ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್!! ಫೋನ್.. ಫೋನ್..

ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್!!
ಫೋನ್.. ಫೋನ್..

ಫೋನ್.. ಅದರಲ್ಲೂ ಮೊಬೈಲ್..
ಇತ್ತೀಚೆಗಿನ ತಂತ್ರಜ್ಞಾನಗಳಲ್ಲಿಯ  ಆವಿಷ್ಕಾರಗಳಿಂದಾಗಿ ಜೀವನ ಅಗದೀ ಆರಾಮದಾಯಕ ಆಗೇದ್ರಿ. ಅವು ಎಷ್ಟು ಅನುಕೂಲ ಸೃಷ್ಟಿಸ್ತಾವೋ ಅಷ್ಟs ಅನಾನುಕೂಲನೂ  ಇರತಾವ ಬಿಡ್ರಿ. ಆದ್ರ ನಮಗ ಅದು ತಿಳೀಬೇಕಾದ್ರ ದಿನಾ ಹಿಡೀತಾವ. ಅಂದ್ರ ಸಮಯ ಬೇಕಾಗುತ್ತದೆ ಅಂತ! ಇಂಥಾ ಸಂಶೋಧನೆಗಳೊಳಗ ಫೋನ್ ಸಹಾ ಒಂದು.. ಅದರ ಉಪಯೋಗದ ಖುಶಿ ಅಮಲು ಅಷ್ಟಕ್ಕs ಮುಗೀಲಿಲ್ಲಾ.. ಮುಂದುವರದು ಮೊಬೈಲ್.. ಅದರಾಗ ಫೋಟೋ ತಗಿಯೂದು.. ಮೆಸೇಜ್ ಮಾಡೋದು.. ಎಮ್ಎಮ್ಎಸ್.. ಮಾಡೋದು.. ಫೇಸ್‌ಬುಕ್‌.. ವಾಟ್ಸ್ ಅಪ್.. ಎಲ್ಲಾದರ ಖುಶೀ ಈಗ ಅನುಭವಿಸ್ಲಿಕ್ಕತ್ತೇವಿ. ಇಂದಿನ ಮಕ್ಕಳಿಗೆ ತಮ್ಮ ಶಾಲೆಯ ಸಿಲೆಬಸ್ ಏನಿದೆ ಎನ್ನುವುದು ತಿಳಿಯದಿದ್ದರೂ ಮೊಬೈಲಿನ ಅಂತರಂಗದ ಮರ್ಮವನ್ನು ಮಾತ್ರ ತಿಳಿಯದೇ ಬಿಡುವುದಿಲ್ಲ. ಎಲ್ಲ ಕೈಗಳಲ್ಲೂ ಬಣ್ಣ ಬಣ್ಣದ ಮೊಬೈಲ್‌ಗಳು. ಅದೇನಾದರೂ ಕಿವಿಗೆ ಬಂತೆಂದರೆ ಸಾಕು, ಅವರ ಪಾಲಿಗೆ ಬೇರೆ ಲೋಕವೇ ತೆರೆದುಕೊಳ್ಳುತ್ತದೆ.

