ಭ್ರಷ್ಠತೆ

ಭ್ರಷ್ಠತೆ
ಭ್ರಷ್ಠತೆ ಎನ್ನುವುದು ಮನಸ್ಸಿನ ಪರಿಧಿಯಲ್ಲಿ ಅಪ್ರಮಾಣಿಕ ಅಸತ್ಯಗಳ ಗೂಡಿನಲ್ಲಿ ಅವಿತುಕೊಂಡು ಪ್ರಸಂಗಾವಧಾನವಾಗಿ ಮೇಲೆದ್ದು ಬರುವುದು. ಇನ್ನು ಸ್ತ್ರೀಯರು ಭ್ರಷ್ಠ ಸಮಾಜ ನಿರ್ಮಾಣವಾಗಲು ಕಾರಣರೇ ಎಂದಾಗ ಭಾಗಶಃ ಹೌದು ಎಂದು ಹೇಳಬಹುದು. ಈ ಭ್ರಷ್ಠತೆ ಎನ್ನುವುದು ಎಳೆಯ ಮಗುವಿನಲ್ಲೆ ಚಿಗಿತ್ತು, ಮುಂದೆ ಬೆಳೆದು ಹೆಮ್ಮರವಾಗುವಂಥದ್ದು. ತಾಯಿಯು ತನ್ನ ಕೆಲಸ ಮಾಡಿಸಲೋಸುಗ, ‘ಪುಟ್ಟಾ ಈ ಕೆಲಸ ಮಾಡು ನಿನಗೊಂದು ಚಾಕಲೇಟ್ ಕೊಡುತ್ತೇನೆ’ ಎನ್ನುವ ಆಮಿಷ ತೋರಿದಾಗ ಮಗು ಕೆಲಸವನ್ನು ಕರ್ತವ್ಯವೆಂದರಿಯದೇ ಚಾಕಲೇಟಿನ ಆಸೆಗೋಸ್ಕರ ಮಾಡುತ್ತದೆ. ಮುಂದೆ ಬೆಳೆದಂತೆಲ್ಲ ತನ್ನ ಕರ್ತವ್ಯಕ್ಕೆ ಸಿಗುವ ಸಂಬಳಕ್ಕಿಂತ ಗಿಂಬಳದಲ್ಲಿಯೇ ಆಸಕ್ತಿ ಹೆಚ್ಚಾಗುತ್ತದೆ. ಅದಕ್ಕೆ ತಾಯಿಯಾದವಳು ಮೊದಲು ಮಗುವಿನಲ್ಲಿ ಸತ್ಯ ಪ್ರಾಮಾಣಿಕತೆಗಳ ಮಹತ್ವವನ್ನು ಮನಗಾಣಿಸಬೇಕು.
ಕೆಲವೊಂದು ಸ್ತ್ರೀಯರು ತಮ್ಮ ಶೋಕಿಗಾಗಿ, ಬಂಧುಬಳಗದವರಲ್ಲಿ ತಮ್ಮ ಹಿರಿಮೆ ಮೆರೆದಾಡುವುದಕ್ಕೋಸ್ಕರ ಶ್ರೀಮಂತಿಕೆ ಜೀವನ ಬಯಸುತ್ತಾರೆ. ಆಗ ಅವಳು ತನ್ನ ಪತಿಯನ್ನು ಭ್ರಷ್ಠಕೂಪಕ್ಕೆ ತಳ್ಳಬಹುದು. ಅವಳದು ಭ್ರಷ್ಠಮನಸ್ಸು ಇದ್ದು ಅವಳದು ನೈತಿಕವಾಗಿ ಬಲಾಢ್ಯವ್ಯಕ್ತಿತ್ವವಾಗಿ ಅರಳಬಲ್ಲದು.
ಭ್ರಷ್ಠಗೊಂಡ ಮನಸ್ಸು ಪತ್ನಿಯ, ತಾಯಿಯ, ಒತ್ತಡದಿಂದಲೇ ಲಂಚ ಸ್ವೀಕರಿಸುತ್ತಾನೆ ಎಂದು ಹೇಳಲು ಬರದು. ತನ್ನದೇ ಕಲುಷಿತ ಮನಸ್ಸಿನಿಂದ ತನ್ನ ಕೈಗಳನ್ನು ಹೊಲಸು ಮಾಡಿಕೊಳ್ಳುತ್ತಾನೆ ಎಂದು ಹೇಳಬಹುದು.
