ಬದಲಾವಣೆಗೆ ಒಂದು ಹೆಜ್ಜೆ ಇಡೋಣ

ಬದಲಾವಣೆಗೆ ಒಂದು ಹೆಜ್ಜೆ ಇಡೋಣ

ಭಾರತೀಯ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳು ಜಗನ್ಮಾನ್ಯವಾಗಿವೆ. ವಿಶ್ವವು ಕಣ್ತೆರೆಯುವ ಪೂರ್ವದಲ್ಲಿ ಮಾನವ ವಿಕಾಸದ ಶ್ರೇಷ್ಠತೆಯನ್ನು ಸಾರುವ, ‘ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್’ ಎಂಬ ಆರ್ಷ್ಯನುಡಿಯನ್ನಾಡಿದ ಪೂರ್ವಜರು ನಮ್ಮವರು. ಎಲ್ಲರೂ ನನ್ನವರು-ನಾನು ಎಲ್ಲರಿಗಾಗಿ ಎಂಬ ಸಿದ್ಧಾಂತದ ‘ವಸುಧೈವ ಕುಟುಂಬಕಂ’, ಜ್ಞಾನಸಂಗ್ರಹದ ವಿಶಾಲದೃಷ್ಟಿಕೋನದ ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’, ಜಗತ್ಕಲ್ಯಾಣದ ‘ಕೃಣ್ವಂತೋ ವಿಶ್ವಮಾರ್ಯಂ’, ದೀನರಕ್ಷಣೆಯ ‘ನ ತ್ವಹಂ ಕಾಮಯೇ ದುಃಖತಪ್ತಾನಾಮಾರ್ತೀನಾಂ ಆರ್ತನಾಶನಮ್’, ಮಾತೆಯನ್ನು ಉಚ್ಚಸ್ತರದಲ್ಲಿಟ್ಟ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂಬಿತ್ಯಾದಿ ಚಿಂತನೆಗಳ ಮೂಲಕ ಮನುಕುಲದ ಏಳಿಗಾಗಿಯೇ ಚಂದನದಂತೆ ಬದುಕನ್ನು ಸವೆಸಿದವರ ರಕ್ತವೇ ನಮ್ಮ ಮೈಯಲ್ಲಿ ಹರಿಯುತ್ತಿರುವುದು.
‘ಭಾರತವನ್ನು ತುಂಡರಿಸುತ್ತೇವೆ, ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಬೇಕು, ಭಾರತದ ನಾಶವಾಗುವವರೆಗೆ ಹೋರಾಟ ನಿಲ್ಲದು, ಭಾರತ್ ಮುರ್ದಾಬಾದ್-ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳು ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕಾದ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಅನುರಣನಗೊಳ್ಳುತ್ತಿರುವುದು ಆತಂಕದ ವಿಚಾರ. ಶಿಕ್ಷಣವೆಂದರೆ ಡಿಗ್ರಿಗಳಲ್ಲ; ಪ್ರಮಾಣಪತ್ರಗಳಲ್ಲ; ಉದ್ಯೋಗವೂ ಅಲ್ಲ; ಅದು ‘ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎಂಬ ರಾಷ್ಟ್ರೀಯ ಪ್ರಜ್ಞೆಯನ್ನು ಉದ್ದೀಪನಗೊಳಿಸುವ ಜಾಂಬವಂತ. ‘We want that education by which character is formed, strength of mind is increased, the intellect is expanded and by which one can stand on one’s own feet’ ಎಂದು ನವಯುಗಾಚಾರ್ಯ ಸ್ವಾಮಿ ವಿವೇಕಾನಂದರು ಉದ್ಗರಿಸಿದ್ದು ವ್ಯಕ್ತಿನಿರ್ಮಾಣದಿಂದ ರಾಷ್ಟ್ರನಿರ್ಮಾಣವೆಂಬ ಕಲ್ಪನೆಯಿಂದಲೇ.
