ಚಹಾ ಆತೇನ್ರೀ?

ಚಹಾ ಆತೇನ್ರೀ?
ನಮ್ಮ ಉತ್ತರ ಕರ್ನಾಟಕದ ಮಂದಿಗೆ ಮುಂಜಾನೆ ಎದ್ದಕೂಡಲೆ ಚಹಾ ಬೇಕಾಗತದ. ನಾವು ಸಾಮಾನ್ಯವಾಗಿ ಚಹಾ ಎನ್ನದೆ ಗಾಂವಠೀ ಭಾಷಾದಾಗ ಛಾ ಅಂತೇವಿ. ನಾವು ಸಣ್ಣವರಿದ್ದಾಗ   “ಹಲ್ಲು, ಮಾರಿ ಮುಗಿಸ್ಕೊಂಡ ಬಾ. ಬಿಸಿ ಬಿಸಿ ಛಾ ಕುಡೀವಂತಿ” ಎಂದು ಅವ್ವ ಕರೆದಾಗಲೇ ನಾವು ಮುಸುಕು  ತೆಗೆಯುತ್ತಿದ್ದವು. ಅವ್ವನು ತನ್ನ ಕೈಯಾರೆ ಇದ್ದಿಲೊಲೆಯ ಮೇಲೆ ಹಿತ್ತಾಳೆಯ ಪಾತ್ರೆಯಲ್ಲಿ  ಮಾಡಿದ ಖಮ್ಮನೆಯ ಚಹಾ ಕುಡಿದೇ ಮುಂದಿನ ಕೆಲಸ!
ಅಯ್ಯ, ಅದೇನ ಅವ್ವನ ಕೈಲೆ ಮಾಡಿದ ಛಾ ಬ್ಯಾರೆ ಥರಾ ಇರತದೇನು? ಅದೇ ಛಾಪುಡಿ, ಅದೇ ಸಕ್ಕರಿ, ಅದೇ ಹಾಲು ಅಂತ ನೀವು ತಿಳಕೊಂಡಿದ್ರ ಅದು ತಪ್ಪು. ಮೊದಲನೆಯದಾಗಿ ಅವ್ವನ ಕೈಯಿಂದ ಅಂದರ served with love! ಇನ್ನ ಇದ್ದಿಲೊಲೀ ಮ್ಯಾಲ ಕುದ್ದು ಕುದ್ದು ಆ ಚಹಾದ ಕಷಾಯಕ್ಕ ಬಂದಿರೋ ಘಮಾದ ಕದರೇ ಬ್ಯಾರೇ! ಹಾಲಂತೂ ಅಗದೀ ಕಳ್ಳೀಕುಡೀರಿ! ಅಂದಮ್ಯಾಲ ಛಾ ಹೆಂಗ ಆಗತಿರಬೇಕು ಲೆಕ್ಕಾ ಹಾಕರಿ. ಏನರೆ ಸ್ಪೇಶಲ್ ಆದರ ಛಾ ಪಾರ್ಟಿ ಬೇಕೂಂತನ್ನೋದು ನಾವು ಕೇಳತಿರತೇವಿ. ಮನೀಗೆ ಯಾರರೆ ಅತಿಥಿಗಳು ಬಂದ್ರ ಮೊದಲ ಅವರಿಗೆ ನಾವು ಪ್ರೀತಿಂದ ಕುಡಸೋದೂ ಛಾನ! ಎಬ್ಬಿಸಿ ಕಳಸಲಿಕ್ಕೆ ಕುಡಸೋದೂ ಛಾನರಿ!ಚಹವೆ ನಿನ್ನಯ ಮಹಿಮೆಯನದೇನ ಪೇಳಲಿ ನಾಂ!