ಹಿಂದೊಂದು ಕಾಲವಿತ್ತು ಕಲಿಯದ ವ್ಯಕ್ತಿ ಅನಕ್ಷರಸ್ಥ, ನಂತರದಲ್ಲಿ ಕಂಪ್ಯೂಟರ್ ಬಳಕೆ ಮಾಡದವ ಅನಕ್ಷರಸ್ಥನಾದ. ಆದರ ಇವತ್ತು ಮೊಬೈಲಿನ ಬಳಕೆಯನ್ನು ಅರಿಯದ ವ್ಯಕ್ತಿಯನ್ನ ಅನಕ್ಷರಸ್ಥ ಅಂತ ತಿಳಕೋತಾರ. ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂದು ಮೊಬೈಲ್ ಹಿಡಿಯದ ಮುಖಗಳೇ ಕಂಡು ಬರಲಿಕ್ಕಿಲ್ಲ. ಒಂದು ವೇಳೆ ಯಾರಾದರೂ ಹೊಂದಿರದೇ ಇದ್ದರೆ, ‘ಇದು 3ಜಿ ಯುಗಾನೋ ಇನ್ನು ಮೊಬೈಲ್ ಬಳಸೋದಿಲ್ವೆನೊ?’ ಎನ್ನುವ ಅಣುಕು ಮಾತುಗಳನ್ನ ಆ ಹುಡುಗೂರು  ಅನಿಸಿಬೇಕಾಗತದ. ದಿನಕ್ಕೊಂದು ಕೊಡುಗೆಗಳನ್ನ ಕೊಡೋ ಮೊಬೈಲ್ ಕಂಪನಿಗಳು, ಮಾರುಕಟ್ಟೆಯ ಹಾದಿ ಬೀದಿಗಳ ಜತೆಗೆ ಕಾಲೇಜು ಕ್ಯಾಂಪಸ್‌ಗಳಲ್ಲೂ ಅಂಗಡಿ ಹಾಕ್ಕೊಂಡು ಹುಡುಗೂರಿಗೆ ಆಶಾ ಹಚ್ಚತಾವ. ಅಧುನಿಕತಾದ  ಹುಚ್ಚಾಟದಾಗ ತೇಲಾಡೋ ಯುವ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆ ಮಾಡುವುದರಿಂದ  ಇವತ್ತ ಹುಡುಗೂರು ಅಭ್ಯಾಸ ದ ಕಡೆ ಸೈತ ಲಕ್ಷ್ಯ ಕೊಡಲಾರದಾಗ್ಯಾರ. ಕೆಲ ವರ್ಷಗಳ ಹಿಂದೆ ಉಳ್ಳವರ ಸೊತ್ತಾಗಿದ್ದ ಮೊಬೈಲ್ ಇಂದು ಚಿಣ್ಣರ ಆಟಿಕೆಯ ಸಾಮಾನಾಗಿ, ಯುವಕರೊಡಗೂಡಿ ವಯೋವೃದ್ಧರವರೆಗೆ ದಿನಬಳಕೆಯ ವಸ್ತುವಾಗಿದೆ. ಆದರೆ ಇದು ಯುವಕರ ಮೇಲೆ ಅತಿಯಾದ ಪರಿಣಾಮ ಬೀರತೊಡಗಿದೆ ಎಂದರೆ ಅಚ್ಚರಿಯಿಲ್ಲ. ಒಂದು ಮೊಬೈಲ್ ಬಳಸುವ ಕೆಲ ವಿದ್ಯಾರ್ಥಿಗಳ ಕೈಗಳು ಇಂದು ಎರಡೆರಡು ಮೊಬೈಲ್ ಬಳಸತೊಡಗಿವೆ. ಆರ್ಥಿಕ ಜವಾಬ್ದಾರಿತನವೇ ಇಲ್ಲದವರು ಹೆತ್ತವರಿಗೆ ಹೊರಿನೂ  ಆಗಲಿಕ್ಕತ್ತ್ಯಾರ.
ಕ್ಯಾಂಪಸ್‌ಗಳಲ್ಲಿ ಮೊಬೈಲ್ ಬಳಕೆ ನಿಷೇದಿಸುವ ಅನೇಕ ಪ್ರಯತ್ನಗಳು ನಡೆದರೂ ಪ್ರಯೋಜನವಾಗಿಲ್ಲ. ‘ಬೇಲಿಯೇ ಎದ್ದು ಹೊಲವ ಮೇಯ್ದ ಹಾಗೆ’ ಶಿಕ್ಷಕರೇ ಕ್ಯಾಂಪಸ್‌ಗಳಲ್ಲಿ ಬಳಸತೊಡಗಿದಾಗ ವಿದ್ಯಾರ್ಥಿಗಳು ಹೇಗೆ ಬಿಟ್ಟಾರು? ಫ್ರೀಯಾಗಿ ಬಂದದ್ದು ಮನಸ್ಸನ್ನು ಹಾಳುಗೆಡವುತ್ತೆ ಎಂಬಂತೆ ಉಚಿತವಾಗಿ ದೊರೆಯುವ ‘ಎಸ್ಸೆಮ್ಮೆಸ್’ಗಳು ಅತಿಯಾದ ಸಮಯವನ್ನು ಹಾಳು ಮಾಡತೊಡಗಿವೆ. ಶಿಕ್ಷಕ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಿಂದೆ ಕುಳಿತು ಚಾಟಿಂಗ್ ಮಾಡುತ್ತ ಪಾಠದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಮುಂದುವರೆದು ಅದರಲ್ಲಿನ ‘ಇಂಟರ್‌ನೆಟ್’ ಬಳಕೆಯಿಂದ ಪರೀಕ್ಷೆಯಲ್ಲಿ ನಕಲು ಮಾಡುವ ಹೊಸ ತಂತ್ರದ ಮೊರೆಹೋಗುತ್ತಿದ್ದಾರೆ. ಮನಸ್ಸಿನ ಮೇಲೆ ಅತಿಯಾದ ಪರಿಣಾಮ ಬೀರುವ ಇದು ವಿದ್ಯಾರ್ಥಿಯ ಉದ್ವೇಗವನ್ನು ಹೆಚ್ಚಿಸತೊಡಗಿದೆ. ದಿನಕ್ಕೊಂದು ಸಿಮ್ ಬದಲಿಸುತ್ತ ಅಪರಿಚಿತನಂತೆ ಸ್ನೇಹಿತರನ್ನು, ಅದರಾಗೂ ಹುಡಿಗೇರನ ಹುಡುಗೂರು ಸತಾಯಿಸುವ ಸಂದರ್ಭಗಳು ಕಂಡ ಬರಲಿಕ್ಕತ್ಯಾವ.  ಅಷ್ಟೇ ಅಲ್ಲಾ, ಮನರಂಜನೆಗೆಂದು ಬಳಕೆಯಾಗಬೇಕಿದ್ದ ಅದರಲ್ಲಿನ ಹಾಡುಗಳು ಅತಿಯಾದ ಶಬ್ದದೊಂದಿಗೆ ಎಲ್ಲೆಂದರಲ್ಲಿ ಬೇರೊಬ್ಬರಿಗೆ ಕಿರಿಕಿರಿ ಮಾಡತೊಡಗಿವೆ.

ವಿಸ್ಮಯಕಾರಿಯಾದಂಥಾ ಈ  ಮಾಯಾ ಪೆಟ್ಟಿಗೀ ಪುಟ್ಟ ಪರದೆಯೊಳಗ  ಇವತ್ತ ನೀಲಿ ಚಿತ್ರಗಳು ತೆರೆದುಕೊಂಡಿವೆ. ಯುವಕನ ಅಷ್ಟೇ ಅಲ್ಲಾ ಇನ್ನೂ ಮೀಸಿ ಸೈತ ಮೂಡಲಾರದ ಹುಡುಗೂರಿಗೆ ಇವು ಲೈಂಗಿಕ ಬಯಕೆಗಳನ್ನು ಉದ್ರೇಕಿಸಿ ಅನೇಕ ಕ್ರೌರ್ಯಗಳಿಗೆ ಎಡೆಮಾಡಿಕೊಡತಾವ. ಸಮಾಜದ ಸ್ವಾಸ್ಥ್ಯ ಹದಗೆಡಿಸಲಿಕ್ಕತ್ತಾವ. ಇವತ್ತಿನ ಈ  ಹೈಟೆಕ್ ಪ್ರೇಮ ರಾಜ್ಯದಲ್ಲಿ ಮೊಬೈಲ್ ಒಂದು ವರದಾನವಾಗುತ್ತಿದೆ. ಮುಖ ನೋಡಿ ಪ್ರೀತಿಸುವವರು ಒಂದೆಡೆಯಾದರೆ ಮುಖವನ್ನೇ ನೋಡದೆ ಪ್ರೀತಿಸುವ ಮೊಬೈಲ್ ಪ್ರೇಮಿಗಳ ಗುಂಪೇ ಬೆಳೆದುಕೊಂಡಿದೆ. ಎರಡು ಪುಟ್ಟ ಹೃದಯಗಳು ಮೊಬೈಲ್ ರೂಪದಲ್ಲಿ ಕಿವಿಗೆ ಒಂದು ಗರಿಬಿಚ್ಚಿ ಇಡೀ ರಾತ್ರಿ ಮಾತನಾಡತೊಡಗಿದರೆ ಅವರ ಪಾಲಿಗೆ ಸ್ವರ್ಗವೇ ಧರೆಗಿಳಿದಂತಾಗಿದೆ.