ಜೀವನದ ಅಂತಿಮ ಉದ್ದೇಶ, ‘5 digit salary, 4 wheel vehicle, 3 bedroom home, 2 cute children and 1 beautiful/handsome partner’ ಆಗಿರುವ ಇಂದಿನ ದಿನಮಾನಗಳಲ್ಲಿ ಶಿಕ್ಷಣಕ್ಷೇತ್ರದಲ್ಲಿಯೇ ಬದಲಾವಣೆಗಳಾಗಬೇಕಿದೆ. ನೂರಕ್ಕೆ ನೂರು ಅಂಕಗಳನ್ನು ಪಡೆದು ಮನೆಯಲ್ಲಿ-ಸಮಾಜದಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿಗಳೇ ತಿಳಿಯದಿದ್ದರೆ ಬದುಕಿಗೆ ಅರ್ಥವಿಲ್ಲ. ಭಾತಶಾಸ್ತ್ರದ ಬೆಳಕಿನ ವೇಗ, ಗ್ರಹಗಳ ನಡುವಿನ ಅಂತರ, ರಸಾಯನ ಶಾಸ್ತ್ರದ ಶಕ್ತಿಶಾಲಿ ಬಂಧಗಳ ಬಗ್ಗೆ ಅತ್ಯುತ್ಕೃಷ್ಟವಾಗಿ ವಿವರಿಸುವ ವಿದ್ಯಾರ್ಥಿ, ತನ್ನವರಿಗೆ not reachable ಆಗಿ ವರ್ತಿಸಿದರೇನು ಫಲ? ಈ ಹಿನ್ನಲೆಯಲ್ಲಿ ನಮ್ಮ ಪರಂಪರೆಯ ಗುರುಕುಲ ಶಿಕ್ಷಣವೇ ಇಂದಿನ ತುರ್ತು ಅಗತ್ಯ.
ಗುರುಕುಲ ಪದ್ಧತಿಯೆಂದರೆ ಕಾಡಿನಲ್ಲಿ ವಾಸ, ಗೃಹತ್ಯಾಗ ಎಂದಲ್ಲ. ಅಂದಿನ ಆಚರಣೆಗಳು, ಪರಿಕಲ್ಪನೆಗಳು ಭಾತಿಕವಾಗಿ ಅಸಾಧ್ಯವಾದರೂ ಚಿಂತನಾನುಷ್ಠಾನ ಅಸಾಧ್ಯವಲ್ಲ. ಋಷಿಪರಂಪರೆ ನಮಗಿತ್ತ ಮೂರುಮುತ್ತುಗಳೇ ನಮ್ಮ ಜೀವನಾದರ್ಶಗಳು. ಸಮಾವರ್ತನ ಸಮಾರಂಭದಲ್ಲಿ ಗುರು ಬೋಧಿಸುತ್ತಿದ್ದ ದಿಕ್ಸೂಚಿ ವಾಕ್ಯಗಳು ಇಂದಿಗೂ ಪ್ರೇರಣಾದಾಯಿ.
ಮಾತೃದೇವೋಭವ : ಅಯೋಧ್ಯಾ, ಮಥುರೆ, ಕಾಶಿ, ಕಂಚಿ, ಉಜ್ಜಯಿನಿ, ಪುರಿ, ದ್ವಾರಕೆಗಿಂತಲೂ ಪವಿತ್ರವಾದ ತೀರ್ಥಕ್ಷೇತ್ರವೇ ತಾಯಿಯ ಮಡಿಲು. ನವಮಾಸಗಳ ಕಾಲ ಹೊತ್ತು, ಹೆತ್ತು ತನ್ನೆಲ್ಲ ಸುಖವನ್ನೂ ಮಗುವಿಗಾಗಿ ಧಾರೆಯೆರೆದು ಆನಂದಿಸುವ ಮಾತೆಯ ಮಮತೆಗೆ ಸಾಟಿಯೆಲ್ಲಿದೆ? ಬೊಚ್ಚುಬಾಯಿಯ ನಗುವಿನಲ್ಲಿ ನೋವಿನ ಪರಾಕಾಷ್ಠೆಯನ್ನು ಮರೆಯುವ ಮಹಾತಾಯಿಯ ತ್ಯಾಗಕ್ಕೆ ಬೆಲೆಕಟ್ಟಲಾಗದು. ರಾಮ, ಕೃಷ್ಣ, ಶಿವಾಜಿ, ವಿವೇಕಾನಂದ, ನೇತಾಜಿಯಂತಹ ವೀರಾಗ್ರಣಿಗಳು ಸಾಧನೆಯ ಗಿರಿಯೇರಿದ್ದು ಮಾತೆಯ ಪ್ರೇಮದ ಮೂಲಕವೇ.
