ಬುರುಡೆ ಬಿಂದಾಚಾರಿ

ಬುರುಡೆ ಬಿಂದಾಚಾರಿ
‘ಏನು, ಹುಡುಗೀ ಪಸಂದಾತೇನು?’ ಜಗುಲಿಯಿಂದಲೇ ಅಕ್ಷರಶಃ ಒದರುತ್ತಾ ಬಂದ ಬಿಂದಾಚಾರಿ ಒಳಗೆ ಬರುತ್ತಲೇ, ‘ಛೇ, ಏನವಾ ಸೆಕೀ, ಒಂದಿಷ್ಟು ಥಣ್ಣಗಿಂದ ಏನರೇ ಕೊಡು,’ ಎನ್ನುತ್ತಾ ತಲೆಯ ಮೇಲಿನ ಟೋಪಿ ತೆಗೆದು ಬಾಜೂಕ ಒಗೆದ. ‘ಈಗ ಬಂದೆ’ ಎಂದೆನ್ನುತ್ತಾ ಒಳಗೆ ಬಂದು ಫ್ರಿಜ್ ನಲ್ಲಿಟ್ಟ ಜೂಸನ್ನು ಒಂದು ಗ್ಲಾಸಿನಲ್ಲಿ ಸುರುವಿ ತಂದು ಅವನ ಮುಂದಿಟ್ಟೆ. ಲಗುಬಗೆಯಿಂದ ತೆಗೆದುಕೊಂಡು ಗಟಗಟನೆ ಕುಡಿದು ಗ್ಲಾಸನ್ನು ಕೆಳಗಿಟ್ಟ. ‘ಹಾಂ ನಾ ಬಂದ ಕೂಡ್ಲೇ ಕೇಳಿದ್ದೇನಾತವಾ, ಹುಡುಗಿ ಪಸಂತಾತ.’
‘ಶಿರೀಷ ಅಂತಾನ, ಇನ್ನಾ ಎರಡ್ವರ್ಷ ಮದುವೀ ಬ್ಯಾಡಂತ’ ಅಂದೆ. ‘ಏನ ಹುಚ್ಚ ಇದ್ದಾನವಾ ನಿನ್ನ ಮಗಾ, ಇಂಥಾ ಸ್ಥಳ ಸಿಗೂದಂದ್ರ ನಶೀಬ ಬೇಕ, ನಶಿಬ.’
‘ಹುಡುಗೀ ಅಷ್ಟೇನು ಛಂದಿಲ್ಲಲ್ಲಾ’ ಮೊಗಮ್ಮಾಗಿ ಹೇಳಿದೆ.
‘ತೊಂಗೊಡೇನ ಮಾಡ್ತೀ, ಒಂದ ಮಗಳು, ಬೇಕಾದಷ್ಟು ಬೇನಾಮಿ ಆಸ್ತಿ ಅದ, ಮುಂದ ಕುತ್ತಂಡ್ರೂ ಯಾರೂ ಕೇಳೋದಿಲ್ಲ.’
‘ಅವೆಲ್ಲಾ ಏನೂ ಬ್ಯಾಡಂತಾರ ಇವರು, ಶಿರೀಷನೂ ಹಂಗ ಹೇಳ್ಯಾನು.’
‘ಹೋಗಲೀ, ಇನ್ನೊಂದು ಕನ್ಯಾ ಅದ. ಅಪ್ಪಗ ಬರೇ ಎರಡೂ ಹೆಣ್ಣು ಹುಡುಗ್ರೂ. ರೆವಿನ್ಯೂದಾಗ ಇದ್ದ ಅವರಪ್ಪ ರಗಡ ರೊಕ್ಕಾ ಮಾಡ್ಯಾನ, ಹುಡುಗೀ ಚೂರು ಸಾದಗಪ್ಪ ಇದ್ರೂ, ಎಲ್ಲಾ ಕೆಲಸಾ ಭಗಶೀ ಒಳಗ ಎತ್ತಿದ ಕೈ. ಎಲ್ಲಾ ನೀಗಿಸಿಕೊಂಡು ಹೊಗುದ್ರಾಗ ಧಾಡಶೀ… ಏನ ಅಕೀ ಹೈಟಾ, ಏನ ಅಕೀ ನೋಟಾ, ಶಿರೀಷಗೆ ಬರೋಬ್ಬರಿ ಆಗ್ತದ, ಕುಂಡಲೀ ಅಂತೂ ಭಾಳ ಛೋಲೋ ಅದ ನೋಡವಾ, ಅಕೀನ್ನ ಮಾಡಿಕೊಂಡ್ರ ಮನೀ ಏರಕೊಂತ ಹೋಗ್ತದ….’
‘ನೋಡೂಣು ಹಂಗಾರ, ಶಿರೀಷ ಮುಂದಿನ ವಾರ ಬರಾಂವಿದ್ಹಾನ, ಅಂವಾ ಬಂದ ಕೂಡ್ಲೇ ನಿಮಗ ತಿಳಿಸ್ತೇನಿ, ಹುಡುಗೀನ್ನ ಕರಕೊಂಡು ಬರ್ರೀ, ನಮಗೇನ ಕುಂಡಲೀ ಒಳಗ ಅಷ್ಟೇನೂ ಇಂಟಿರೆಷ್ಟ ಇಲ್ಲ. ಹುಡುಗೀ ಛೋಲೋ ಇರ್ಬೇಕು ಅಷ್ಟ….
ಬಿಂದಚಾರಿ ಮುಂದಿನವಾರ ಬರ್ತೀನಿ ಅಂತ ಎದ್ದು ಹೋದ. ಮರುವಾರದಲ್ಲಿ ಶಿರೀಷ ಊರಿಗೆ ಬಂದಾಗ ವಿಷಯ ಅರುಹಿದೆ. ಅಂವಾ ಸ್ವಲ್ಪ ಹೆಚ್ಚಿಗೇ ಸಿಟ್ಟಿಗೆ ಎದ್ದು, ‘ಹೋಗೀ, ಹೋಗಿ, ಆ ಬಿಂದಾಚಾರಿ ಮಾತ ಕೇಳ್ತೀಯಲ್ಲಾ, ಮೊದಲ ಬಂಡಲ್ ಹೊಡ್ಯಾಂವ, ಏನಕೇನರೇ ಹೇಳಿ ಮದುವಿ ಮಾಡಿಸಿ ತನ್ನ ಕಮೀಷನ್ನ ಅಷ್ಟ ತೊಗೊಂಡು ಹೊಂಟ ಬಿಡಾಂವ. ಮುಂದ ಮದುವಿ ಆಗೀದ್ದ ಜೋಡಿ ಸುಖರೂಪದಿಂದ ಇದ್ದಾರೋ ಇಲ್ಲೋ ಅನ್ನೂ ಖಬರೇನು ಇರಾಂಗಿಲ್ಲ ಅಂವಗ….’ ಎನ್ನುತ್ತಿದ್ದಂತೆ ಫೋನು ರಿಂಗಣಿಸಿತು. ಶಿರೀಷನ ತಂದೆ ಅಶೋಕ ಫೋನೆತ್ತಿದರು. ಅತ್ತಲಿಂದ ಬಿಂದಾಚಾರಿ, ‘ಹುಡುಗಿಯನ್ನು ಇವತ್ತೇ ಕರಕೊಂಡು ಬರ್ಲಿಕತ್ತೀವಿ, ಅಲ್ಲಿ ಬಂದ ಮ್ಯಾಲ ಮಂದಿರದ ಮಾತಾಡೋಣು’ ಎಂದು ಹೇಳಿ ಫೋನಿಟ್ಟು ಬಿಟ್ಟ. ‘ಇದೇನಿದು, ಆ ಹುಡುಗೀ ಮನಿಮಂದಿ ಮುಂದ ಏನೇನು ಬುರುಡೆ ಬಿಟ್ಟಾನೋ’ ಎನ್ನುತ್ತಿದ್ದಂತೆ ನಾನು ಅಲ್ಲಿಗೆ ಬಂದೆ. ‘ಏನಾತು? ಯಾರದು ಫೋನು.’ ‘ಬಿಂದಾಚಾರಿ ಹುಡುಗೀನ್ನ ಕರಕೊಂಡು ಇವತ್ತ ಬರ್ತಾನಂತ’, ‘ಸರಿ’ ಎಂದೆ. ತಯಾರಿಗಾಗಿ ಒಳಗೆ ಹೋದೆ.