ನಮ್ಮ ಕಡೆ ಅಗದೀ ಪ್ರಸಿದ್ಧ ಇರೋದು ಆಸಾಮಿ ಟೀ! ಚುನಿಂದಾ ಬಾಗಾನೋಂ ಸೇ ಅಂತ ಜಾಹೀರಾತು ಸೈತ ಕೇಳಿರಬೇಕು ನೀವು!  ಚೀನಾದವರು ಎಲ್ಲಾದರಾಗೂ ತಮ್ಮ ಚೋಟು ಮೂಗು ಹಾಕೂವಂಗ ಇದರಾಗೂ ತಮ್ಮದ ಶ್ರೇಷ್ಠ ಅನ್ನೂವಂಗ ಈ ಚಹಾ ಕಂಡಹಿಡದವ್ರು ತಾವೇ ಅಂತ ಪೋಜು ಕೊಡತಾರ! ಚೀನಾದವರ ದಂತಕಥೀಯ ಪ್ರಕಾರ ಷೆನ್ನಾಂಗ್ ಎಂಬೋ ಚಕ್ರವರ್ತಿ 2737 ಬಿಸಿ ಒಳಗ ದಿನಾ ಮುಂಜಾನೆದ್ದು ಒಂದು ಪಾತ್ರಿಯೊಳಗ ಬಿಸಿ ನೀರು ಕುದಿಸಿ ಕುಡೀತಿದ್ದನಂತ. ಒಂದು ದಿನ ಆ ನೀರು ಕುದಿಯೋವಾಗ ಗಾಳಿಯೊಳಗ ಯಾವುದೋ ಗಿಡದ ಎಲಿ ಬಂದಬಿದ್ದೂವಂತ. ಆ ನೀರ ಕುಡದ ರಾಜಾ ಫಿದಾ ಆಗಿಬಿಟ್ಟನಂತ!  ಅದೇನು ಘಮಾ ಅದೇನು ಶಕ್ತೀ…
ಇನ್ನೂ ಒಂದ ದಂತ ಕಥೀ ಅದರೀ… ತಾಂಗ್ ರಾಜವಂಶದ ರಾಜಾ ಚಾನ್ ಬೌದ್ಧ ಧರ್ಮದ ಸಂಸ್ಥಾಪಕ ಬೋಧಿವರ್ಮ, ಗೋಡೆಯ ಮುಂದ ಕೂತು ಒಂಬತ್ತು ವರ್ಷಗಳ ವರೆಗೆ ಧ್ಯಾನ ಮಾಡಿರತಾನ. ಅಂವಾ ಅಕಸ್ಮಾತ್ತಾಗಿ ನಿದ್ರೆಗೆ ಜಾರುತ್ತಾನೆ. ತನ್ನ ದೌರ್ಬಲ್ಯದ ಕುರಿತು ಆತನಿಗೇ ಜುಗುಪ್ಸೆ ಬಂದು, ತನ್ನ ಕಣ್ಣರೆಪ್ಪೆಗಳನ್ನು ಕತ್ತರಿಸಿಕೊಳ್ಳುತ್ತಾನೆ. ನೆಲದ ಮೇಲೆ ಬೀಳುವ ಈ ರೆಪ್ಪೆಗಳು, ಬೇರನ್ನು ಬೆಳೆಸಿಕೊಂಡು, ಚಹಾದ ಪೊದೆಗಳಾಗಿ ಬೆಳೆಯುತ್ತವೆ. ಅಂತನೂ ಹೇಳತಾರ!ಕೆಲವೊಮ್ಮೆ, ಬೋಧಿವರ್ಮ ನ ಬದಲಾಗಿ ಗೌತಮಬುದ್ಧ ಅಂತೂ ಹೇಳತಾರ.
ಈ ದಂತಕಥೆಗಳು ವಾಸ್ತವವಾಗಿ ಯಾವುದಾದರೂ ಆಧಾರ ಹೊಂದಿರಲೀ, ಬಿಡಲಿ, ಆದರೆ ಶತಮಾನಗಳ ತನಕಾ ನಮ್ಮ ಏಷ್ಯಾದ ಸಂಸ್ಕೃತಿಯೊಳಗ ಚಹಾ ಒಂದು ಮುಖ್ಯ ಪಾನೀಯವಾಗಿ, ಒಂದು ರೋಗ ಪರಿಹಾರಕವಾಗಿ, ಅಷ್ಟೇ ಅಲ್ಲ, ಹಿರಿಮೆಯ ಕುರುಹೂ ಆಗಿ ಒಂದು ಗಮನಾರ್ಹವಾದ ಪಾತ್ರವನ್ನು ವಹಿಸಿದೆ.