ಪಿತೃದೇವೋಭವ : ಹಿಮಾಲಯ, ಮಹೇಂದ್ರ, ಮಲಯ, ಸಹ್ಯ, ರ್ಯೆವತಕ, ವಿಂಧ್ಯ, ಅರಾವಳಿಗಳಿಗಿಂತಲೂ ಅತ್ಯಂತ ಶ್ರೇಷ್ಠವಾದ ಪರ್ವತ ಅಪ್ಪನ ಹೆಗಲು. ಅಪ್ಪನ ಹೆಗಲ ಮೇಲೆ ಕುಳಿತಾಗ ಉಂಟಾಗುವ ಆನಂದ, ಜಗತ್ತೇ ನನ್ನದೆಂಬ ಉತ್ಸಾಹ, ಸೈನ್ಯವೇ ನನ್ನೊಂದಿಗಿದೆಯೆಂಬ ಶಕ್ತಿಯನ್ನು ಪದಗಳಲ್ಲಿ ವಿವರಿಸುವುದು ಅಸಾಧ್ಯ. ತನ್ನ ರಕ್ತದ ಕಣಕಣವನ್ನೂ ಬೆವರ ಹನಿಯನ್ನಾಗಿಸಿ ಮಕ್ಕಳು ಚೆನ್ನಾಗಿರಬೇಕೆಂದು ರಾತ್ರಿ-ಹಗಲೆನ್ನದೆ ದುಡಿದು ಕೈಗಳ ಕೋಮಲತೆಯನ್ನೂ, ಮಂಡಿಯ ಸಾಮರ್ಥ್ಯವನ್ನೂ ಕಳೆದುಕೊಳ್ಳುವ ಅಪ್ಪ, ಆಕಾಶಕ್ಕಿಂತಲೂ ಎತ್ತರ. ‘ಮಗು ನನ್ನಂತೆ ಕಷ್ಟಪಡಬಾರದು’ ಎಂದು ಅಪ್ಪ ಪಡುವ ಸಂಕಟ, ಅವಮಾನ, ತ್ಯಾಗ…. ಊಹೂಂ…. ವಿವರಣೆಗೂ ಮೀರಿದ್ದು.
ಆಚಾರ್ಯದೇವೋಭವ : ಅಪ್ಪ-ಅಮ್ಮ ಮಗುವೊಂದಕ್ಕೆ ಜನ್ಮ ನೀಡುತ್ತಾರೆ ನಿಜ. ಆದರೆ ಆ ಮಗುವಿಗೆ ಬೌದ್ಧಿಕ ಪುನರ್ಜನ್ಮವನ್ನೀಯುವುದು ಋಷಿಪರಂಪರೆಯ ಗುರುಗಳು. ‘ಅಕ್ಷರಮಾತ್ರವನ್ನು ಕಲಿಸಿದವನೂ ಗುರು’ ಎಂಬ ಹಿರಿಯರ ನುಡಿಯೇ ಇದಕ್ಕೆ ಸಾಕ್ಷಿ. ಅಜ್ಞಾನತಿಮರಾಂಧತೆಯನ್ನು ಜ್ಞಾನದೀಪದೊಂದಿಗೆ ದೂರೀಕರಿಸುವ ದುರಿತನಾಶಕ ಗುರುವಿನ ಜೀವನವೇ ಧನ್ಯ. ಶಿಷ್ಯನ ಏಳ್ಗೆಯಲ್ಲೇ ತನ್ನ ಜೀವನದ ಯಶಸ್ಸನ್ನು ಕಂಡುಕೊಳ್ಳುವ ಆಚಾರ್ಯರದು ‘ಶಿಷ್ಯಾದಿಚ್ಛೇತ್ ಪರಾಜಯಂ’ ಸಿದ್ಧಾಂತ. ತಾನು ಇದ್ದಲ್ಲೇ ಇದ್ದು ಶಿಷ್ಯನನ್ನು ಎತ್ತರೆತ್ತರಕ್ಕೇರಿಸಿದ ವಸಿಷ್ಠ, ವಿಶ್ವಾಮಿತ್ರ, ಸಾಂದೀಪನಿ, ಚಾಣಕ್ಯ, ವಿದ್ಯಾರಣ್ಯ, ರಾಮದಾಸ, ದಾದಾಜಿ ಕೋಂಡದೇವರಂತಹ ರಾಷ್ಟ್ರದೃಷ್ಟಾರ ಗುರುಗಳೇ ನಮ್ಮ ಆದರ್ಶ.