ಸಂಜೆ ಸರಿಯಾಗಿ ನಾಲ್ಕು ಘಂಟೆ ಗೋಡೆಯ ಮೇಲಿನ ಗಡಿಯಾರ ಬಾರಿಸುತ್ತಿದ್ದಂತೆ ಬಾಗಿಲಿನಲ್ಲಿ ತನ್ನ ಕೆಂಪನೆಯ ಹಲ್ಲುಗಳನ್ನೆಲ್ಲ ಪ್ರದರ್ಶಿಸುತ್ತಾ ಬಿಂದಾಚಾರಿ ದೇಶಾವರಿಯ ನಗೆಯೊಂದಿಗೆ ಒಳಗಡೆ ಅಡಿಇಟ್ಟ. ಅವನ ಹಿಂದೆ ಹುಡುಗಿಯ ತಂದೆ, ಆತನ ಹಿಂದೆ ಸುಂದರವಾದ ಮಾಟವಾದ ಹುಡುಗಿ (ಬಹುಶಃ ಕನ್ಯಾ ಇರಬಹುದು!) ಅವಳ ಹಿಂದೆ ಧಡೂತಿ ಆದ ಹೆಂಗಸೊಬ್ಬಳು! ಎಲ್ಲರೂ ಒಳಬಂದು ಕುಳಿತರು. ಬಿಂದಾಚಾರಿಯೇ ಬಾಯಿ ತೆರೆದ. ‘ಹುಡುಗಿ ಹಾಡು ಛೋಲೋ ಹೇಳ್ತಾಳ’ ಎಂದಾಗ ‘ಮೊದಲು ಅಕೀ ಹೆಸರರೇ ಕೇಳೋಣು’ ಎಂದು ನಾನು ಅತ್ಯಂತ ಸುಂದರಳಾದ ಸ್ತ್ರೀಯೆಡೆಗೆ ದೃಷ್ಟಿಸಿದೆ. ಎಲ್ಲರ ಲಕ್ಷ್ಯವೂ ಆಕೆಯ ಮೇಲೇ. ಅದರ ವ್ಯತಿರಿಕ್ತವಾಗಿ ಗಡಸು ಧ್ವನಿಯಿಂದ ಧಡೂತಿಯಾದವಳು ‘ಮಂಜುಳಾ’ ಎಂದು ಚುಟುಕಾಗಿ ಉತ್ತರಿಸಿ ನೆಲ ನೋಡುತ್ತಾ ಕುಳಿತಳು. ಪಕ್ಕದಲ್ಲೇ ಬಾಂಬ್ ಸಿಡಿಯಿತೇನೋ ಎಂಬಂಥ ಗಾಬರಿ ಆತಂಕ ನಮ್ಮೆಲ್ಲರ ಮುಖದ ಮೇಲೂ. ಇಷ್ಟೋತ್ತಿನವರೆಗೂ ನಾವೆಲ್ಲ ಕನ್ಯೆ ಎಂದು ತಿಳಿದಿದ್ದು ಆಕೆ ಕನ್ಯೆಯ ತಾಯಿಯಾಗಿದ್ದಳು! ಈಗ ಎಲ್ಲರ ಲಕ್ಷ್ಯ ಆ ಕನ್ನೆಯ ಮೇಲೆ ತಿರುಗಿತು. ಅದಕ್ಕ ಬಿಂದಾಚಾರೀ ‘ಆರೋಗ್ಯವಂತ ಕನ್ನಾ’ ಎಂಬ ಉಪಮೆಯೊಂದಿಗೆ ವರ್ಣಿಸಿದ್ದನೇನೋ. ಅಕೀನ್ನ ವರ್ಣಿಸೂದಂದರ ಒಂದ ಗುಜ್ಜಾನೆ ಮರಿ ಅಂತ ಹೇಳಿದ್ರ ಆತು, ದಪ್ಪನೆಯ ದೇಹಕ್ಕ ಸಣ್ಣನೆಯ ಕಣ್ಣುಗಳು, ಡೊಣ್ಣು ಮೆಣಸಿನಕಾಯಿಯಂತೆ ಮೂಗು, ಮೂಗಿನ ಮೇಲೊಂದು ಕಪ್ಪನೆಯ ನರೋಲಿ, ದಪ್ಪನೆಯ ಕಪ್ಪುಬಣ್ಣದ ತೊಂಡೆಕಾಯಿಯಂಥ ತುಟಿಗಳು, ತುಟಿಗಳ ಮಧ್ಯದಲ್ಲಿ ಇಣುಕುತ್ತಿರುವ ಮುಂದಿನ ಎರಡು ಹಲ್ಲುಗಳು, ಅವೂ ಕೂಡ ಹಳದೀ ಬಣ್ಣಕ್ಕೆ ತಿರುಗಿದ್ದು, ಗದ್ದದ ಮೇಲೆರಡು ಎಳೆಯ ಕೂದಲು, ಅತೀಯಾದ ಎಣ್ಣೆಯನ್ನು ಸವರಿಕೊಂಡ ತಲೆಕೂದಲು, ಚಪ್ಪಟೆಯಾಗಿ ತಲೆಯನ್ನು ಹೊದ್ದುಕೊಂಡಂತಿದ್ದವು. ಆಕೆಯನ್ನು ನೋಡುತ್ತಿದ್ದಂತೆ ಶಿರೀಷ ಒಳಗೆ ನಡೆದೇ ಬಿಟ್ಟ. ಅಶೋಕನಂತೂ ಬಿಂದಾಚಾರಿಯನ್ನೇ ಸಿಟ್ಟಿನಿಂದ ದಿಟ್ಟಿಸಿ ನೋಡತೊಡಗಿದ. ನನಗೂ ತುಂಬಾ ಕಸಿವಿಸಿ. ಹುಡಗೀನ್ನ ಕರ್ಕೊಂಡು ಬರ್ತೀನಿ ಅಂದಾಂವ ಎಮ್ಮಿನ್ನ ಕರ್ಕೊಂಡು ಬಂದಾನ ಅಂತ ಅನ್ಕೊಂಡೆ ಮನಸ್ಸನ್ಯಾಗ, ಆಗ ಬಿಂದಾಚಾರಿ ಒಳನಡುಮನೆಯ ರೂಮಿಗೆ ಬಂದು ಅಶೋಕನನ್ನೂ ನನ್ನನ್ನೂ ದಿಟ್ಟಿಸಿ ನೋಡುತ್ತಾ ಪಿಸುಮಾತಿನಲ್ಲಿ ಬಾಯಿ ತೆರೆದ, ‘ಈಗ ಸಾಫ್ಟವೇರ ಎಲ್ಲಾ ಬೀಳ್ಳಿಕತ್ತೇದ, ಹುಡಗಗ ಕನ್ಯಾ ಯಾರ ಕೊಡಾವ್ರು, ಸುಮ್ಮ ಕಣ್ಣ ಮುಚ್ಕೊಂಡು ಈಕೀನ್ನ ಮಾಡ್ಕೊಂಡ್ರ ಅಕೀ ಹೆಸರಲೇ ಇರೂ ಸೈಟು ನಿಮ್ದ ಆಗ್ತದ…’ ಇನ್ನೂ ಏನೋ ಹೇಳುತ್ತಲಿದ್ದ, ಆದರೆ ಶಿರೀಷ ಹೊರಗೆ ಬಂದು, ‘ಅಂಕಲ್, ಇನ್ನೂ ಎರಡು ವರ್ಷ ನಾ ಮದುವೀ ಆಗಾಂಗಿಲ್ಲ’ ಅಂತ ಹೇಳಿ ನಮ್ಮ ಕೆಲಸಾ ಹಗುರ ಮಾಡಿದ. ತಿಂಡಿ ತಿಂದುಂಡು ಎಲ್ಲರೂ ಹೋದ ಮೇಲೆ ಶಿರೀಷ ಮತ್ತವನ ಅಪ್ಪ ಇಬ್ಬರೂ ಸೇರಿ ನನ್ನ ಬಯ್ಯಬೇಕ, ‘ಆ ಬಂಡಲ್ ಹೊಡ್ಯೂ ಬಿಂದಾಚಾರಿ ಮಾತ ಕೇಳಿದ್ರ ಕತ್ತೀ ಛೋಲೋ ಕೆಲ್ಸಾ ಮಾಡ್ತದಂತ ಅದನ್ನ ಆಗು ಅನ್ನಾಂವ, ಎಮ್ಮಿ ಛೋಲೋ ಹಾಲ ಕೊಡ್ತದಂತ ಅದನ್ನ ಮದುವೀ ಆಗು ಅನ್ನಾಂವ, ಇನ್ನ ಮ್ಯಾಲ ಅಂವಾ ಬಂದು ಏನರೇ ಕನ್ಯಾ ಅವ ಅಂದ್ರ ನನ್ನ ಮಗನ ಮದುವಿ ಠರಾವ ಆಗೇದ ಅಂತ ಹೇಳು, ಅವನ ಮಾತ ಏನೂ ಕೇಳಬೇಡ’ ಇಬ್ಬರದೂ ಉಪದೇಶ. ನನಗೂ ಬಹಳೇ ಸಿಟ್ಟು ಬಂದಿತ್ತು. ಹಿಂದಿನ ಮನೀ ಮೀನಾಕ್ಷಿಗೂ ಹೀಂಗ ಅತೀಶಯ ಹೇಳಿ ಮದುವಿ ಮಾಡಿಸಿದ, ಮೀನಾಕ್ಷಿ ಹೆಸರಲೇ ಸೈಟ, ಬ್ಯಾಂಕನ್ಯಾಗ ಹಾರ್ಡಕ್ಯಾಸ ಅದ ಅಂತೆಲ್ಲಾ ಏನೇನೋ ಹೇಳಿ ಮದುವೀ ಮಾಡಿಸಿದ, ಮುಂದ ಈಕೀನ್ನ ನಂಬ್ಕೊಂಡ ವರಾ ಕಂಡಾಪಟಿ ಸಾಲಾ ಮಾಡಿ ಕಾರ ತೊಗೊಂಡ, ಪ್ಲ್ಯಾಟ್ ಬುಕ್ಕ ಮಾಡಿದ, ಮೀನಾಕ್ಷಿ ಹೆಸರಲೇ ಇರೂ ಸೈಟು ಎಲ್ಲೆದ, ಬ್ಯಾಂಕನ್ಯಾಗ ಎಷ್ಟು ರೊಕ್ಕ ಅದ ಅಂತ ಮನ್ಯಾಗಿನ ಖತರನಾಕ ಸದಸ್ಯರು ಒಬ್ಬೊಬ್ಬರ ಈಕೀಗೆ ಕೇಳ್ಳಿಕತ್ತಿದ್ರು, ಅಕೀಗೇನೂ ತಳಾನೂ ಗೊತ್ತಾಗ್ಲಿಲ್ಲ, ಬುಡಾನೂ ಗೊತ್ತಾಗ್ಲಿಲ್ಲ. ಮುಂದ ಒಂದು ತಿಂಗಳನ್ಯಾಗ ತೌರುಮನಿ ಸೇರ್ಕೊಂಡಾಕಿ ಹೊಳ್ಳಿ ಅಲ್ಲಿ ಹೋಗಿಲ್ಲ. ಅವರೂ ಆಕೀನ್ನ ಕರೀಲಿಕ್ಕೆ ಬಂದಿಲ್ಲ. ಇಂಥಾ ಮನೀಹಾಳ ಕೆಲ್ಸಾನ ಅಂವಂದು. ಎದುರಿಗಿನ ಮನಿ ವನಜಾಕ್ಷಿಯದು ಒಂಥರಾ ಕೇಸು. ಅದೂ ಬಂಡಲ್ ಬಿಂದಾಚಾರಿಯ ಉಪದ್ವ್ಯಾಪವೇ. ಅಕೀಗೆ ಮೂವತ್ತ ದಾಟಿದರೂ ಯಾವ ವರಾ ಸಿಗಲಿಲ್ಲ. ಪೋಸ್ಟನ್ಯಾಗ ನೌಕರಿ ಇತ್ತು. ಜಮ್ಮಂತ ಆರಾಮ ಇದ್ಲು. ಬಿಂದಾಚಾರಿ ಕಣ್ಣಿಗೆ ಅಕೀ ಬೀಳೂದು ಒಂದ ತಡಾ ಅಕೀಗೆ ಅಂತ ಒಂದ ವರಾ ಹುಡುಕೇಬಿಟ್ಟ, ಎಲ್ಲಾ ಮೊಗಮ್ಮಾಗಿ ಆಗಿ ಮಾತುಕತೆ ಅಂತು ಆತು. ಗಡಿಬಿಡಿಯಿಂದ ಮದುವೀನೂ ಆತು. ನಂತರ ತಿಳಿದು ಬಂದಿದ್ದೇನಂದ್ರ ಆ ಹುಡುಗಗ ನೌಕರೀನ ಇಲ್ಲ ಅಂತ. ಬಿಂದಾಚಾರಿ ಏನ ಹೇಳಿದ್ದಾ ಅಂದ್ರ ಅಂವಾ ಐ ಎ ಎಸ್ ಆಫೀಸರ ಇದ್ದಾನಂತ. ಆದ್ರ ಇಲ್ಲಿ ಬಂದ ನೋಡಿದ್ರ ವನಜಾಕ್ಷಿ ಕಮಾಯಿ ಮ್ಯಾಲ ಅವನ ಜೀವನ ನಡ್ಯುದೂ ಅಂತ. ವನಜಾಕ್ಷಿ ಮನೆಯವರು ಬಿಂದಾಚಾರಿಗೆ ಹಿಡಿಶಾಪ ಹಾಕಿದರೂ ಅವನೇನೂ ಪಿಟ್ಟಂತ ಅನ್ನಲಿಲ್ಲ. ವನಜಾಕ್ಷಿ ಅಂತೂ ಮನ್ಯಾಗ ಹೊರಗೆ ದುಡಿದು ಹೈರ್ಯಾಣ ಆಗ್ಯಾಳ, ಮಗಳೊಂದು ಹುಟ್ಟೇದ ಅಂತ ಗಂಡನ ಮನ್ಯಾಗ ಇದ್ದಾಳೆ.
ಬಿಂದಾಚಾರಿಗೆ ಇವೆಲ್ಲಾ ಕಾಮನ್, ದಿನಾಲೂ ಬೆಳಿಗ್ಗೆ ಎದ್ದು ಮನ್ಯಾಗಿನ ದೇವರ ಪೂಜಾ ಮಾಡಿ ಊಟಾ ಮಾಡಿ ಹೊರಗ ಬಿದ್ದರ ಮುಗೀತು, ರಾತ್ರೀನ ಮನೀ ಕಾಣೂದು. ಯಾರದರೇ ಮನ್ಯಾಗ ನಾಷ್ಟಾ, ಚಹಾ, ಕಾಫೀ ಇತ್ಯಾದಿಗಳು ಸಿಗುವುದಲ್ಲದೇ ಮದುವಿ ಮಾಡಿಸಿದ ಪಕ್ಷದವರು ಎರಡು ಸಾವಿರ ರೂಪಾಯಿ ಕಮೀಷನ್, ಧೋತ್ರದ್ದ ಜೋಡಿ, ಶಾಳು ಇತ್ಯಾದಿಗಳನ್ನು ತಾಂಬೂಲ ಜೊತೆ ಇಟ್ಟು ಕೊಡುತ್ತಿದ್ದರಿಂದ ಜೀವನ ಆರಾಮ ಆಗಿ ಸಾಗುತ್ತಿತ್ತು. ಯಾರ ಏನರೆ ಅನ್ಲಿ ಎಮ್ಮಿ ಚರ್ಮದ ಹಾಗೆ ಆತನದೂ ದಪ್ಪ ಚರ್ಮ ಆಗಿಬಿಟ್ಟಿತ್ತು.

Leave a Reply