ನಾ ಈಗ ಅಂಥಾದs ಒಂದ ಅವಾಂತರದ ಬಗ್ಗೆ ಹೇಳಲಿಕ್ಕತ್ತೇನಿ. ಹಂಗಂತ ಇವ ನನ್ನ ಜೀವನದಾಗನs ನಡದದ್ದವು ಅಂತೇನಲ್ಲಾ.. ಎಲ್ಲಾರ ಜೀವನದಾಗೂ ಸಹಸಾ ನಡದs ಇರತಾವು. ಅದಕ್ಕs ನಾ ಬರದದ್ದೆಲ್ಲಾನೂ ನೀವು ನಿಮ್ಮ ಬಗ್ಗೇ ಬರದದ್ದಂತ ತಿಳಕೊಂಡು ಜರೂರ ನನ್ನ ಜೋಡೀ ಜಗಳಕ್ಕ ಬರ್ರಿ.. 😃😃
ರಾಗಿಣಿ ಅಂತ ಒಬ್ಬಾಕಿ ಹುಡುಗಿ.  ಅಕಿದು ಆಗಿನ್ನೂ ಡಿಗ್ರೀ ಮುಗದಿತ್ತು. ಪಿಯುಸಿಯೊಳಗ ರ್ಯಾಂಕ್ ಬಂದಿದ್ಲೂಂತ ಅಕಿ ಅಣ್ಣಾ ಅಕಿಗೆ ಒಂದು ಸ್ಮಾರ್ಟ್ ಫೋನ್ ಗಿಫ್ಟ್ ಕೊಟ್ಟಿದ್ದಾ. ಇನ್ನೂ ಅಕಿದು ಎಲ್ಲೂ ಎಡ್ಮಿಶನ್ ಆಗಿದ್ದಿಲ್ಲಾ. ಮನ್ಯಾಗ ಆ ಕೋರ್ಸ್ ಈ ಕೋರ್ಸ್ ಕ ಹಾಕಬೇಕಂತ ಚರ್ಚಾ ಜೋರಾಗೆ ನಡದಿತ್ತು. ಅಕಿ ಮಾತ್ರ ಸೂಟೀ ಅದ ಅಂತ ಅರಾಮಾಗಿ ತಿಂದುಂಡು ಫೋನ್ ಜೋಡಿ ಆಟಾ ಆಡಿಕೋತ ಇರಬೇಕಾದ್ರನs ನಾ ಹೇಳಲಿಕ್ಕತ್ತಿರೋ ಎಡವಟ್ಟು ನಡದದ್ದು.
ಫೇಸ್‌ಬುಕ್‌ ನ್ಯಾಗ ಹೊಸದಾಗಿ ಒಬ್ಬಾಂವ ಫ್ರೆಂಡ್ ಆಗಿದ್ದ. ಸುಮೀತ್ ಅಂತ ಅವನ ಹೆಸರು. ಅವನ ಪ್ರೊಫೈಲ್ ಪಿಕ್ಚರ್ ದಾಗ ಸಲ್ಮಾನ್ ಖಾನದು ಹಳೇ ಫೋಟೋ. ಇಕೀಗೆ ಸಲ್ಮಾನ್ ಖಾನ್ ಅಂದ್ರ ಮೊದಲs ಅಗದೀ ಪ್ರೀತಿ. ಇಕಿನೂ ಮಾಧುರಿ ಫೋಟೋ ಹಾಕಿದ್ಲು.. ಇಬ್ಬರೂ ಒಬ್ಬರಿಗೊಬ್ರು ಏನ ಬರದರೂ ಲೈಕ್ ಕಮೆಂಟು ಕೊಡತಿದ್ರು. ಎಲ್ಲಾ ಫಾರ್ವರ್ಡ್ ಮೆಸೇಜಸ್. ಅದಕ್ಕs ವಾಹ್ವಾಹೀ..  