ಶಿಷ್ಟಾಚಾರ – ಸಂಪ್ರದಾಯ – ಸಂಸ್ಕೃತಿ

ಶಿಷ್ಟಾಚಾರ – ಸಂಪ್ರದಾಯ – ಸಂಸ್ಕೃತಿ

ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುವದು, ಅದು ದೊಡ್ಡವರ ಎದುರು ಶಿಷ್ಟವೇ? ಅಶಿಷ್ಟವೆ? ಎಂಬುದು ಇತ್ತಿಚೇಗೆ ಮಾಧ್ಯಮಗಳಲ್ಲಿ ದೃಶ್ಯಗಳ ಮೂಲಕ, ಬರಹಗಳ ಮೂಲಕ ಅತಿ ಪ್ರಚಾರ ಪಡೆದಿದ್ದು ಹಲವು ಪ್ರಶ್ನೆಗಳನ್ನು ಕೆದಕುವಂತೆ ಮಾಡಿತು. ಸಂಪ್ರದಾಯಗಳ ಮೂಲಕ ಕೆಲವು ಕ್ರಿಯೆಗಳು ವಿಶಿಷ್ಟ ಸ್ವರೂಪ ಪಡೆಯುತ್ತ ಸಂಸ್ಕೃತಿಯ ಭಾಗವಾಗಿ ಕ್ರಮೇಣ ಲೀನವಾಗುತ್ತ ಶಿಷ್ಟ ಸಂಸ್ಕೃತಿಯೇ ಆಗಿ ನಾಗರಿಕ ಸ್ವರೂಪದಿಂದ ಸಮಾಜ, ದೇಶ, ಜನಾಂಗಗಳ ಸಂಸ್ಕೃತಿ ಲಕ್ಷಣಗಳಾಗಿ, ಗುಣಧರ್ಮಗಳಾಗಿ ಹೊರ ಹೊಮ್ಮುವವು. ಕೆಲವು ದೇಶಗಳಲ್ಲಿ ಹಸ್ತಲಾಘವ, ಕೆಲವು ಸಂಪ್ರದಾಯಗಳಲ್ಲಿ ಕೇವಲ ಕೈಜೋಡಿಸಿ ನಮಸ್ಕಾರ ಮಾಡುವದು, ಕೆನ್ನೆಗೆ ಚುಂಬಿಸುವದು, ಹಣೆಗೆ ಚುಂಬಿಸುವದು, ಕೈಗಳಿಗೆ ನಮಸ್ಕರಿಸುವದು, ಸಾಷ್ಟಾಂಗ ನಮಸ್ಕಾರ ಮಾಡುವದು, ಟೊಂಕ ಬಗ್ಗಿಸಿ ಪಾದ ಮುಟ್ಟಿ ನಮಸ್ಕರಿಸುವುದು, ಅಪ್ಪಿಕೊಳ್ಳವದು, ಬೆನ್ನು ತಟ್ಟುವದು, ಚಪ್ಪಾಳೆಯ ಹಲವು ಪ್ರಕಾರಗಳು. ಹೀಗೆ ಇಂತಹ ಕ್ರಿಯೆಗಳ ಪಟ್ಟಿ ಬೆಳೆಯುತ್ತ ಹೋಗುವದು. ಯಾರಿಗೆ ಯಾವದು, ಅವರವರ ಸಮಾಜದಲ್ಲಿ, ದೇಶದಲ್ಲಿ, ಸಂಸ್ಕೃತಿಯ ಪ್ರಕಾರ ಅಪೇಕ್ಷಣೀಯವೋ ಅದು ಶಿಷ್ಟ, ಉಳಿದೆಲ್ಲವೂ ಅಶಿಷ್ಟವಾಗಿ ಪರಿಣಮಿಸುತ್ತವೆ. ಹೀಗಾಗಿ ಶಿಷ್ಟ, ಅಶಿಷ್ಟಗಳು ಕೂಡಾ ಅವರವರ ದೃಷ್ಟಿಕೋನದಂತೆ ಬದಲಾಗುತ್ತವೆ. ಕೆಲವರು ಅಪೇಕ್ಷೆ ಪಡುವದಿಲ್ಲ. ಕೆಲವರು ಅಪೇಕ್ಷೆ ಪಡುತ್ತಾರೆ. ಕೆಲವರು. ಕೆಲವರು ತಪ್ಪುಗಳನ್ನು