ಸಿನಿಮಾ ನೋಡಿದರ ಇಂಥಾದ ನೋಡಬೇಕು…

ಸಣ್ಣವ್ರಿದ್ದಾಗನ ಮಜಾ ಇತ್ತಂತ ಭಾಳ ಸರ್ತೆ ನನಗನಸ್ತದ. ಅದಕ್ಕ ಕಾರಣಾ ನಮ್ಮ ಮುಗ್ಧ ಮನಸೋ ಅಥವಾ ಆಗಿನ ಆಧುನಿಕತೆಯ ಸೋಂಕಿಲ್ಲದ ಸಮಾಜಾನೋ ಗೊತ್ತಿಲ್ಲಾ. ಹಂಗಂತ ಸಮಾಜದ ಮ್ಯಾಲೆ ಎಲ್ಲಾ ತಪ್ಪು ಹೊರಸಲಿಕ್ಕೆ ಬರಂಗಿಲ್ಲಾ. ಯಾಕಂದ್ರ ಬದಲಾವಣೀನ ಸಮಾಜದ ನಿಯಮ..

ಜಗತ್ತಿನ ನಿಯಮಾನೂ ಹೌದು. ಆ ಬದಲಾವಣೀಗೆ ತಕ್ಕಂಗನ ನಾವೂ ಬದಲಾಗತೇವಿ. ನಮ್ಮ ಆಭ್ಯಾಸಾನೂ ಬದಲಾಯಿಸಿಗೋತೇವೀ… ನಾವು ಸಣ್ಣವ್ರಿದ್ದಾಗ ನಮಗ ಸಿನಿಮಾ ಅನ್ನೋ ಮಾಂತ್ರಿಕ ಜಗತ್ತು ಅಗದೀ ಆಶ್ಚರ್ಯ ತರೂವಂಥಾದಾಗಿತ್ತು. ಪರದೆ ಹಿಂದ ಇವರೆಲ್ಲಾ ಕೂತಿರತಾರೇನೋ ಅಂತನೂ ತಿಳಕೊಂಡಿದ್ವಿ. ಆದರ ಅವ್ವಾ ಫಿಲಮ್ಮು ರೋಲಿರತದ. ಅದನ ಹಿಂದಿನ ಪ್ರಾಜೆಕ್ಟರದಾಗ ಬಿಡತಾರಂತ ಹೇಳಿದ್ಲು. ನಮ್ಮ ಗುರುತಿನವರ ಒಬ್ರು ಸಿನಿಮಾ ಬಿಡೋ (!!!) ಕೆಲಸಾ ಮಾಡತಿದ್ರು. ಅವರೂ ಒಮ್ಮೆ ಅದನೆಲ್ಲಾ ತೋರಿಸಿದ್ರು! ನಮಗೆ ಆಗೆಲ್ಲಾ ರಾಜಕುಮಾರ್ ಅವರನ ಆದರ್ಶ ನಾಯಕ. ಅವರು ಒಂದು ಯಾವದೋ ಸಿನಿಮಾದಾಗ ಖಳನಾಯಕ ಆಗಿದ್ರು, ಅದನ ನಾ ನೋಡಲಿಕ್ಕೆ ಒಲ್ಲೆ ಅಂತ ಹೇಳಿದ್ದೆ! ದೊಡ್ಡಾಕಿ ಆದಮೇಲೆ ಸೈತ  “ಶ್ರೀ ಕೃಷ್ಣ ದೇವರಾಯ” ನೋಡಿ ಅತ್ತಬಿಟ್ಟೆ. ಅದು ಇತಿಹಾಸ… ಬದಲಾಯ್ಸಲಿಕ್ಕೆ ಬರಂಗಿಲ್ಲನ್ನೋದೂ ಗೊತ್ತಿದ್ರೂ… ! ಇನ್ನೂ ಒಂದು ವಿಚಿತ್ರ ಅನುಭವಾಂತಂದ್ರ ನಮಗ ಒಂದು ಯಾವುದೋ ಸಿನಿಮಾಕ್ಕ ಟಿಕೆಟ್ ಸಿಕ್ಕಿದ್ದಿಲ್ಲಾ, ಆವಾಗ ಪ್ರಾಜೆಕ್ಟರ ರೂಮಿನ್ಯಾಗ ಕೂತು ನಾನು, ನನ್ನ ಗೆಳತಿ ಇಬ್ರೂ ಸಿನಿಮಾ ನೋಡಿದ್ವಿ! ಅಂಥಾ ಹುಚ್ಚು ಬರಬರತ ಕಡಿಮಿ ಆಗಿ ಇತ್ತೀಚೆಗೆ ಹೊರಗ ಟಾಕೀಸ್ ಗೆ ಹೋಗಿ ಸಿನಿಮಾ ನೋಡೋದನ ಮರಥಂಗಾಗಿತ್ತು!

ಈಗ ಈ ಮಾತು ಯಾಕಾಗಿ ಬಂತಂದ್ರ ನಾವು ನಿನ್ನೆ ಎಷ್ಟೋ ವರ್ಷಗಳ ನಂತರ ಸಿನಿಮಾ ನೋಡಲಿಕ್ಕೆ ಹೋಗಿದ್ವಿ. ಅದು ‘ಉರಿ’ ಹೆಸರಿನ ಸಿನಿಮಾ.