ಈ ವಿಷವರ್ತುಲದಲ್ಲಿ ನಮ್ಮ ಮಂತ್ರಿ ಮಾಗಧರೂ ಹಿಂದುಳಿದಿಲ್ಲ. ಇಲೆಕ್ಷನ್ನಿನಲ್ಲಿ ಸಿಕ್ಕಾಪಟ್ಟೆ ದುಡ್ಡು ಸುರಿದು ಅದನ್ನು ಸರಿದೂಗಿಸಲು ತಮ್ಮ ಕೆಳಗಿನ ಆಫೀಸರ್ಸ್ ಪಟ್ಟಿ ಹಿಡಿಯುತ್ತಾರೆ. ಅವರು ತಮ್ಮ ಕೈಕೆಳಗಿನ……. ಕೊನೆಗೆ ಅದು ಒಂದು ತಲುಪುವುದು ಶ್ರೀಸಾಮಾನ್ಯನ ತಲೆಯಮೇಲೆಯೇ. ಮೇಲಿನವರು ಭ್ರಷ್ಠರಾದಂತೆಲ್ಲಾ ಕೆಳಗಿನವರೂ ಭ್ರಷ್ಠರಾಗುತ್ತಾರೆ. ಭ್ರಷ್ಟಾಚಾರ ಎನ್ನುವುದು ಒಂದು ಕ್ಯಾನ್ಸರ್ ಪಿಡುಗಿನಂತೆ. ಎಲ್ಲೋ ಒಂದು ಕಡೆ ಉಂಟಾದರೆ ಇಡೀ ದೇಹವನ್ನೇ ಹೇಗೆ ವ್ಯಾಪಿಸುತ್ತದೋ ಹಾಗೆಯೇ ಇದೂ ಕೂಡ. ಮೇಲಿನವರು ಎಲ್ಲಿಯವರೆಗೆ ಅಪ್ರಾಮಾಣಿಕರಾಗಿರುವರೋ ಅಲ್ಲೀವರೆಗೆ ಕೆಳಗಿನವರೂ ಕೂಡ ಭ್ರಷ್ಠರಾಗಿರುತ್ತಾರೆ.
ಜಗತ್ತಿನಲ್ಲಿ ಲಂಚ ಸ್ವೀಕರಿಸಿ ಯಾರು ಆರಾಮವಾಗಿದ್ದಾರೆ ಹೇಳಿ? ಯಾವುದಾದರೂ ನ್ಯೂನತೆ, ರೋಗರುಜಿನ, ವಿಯೋಗ, ಕಷ್ಟನಷ್ಟ, ಮಕ್ಕಳ ದುರಭ್ಯಾಸ, ದುರ್ಮರಣ ಇತ್ಯಾದಿಗಳಿಂದ ಅಂತ್ಯ ಕಾಣುತ್ತಾರೆ. ಅವರ ಪೂರ್ವ ಪುಣ್ಯದಿಂದೇನಾದರೂ ಈಗ ಸಾಕಷ್ಟು ಗಳಿಸಿರಬಹುದು. ಆದರೆ ಅಂತಹ ದುಡ್ಡಿನಿಂದ ಅವರ ಅಂತಸ್ತಿನ ಅರಮನೆಯಲ್ಲಿ ಏಳು ಪೀಳಿಗೆಯವರು ನರಳಬೇಕಾಗುತ್ತದೆ ಎನ್ನುವುದು ಅವರಿಗೆ ತಡಮಾಡಿ ತಿಳಿಯುತ್ತದೆ.
ಇಂದು ಇಂಥ ಕ್ಯಾನ್ಸರ್ ಇಡೀ ದೇಹ(ಶ)ವನ್ನೇ ವ್ಯಾಪಿಸಿದೆ. ಇದನ್ನು ಇಲ್ಲವಾಗಿಸುವುದು ಸಾಧ್ಯವಿಲ್ಲವಾದರೂ ಅಸಾಧ್ಯವೇನಲ್ಲ. ಇಂದಿನ ಯುವ ಜನತೆ ತನ್ನ ಪರಿಧಿಯಲ್ಲಿ ಜರುಗುವ ಭ್ರಷ್ಠಕೂಪದಲ್ಲಿ ಬೀಳದೇ ಪ್ರಾಮಾಣಿಕರಾದರೆ ಸಾಕು. ಹನಿಹನಿ ಕೂಡಿದರೆ ಹಳ್ಳವೆಂಬಂತೆ ಒಬ್ಬೊಬ್ಬರೇ ಈ ರೀತಿ ತಯಾರಾದರೆ ಸಾಕು. ಇನ್ನು ನಮ್ಮಲ್ಲಿ ನಿಸ್ಪೃಹ ಇಲೆಕ್ಷನ್ ಪದ್ಧತಿ. ಸಮಗ್ರ ವಾಲ್ಯು ಶಿಕ್ಷಣ ಪದ್ಧತಿಯ ಅಳವಡಿಕೆ ಅವಶ್ಯಕವಾಗಿ ಬೇಕು. ಮೊದಲು ಮೇಲಿನವರಲ್ಲಿ ಸಾಚಾತನವಿದ್ದರೆ ಸಾಕು ಅಲ್ಲವೇ……

Leave a Reply