ಹುಡುಕುವ ಸಂಭ್ರಮದಲ್ಲಿರುತ್ತಾರೆ. ತೊಗಲುಬಾವಲಿ ಅಥವಾ ಬ್ಯಾಟ್ಗಳಿಗೆ ಕೇವಲ ಕತ್ತಲೆಯಲ್ಲಿ ಕಣ್ಣು ಕಾಣುತ್ತವೆ. ಹಾಗೆ ತಪ್ಪು ಹುಡುಕುವ ತೊಗಲು ಬಾವಲಿಗಳಿಗೆ ಕತ್ತಲೆಯಲ್ಲಿ ಮಾತ್ರ ಕಣ್ಣು ಕಾಣುತ್ತವೆ. ಪ್ರಕಾಶವಿದ್ದಾಗ ಹಾರಲು ಆಗದೇ, ಹಳೆಯ ಗಿಡಗಳಿಗೆ ಜೋತು ಬೀಳುವದೇ ಅನಿವಾರ್ಯವಾಗಿರುತ್ತದೆ. ಪ್ರಸ್ತುತ ಮಾಧ್ಯಮದಲ್ಲಿ ಪ್ರಚಲಿತವಾದ ವಿಷಯಕ್ಕೆ ಬರುವದಾದರೆ, ಯಾವದು ಶಿಷ್ಟ, ಯಾವದು ಅಶಿಷ್ಟ ಎಂಬ ಪ್ರಶ್ನೆ ಸ್ವತಃ ಯಾರಿಗೆ ಅಶಿಷ್ಟತನ, ಅಶಿಸ್ತಿನ, ಅಗೌರವದ ಪ್ರಶ್ನೆಯಾಗಬೇಕೋ ಅವರೇ ಸಾರಾಸಗಟಾಗಿ ಅದನ್ನು ಅಲ್ಲಗಳೆದಾಗ ಉಳಿದವರಿಗೇಕೆ ಅದರ ಗೊಡವೆ? ಮತ್ತೊಬ್ಬರ ಗೊಡವೆಗೆ ಹೋಗುವದೇ ಇಂತಹ ಜನರ ಒಡವೆಯಾ? ವ್ಯಕ್ತಿ ನಮಗೆ ಸೇರಲಾರದಾಗ ಅವನು ಅಥವಾ ಅವಳು ಮಾಡಿದ ಎಲ್ಲ ಕ್ರಿಯೆಗಳು, ಮಾತುಗಳು ಸೇರುವದಿಲ್ಲ; ಹಿಡಿಸುವದಿಲ್ಲ; ಪ್ರತಿಯೊಂದು ಕ್ರಿಯೆ, ಮಾತು ತಪ್ಪು ಎನ್ನುವ ಪೂರ್ವಗ್ರಹ ಪೀಡಿತರಾದಂತೆ ವರ್ತನೆಗಳು ತೋರಿಸಿಕೊಡುತ್ತವೆ. ಕಾಲು ಮೇಲೆ ಕಾಲು ಹಾಕಿಕೊಂಡು ಅಂದರೆ ಪದ್ಮಾಸನ ಹಾಕಿಕೊಂಡು ವೇದವ್ಯಾಸರ ಮುಂದೆ ಗಣಪತಿ ಕೂಡಲಿಲ್ಲವೆ? ಪುರಾಣ ಕೀರ್ತನೆ, ಭಜನೆ, ಉಪನ್ಯಾಸಗಳನ್ನು ವಿದ್ವಾಂಸರು ಮಾಡುತ್ತಿರುವಾಗ ಸಾಮಧ್ಯ ಪ್ರೇಕ್ಷಕರು, ಶ್ರೋತೃಗಳು ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುವದಿಲ್ಲವೆ? ಏಕಾಂತದಲ್ಲಿ ಒಬ್ಬರೇ ಅಥವಾ ಇಬ್ಬರೂ, ಅದಕ್ಕಿಂತ ಆಯ್ಕೆಯಾದ ಶಿಷ್ಯವರ್ಗ ಚಿಂತನೆಯಲ್ಲಿ, ಮಂತ್ರಾಲೋಚನೆಯಲ್ಲಿ ತೊಡಗಿದಾಗ ಎಲ್ಲರೂ ಕಾಲು ಮೇಲೆ ಕಾಲು ಹಾಕಿ ಕೂತಿರುವದಿಲ್ಲವೆ? ಇವೆಲ್ಲವು ನಾವು ಯಾವ ದೃಷ್ಟಿಕೋನದಿಂದ ನೋಡುತ್ತೇವೆ ಅನ್ನುವದರ ಮೇಲೆ ಅವಲಂಬಿಸಿದೆ. ಇನ್ನು ದೃಶ್ಯ ದೃಶ್ಯಮಾಧ್ಯಮಗಳನ್ನಂತೂ ಬಿಡಿ. ಅವು ಜನಪ್ರಿಯತೆ, ಗೊಂದಲ, ಗದ್ದಲಗಳ, ಹಚ್ಚೆದ್ದು ಕುಣಿದು ಕುಪ್ಪಳಿಸುವ ಟಿಆರ್ಪಿ ಮಾನದಂಡದ ಮೇಲೆ ಅವಲಂಬಿತವಾಗಿರುವವು. ಇಂತಹ ಮಾಧ್ಯಮದ ನಿರ್ಧಾರ ಮಾಡುವ ಅಧಿಕಾರಿಗಳೂ ಸಹ ಈಗಿನ ಟಿಆರ್ಪಿ ಮಾನದಂಡವೇ ಅವರ ಆದಾಯ ಮತ್ತು ಜನಪ್ರಿಯತೆ. ಅದುವೇ ಮಾಧ್ಯಮಗಳ ಉದ್ದೇಶ ಅನ್ನುವಂತೆ ಅವರವರ ವಿದ್ಯಾಲಯಗಳಲ್ಲಿ ಕಲಿಸಿಕೊಂಡು, ಅದನ್ನೇ ಬರೆದು, ಆದಾಯ, ಜನಪ್ರಿಯತೆ ಭ್ರಮೆಯಲ್ಲಿ ಪಾಸಾಗಿ ನೌಕರಿ ಗಿಟ್ಟಿಸಿಕೊಂಡ ಋಣದಲ್ಲಿ ಅದನ್ನೇ ಗಮನಿಸುತ್ತ, ಧ್ವನಿಸುತ್ತ, ಎಥಿಕ್ಸ್ ಇಲ್ಲದ ವ್ಯವಹಾರದಲ್ಲಿ ಸಾಗುತ್ತಿರುತ್ತಾರೆ. ಅಂಥವರು ಶಿಷ್ಟಾಚಾರ, ಸಂಸ್ಕೃತಿಗಳ ಬಗ್ಗೆ ಜೋರು ಜೋರಾದ ಭಾಷಣ ಬಿಗಿಯುತ್ತಾತರೆ.
ದೇವರು ದೊಡ್ಡವನೋ?
ಸ್ವಾಮಿಗಳು ದೊಡ್ಡವರೋ? ರಾಷ್ಟ್ರಪತಿ/ರಾಜ್ಯಪಾಲ/ಪ್ರಧಾನಮಂತ್ರಿ/ ಮುಖ್ಯಮಂತ್ರಿ ಅಥವಾ ಅಧಿಕಾರ ಸ್ಥಾನ ದೊಡ್ಡದಾ? ಈ ಶಿಷ್ಟಾಚಾರಗಳು, ಧರ್ಮ ಅಥವಾ ಜಾತಿ, ದೇವರು, ದೊಡ್ಡವರು, ಸ್ವಾಮಿಗಳು, ಜ್ಞಾನಿಗಳು ಯಾವುದರ ಮೇಲೆ ನಿಂತಿರುತ್ತವೆ? ಗೌರವ ಅಪೇಕ್ಷಣೀಯ, ಅಂದರೆ ಎಲ್ಲರೂ ಒಂದೇನಾ? ಎಲ್ಲರೂ ಒಂದೇ ಆದರೆ ಯಾರು ಯಾರಿಗೆ ಗೌರವ ನೀಡಬೇಕು? ನೀಡಲೇಬೇಕಾ? ಇನ್ನು ಗೌರವ ಅನ್ನುವದು ಪ್ರತಿಭೆಯ ಮೇಲೆ ಬರುವದಾ. ಗುರುಕುಲ ಸಂಗೀತ ಸಂಸ್ಕೃತಿಯ ಒಂದು ಭಾಗವಾದ ಕಾರಣ, ಸಂಗೀತ ದಿಗ್ಗಜರ ಮುಂದೆ ಎಂತಹ ಶಿಷ್ಟರೂ ಸಹ ಪಾದಮುಟ್ಟಿ ನಮಸ್ಕರಿಸುತ್ತಾರೆ. ಇದು