ಮುಂದಿನ ಸ್ಟೆಪ್.. ಊರ ಹೆಸರು.. ಇಬ್ರದೂ ಒಂದs ಊರು.. ಈಗ ಭೆಟ್ಟಿ ಆಗಬೇಕಂತ ಇಬ್ಬರಿಗೂ ಆಶಾ ಸುರುವಾತು. ಜೋಡೀಗೆ ಒಂದಿಷ್ಟು ಆಕರ್ಷಣೀನೂ ಹುಟ್ಟಿತನ್ರಿ. ಸರಿ. ಇಬ್ರೂ ಒಂದ ಜಾಗಾ ಫಿಕ್ಸ್ ಮಾಡ್ಕೊಂಡ್ರು. ಗುರುತು ಹಿಡೀಲಿಕ್ಕೆ ಡ್ರೆಸ್ ಕೋಡ್ ಫಿಕ್ಸ್ ಆತು. ರಾಗಿಣೀಗೆ ಮನಸ ತಡೀಲಿಲ್ಲಾ. ಅವ್ವನ ಮುಂದ ಈ ಸುದ್ದೀ ಹೇಳಿದ್ಲು. ಅವ್ವನೂ ಹಂಗೇನ ಹಳೇ ಕಾಲದಾಕೆಲ್ಲಾ. ಅಕೀಗೆ ಈ ಹುಡುಗ ಒಂದ ವ್ಯಾಳೆ ತನ್ನ ಮಗಳಿಗೆ ಎಲ್ಲಾದರಾಗೂ ಅನುರೂಪ ಇದ್ರ ಮುಂದಿನದ್ಯಾಕ ವಿಚಾರ ಮಾಡಬಾರದು ಅಂತನಿಸ್ತು. ಇನ್ನೂ ಕಲೀತಾಳಂತ ಮದುವೀ ಮುಂದ ಹಾಕಲಿಕ್ಕೆ ಬರತದ.. ಅಂತ ವಿಚಾರ ಮಾಡಿ ಮಗಳ ಜೋಡೀ ವರನ್ನ ನೋಡ್ಲಿಕ್ಕೆ ಅಕೀನೂ ಹೊಂಟ್ಲು. ಮಗಳಿಗೂ ಈ ವಿಷಯಾ ಸೂಕ್ಷ್ಮ ಆಗಿ ಹೇಳಿದ್ಲು. ರಾಗಿಣೀಗೂ ಮನಸಿನ್ಯಾಗ ಇದs ಆಲೋಚನಿನs ಇತ್ತು. ಆವಾಗಿನ್ನೂ ಇಂಥಾದ್ದs ವಿದ್ಯಾ ಬಾಲನ್ ಸಿನಿಮಾ ಬ್ಯಾರೆ ಬಂದಹೋಗಿತ್ತು.. ಅವ್ವಾ ಮಗಳಿಬ್ರೂ ವರನ್ನ ಭೆಟ್ಟಿ ಆಗ್ಲಿಕ್ಕೆ ಹೊಂಟ್ರು. ನಿಗದಿತ ಸಮಯಕ್ಕ, ನಿಗದಿತ ಬಣ್ಣದ ಡ್ರೆಸ್ ಹಾಕ್ಕೊಂಡು ಬಂದ್ರು. ಅವ್ವಾ ಮೊದಲ ಹೋಗಿ ಅಂವನ್ನ ನೋಡಿ ಗ್ರೀನ್ ಸಿಗ್ನಲ್ ತೋರ್ಸಿದಮ್ಯಾಲೆ ಮಗಳು ಹೋಗಿ ಭೆಟ್ಟಿ ಆಗೋದಂತ ಠರಾವಿಸ್ಕೊಂಡ್ರು. ಗಾಂಧಿ ಚೌಕಿನ ಪೋಸ್ಟಿನ ಡಬ್ಬೀ ಮುಂದ ಒಬ್ಬಾಂವಾ ಇಕಿ ಹೇಳಿದ ಬಣ್ಣದ ಟೀಶರ್ಟ್ ಧರಿಸೆ ನಿಂತಿದ್ದಾ.. ಎಲ್ಲಾ ಅಂವಾ ಹೇಳಿಧಂಗ ಅಂದಮ್ಯಾಲೆ ಇಂವಾನ ಹುಡುಗಾ ಅಂತ ಅವ್ವಗ ಅನಿಸ್ತು. ಅಂವಾ ಇವರ ಕಡೆ ಬೆನ್ನ ಮಾಡ್ಕೊಂಡು ನಿಂತಿದ್ದಾ. ಹಿಂಗಾಗಿ ಅವನಗುರತು ಸಿಗಲಿಲ್ಲಾ. ಅವ್ವ ಅವನ ಹತ್ರ ಹೋಗಿ “ಸರ್, ಈ ಅಡ್ರೆಸ್ ಎಲ್ಲಿ ಬರ್ತದರೀ” ಅಂತ ಮಾತಾಡ್ಸಿದ್ ಕೂಡ್ಲೆ ಅಂವಾ ತಿರುಗಿ ನೋಡಿದಾ..
