ಸಿ.ಇ.ಓ ಆಫ್ ದ ಹೋಮ್

ಸಿ.ಇ.ಓ ಆಫ್ ದ ಹೋಮ್
ನಲಿನಿ ಎಂಬುವವಳು ಒಂದು ಪ್ರತಿಷ್ಠಿತ ಕಂಪನಿಯ ಎಗ್ಝಿಕ್ಯುಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಅದೇ ಕಂಪನಿಯಲ್ಲಿದ್ದ ಪ್ರಸನ್ನನೊಟ್ಟಿಗೆ ಆಕೆಗೆ ವಿವಾಹವೂ ಆಯಿತು. ಮುಂದೆ ಮಗು ಹುಟ್ಟಿದಾಗ ಆಕೆಯ ಪ್ರಾಮುಖ್ಯತೆಗಳು ಬದಲಾದವು. ಕೇವಲ ಆಫೀಸ್, ವರ್ಕ್ ಎನ್ನುತ್ತಿದ್ದವಳು ಮಗು, ಮನೆ ಎಂಬ ತುಡಿತ ಹೆಚ್ಚಾಯಿತು. ಎಷ್ಟೆಂದರೂ ಗಂಡಸು ಹೊರದುಡಿಯಲೇಬೇಕು ಎನ್ನುವ ಸಾಮಾಜಿಕ ಒಪ್ಪಂದದಂತೆ ಈಕೆಯೇ ಮನೆಯನ್ನು ಸಂಭಾಳಿಸಿ ನೌಕರಿಯನ್ನೂ ಸಂಭಾಳಿಸಬೇಕಾಯಿತು. ಕೆಲವು ದಿನಗಳು ಹೀಗೇ ಸಾಗಿದವು. ಎರಡೂ ದಂಡೆಗೆ ಕಾಲಿಡುವುದು ಈಕೆಗೆ ಅಸಾಧ್ಯವಾಗತೊಡಗಿತು. ಹೀಗಾಗಿ ಅವಳು ಮುಖ್ಯವಾದದ್ದನ್ನೇ ಆರಿಸಿಕೊಳ್ಳಬೇಕಾಯಿತು. ಈಗ ಆಕೆಗೆ ಮಗು, ಅದರ ಆರೋಗ್ಯ, ಫ್ಯಾಮಿಲಿ ಲೈಫ್, ಮನೆ ಮುಂತಾದವುಗಳು ಮುಖ್ಯವಾಗಿ ಕಾಣಿಸತೊಡಗಿದಾಗ ನೌಕರಿಗೆ ತಿಲಾಂಜಲಿಯಿತ್ತಳು. ಅಕ್ಯಾಡಮಿಕ್ಕಾಗಿ ಸಾಕಷ್ಟು ಟ್ಯಾಲೆಂಟ್ ಆಕೆಯಲ್ಲಿ ಇದ್ದರೂ ಕೂಡ ಮನೆಯ ನಾಲ್ಕು ಗೋಡೆಗಳ ಮಧ್ಯ ಹೆಣಗತೊಡಗಿದಳು. ಈಗ ಮನೆಗೆ ದುಡ್ಡು ಗಳಿಸಿತಂದು ಹಾಕುವವ ಪ್ರಸನ್ನ ಮಾತ್ರನಾದಾಗ ಆತನಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಬಂದಿತು.
ಈಗ ನಲಿನಿ ದಿನದ ೨೪ ಗಂಟೆಯೂ ಮನೆಗಾಗಿ ದುಡಿದರೂ ಅದು ಗಳಿಸಿ ತರುವ ದುಡ್ಡಿಗೆ ಸಮನಾಗುತ್ತಿರಲಿಲ್ಲ. ಹೊರಗೆ ಹೋಗಿ ದುಡಿದು ಹಣ ಗಳಿಸಿ ತರುವಾಗ ಇರುವ ಕಿಮ್ಮತ್ತು ಈಗಿಲ್ಲ. ಅದೇ ರೀತಿ ಗಂಡ-ಹೆಂಡತಿಯ ನಡುವಿನ ಸಂಬಂಧವೂ ಕೂಡ ತಕ್ಕಡಿಯು ಒಂದು ಮೇಲೆ ಎಂಬಂತಾಗಿತ್ತು. ಆಕೆಯ ಓಪಿನಿಯನ್ ಗೆ ಮೊದಲಿನಷ್ಟು ಕಿಮ್ಮತ್ತು ಈಗಿಲ್ಲ. ಯಾಕೆ ಹೀಗೆ?
ಮನೆಯ ಆಗುಹೋಗುಗಳು, ಮಕ್ಕಳ ಊಟ ತಿಂಡಿ, ವಿದ್ಯಾಭ್ಯಾಸ, ಗಂಡನ ಆರೈಕೆ, ಅತಿಥಿ ಅಭ್ಯಾಗತರ ಮಾನ ಇತ್ಯಾದಿಗಳು ಹೊರಗೆ ದುಡಿದು ತರುವ ಸಂಬಳಕ್ಕಿಂತ ಗೌಣವೇ?
ಒಂದು ವೇಳೆ ಆಕೆಯು ಸಂಸಾರಕ್ಕಾಗಿ ಮಾಡುವ ದುಡಿತವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲವಾದರೂ ಆಕೆಯ ಸ್ವಲ್ಪಮಟ್ಟಿನ ಆರ್ಥಿಕ ಸ್ವಾತಂತ್ರ್ಯವನ್ನು ಅಲ್ಲಗಳೆಯುವುದು ಸರಿಯೇ? ಆಕೆಯ ಮನೆಗೆಲಸವನ್ನು ಗೌಣವಾಗಿಸುವುದು ಸರಿಯೇ? ಹೊರಗೆ ದುಡಿಯುವ ಮಹಿಳೆಯಂದು ಅವಳನ್ನು ಅನಾದರದಿಂದ ನೋಡುವುದು ಎಷ್ಟರಮಟ್ಟಿಗೆ ಸರಿ?
ಮುಖ್ಯವಾಗಿ ಮಹಿಳೆಯರು ಮನೆಯಲ್ಲಿದ್ದು ಏನೂ ಮಾಡುವುದಿಲ್ಲ ಎನ್ನುವ ಭಾವನೆಗಿಂತಲೂ ಮನೆಯಲ್ಲಿದ್ದರೆ ಅವರಿಗೆ ಕಿಮ್ಮತ್ತೇ ಇಲ್ಲ ಎಂಬ ಭಾವನೆ ಉಂಟು ಮಾಡುವುದಿದೆಯಲ್ಲ ಅದು ಬಹಳ ಅಪಾಯಕಾರಿ, ಅವರಿಗೆ “ನೀನು ಮನೆಯಲ್ಲಿ ಇಡೀ ದಿನ ಇದ್ದು ಏನು ಮಾಡುತ್ತೀ? ಸುಮ್ಮನೆ ಟಿ.ವಿ. ನೋಡುತ್ತಲೋ ಮಲಗಿಕೊಂಡೋ ವೇಳೆ ಕಳೇಯುತ್ತೀ” ಎಂದು ಮೂದಲಿಸಿ ಮತ್ತಿಷ್ಟು ಆಕೆಯಲ್ಲಿ ಕೀಳರಿಮೆ ಉಂಟು ಮಾಡುವುದು ಈ ಪುರುಷ ಪ್ರಧಾನ ಸಮಾಜದಲ್ಲಿ ಸರ್ವೇಸಾಮಾನ್ಯ.
ಮನೆ ನಡೆಸುವುದು ಒಂದು thankless job ಇದ್ದಂತೆಯೇ. ಇಲ್ಲಿ ರಜೆ ಇಲ್ಲ, ದುಡ್ಡಿಲ್ಲ, ವಿಶ್ರಾಂತಿ ಇಲ್ಲ, ಮತ್ತು ಕಿಮ್ಮತ್ತಿಲ್ಲ. ಕೆಲವು ಸ್ತ್ರೀಯರು ತಮ್ಮ ಪರಿಚಯವನ್ನು ಕೇವಲ ‘ಗೃಹಿಣಿ’ ಅಥವಾ ‘ತಾಯಿ’ ಎಂದೋ ಪರಿಚಯಿಸಿ ಮುಜುಗರ ಪಡುತ್ತಿರುತ್ತಾರೆ. ಆ ‘ಗೃಹಿಣಿ’ ಅಥವಾ ‘ತಾಯಿ’ ಶಬ್ದದ ಹಿಂದೆ ಎಂಥ ತ್ಯಾಗ ಅಡಗಿದೆ ಎನ್ನುವುದು ವರ್ಣಿಸಲು ಅಸಾಧ್ಯ. ಇಂಥ ತ್ಯಾಗಕ್ಕೆ ಬೆಲೆ ಇಲ್ಲ. ಆದ್ದರಿಂದ ಇಂಥ ತ್ಯಾಗಕ್ಕೆ ಈಗ ಬೆಲೆ ಕಟ್ಟಬೇಕಾದದ್ದು ಅವಶ್ಯಕವಾಗಿದೆ. ಯಾಕೆಂದರೆ ಹಣ ಗಳಿಸುವುದರಿಂದ ಮಹಿಳೆಯರ ನಡೆನುಡಿಯಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿರುತ್ತದೆ. ಅಲ್ಲದೇ ಆಕೆಯ ಪತಿ, ಅತ್ತೆ, ಮಾವ, ತಂದೆ, ತಾಯಿ, ಮಕ್ಕಳು, ಸಂಬಂಧಿಕರು ಅವಳೊಂದಿಗೆ ವ್ಯವಹರಿಸುವಾಗ ಇನ್ನೂ ಹೆಚ್ಚಿನ ಆದರದಿಂದ ಕಾಣುತ್ತಾರೆ. ಇಂದಿನ ದಿನದಲ್ಲಿ ಕೇವಲ ಗೃಹಕೃತ್ಯ ನೋಡಿಕೊಳ್ಳುವ ಗೃಹಿಣಿಯಾಗಿ ಉಳಿದಿಲ್ಲ ಆಕೆ. ಇಂದು ‘ಹೋಮಮೇಕರ’ ಎಂದೆನಿಸಿಕೊಳ್ಳುತ್ತಿದ್ದಾಳೆ.
ಸೌಮ್ಯಾ ಎನ್ನುವ ತಾಯಿ, ಗೃಹಿಣಿ, ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದವಳು ಹಾಗೂ ಪಾರ್ಟ್ ಟೈಂ ಆಗಿದ್ದವಳು ಫುಲ್ ಟೈಂ ಕೆಲಸ ಮಾಡುವ ಮಹಿಳೆಯರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾಳೆ. ಆದರೂ ಆಕೆಯ ಮನಸ್ಸಿನ ಮೂಲೆಯಲ್ಲಿ ಕೇವಲ ಗೃಹಿಣಿ ಎಂದು ಕುಟುಕುತಿರುತ್ತದೆ. “ತಾನು ಮಕ್ಕಳಿಗೆ ಹಾಗೂ ಮನೆಯ ಸದಸ್ಯರಿಗೆ ಕೊಡುತ್ತಿರುವ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ಆದರೆ ನಮ್ಮನ್ನು ಆದರ ಸನ್ಮಾನದಿಂದ ನೋಡಿಕೊಳ್ಳಬೇಕು” ಎಂದೆನ್ನುತ್ತಾಳೆ.
ಇಂದು ಹೆಚ್ಚಿನ ಮಹಿಳೆಯರು ಕರಿಯರ್ ಓರಿಯಂಟೆಡ್ ಆಗಿ ಪರಿಣಮಿಸುತ್ತಿದ್ದಾರೆ. ಯಾಕೆಂದರೆ ಅವರನ್ನು ಸಮಾಜದಲ್ಲಿ ಪುರುಷರ ಸಮಾನವಾಗಿ ಗುರ್ತಿಸಬೇಕೆಂದು ಆಶಿಸುತ್ತಾರೆ. ಅದಕ್ಕಾಗಿ ‘ಗೃಹಿಣಿ’ ಅಥವಾ ‘ತಾಯಿ’ ಎಂದು ನಾವು ಯಾರನ್ನು ಗುರ್ತಿಸುತ್ತಿದ್ದೆವೆಯೋ ಅವರ ಸೇವೆಗಾಗಿ ಅಥವಾ ಅವರ ಕೆಲಸಕ್ಕಾಗಿ ಸಂಬಳದ ರೂಪದಲ್ಲಿ ಗಂಡನಾದವನು ಕೊಡಬೇಕು ಎಂಬ ಕಾನೂನು ಮಾಡಿದರೆ ಒಳಿತು. ಅಂದರೆ ಆಕೆಗೆ ಆರ್ಥಿಕ ಭದ್ರತೆಯ ಜೊತೆಗೆ ತುಂಬು ವಿಶ್ವಾಸದಿಂದ ಸಮಾಜದಲ್ಲಿ ತನ್ನನ್ನು ಪರಿಚಯಿಸಿಕೊಳ್ಳುತ್ತಾಳೆ.