ಈಗಂತೂ ಜನರ ಟೇಸ್ಟ್ ನ ಬದಲಾಕ್ಕೋತ ಹೊಂಟದರಿ. ಆಧುನಿಕತೆಯ ಹೆಸರಿನ್ಯಾಗ ಎಲ್ಲಾದಕ್ಕೂ ಹರ್ಬಲ್ ಹರ್ಬಲ್ ಅಂತ ಮಂದಿ ಮುಗಿಬೀಳತಾರ. ಅದರಾಗೂ ನಮ್ಮ ಯುವ ಪೀಳಿಗೀ ಅಂತೂ  ಆರೋಗ್ಯದ ಕಡೆ ಭಾಳ ಕಾಳಜೀ ಮಾಡಕೋತ ಆಯುರ್ವೇದ, ಆರ್ಗ್ಯಾನಿಕ್ಕೂ ಅಂತೆಲ್ಲಾ ವಾಲಲಿಕ್ಕತ್ತೇದ.  ಗ್ರೀನ್ ಟೀ, ಜಿಂಜರ್ ಟೀ, ಬ್ಲ್ಯಾಕ್ ಟೀ, ಲೆಮನ್ ಟೀ, ಪುದೀನಾ ಟೀ, ಇದರ ಜೋಡಿಗೆ ಈಗ ಕ್ಯಾಮೋಮೈಲ್ ಟೀ! ಕ್ಯಾಮೊಮೈಲ್ ಅಂದ್ರ ಹರ್ಬಲ್ ಮೆಡಿಸಿನ್​ಗಳಲ್ಲಿ ಬಳಸಲಾಗುವ ಒಂದು ಹೂವು. ಇದರಿಂದ ಆರೋಗ್ಯಕ್ಕ ಭಾಳಷ್ಟು ಉಪಯೋಗನೂ ಅವ. ಕ್ಯಾಮೊಮೈಲ್ ಹೂವುಗಳ ಎಸಳುಗಳಿಂದ ಮಾಡಲಾಗುವ ಟೀ ಪುಡಿಗೆ ಈಗ ಭಾಳಷ್ಟು ಬೇಡಿಕೀನೂ ಅದ. ಇದನ್ನ ಕುಡಿಯೋದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳೂ ದೂರ  ಆಗತಾವಂತ.
ಕ್ಯಾಮೊಮೈಲ್ ಟೀ ಬ್ಯಾಗ್​ಗಳು ಈಗ ಎಲ್ಲಾ ಕಡೇನೂ ಸಿಗತಾವ. ಇದನ್ನು ಗ್ರೀನ್ ಟೀ ಹಂಗ ಬಳಸಬಹುದು. ಈ ಚಹಾ ಗಾಯವನ್ನು ಮಾಯಿಸಲಿಕ್ಕೆ, ಸಂಧಿವಾತ, ಸುಟ್ಟ ಗಾಯಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣ ಪಡಿಸತದಂತ. ಕ್ಯಾಮೊಮೈಲ್ ಟೀ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ ಅಂತ ಹೇಳತಾರ.  ದೇಹದೊಳಗಿನ ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣಗಳನ್ನು ಉತ್ತಮ ಮಟ್ಟದಲ್ಲಿರಿಸುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ಕ್ಯಾಮೊಮೈಲ್ ಕಡಿಮೆ ಮಾಡುತದಂತ. ಕ್ಯಾಮೊಮೈಲ್ ಟೀಯೊಳಗಿರೋ ಎಪಿಜೆನಿನ್ ಎಂಬ ಅಂಶ ಸುಖವಾಗಿ ನಿದ್ರೆ ಮಾಡಲು ಸಹಾಯ ಮಾಡತದ. ಅಷ್ಟೇ ಅಲ್ಲ, ಶೀತ, ಅಸ್ವಸ್ಥತೆ, ನಿತ್ರಾಣ, ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯನ್ನು ಕಡಿಮೆ ಮಾಡತದಂತನೂ ಹೇಳತಾರ. ನೆಗಡಿಯಾದಾಗ ಒಂದು ಕಪ್ ಕ್ಯಾಮೊಮೈಲ್ ಟೀ ಕುಡದರ ಆರಾಮ ಅನಸತದ. ದಿನನಿತ್ಯವೂ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯೋದ್ರಿಂದ ಜೀರ್ಣಶಕ್ತಿನೂ ಛೊಲೋ ಆಗತದಂತ್ರೀ.

Leave a Reply