‘ಉರಿ’ ಹೆಸರಿಗೆ ತಕ್ಕಂಗನ ಎದ್ಯಾಗ ಉರಿ ಹಚ್ಚೂವಂಥಾ ಕಥೀ. ಕಥೀ ಅನ್ನೂಕಿಂತಾ ಅದು ಒಂದು ಅನುಭವಕಥನ ಅನ್ನೂದನ ಹೆಚಿಗೀ ಸೂಕ್ತ ಆಗತದ. ಸೈನಿಕರು ಎಂಥೆಂಥಾ ಕಠಿಣ ಪರಿಸ್ಥಿತಿ ಎದುರಿಸಬೇಕಾಗತದ, ಅವರು ತಮ್ಮ ಜೀವನದ ಕೋಟಲೆಗಳನ್ನು ಎದುರಿಸುತ್ತಲೇ ದೇಶಸೇವೆಗೆಂದು ಎದೆತಟ್ಟಿಕೊಂಡು ನಿಲ್ಲತಾರ ಅನ್ನೋದು ಇಲ್ಲೆ ಭಾಳ ಛಂದ ನಿರೂಪಣೆ ಮಾಡ್ಯಾರ. ಅವರು ಆ ಕತ್ತಲಿನ ರಾತ್ರಿಯೊಳಗ, ಭಾರ ಹೊತಗೊಂಡು ವಿಮಾನದಿಂದ, ಹೆಲಿಕ್ಯಾಪ್ಟರ್ದಾಗಿಂದ ಇಳಿಯೋದು… ಹಿಮಾಲಯದ ಕಡುಕಲಿನ ದಾರಿ.. ಕಾಲು ಜಾರಿದರ ಪ್ರಪಾತ.. ಅಂಥಾದರಾಗ ಓಟ.. ಓಟ.. ಬೆಳಕಿಗೆ ಅಂತ ಒಂದು ಸಣ್ಣ ಬ್ಯಾಟರಿ ಸೈತ ಇಲ್ಲಾ‌… ಬೆಳಕ ನೋಡಿ ವೈರಿಗಳು ಎಚ್ಚರಾದರ? ಹರಿಯೋ ಹಳ್ಳಾ… ಕಲ್ಲು-ಮಣ್ಣಿನ ದಾರಿ ಸವೆಸೋ ಅವರ ಹೃದಯದಾಗಿನ ಶೌರ್ಯ-ಉತ್ಸಾಹಕ್ಕ ಮಾತ್ರ ಯಾರೂ ಕಡಿವಾಣ ಹಾಕೋದು ಸಾಧ್ಯ ಇಲ್ಲಂತನ ಅನಸ್ತದ. ಕಥಾನಾಯಕನ ತಾಯಿ ಅಲ್ಝೈಮರ್ ಪೇಶಂಟು. ಅಕಿನ್ನ ನೋಡಿಕೊಳ್ಳೋ ಜವಾಬ್ದಾರಿ ಅದ ಅಂತ ದೆಹಲಿಗೆ ಟ್ರಾನ್ ಫರ್ ತೊಗೊಂಡಾವಾ, ಅಕ್ಕನ ಗಂಡ ಪಾಕಿಗಳ ನಾಪಾಕ್ ದಾಳಿಯಿಂದ ಅಚಾನಕ್ಕಾಗಿ ತಮ್ಮೆಲ್ಲಾರನೂ ತೊರದು ಹೋದಾಗ ತನ್ನ ಮನಸಿನ್ಯಾಗನ ನೋಯತಾನ. ಮುಂದ ಉರಿ ಸೆಕ್ಟರ್ ದಾಗ ದಾಳಿಗೆ ಭಾರತ ಸಿದ್ಧ ಆದಾಗ ಅವಾಅದರ ಮುಂದಾಳತ್ವ ವಹಿಸತಾನ. ಆಗ ಅವರು ಎದುರಿಸಿದಂಥಾ ಅಪಾಯದ ಪರಿಸ್ಥಿತಿ, ಅದನ್ನು ಅವರು ಯಾವ ರೀತೀಯೊಳಗ ಎದುರಿಸತಾರ ಅನ್ನೋದು ಭಾಳ ರೋಚಕ. ಇದು ಕಥೀಯಲ್ಲ, ಇದಕಿಂತಾ ದಾರುಣ ಪರಿಸ್ಥಿತಿ ಅವರು ಎದುರಿಸಬೇಕಾಗತದ ಅನ್ನೋದು ಪ್ರತಿಕ್ಷಣಾ ನಮಗ ನೆನಪಾಕ್ಕೋತನ ಇರತದ. ಕಣ್ಣಾಗ ನೀರು ಬರತಾವ, ಹೃದಯಾ ಬಾಯಿಗೆ ಬಂಧಂಗ ಆಗತದ. ಆದರ ಅವರೆಲ್ಲಾರೂ ಜೀವಂತ ಮರಳಿ ಬರತಾರ ಅನ್ನೋದು ಕಥೀಯಲ್ಲ, ಸತ್ಯ ಅನ್ನೋದು ಸೈತ ನೆನಪಾಗತದ. ಸೈನಿಕರ ಸಲುವಾಗಿ ಜೀವ ಮಿಡಿಯಿತು…

ಈ ಸಿನಿಮಾ ನನಗಂತೂ ಭಾಳ ಅಪರೂಪದ ಸಿನಿಮಾ ಅನ್ನಿಸ್ತು.

ಮಾಲತಿ ಮುದಕವಿ

Leave a Reply