“ಅಯ್ಯs ಗುಂಡ್ಯಾ.. !”
ಅವ್ವನ ಬಾಯಿಂದ ಉದ್ಗಾರ ಹೊಂಟಿತು.
ಅಂವಾನು ಕಕ್ಕಾವಿಕ್ಕಿ ಆಗಿ “ವೈನೀ.. ನೀವ್ರೀ?  ಹ್ಹೆಹ್ಹೆ..  ನಮ್ಮನಿಯಾಕಿ ಊರಿಂದ ಬರಾಕಿದ್ಲರೀ.. ” ಅನಕೋತ ಜಾಗಾ ಖಾಲಿ ಮಾಡಿದ್ದಾ.
ಅಂತೂ ವರಾ ನಾಪಾಸಾಗಿದ್ದಾ! ಅಂವಾ ವರಾ ಎಲ್ಲೀದು, ಬಾಜೂ ಮನೀ ಗುಂಡ್ಯಾ.. ಎರಡ ಮಕ್ಕಳ ತಂದೀ..
ಹಿಂತಾವು ಇನ್ಸಿಡೆಂಟ್ ರಗಡ ಆಗಿರತಾವ್ರೀ ಈ ಫೋನ್ ಅವಾಂತರದಾಗ..
ನಿತ್ಯ ಜೀವನದ ಸಂಗಾತಿಯಾಗಿಸಿಕೊಂಡ ಯುವಕ ಇಂದು ಮೊಬೈಲ್ ಇರದೆ ಒಂದು ನಿಮಿಷವೂ ಬದುಕದ ಸ್ಥಿತಿಗೆ ಬಂದು ತಲುಪಿದ್ದಾನೆ. ಆದರೆ ಈ ಚಿಕ್ಕ ಮಾಯಾಪೆಟ್ಟಿಗೀ ಯುವಕನನ್ನು ಪರೋಕ್ಷವಾಗಿ ನಿಯಂತ್ರಿಸಲಿಕ್ಕತ್ತೇದ.
ಕಾಲೇಜು ಹುಡುಗೂರಿಗಂತೂ ಮೊಬೈಲಿನ ಸದುಪಯೋಗಕ್ಕಿಂತ ದುರುಪಯೋಗಗಳೇ ಹೆಚ್ಚಾಗಿ ಕಂಡುಬರತಾವ. ಅದಕ್ಕ ಇಂದಿನ ದಿನಗಳಲ್ಲಿ ಅದರ ಮಿತವಾದಬಳಕೆಯನ್ನು ಅರಿಯಬೇಕಿದೆ. ಹೊಸ ತಂತ್ರಜ್ಞಾನಕ್ಕೆ ಬೇಗ ಹೊಂದಿಕೊಳ್ಳುವ ಯುವಕರು ಅವಕಾಶಗಳು ದುರುಪಯೋಗವಾಗದಂತೆ ಎಚ್ಚರವಹಿಸಬೇಕಿದೆ. ಅದಕ್ಕೋಸ್ಕರ ಕಾಲೇಜುಗಳಲ್ಲಿ ಶಿಸ್ತುಬದ್ಧ ಕ್ರಮಗಳನ್ನು ಅಳವಡಿಸಬೇಕು. ಸರಿಯಾದ ಬಳಕೆಯ ಅರಿವು ಮೂಡಿಸಬೇಕು.

Leave a Reply