ನೃತ್ಯಕ್ಕೂ ಅನ್ವಯವಾಗುತ್ತದೆ. ದೇವಸ್ಥಾನಗಳಲ್ಲಿ ಪಾದರಕ್ಷೆ ಹಾಕಿಕೊಂಡು ಪ್ರವೇಶ ಮಾಡುವದಿಲ್ಲ. ಕೆಲವು ದೇಶಗಳಲ್ಲಿ ಮಸೀದಿಗಳಲ್ಲಿ ಎಲ್ಲರೂ ಬುರ್ಖಾ ಹಾಕಿಕೊಂಡೆ ಪ್ರವೇಶಿಸಬೇಕೆಂಬ ಕಡ್ಡಾಯಗಳು. ಕೆಲವು ದೇವಾಲಯಗಳಲ್ಲಿ ಲುಂಗಿ, ಧೋತರ, ಬರೀ ಮೈಯಿಂದಲೇ ಪ್ರವೇಶಿಸಬೇಕು. ಚರ್ಚುಗಳಲ್ಲಿ ಪಾದರಕ್ಷೆ ಹಾಕಿಕೊಂಡೆ, ಸೂಟುಬೂಟು ಹಾಕಿಕೊಂಡೆ ಪ್ರವೇಶಿಸುತ್ತಾರೆ. ಶೋಕದ ದಿನಗಳಲ್ಲಿ ಕೆಲವರು ಕಪ್ಪು ವಸ್ತ್ರ ಧರಿಸುತ್ತಾರೆ. ಕೆಲವರು ಶ್ವೇತವಸ್ತ್ರ ಧರಿಸುತ್ತಾರೆ. ಹೀಗಾಗಿ ಇದೆಲ್ಲವೂ ಅವರವರು ತಿಳಿದುಕೊಳ್ಳುವ ‘ಶಿಷ್ಟತೆ’. ಕೆಲವು ರಾಜಕೀಯ ಪಕ್ಷಗಳಲ್ಲಿ ವಂಶಪಾರಂಪರಿಕ ಗೌರವ ನೀಡುವದೇ ಶಿಷ್ಟತೆಯಾಗುತ್ತದೆ. ಕೆಲವರ ದೃಷ್ಟಿಯಲ್ಲಿ ಕೆಲವು ಶಿಷ್ಟತೆಗಳು ಮೌಢ್ಯದ ರೂಪು ಪಡೆಯುತ್ತವೆ. ‘ಮೌಢ್ಯಗಳ’ ವಿರುದ್ಧ ಸಮರ ಸಾರಿರುವ ವ್ಯಕ್ತಿಗಳು ಪಕ್ಷಗಳು ಕಾಲು ಮೇಲೆ ಕಾಲು ಹಾಕಿ ತಲೆಕೆಡಿಸಿಕೊಳ್ಳಬೇಕಾದ ಕಾರಣವಿಲ್ಲ. ‘ಕಾಲು’ ಅನ್ನುವದು ವ್ಯವಹಾರದ ಭಾಷೆಯಲ್ಲಿ ‘ಕಾಲ’ ಅಂತಾ ಬಳಸುತ್ತಾರೆ. ಕಾಲ ಮೇಲೆ ಕಾಲು ಆಗುತ್ತದೆ. ಈ ಕಾಲ ಅನ್ನುವ ಶಬ್ದವೇ ವಿಚಿತ್ರವಾದದ್ದು. ‘ಕಾಲ’ ಕಾಲು ಎಳೆಯುತ್ತದೆ. ಕಾಲ ಮೇಲೆ ಕಾಲು ಹಾಕಿದಾಗ ಅದೊಂದು ಸುಖವನ್ನು ನೀಡುವದು, ಕಾಲ ಮೇಲೆ ಕಾಲು ಹಾಕಿದವರಿಗೆ ಗೊತ್ತು. ಕಾಲ ಮೇಲೆ ಕಾಲು ಹಾಕಿದ್ದನ್ನೆ ಗಮನದಲ್ಲಿ ಇಡುವದಕ್ಕಿಂತ ‘ಕಾಲ’ವನ್ನು ಅಗಲಿಸಿ ಇತಿಹಾಸವನ್ನು ನೀಡುತ್ತ ಅಗಲಿಸಿದಾಗ ಮಾತ್ರ ಹೊಸ ವಿಚಾರಗಳ, ಹೊಸ ಸಿದ್ಧಾಂತಗಳ ಪ್ರಸವ ಸಾಧ್ಯ!
ಕೃಪೆ : ಸಂಯುಕ್ತ ಕರ್ನಾಟಕ

Leave a Reply