ಚಲನಚಿತ್ರಗಳ ಪ್ರಭಾವಕ್ಕೊಳಗಾಗಿ ಅಪ್ಪ ಲೂಸಾ-ಅಮ್ಮ ಲೂಸಾ, ಗುರುವೇನು ಮಹಾ ಎಂದೆಲ್ಲ ಎಡಬಿಡಂಗಿಗಳಂತೆ ವರ್ತಿಸುವ ತರುಣವರ್ಗಕ್ಕೆ ಸರಿಯಾದ ಹಾದಿಯನ್ನು ದರ್ಶಿಸುವುದು ನಮ್ಮೆಲ್ಲರ ಜವಾಬ್ದಾರಿ. ಮುಖದಲ್ಲಿ ಮೀಸೆ ಮೂಡಿದ ತಕ್ಷಣ, ವಯಸ್ಸಿಗೆ ಬಂದ ಅನುಭವವಾದಾಗಿನಿಂದ ಹೆತ್ತವರನ್ನು ಅಲಕ್ಷಿಸುವ ಪ್ರವೃತ್ತಿ ಬದುಕಿಗೊಳಿತಲ್ಲ. ‘ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ ನಿತ್ಯದಾನವ ಮಾಡಿ ಫಲವೇನು? ಸತ್ಯ ಸದಾಚಾರ ಇಲ್ಲದವನು ಜಪಹತ್ತು ಸಾವಿರ ಮಾಡಿ ಫಲವೇನು?’ ಎಂಬ ದಾಸವಾಣಿ ಅದೆಷ್ಟು ಅರ್ಥಪೂರ್ಣ. ಬದುಕಿನ ಹಾದಿಯ ಮುಳ್ಳುಗಳ ಮೇಲೆ ತಾವು ಮಲಗಿ ತಮ್ಮ ಮೇಲೆ ಮಕ್ಕಳನ್ನು ಕೈಹಿಡಿದು ಮುನ್ನಡೆಸುವ ಮಾತಾ-ಪಿತಾ-ಗುರುದೇವತೆಗಳ ಕಣ್ಣಲ್ಲಿ ಕಣ್ಣೀರು ತರಿಸುವುದಕ್ಕಿಂತ ಘೋರಪಾಪ ಇನ್ನೊಂದಿಲ್ಲ.
ಮಕ್ಕಳದೇನೂ ತಪ್ಪಿಲ್ಲ ಬಿಡಿ. ಬಿತ್ತಿದಂತೆ ಬೆಳೆ ಸುಳ್ಳಲ್ಲ. ಹಿರಿತನಕ್ಕೆ ಗೌರವ-ಸಮಾಜಕ್ಕೆ ಗೌರವ-ರಾಷ್ಟ್ರನಿಷ್ಠೆಯ ಪಾಠವನ್ನು ಬಾಲ್ಯದಲ್ಲಿ ಕಲಿಸದಿದ್ದರೆ ಆಗುವ ಪರಿಣಾಮವೇ ಈ ದ್ವಂದ್ವ. ‘ಮನೆಯೆ ಮೊದಲ ಪಾಠ ಶಾಲೆ’ ಎಂಬ ಮಾತಿನಂತೆ ಮನೆಯೊಂದು ಸಂಸ್ಕಾರದ ಕೇಂದ್ರವಾದರೆ ನಾಡು ಬದಲಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಎದೆಹಾಲಲ್ಲೇ ರಾಷ್ಟ್ರೀಯತೆಯ ಅಮೃತವನ್ನುಣಬಡಿಸುವ ಇಸ್ರೇಲೀ ಮಾದರಿಯಲ್ಲಿ ಯಾರ್ಯಾರ ಮನೆಯಲ್ಲೋ ಭಗತ್‍ಸಿಂಗ್, ಆಜಾದ್, ಚೆನ್ನಮ್ಮ ಹುಟ್ಟಲೆಂದು ಆಶಿಸುವುದುಕ್ಕಿಂತ ನಮ್ಮ ಮನೆಯ ತೊಟ್ಟಿಲಿನಲ್ಲೇ ಆ ಮಹಾತ್ಮರು ಜನ್ಮವೆತ್ತಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಬಾರದೇಕೆ? ದೇಶಧರ್ಮಕ್ಕಾಗಿ ಪ್ರಾಣಾರ್ಪಣೆಗೈದ ಅಷ್ಟೂ ಹೋರಾಟಗಾರರು, ಗಡಿಯ ಭಾಗದಲ್ಲಿ ನಮ್ಮುಸಿರಿಗಾಗಿ ತಮ್ಮುಸಿರನೀಯುವ ಸೈನಿಕರನ್ನು ನಮ್ಮ ಮಕ್ಕಳ ಆದರ್ಶವನ್ನಾಗಿ ತೋರಿಸಬಾರದೇ? ಸಿನಿ ಕ್ರಿಕೆಟ್ ತಾರೆಯರ ಗುಂಗಿನಲ್ಲಿ ಮೈಮರೆಯುವ ನಮ್ಮ ಮಗುವನ್ನು ಅಲ್ಪ ಮಾನವನಿಂದ ವಿಶ್ವಮಾನವ ನನ್ನಾಗಿಸಬಾರದೇಕೆ? ಭಾರತದ ಮಾಜಿ ಪ್ರಧಾನಮಂತ್ರಿ, ಅಜಾತಶತ್ರು ಶ್ರೀ ಅಟಲ್‍ಬಿಹಾರಿ ವಾಜಪೇಯಿ ಉದ್ಗರಿಸಿದಂತೆ, “ಯೇ ವಂದನ್ ಕೀ ಭೂಮಿ ಹೈ, ಅಭಿನಂದನ್ ಕೀ ಭೂಮಿ ಹೈ, ಯೇ ಅರ್ಪಣ್ ಕೀ ಭೂಮಿ ಹೈ, ಯೇ ತರ್ಪಣ್ ಕೀ ಭೂಮಿ ಹೈ, ಬಿಂದು ಬಿಂದು ಮೆ ಸಿಂಧು ಹೈ, ಕಂಕರ್ ಕಂಕರ್ ಮೆ ಶಂಕರ್ ಹೈ, ಜಿಯೇಂಗೆ ತೊ ಇಸ್ ಕೇ ಲಿಯೇ, ಮರೇಂಗೆ ತೊ ಇಸ್ ಕೇ ಲಿಯೇ ಮರ್‍ನೇ ಕೇ ಬಾದ್ ಭೀ ಗಂಗಾಜಲ್ ಮೇ ಬೆಹೆತಿ ಹುಯೀ ಹಮಾರೀ ಅಸ್ಥಿಯೋಂಕೋ ಕೋಯೀ ಕಾನ್ ಲಗಾಕರ್ ಸುನೆಗಾ, ತೊ ಏಕ್ ಹಿ ಆವಾಜ್ ಆಯೇಗೀ, ‘ಭಾರತ್ ಮಾತಾ ಕೀ ಜೈ’ ಎಂಬ ಚಿಂತನೆಯ ತರುಣವರ್ಗ ನಮ್ಮಲ್ಲೂ ಸೃಷ್ಟಿಯಾಗಬಾರದೇಕೆ?
ಬದಲಾವಣೆ ಅಸಾಧ್ಯವೇನಲ್ಲ. ಆ ದಿಕ್ಕಿನತ್ತ ನಾವು ಮುಖಮಾಡಬೇಕಷ್ಟೇ. ಅಷ್ಟಕ್ಕೂ ‘ಹನಿಗೂಡಿ ಹಳ್ಳ, ತೆನೆಗೂಡಿ ಬಳ್ಳ’ ಎಂಬ ಮಾತು ಸುಳ್ಳಲ್ಲವಲ್ಲ!!
– ಆದರ್ಶ ಗೋಖಲೆ

Leave a Reply