ಚಲುವು..

ಚಲುವು…
” ಇನ್ನೆಷ್ಟು ದಿನ ವಿದ್ದೀತು ನನ್ನ ಚಲುವು?..
ನನ್ನವಳು ಕೇಳಿದಳು ಇವತ್ತು..
” ನಿನಗೆಷ್ಟು ವರ್ಷ ಬೇಕು?..
ಮೂವತ್ತು? ಇಲ್ಲವೇ ಐವತ್ತು..?
ನಿನಗೆ ಎಂಬತ್ತಾಗಲಿ..ಆಗ ನೋಡು ನಿನ್ನ ಚಲುವಿನ ಗತ್ತು…
ನಿನ್ನಾಯ್ಕೆಯ,
ನಿನ್ನೊಲುಮೆಯ ಬದುಕು
ನಿನಗಿತ್ತ ಗಟ್ಟಿ ಮೈಮೆರಗು…
ಕಾಂತಿಯುತ ಪಕ್ವ ಸೊಬಗು…
ಮಾಗಿಯ ಮೆರಗಿಗೆ
ಬೆಳ್ಳಿ ಕೂದಲು…
ದಶಕಗಳ ಕಲಿಕೆ,
ಕೊಡುಕೊಳ್ಳುವಿಕೆ
ನಿನ್ನ ಕಣ್ಣಂಚಿನಲ್ಲಿ
ಮೂಡಿಸಿದ ಮಿಂಚು
ಮಂದಹಾಸ…
ಎಂದಾದರೊಮ್ಮೆ
ನಿನ್ನ ನೋಡಲು ಬರುವ ಮಕ್ಕಳು ಕಂಡಾರು ತಮ್ಮ ಇತಿಹಾಸ….
ನಿನಗೀಗ ಕಿಂಚಿತ್ತು ಭಯವಿಲ್ಲ….ನಿನಗೆ ಗೊತ್ತು…ಎಂಥ ಆಳಕ್ಕೆ
ಬಿದ್ದರೂ ಮೇಲೆದ್ದು
ಬರುವ ಗತ್ತು…
ಇಡಿಯಾಗಿ ನುಂಗುವ
ಏಕಾಂತದಲ್ಲೊಂದು
ಬಿಸಿ ಚಹಾದ ಕಪ್ಪು,
ಸದ್ದಿಲ್ಲದೇ ಹೃದಯದಲ್ಲೊಂದು
ಹಾಡು ಹುಟ್ಟಿಸಬಹುದು…
ನಿನ್ನ ಬೆಚ್ಚನ್ನ ಹೊದಿಕೆಯಡಿಯಲ್ಲಿ
ಪುಟ್ಟ ಹಕ್ಕಿಯೊಂದು
ಪ್ರೀತಿಗೆ ಚಡಪಡಿಸಬಹುದು….
ನಿನಗೆ ನೆನಪುಂಟೇ??
ಅಲ್ಲಿಯೇ,
ಅದೇ ಬೆಚ್ಚನ್ನ
ಗೂಡಿನಲ್ಲಿಯೇ ನಿನ್ನ
ಪ್ರೇಮದ ಹಕ್ಕಿ ಗುಟುಕು
ಪಡೆದದ್ದು…ಅದನ್ನು
ನಿನ್ನೆದೆಗೆ ತಬ್ಬಿಕೊಂಡಾಗಲೇ
ನಿನ್ನ ಧೀರ ,ಉದಾತ್ತ ಬದುಕೊಂದು ನೆಲೆಕಂಡದ್ದು..
ಇಲ್ಲಿ ಕೇಳು…ನಿನ್ನ ಚಲುವು..ಚರ್ಮದಾಳದ್ದಲ್ಲ( skin deep)ಅದರೊಳಗಿನ,
ಹೃದಯಾಂತರಾಳದ್ದು…..
( English ಮೂಲ__Jeannette Encinias)
Leave a Reply