೈಪಾಡ್’ನಂತೆ ಕಾಣುವ ಈ ವಸ್ತುವಿನ ಹೆಸರು ‘ಭಂಟ’ ಅಡಿಕೆ ಮರದಿಂದ ಒಣಗಿ ಬೀಳುವ ಸೋಗೆಯಿಂದ ಹಾಳೆಗಳನ್ನು ಬೇರ್ಪಡಿಸಲು ಈ ಭಂಟ ಬೇಕೆ,ಬೇಕು. ಹಿಂದಿನ ಕಾಲದಲ್ಲಿ ಮಲೆನಾಡು ಪ್ರದೇಶಗಳಲ್ಲಿ ಮನೆಯ ಮೇಲ್ಚಾವಣಿಗೆ ಹೊದಿಸಲು ಅಡಿಕೆ ಸೋಗೆ ಅತ್ಯಂತ ಪ್ರಾಥಮಿಕ ಅವಶ್ಯಕತೆಯಾಗಿತ್ತು. ಆಗ ಸೋಗೆಗೆ ಅಂಟಿಕೊಂಡಿರುವ ಅಡಿಕೆ ಹಾಳೆಗಳನ್ನು ಪ್ರತ್ಯೇಕಿಸಬೇಕಿತ್ತು. ಹೀಗೆ ಕತ್ತರಿಸಲ್ಪಟ್ಟ ಸೋಗೆಯನ್ನು ನಂತರ ಮನೆಯ ಮಾಡಿಗೆ(ಸೂರು) ಮು(ಹೊ)ಚ್ಚಲು ಉಪಯೋಗಿಸುತ್ತಿದ್ದರು. ಬದಲಾದ ಕಾಲಕ್ಕೆ ತಕ್ಕಂತೆ ಸೋಗೆ ಮನೆಗಳು ಹೆಂಚು, ಆರ್.ಸಿ.ಸಿ. ಮನೆಗಳಾಗಿ ಬದಲಾದವು. ಈಗ ಸೋಗೆಯ ಬಹುಪಯೋಗ ಕಡಿಮೆಯಾಗಿ ಸೋಗೆ ಕೇವಲ ಅಡಿಕೆ ತೋಟದಲ್ಲಿ ಮುಚ್ಚಿಗೆಗಾಗಿ ಬಳಕೆಯಾಗುತ್ತಿದೆ. ತಂತ್ರಜ್ಞಾನದ ಆವಿಷ್ಕಾರದ ಫಲವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಕಟ್ಟಿಗೆ, ಬಿದಿರು, ಹಾಗೂ ಮಣ್ಣಿನಿಂದ ಮಾಡಿರುವ ಅನೇಕ ಸಾಂಪ್ರದಾಯಿಕ ಸಲಕರಣೆಗಳು ಈಗ ಬಳಕೆಯಿಂದ ದೂರಾಗಿವೆ.
ಹಿಂದೆ ಬೇಸಾಯಕ್ಕೆ ಬಳಸುತ್ತಿದ್ದ ನೇಗಿಲು, ಕೂರಿಗೆ, ಹರ್ತಕುಂಟೆ, ಎತ್ತುಗಳಿಗೆ ಬಳಸುತ್ತಿದ್ದ ಕೋಡುಅಣಸು, ಪುಂಡುಹಸುಗಳನ್ನು ನಿಯಂತ್ರಿಸಲು ಬಳಸುವ ದೊಗ್ಗಾಲಿನ ಕೋಲು, ಮುಳ್ಳಿನ ಮುಖ ಕವಚ, ಆಲೆಮನೆಗೆ ಬಳಸುವ ವಸ್ತುಗಳು ಹಾಗೂ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪರಿಕರಗಳು ಬದಲಾದ ಕಾಲದಲ್ಲಿ ಬಳಕೆಯಾಗುತ್ತಿಲ್ಲ. ಇವನ್ನು ಸಂಗ್ರಹಿಸಿಟ್ಟರೆ, ಯಾಂತ್ರೀಕರಣ ಯುಗದಲ್ಲಿರುವ ಇಂದಿನ ಕೃಷಿ ವಿದ್ಯಾರ್ಥಿಗಳಿಗೆ ಹಿಂದಿನ ಕಾಲದಲ್ಲಿ ಎಂತಹ ಉಪಕರಣಗಳನ್ನು ಬಳಸುತ್ತಿದ್ದರು ಎಂಬುದನ್ನು ಪರಿಚಯಿಸಲು ನೆರವಾಗುತ್ತದೆ.

ಹೊಸ್ಮನೆ ಮುತ್ತು

Leave a Reply