ಈ ಪುರುಷಪ್ರಧಾನ ಸಮಾಜದಲ್ಲಿ ಹೆಂಗಸರಿಗೆ ಮನೆ ನೋಡಿಕೊಳ್ಳುವುದಕ್ಕಾಗಿ ದುಡ್ಡು ಕೊಡುವುದು ದೂರದ ಮಾತು. ಆಕೆಯ ತ್ಯಾಗಕ್ಕಾಗಿ ಭಾವನಾತ್ಮಕವಾಗಿಯೂ ಭದ್ರತೆ ಇರುವುದಿಲ್ಲ. ಇದು ಅಕ್ಷಮ್ಯ ಅದಕ್ಕಾಗಿ ಅವರು ಕಾಯದೇಶೀರ ತಮ್ಮ ಹಕ್ಕನ್ನು ಪಡೆಯಲು ದುಡ್ಡು ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಮಹಿಳೆಯರಿಗೆ ಆದರ ಸನ್ಮಾನ ಸಿಕ್ಕಿದ್ದೇ ಆದಲ್ಲಿ ಅವರು ದುಡ್ಡು ಕೂಡ ಕೇಳುವುದಿಲ್ಲ.
ಮಹಿಳೆಯರಿಗಾಗಿ ಅವರು ಮನೆನಡೆಸುವುದಕ್ಕಾಗಿ ದುಡ್ಡು ಕೊಡುವುದು ಉಚಿತವಾದುದು. ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಇದು ನಿಜ. ಆದರೆ ಅವರನ್ನು ಕಾನೂನಿನಡಿಯ “ಉತ್ಪಾದಕತ್ವ ಮಹಿಳೆ” ಎಂದು ಒಂದು ವೇಳೆ ಗುರ್ತಿಸಿದರೆ ಆಕೆಯ ಪತಿ ‘ಮನೆಯಲ್ಲಿ ಕುಳಿತ ಹೆಂಗಸರಿಗೇನು ತಿಳಿಯುತ್ತದೆ. ಗಂಡನ ಕೆಲಸದ ಬಗ್ಗೆ. ಗಂಡ ಮನೆ ನಡೆಸಲು ಎಷ್ಟು ಕಷ್ಟಪಡುತ್ತಾನೆ’ ಎಂದು ಮಾತನಾಡುವುದನ್ನು ಮೊದಲು ನಿಲ್ಲಿಸುತ್ತಾನೆ. ಅಲ್ಲದೇ ಆತ ಹೆಂಡತಿಗೆ ದುಡ್ಡು ಕೊಡುವಾಗ ಕೂಡ ಅವಳನ್ನು ಚಿಕ್ಕವಳನ್ನಾಗಿಸದೆ ಕೊಡುವಂತಾಗಬೇಕು.
ಎಲ್ಲ ಮಹಿಳೆಯರಿಗಾಗಲಿ, ತಾಯಂದಿರಾಗಲಿ ತಾವು ಹೊರಗೆ ಹೋಗಿ ದುಡಿದು ತಂದ ದುಡ್ಡಿಗಿಂತ ಮನೆಯನ್ನು ಸಂಭಾಳಿಸುವುದರಿಂದ ಸಿಗುವ ಆನಂದ ಹೆಚ್ಚಿನದು. ಆದರೆ ಈಗ ಅವಳನ್ನು ಕೇವಲ ಮನೆಯಾಕೆ ಆಗಿ ನೋಡದೆ ಅವಳನ್ನು CEO OF THE HOME ಎಂದು ನೋಡಬೇಕಾಗಿರುವುದು ಅವಶ್ಯಕವಾಗಿದೆ.

 

Leave a Reply